2017ರ ಡಿಸೆಂಬರ್ 6, ಹಸಿದು ಕೂತಿದ್ದ ಮಾಧ್ಯಮಗಳಿಗೆ ಸಿಕ್ಕ ಬೊಂಬಾಟ್ ಭೋಜನ ಪರೇಶ್ ಮೆಸ್ತಾ ಎಂಬ ಯುವಕನ ನಾಪತ್ತೆ ಪ್ರಕರಣ. ಈ ಪ್ರಕರಣ ಒಂದು ವಾರದ ಅವಧಿಯಲ್ಲೇ ‘ಮರ್ಡರ್ ಮಿಸ್ಟರಿ’ಯಾಗಿ ಟಿವಿ ಚಾನೆಲ್ ಪರದೆಯ ಮೇಲೆ ರಾರಾಜಿಸಿದ್ದು ಇಂದಿಗೆ ದುರಂತ ಇತಿಹಾಸ. ಅಷ್ಟೊತ್ತಿಗಾಗಲೆ ಪತ್ರಿಕೋದ್ಯಮ ಕೇಸರೀಕರಣಗೊಂಡು ಬಲಪಂಥೀಯತೆಯ ಹೊಗಳು ಭಟ್ಟರಾಗಿ ಬಿಟ್ಟಿದ್ದವು. ಈ ಘಟನೆಗೂ ಮೊದಲು ಹಾಗೂ ಇದರ ನಂತರವೂ ಕನ್ನಡ ಪತ್ರಿಕೋದ್ಯಮಗಳು ಉಂಟು ಮಾಡಿರುವ ಪರಿಣಾಮ ಸರಿದೂಗಿಸಲು ಇನ್ನೂ ಹಲವು ವರ್ಷಗಳು ಕಳೆಯುವ ಅಗತ್ಯವಿದೆ. ಇದರ ನಡುವೆ ಈಗಲೂ ಟಿವಿ ಚಾನೆಲ್ ಗಳು ಮತ್ತೆ ಮತ್ತೆ ತಮ್ಮ ಹಿಡನ್ ಅಜೆಂಡಾಗಳನ್ನು ಓಪನ್ ಆಗಿಯೇ ಸಮರ್ಥಿಸಿ ಹಿಂದುತ್ವವನ್ನು ಬಹಿರಂಗವಾಗಿಯೇ ಪೋಷಿಸಿ ನೀರೆರಯುತ್ತಿದೆ. ಇದರ ಮುಂದುವರೆದ ಭಾಗವೇ ಆಗಿದ್ದ ಇತ್ತೀಚೆಗೆ ನಡೆದ ಪ್ರವೀಟ್ ನೆಟ್ಟಾರು ಪ್ರಕರಣ ಕೂಡ ಈ ಸಮಾಜದಲ್ಲಿ ಮಾಡಿರುವ ‘Impact’ ನಿಜಕ್ಕೂ ರಣ ಭೀಕರ.
ಈಗ ಐದು ವರ್ಷಗಳು ಪರೇಶ್ ಮೆಸ್ತಾ ಸಾವಾಗಿ ಉರುಳಿದೆ. ಇದೊಂದು ಆಕಸ್ಮಿಕ ಸಾವು, ಎಂದರೆ ಇದರ ಹಿಂದೆ ಯಾವುದೇ ಮುಸ್ಲಿಮರಾಗಲಿ, ಕ್ರೈಸ್ತರಾಗಲಿ ಇಲ್ಲ. ಮೊದಲಿಗೆ ಇದೊಂದು ಧರ್ಮಾಧಾರಿತ ಕೊಲೆಯಲ್ಲ. ಬದಲಿಗೆ ಇದೊಂದು ಆಕಸ್ಮಿಕ ಸಾವು ಎಂದು CBI ಬಿ ರಿಪೋರ್ಟ್ ಸಲ್ಲಿಸಿದೆ. ಸಮ ಸಮಾಜ ಬಯುಸವ ಎಲ್ಲರೂ ಇದನ್ನು ಅಂದೇ ಇದರ ಹಿಂದಿರುವ ಷಡ್ಯಂತ್ರ ಬಹಿರಂಗ ಪಡಿಸಿದರು. ಆದರೂ ಬಿಜೆಪಿ ಹಾಗೂ ಅಂದು ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರ ನಡುವೆ ನಡೆದ ‘ಮಹಾ ಯುದ್ಧ’ವೆಂಬಂತೆ ಮಾಧ್ಯಮಗಳು ಬಿತ್ತರಿಸಿ ಖುಷಿಪಟ್ಟವು. ಅಸಲಿಗೆ ಮಾಧ್ಯಮಗಳೂ ಕೂಡ ‘ಹಿಂದೂ ಕಾರ್ಯಕರ್ತನ ಕೊಲೆ’ ಎಂಬ ಒಕ್ಕಣೆಯಲ್ಲಿ ಜನರಿಗೆ ಬಿಸಿಬಿಸಿಯಾಗಿ ತಯಾರಿಸಿದ ಬೇಳೆ ಬೇತ್ ರೀತಿಯಲ್ಲಿ ಹಂಚಿದವು.
ಈಗ ಇಲ್ಲದಿರುವುದು ಮಾಧ್ಯಮಗಳು ತೋರಿದ ವರ್ತನೆ ಹಾಗೂ ಅಸಲಿಗೆ ತೋರ ಬೇಕಿದ್ದ ಬದ್ಧತೆಯ ಪ್ರಶ್ನೆ. ಮಾಧ್ಯಮಗಳು ಈ ‘ಸಾವು ಪ್ರಕರಣವನ್ನು’ ಸಮಾಧಾನವಾಗಿ’ ನೋಡಿದ್ದರೆ ಇಂದು ಹುಟ್ಟಿಕೊಂಡಿರುವ ಈ ಭೀಕರ ವಾತಾವರಣದ ಕಾಲವನ್ನು ಮತ್ತಷ್ಟು ಮುಂದೂಡಬಹುದಿತ್ತು. ಅರ್ಥಾತ್ ಮತ್ತೊಂದು ಅವಧಿಗೆ ಆಡಳಿತ ಚುಕ್ಕಾಣಿಯಿಂದ ಬಿಜೆಪಿಯನ್ನು ದೂರವಿರಿಸಬಹುದಾದ ಸಾಧ್ಯತೆಗಳಿದ್ದವು. ಕೇವಲ ಒಂದು ಪ್ರಕರಣದ ಕಾರಣಕ್ಕೆ ಬಿಜೆಪಿ ಅಂದು ಅಧಿಕಾರಕ್ಕೆ ಬಂದಿಲ್ಲವಾದರೂ, ಇಂದು ಆಡಳಿತ ಯಂತ್ರ ಸೃಷ್ಟಿಸಿರುವ ಈ ‘ಭಯದ ವಾತಾವರಣ’ದ ತೀವ್ರತೆಯನ್ನು ಮಾಧ್ಯಮಗಳು ಮನಸ್ಸು ಮಾಡಿದರೆ ಕುಂದಿಸಬಹುದಿತ್ತು. ಆದರೆ ಮಾಧ್ಯಮಗಳು ಮಾಡಿದ Religioustic Journalism ಪರಿಣಾಮ ಇಂದು ರಾಜ್ಯ ಮತ್ತಷ್ಟು ಉನ್ಮಾದ ಮತ್ತು ಉದ್ವಿಗ್ನತೆಗೆ ಬಂದು ನಿಂತಿದೆ.
ಅಸಲಿಗೆ ಇದು ಒಂದು ಪರೇಶ್ ಮೆಸ್ತಾ ಸಾವಿಗೆ ಸಂಬಂಧಿಸಿದ ವಿಚಾರವಲ್ಲ. ರಾಜ್ಯದಲ್ಲಿ ಚುನಾವಣೆ ಸಮೀಪ ನಡೆದ ಪ್ರತಿಯೊಂದು ಕಗ್ಗೊಲೆಗಳೂ ಹೀಗೆ ಸೂಕ್ತ ತನಿಖೆಗೆ ಒಳಪಟ್ಟರೆ ಸದ್ಯ ಆಡಳಿತದಲ್ಲಿರುವ ಬಿಜೆಪಿ ಮಾತ್ರವಲ್ಲ ಕರ್ನಾಟಕ ಪತ್ರಿಕೋದ್ಯಮ ಕೂಡ ಮುಖಕ್ಕೆ ಬಟ್ಟೆ ಕಟ್ಟಿ ಓಡಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಇಲ್ಲಿ ಬಿಜೆಪಿ ನಡೆಸುವ ಎಲ್ಲಾ ಐನಾತಿ ಷಡ್ಯಂತ್ರಗಳನ್ನು ಸುಸೂತ್ರವಾಗಿ ಟಿವಿ ಪರದೆಯ ಮೇಲೆ ತಂದು Legalize ಮಾಡುವ ಕೆಲಸವನ್ನು ರಾಜ್ಯದ ಬಹುಪಾಲು ಟಿವಿ ಚಾನೆಲ್ ಗಳು, ಪತ್ರಿಕೆಗಳು ಮಾಡುತ್ತಿದೆ. ಇದಕ್ಕೆ ನಮ್ಮ ರಾಜ್ಯ ಮುಂದೆ ಅನುಭವಿಸ ಬೇಕಿರುವ ನೆಮ್ಮದಿಯ ದಿನಗಳನ್ನು ಬಲಿ ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ CBI ಸಲ್ಲಿಸಿದ ಬಿ ರಿಪೋರ್ಟ್ ಕೇವಲ BJPಗೆ ಮಾತ್ರವಲ್ಲ, ಮಾಧ್ಯಮಗಳಿಗೂ ಒಂದು ರೀತಿಯಲ್ಲಿ ಮಖಭಂಗವೇ ಸರಿ. ಆದರೆ ತೆರೆ ಮರೆಯಲ್ಲಿ ಅದನ್ನು ಮರೆಮಾಚಿ ‘ಬಿಜೆಪಿಗೆ ಮುಖಭಂಗ’ ಎಂದು ಸುದ್ದಿ ಬಿತ್ತರಿಸಿ ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದೆ. ಕನಿಷ್ಠ ಪಕ್ಷ ಇಂಥಾ ಸಮಯದಲ್ಲೂ ಮಾಧ್ಯಮಗಳು ಬಿಜೆಪಿಯ ಜೊತೆಗೆ ನಿಂತು ತಮ್ಮ ‘ಯಜಮಾನ’ನಿಗೆ ದ್ರೋಹ ಬಗೆಯದಂತೆ ನೋಡಿಕೊಳ್ಳ ಬೇಕಿತ್ತು. ಅದನ್ನೂ ಮಾಡದೆ ಬೀಸೋ ದೊಣ್ಣೆ ಏಟಿನಿಂದ ಮಾಧ್ಯಮಗಳು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದೆ. ಇದು ಬಿಜೆಪಿ ಹಾಗೂ ಮಾಧ್ಯಮಗಳು ಬೆಳೆಸಿದ್ದ ಅನೈತಿಕ ಸಂಬಂಧದಲ್ಲಿ ಬಿರುಕು ಮೂಡಿತ್ತಿದೆ ಎಂಬುದಕ್ಕಿರುವ ಪುರಾವೆ.