ವಾಯವ್ಯ ಪಾಕಿಸ್ತಾನದ ಪೇಷಾವರದ ಮಸೀದಿಯೊಂದರಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಟ 46 ಮಂದಿ ಸಾವನ್ನಪ್ಪಿದ್ದು 147 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಖೈಬರ್ ಪಖ್ತೂಂಕ್ವ ಪ್ರಾಂತದ ರಾಜಧಾನಿ ಪೇಷಾವರದಲ್ಲಿರುವ ಮಸೀದಿಯಲ್ಲಿ ಸೋಮವಾರ ಮಧ್ಯಾಹ್ನದ ಪ್ರಾರ್ಥನೆಯ ವೇಳೆ ಈ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಈ ಪ್ರಾಂತ್ಯದ ಪೊಲೀಸ್ ಪ್ರಧಾನ ಕಚೇರಿ, ಉಗ್ರ ನಿಗ್ರಹ ಇಲಾಖೆ ಸಹಿತ ಹಲವು ಸರಕಾರಿ ಕಚೇರಿಗಳಿರುವ ಅತ್ಯಂತ ಬಿಗಿಭದ್ರತೆಯ ಕಟ್ಟಡದಲ್ಲಿಯೇ ಇರುವ ಮಸೀದಿಯಲ್ಲಿ ದಾಳಿ ನಡೆದಿದ್ದು ಮೃತರು, ಗಾಯಾಳುಗಳಲ್ಲಿ ಹೆಚ್ಚಿನವರು ಪೊಲೀಸ್ ಸಿಬ್ಬಂದಿಗಳು ಎಂದು ಪೇಷಾವರದ ಹಿರಿಯ ಪೊಲೀಸ್ ಅಧಿಕಾರಿ ಸಾದಿಖ್ ಖಾನ್ ತಿಳಿಸಿದ್ದಾರೆ. ಸಾವು-ನೋವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಪೇಷಾವರ ಪೊಲೀಸ್ ಮುಖ್ಯಸ್ಥ ಇಜಾಝ್ ಖಾನ್ ಹೇಳಿದ್ದಾರೆ.
ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ಮಧ್ಯಾಹ್ನ 1:40ರ ಸುಮಾರಿಗೆ ಮಸೀದಿಯನ್ನು ಪ್ರವೇಶಿಸಿದ ಆತ್ಮಾಹುತಿ ದಾಳಿಕೋರ ತನ್ನ ಸೊಂಟಕ್ಕೆ ಕಟ್ಟಿದ್ದ ಬಾಂಬ್ ಅನ್ನು ಸ್ಫೋಟಿಸಿಕೊಂಡಿದ್ದಾನೆ. ಆಗ ಮಸೀದಿಯಲ್ಲಿ ಸುಮಾರು 200 ಕ್ಕೂ ಜನರು ಪ್ರಾರ್ಥನೆಗಾಗಿ ಸೇರಿದ್ದರು. ಸ್ಫೋಟದ ತೀವ್ರತೆಗೆ ಮಸೀದಿಯ ಛಾವಣಿ ಛಿದ್ರಗೊಂಡು ಒಂದು ಭಾಗ ನೆಲಕ್ಕೆ ಉರುಳಿದೆ. ಮಸೀದಿಯ ಕಟ್ಟಡಕ್ಕೂ ಹಾನಿಯಾಗಿದ್ದು ಕುಸಿದು ಬಿದ್ದ ಕಟ್ಟಡದ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆಯಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಾಂಬ್ ದಾಳಿಯನ್ನು ಖಂಡಿಸಿರುವ ಪಾಕ್ ಪ್ರಧಾನಿ ಶಹಬಾಝ್ ಶರೀಫ್, ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ನೆರವು ಖಾತರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ದಾಳಿಯ ಹಿಂದಿರುವವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಶರೀಫ್ ಹೇಳಿದ್ದಾರೆ.
ಅಫ್ಘಾನಿಸ್ತಾನದ ಗಡಿಯ ಬಳಿಇರುವ ಖೈಬರ್ ಪಖ್ತೂಂಕ್ವಾ ಪ್ರಾಂತದ ರಾಜಧಾನಿಯಾಗಿರುವ ಪೇಷಾವರದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಭಯೋತ್ಪಾದಕ ದಾಳಿ ನಡೆದಿದೆ. ಪಾಕಿಸ್ತಾನಿ ತಾಲಿಬಾನ್ ಎಂದು ಗುರುತಿಸಿಕೊಂಡಿರುವ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಪ್ರತ್ಯೇಕ ಸಂಘಟನೆಯಾಗಿದ್ದರೂ ಅಫ್ಘಾನ್ನಲ್ಲಿ ಆಡಳಿತದಲ್ಲಿರುವ ತಾಲಿಬಾನ್ಗೆ ನಿಕಟವಾಗಿದೆ. ಪಾಕಿಸ್ತಾನ ಸರಕಾರದ ಜತೆ ಮಾಡಿಕೊಂಡಿದ್ದ ಕದನ ವಿರಾಮ ಒಪ್ಪಂದವನ್ನು ಕಳೆದ ನವೆಂಬರ್ನಲ್ಲಿ ರದ್ದುಗೊಳಿಸಿದ್ದ ಟಿಟಿಪಿ, ದೇಶದಲ್ಲಿ ಮತ್ತೆ ದಾಳಿ ಮುಂದುವರಿಸುವ ಎಚ್ಚರಿಕೆ ನೀಡಿತ್ತು.

ಹೊಣೆ ಹೊತ್ತ ಪಾಕ್ ತಾಲಿಬಾನ್
ಸುಮಾರು 50 ಮಂದಿಯ ಸಾವಿಗೆ ಕಾರಣವಾದ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಪಾಕ್ ತಾಲಿಬಾನ್ ಅಥವಾ ಟಿಟಿಪಿ ವಹಿಸಿಕೊಂಡಿದೆ ಎಂದು ವರದಿಯಾಗಿದೆ.
ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯನ್ನು ತಮ್ಮ ಸಂಘಟನೆ ನಡೆಸಿದೆ ಎಂದು ಟಿಟಿಪಿಯ ಕಮಾಂಡರ್ ಸರ್ಬಕಾಫ್ ಮುಹಮ್ಮದ್ ಹೇಳಿರುವುದಾಗಿ ವರದಿಯಾಗಿದೆ.
ಇದು ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಕೊಲ್ಲಲ್ಪಟ್ಟ ತನ್ನ ಸಹೋದರನ ಸಾವಿಗೆ ಪ್ರತೀಕಾರದ ದಾಳಿಯ ಭಾಗವಾಗಿದೆ ಎಂದು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ (ಟಿಟಿಪಿ) ಕೊಲ್ಲಲ್ಪಟ್ಟ ಕಮಾಂಡರ್ ಉಮರ್ ಖಾಲಿದ್ ಖುರಾಸಾನಿಯ ಸಹೋದರ ಹೇಳಿದ್ದಾನೆ.