ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ವಿಶಿಷ್ಟ ದಾಖಲೆಗೆ ಭಾಜನವಾದ ಬೆನ್ನಲ್ಲೇ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಯಲ್ಲಾಪುರದಲ್ಲಿ ಮಾತನಾಡಿದ ಹೆಚ್.ಡಿ.ಕೆ ಇದು ನನಗೆ ಅಚ್ಚರಿಯ ಗೌರವ. ಈ ದಾಖಲೆಗಳನ್ನು ನನ್ನ ನಾಡಿನ ರೈತರು ಹಾಗೂ ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಮರ್ಪಣೆ ಮಾಡುತ್ತೇನೆ ಎಂದಿದ್ದಾರೆ.
ನಾನು ರಥಯಾತ್ರೆ ಮಾಡುತ್ತಿರುವ ಎಲ್ಲಾ ಕಡೆ ಜನರು ನನ್ನನ್ನು ಪ್ರೀತಿಯಿಂದ ಸ್ವಾಗತ ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಹಾರಗಳನ್ನು ಹಾಕಿ ಸ್ವಾಗತ ಮಾಡುತ್ತಿದ್ದಾರೆ. ಆ ಜನರ ಪ್ರೀತಿಯಿಂದ ಮಾತ್ರ ಈ ದಾಖಲೆ ನಿರ್ಮಾಣವಾಗಲು ಸಾಧ್ಯವಾಗಿದೆ. ಹೀಗಾಗಿ ಈ ಎಲ್ಲಾ ದಾಖಲೆಯ ಹೆಗ್ಗಳಿಕೆ ಅವರಿಗೇ ಸಲ್ಲಬೇಕು ಎಂದು ಹೇಳಿದ್ದಾರೆ.

ಪಂಚರತ್ನ ಯಾತ್ರೆ ಆರಂಭವಾಗಿ 33ನೇ ದಿನ ಪೂರೈಸಿದೆ. ಈ ಯಾತ್ರೆಯಲ್ಲಿ ಜನರು ಪ್ರೀತಿಯಿಂದ ಹಾಕಿದ ಹಾರಗಳು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿರುವುದು ಸಂತಸ ಉಂಟು ಮಾಡಿದೆ. ಇನ್ನೊಂದೆಡೆ ಪಂಚರತ್ನ ಯಾತ್ರೆ ಇದೀಗ 34ನೆ ದಿನಕ್ಕೆ ಕಾಲಿಟ್ಟಿದೆ. ಹಾರಗಳ ಸಂಖ್ಯೆ 500ರ ಗಡಿ ದಾಟಿದೆ. ನಿನ್ನೆ ತುಮಕೂರು ಗ್ರಾಮಾಂತರ ಕ್ಷೇತ್ರ ಒಂದರಲ್ಲೇ 30ಕ್ಕೂ ಹೆಚ್ಚು ಬೃಹತ್ ಹಾರಗಳನ್ನು ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಸೇಬು, ಸೌತೆಕಾಯಿ, ಕೊಬರಿ, ಕಬ್ಬಿನ ಹಾರಗಳ ಜತೆಗೆ ನಾಣ್ಯದ ಹಾರ, ಭತ್ತ ನೇಗಿಲು ಹಾರ, ಎತ್ತಿನ ಲಾಳದ ಹಾರ, ಜೆಡಿಎಸ್ ಚಿಹ್ನೆ ಹಾರ, ಮಣ್ಣಿನ ಹಾರ, ಕಿರೀಟದ ಹಾರ, ಮಹಿಳೆಯರು ಹಾಕಿದ ರಾಖಿ ಹಾರ ಗೂಳೂರು ಕರ್ಜಿಕಾಯಿ ಹಾರ, ವಿವಿಧ ತರಕಾರಿಗಳ ಹಾರ, ವಿವಿಧ ಹಣ್ಣುಗಳ ಹಾರ, ಎಲ್ ಇ ಡಿ ಹಾರ ಸೇರಿದಂತೆ ಒಂದೇ ದಿನ 30ಕ್ಕೂ ಹೆಚ್ಚು ಹಾರಗಳನ್ನು ಹಾಕಿ ಗೌರವಿಸಿದ್ದಾರೆ.






