ಐಸಿಸಿ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ್ ತಂಡ ಕ್ರಿಕೆಟ್ ಕೂಸು ಅಮೆರಿಕದ (Pakistan vs America) ವಿರುದ್ಧ ಸೋಲು ಕಂಡಿದೆ.
ಆತಿಥೇಯ ಅಮೆರಿಕ ತಂಡ ಸೂಪರ್ ಓವರ್ ನಲ್ಲಿ (Super Over) ಈ ಪಂದ್ಯ ಗೆದ್ದು ಬೀಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತ್ತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಅಮೆರಿಕ ತಂಡ ಕೂಡ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು. ಹೀಗಾಗಿ ಪಂದ್ಯವು ಸೂಪರ್ ಓವರ್ ಗೆ ಹೋಯಿತು.
ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಅಮೆರಿಕ ತಂಡ 19 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಾಕ್ ತಂಡ 1 ವಿಕೆಟ್ ಕಳೆದುಕೊಂಡು 13 ರನ್ ಮಾತ್ರ ಗಳಿಸಿತು. ಹೀಗಾಗಿ 5 ರನ್ ಗಳಿಂದ ಸೋಲು ಕಂಡಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕ್ ಗೆ ಉತ್ತಮ ಆರಂಭ ಸಿಗಲಿಲ್ಲ. ಮೂವರು ಅಗ್ರ ಕ್ರಮಾಂಕದ ಆಟಗಾರರು 5 ಓವರ್ ಆಗುವಷ್ಟರಲ್ಲಿಯೇ ಔಟ್ ಆದರು. ಹೀಗಾಗಿ ತಂಡವು 5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಕೇವಲ 26 ರನ್ ಗಳಿಸಿತ್ತು. ಆನಂತರ ನಾಯಕ ಬಾಬರ್ ಆಝಂ ಹಾಗೂ ಶಾದಾಬ್ ಖಾನ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಬಾಬರ್ 43 ರನ್ ಗಳಿಸಿದರು. ಶಾದಾಬ್ 40 ರನ್ ಗಳಿಸಿದರು. ಶಾಹೀನ್ ಆಫ್ರಿದಿ 23 ರನ್ ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಪರಿಣಾಮವಾಗಿ ಪಾಕ್ 7 ವಿಕೆಟ್ ಕಳೆದುಕೊಂಡು 159 ರನ್ ಕಲೆ ಹಾಕಿತು.
ಈ ಗುರಿ ಬೆನ್ನಟ್ಟಿದ ಅಮೆರಿಕ ಆರಂಭದಿಂದಲೂ ಉತ್ತಮ ಆಟ ಪ್ರದರ್ಶಿಸಿತು. ಸ್ಟೀವನ್ ಟೇಲರ್ 12 ರನ್ ಗಳಿಸಿದರು. ನಾಯಕ ಮೊನಾಂಕ್ ಪಟೇಲ್ ಮತ್ತು ಆಂಡ್ರೀಸ್ ಗೂಸ್ 68 ರನ್ ಗಳ ಜೊತೆಯಾಟ ನೀಡಿದರು. ನಾಯಕ ಮೊನಾಂಕ್ ಪಟೇಲ್ ಔಟ್ ಆಗುತ್ತಿದ್ದಂತೆ ಅಮೆರಿಕ ಕುಸಿಯಲು ಆರಂಭಿಸಿತು. ಕೊನೆಯ ಓವರ್ ನ ಕೊನೆಯ ಎಸೆತದಲ್ಲಿ ಅಮೆರಿಕ ತಂಡಕ್ಕೆ ಗೆಲ್ಲಲು 5 ರನ್ ಗಳ ಅವಶ್ಯಕತೆ ತ್ತು. ಈ ವೇಳೆ ನಿತಿಶ್ ಕುಮಾರ್ ಬೌಂಡರಿ ಬಾರಿಸಿ ಪಂದ್ಯವನ್ನು ಟೈ ಮಾಡಿದರು.