• Home
  • About Us
  • ಕರ್ನಾಟಕ
Friday, June 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಕ್ರೀಡೆ ಮನರಂಜನೆ ಮತ್ತು ಮಾರುಕಟ್ಟೆ ಬಂಡವಾಳ

ನಾ ದಿವಾಕರ by ನಾ ದಿವಾಕರ
June 7, 2025
in Top Story, ಕ್ರೀಡೆ, ದೇಶ, ರಾಜಕೀಯ, ವಾಣಿಜ್ಯ, ಶೋಧ
0
ಕ್ರೀಡೆ ಮನರಂಜನೆ ಮತ್ತು ಮಾರುಕಟ್ಟೆ ಬಂಡವಾಳ
Share on WhatsAppShare on FacebookShare on Telegram

—–ನಾ ದಿವಾಕರ—–

ADVERTISEMENT

ಬಂಡವಾಳ-ಕಾರ್ಪೋರೇಟ್‌ ಮಾರುಕಟ್ಟೆ ಪ್ರಲೋಭನೆಯ ಉನ್ಮಾದದ ಒಂದು ಪ್ರತೀಕ ಐಪಿಎಲ್

ಕ್ರಿಕೆಟ್‌ ಮೂಲತಃ ಬ್ರಿಟೀಷ್‌ ಸಾಮ್ರಾಜ್ಯಶಾಹಿಯ ಆಧಿಪತ್ಯದ ನಡುವೆ ಸೃಷ್ಟಿಯಾದ ಒಂದು ಗಣ್ಯ ಸಮುದಾಯದ, ಕುಲೀನ ಸಮಾಜದ ಹಾಗೂ ರಾಜ ಕುಟುಂಬಗಳ  ಮನರಂಜನೆಯ ಕ್ರೀಡೆ. ಈ ಕ್ರೀಡೆಗೆ ಮಿಡತೆಯಂತಹ ಕೀಟದ ಹೆಸರು ಏಕೆ ಬಂತು ? ಮೂಲತಃ ಫ್ರೆಂಚ್‌ ಭಾಷೆಯಲ್ಲಿ Criquet ಎಂದರೆ ಶಬ್ದ ಮಾಡುವ ಅಥವಾ ಕೀರಲು ಧ್ವನಿಯಲ್ಲಿ ಗೊಣಗುವ ಒಂದು ಕೀಟ.  ಈ ಕೀಟಕ್ಕೂ ಕ್ರಿಕೆಟ್‌ ಕ್ರೀಡೆಗೂ ನೇರ ಸಂಬಂಧವೇನಿಲ್ಲ. ಆದರೆ 16ನೇ ಶತಮಾನದ ಈ ಕ್ರೀಡೆ ಬ್ರಿಟೀಷ್‌ ಸಾಮ್ರಾಜ್ಯಶಾಹಿಯು ವಿಸ್ತರಿಸಿದ ಕಡೆಯೆಲ್ಲಾ ಈ ಕ್ರೀಡೆಯನ್ನೂ ಪ್ರೊತ್ಸಾಹಿಸುವ ಒಂದು ಚಾರಿತ್ರಿಕ ಪರಂಪರೆಯನ್ನು ಗುರುತಿಸಬಹುದು. ಭಾರತದಲ್ಲೂ ಸಹ ರಣಜೀತ್‌ ಸಿಂಗ್‌, ದುಲೀಪ್‌ ಸಿಂಗ್‌, ಪಟೌಡಿ  ಮುಂತಾದ ಕುಲೀನ ಮನೆತನೆದವರೇ ಕ್ರಿಕೆಟ್‌ಗೆ ಬುನಾದಿ ಹಾಕಿದವರು. 20ನೆ ಶತಮಾನದ ಆರಂಭದಲ್ಲಿ ಚಾಲ್ತಿಗೆ ಬಂದ ಈ ಕ್ರೀಡೆಯಲ್ಲಿ ಡಾ. ಅಂಬೇಡ್ಕರ್‌ ಅವರ ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಪಿ. ಬಾಲು ಸಾಮಾನ್ಯರ ನಡುವಿನಿಂದ ಬಂದ ಆಟಗಾರ.

 ಕ್ರಿಕೆಟ್‌ ಆಟವನ್ನು ಸಂಭಾವಿತರ, ಗಣ್ಯರ, ಕುಲೀನರ (Gentlema̧n, Elite, Aristocrats) ಆಟ  ಎಂದು ಬಣ್ಣಿಸಲಾಗುತ್ತದೆ. ಬ್ರಿಟೀಷ್‌ ಆಳ್ವಿಕೆಗೆ ಒಳಪಟ್ಟಿದ್ದ ದೇಶಗಳಿಂದ ಹೊರತಾಗಿ ಈ ಕ್ರೀಡೆ ಹೆಚ್ಚು ಜನಪ್ರಿಯತೆ ಗಳಿಸಿರಲೂ ಇಲ್ಲ. ಕಾಮನ್‌ವೆಲ್ತ್‌ ಎಂದು ಪರಿಗಣಿಸಲಾಗುವ ದೇಶಗಳು ಮಾತ್ರ ಈ ಕ್ರೀಡೆಯನ್ನು ಅಳವಡಿಸಿಕೊಂಡಿದ್ದವು. 1975ರ ಮೊದಲನೇ ವಿಶ್ವಕಪ್ ಪಂದ್ಯಾವಳಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಈ ಸಮಯದಲ್ಲಿ ಹೊಸ ಅವಿಷ್ಕಾರದೊಂದಿಗೆ ಐದು ದಿನಗಳ ಪಂದ್ಯವನ್ನು 60 ಓವರ್‌ಗಳಿಗೆ ಸೀಮಿತಗೊಳಿಸುವ ಮೂಲಕ ಏಕದಿನ ಪಂದ್ಯವಾಗಿ ಪರಿವರ್ತಿಸಿದ್ದು ಆಸ್ಟ್ರೇಲಿಯಾದ ಉದ್ಯಮಿ ಕೆರ್ರಿ ಪ್ಯಾಕರ್.‌ ಈತನೇ ಆಯೋಜಿಸಿ ನಡೆಸಿದ ಪಂದ್ಯಾವಳಿಗಳಲ್ಲಿ ಆಡುವವರನ್ನು ಕ್ರಿಕೆಟ್‌ ಮಂಡಲಿಗಳು ಬಹಿಷ್ಕರಿಸಿದ್ದೂ ಉಂಟು. ಆದರೆ 1980ರ ಆರಂಭದಲ್ಲಿ ವಿಶ್ವದಾದ್ಯಂತ ತನ್ನ ಬಾಹುಗಳನ್ನು ಚಾಚಿದ ಬಂಡವಾಳಶಾಹಿ ಮಾರುಕಟ್ಟೆ ಈ ಏಕದಿನ ಪರಿಕಲ್ಪನೆಯನ್ನು ಅಧಿಕೃತಗೊಳಿಸಿದ್ದೇ ಅಲ್ಲದೆ, ಸರ್ವಮಾನ್ಯವನ್ನಾಗಿ ಮಾಡಿತ್ತು.

 ವಿಶ್ವವಿಖ್ಯಾತ ನಾಟಕಕಾರ, ವಿಮರ್ಶಕ ಜಾರ್ಜ್‌ ಬರ್ನಾರ್ಡ್‌ ಷಾ ಈ ಕ್ರೀಡೆಯನ್ನು “ ಹನ್ನೊಂದು ಜನ ಮೂರ್ಖರು ಆಡುವ 11 ಸಾವಿರ ಮೂರ್ಖರು ವೀಕ್ಷಿಸುವ ಪಂದ್ಯ ” ಎಂದು ಬಣ್ಣಿಸಿದ್ದರು. ಆ ಕಾಲದಲ್ಲೇ ಇದನ್ನು ಬಲಪ್ರದರ್ಶನದ, ರಾಜಕೀಯ ಪ್ರೇರಿತ, ಹಣಕಾಸು ಕೇಂದ್ರಿತ, ಮಾದಕ ವಸ್ತುಗಳಿಂದ ಕೂಡಿದ, ಅತಿ ದುರಾಸೆಯಿಂದ ಆಡುವ ಒಂದು ಕ್ರೀಡೆ ಎಂದೂ ಗುರುತಿಸಲಾಗಿತ್ತು. ಇದು ಚರ್ಚಾರ್ಹ ಅಭಿಪ್ರಾಯವಾದರೂ, 21ನೇ ಶತಮಾನದ ಡಿಜಿಟಲ್‌ ಯುಗದಲ್ಲಿ ಒಂದು ಶುದ್ಧ ಮನರಂಜನೆಯಾಗಿ ಮಾರ್ಪಟ್ಟಿರುವ ಈ ಕ್ರೀಡೆಗೆ ಈ ಲಕ್ಷಣಗಳೆಲ್ಲವೂ ಹೊಂದುತ್ತವೆ. ಬಂಡವಾಳಶಾಹಿ ಮಾರುಕಟ್ಟೆ ವಿಸ್ತರಿಸಿದಂತೆಲ್ಲಾ ಕಾಮನ್‌ ವೆಲ್ತ್‌ ದೇಶಗಳನ್ನು ದಾಟಿ ನಡೆದ ಕ್ರಿಕೆಟ್‌ ಅಮೆರಿಕ, ಯೂರೋಪ್‌ ದೇಶಗಳಲ್ಲೂ ಜನಪ್ರಿಯತೆ ಪಡೆದುಕೊಳ್ಲಲಾರಂಭಿಸಿತ್ತು. ಈ ಜನಪ್ರಿಯತೆಗೆ ಕಾರಣ ಕ್ರಿಕೆಟ್‌ ಕೌಶಲಕ್ಕಿಂತಲೂ ಕಾರ್ಪೋರೇಟ್‌ ಮಾರುಕಟ್ಟೆಯ ಹಿತಾಸಕ್ತಿ ಎನ್ನುವುದು ವಾಸ್ತವ.

 ಕ್ಷಿಪ್ರಗತಿಯ ಪಂದ್ಯಗಳ ಪರಂಪರೆ

 50 ಓವರ್‌ಗಳ ಏಕದಿನ ಪಂದ್ಯಗಳು ಯುವ ಸಮೂಹಕ್ಕೆ ಆಕರ್ಷಕವಾಗಿ ಕಂಡಿದ್ದು ಅಚ್ಚರಿಯೇನಲ್ಲ. ಏಕೆಂದರೆ ಐದು ದಿನಗಳ ಕಾಲ ಟೆಸ್ಟ್‌ ಪಂದ್ಯಗಳನ್ನು ವೀಕ್ಷಿಸುವ ಅಥವಾ ವೀಕ್ಷಕ ವಿವರಣೆ ಕೇಳುವ ಸಂಯಮ, ವ್ಯವಧಾನ ಈ ತಲೆಮಾರಿನ ಯುವ ಸಮೂಹದಲ್ಲಿ ಕಾಣಲಸಾಧ್ಯ. ಈ ಪಂದ್ಯಗಳ ಅವಿಷ್ಕಾರದ ನಂತರದಲ್ಲೇ ಕ್ರಿಕೆಟ್‌ ಪಂದ್ಯಗಳು ಮನರಂಜನೆಯನ್ನೇ ಕೇಂದ್ರೀಕರಿಸುವ ಕ್ರೀಡೆಯಾಗಿತ್ತು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಕಾಣಬಹುದಾಗಿದ್ದ ಕೌಶಲ ಮತ್ತು Copy book Style ಆಟದ ವೈಖರಿಯನ್ನು ಏಕದಿನ ಪಂದ್ಯಗಳಲ್ಲಿ ಕಾಣಲಾಗಲಿಲ್ಲ. ಭಾರತದ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ಪಟೌಡಿ-ಜಿ ಆರ್‌ ವಿಶ್ವನಾಥ್-ಗವಾಸ್ಕರ್‌ ಅವರಿಗೂ ಏಕದಿನ ಪಂದ್ಯಗಳ ಮೂಲಕ ಟೆಸ್ಟ್‌ಗಳಲ್ಲೂ ಖ್ಯಾತರಾದ ತೆಂಡೂಲ್ಕರ್‌ ಮೊದಲಾದವರಿಗೂ ತುಲನೆ ಮಾಡಿ ನೋಡಿದಾಗ, ಕ್ರಿಕೆಟ್‌ ಆಡಿರುವ ಅಥವಾ ಬಲ್ಲವರಾಗಿರುವ ಯಾರಿಗೇ ಆದರೂ ಈ ಅಂತರ ಅರ್ಥವಾಗುತ್ತದೆ.

ಬಂಡವಾಳಶಾಹಿ ಆರ್ಥಿಕತೆಯಲ್ಲಿ ನವ ಉದಾರವಾದಿ ಜಾಗತೀಕರಣ ಪ್ರವೇಶಿಸಿದ ನಂತರ, ಈ ಏಕದಿನ ಪಂದ್ಯಗಳನ್ನೂ ಸಹ ಕೆಲವೇ ಗಂಟೆಗಳಿಗೆ ಸೀಮಿತಗೊಳಿಸುವ 20-20 ಪಂದ್ಯಗಳಿಗೆ ನಾಂದಿ ಹಾಡಲಾಯಿತು. ಈ ಕ್ಷಿಪ್ರಗತಿಯ ಕ್ರೀಡೆ ಕ್ರಿಕೆಟ್‌ ಕೌಶಲಕ್ಕಿಂತಲೂ ಹೆಚ್ಚಾಗಿ ಮನರಂಜನೆಯಾಗಿ ಜನಾಕರ್ಷಣೆ ಪಡೆದಿತ್ತು ಅಷ್ಟೇ ಅಲ್ಲದೆ ಆಟದ ವೈಖರಿಯಲ್ಲಿ ಹೊಸ ನಾವೀನ್ಯತೆಗಳು (Innovative) ತಲೆದೋರಿದವು. ಕನ್ನಡ ಕ್ರಿಕೆಟಿಗ (ಈಗ ವೀಕ್ಷಕ ವಿವರಣೆ ನೀಡುತ್ತಿರುವ) ಅಖಿಲ್‌ ಪದೇಪದೇ ಹೇಳುವಂತೆ ಬ್ಯಾಟರ್‌ಗಳು ಎದ್ದೂಬಿದ್ದು ಹೊಡೆಯುವ ಒಂದು ಶೈಲಿ ಹೊಸ ನಾವೀನ್ಯತೆಯಾಗಿ ಜನಪ್ರಿಯವಾಯಿತು. ಇಲ್ಲಿ ಬೌಲರ್‌ಗಳಿಗಿಂತಲೂ ಬ್ಯಾಟಿಂಗ್‌ ವೀರರು ಹೆಚ್ಚು ಪ್ರಾಮುಖ್ಯತೆ, ಪ್ರಾಶಸ್ತ್ಯ ಮತ್ತು ಬಂಡವಾಳ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಾಧಾನ್ಯತೆಯನ್ನು ಪಡೆದುಕೊಂಡಿದ್ದನ್ನೂ ಗುರುತಿಸಬಹುದು.

 ಈ ಹೊಸ ಅವಿಷ್ಕಾರ-ನಾವೀನ್ಯತೆಗಳ ಮಾರುಕಟ್ಟೆ ಆಯಾಮವನ್ನು ಐಪಿಎಲ್‌ನಂತಹ ಪಂದ್ಯಾವಳಿಗಳಲ್ಲಿ ಗುರುತಿಸಬಹುದು. ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಹರಾಜು ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಗಳ ವ್ಯವಹಾರದೊಂದಿಗೆ, ಆಟಗಾರರನ್ನು ಖರೀದಿಸಲಾಗುತ್ತದೆ. ಹಾಗಾಗಿಯೇ ವಿಭಿನ್ನ ರಾಜ್ಯಗಳನ್ನು ಪ್ರತಿನಿಧಿಸುವ ಕ್ರಿಕೆಟಿಗರು ಐಪಿಎಲ್‌ನಲ್ಲಿ ಬೇರಾವುದೋ ತಂಡಕ್ಕೆ ಅಥವಾ ತಮ್ಮ ಸ್ವಂತ ರಾಜ್ಯದಿಂದ ಭಿನ್ನವಾದ ತಂಡಕ್ಕೆ ಆಯ್ಕೆಯಾಗುತ್ತಾರೆ. ಆಟಗಾರರ ಕ್ರಿಕೆಟ್‌ ಕೌಶಲವನ್ನು ಅವರ ಕ್ರೀಡಾಕೌಶಲ್ಯಕ್ಕಿಂತಲೂ, ಅವರನ್ನು ಖರೀದಿಸಿದರೆ ಫ್ರಾಂಚೈಸಿ ತಂಡಕ್ಕೆ ಎಷ್ಟು ಲಾಭ ಗಳಿಸಲು ಸಾಧ್ಯ ಎನ್ನುವುದು ಮಾನದಂಡವಾಗುತ್ತದೆ.  ಹಾಗಾಗಿ ನುರಿತ ಆಟಗಾರರನ್ನೂ ಮೀರಿ ಇತ್ತೀಚೆಗಷ್ಟೇ ಕ್ರಿಕೆಟ್‌ ಪ್ರವೇಶಿಸುವ ಅತಿ ಕಿರಿಯ ಆಟಗಾರರನ್ನೂ ಅತಿ ಹೆಚ್ಚಿನ ಬೆಲೆಯಲ್ಲಿ ಹರಾಜು ಮಾಡಲಾಗುತ್ತದೆ.

ಸ್ವಲ್ಪ  ಆತುರದಿಂದ  ಮಾಡಲು ಹೋಗಿ ಆದ ದುರ್ಘಟನೆ ಬಗ್ಗೆ ನಾನು ಮಾತನಾಡುವುದಿಲ್ಲ #pratidhvani

 ಮಾರುಕಟ್ಟೆ ಅಂಗಳದಲ್ಲಿ  ಕ್ರಿಕೆಟ್‌

 ಈ ಪಂದ್ಯಾವಳಿಗಳು ಆರಂಭವಾದ ಕೂಡಲೇ ಸಾರ್ವಜನಿಕ ಮಾರುಕಟ್ಟೆಯಲ್ಲಿ ಜೂಜು ಕಟ್ಟೆಗಳೂ ಅನಾವರಣಗೊಳ್ಳುತ್ತವೆ. ರಮ್ಮಿ ಸರ್ಕಲ್‌, ಮೈ ಸರ್ಕಲ್‌, ಡ್ರೀಂ ಇಲೆವೆನ್‌ ಮೊದಲಾದ ಆನ್‌ಲೈನ್‌ ಸಾಧನಗಳು ಮೂಲತಃ ಸಾರ್ವಜನಿಕರು ತಮ್ಮದೇ ಆದ ತಂಡಗಳನ್ನು ಆಯ್ಕೆ ಮಾಡುವ ಮೂಲಕ ಹಣ ಗಳಿಸುವ ಅಥವ ಹೂಡಿಕೆ ಮಾಡಿ ಕಳೆದುಕೊಳ್ಳುವ ಜೂಜುಕಟ್ಟೆಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಆನ್‌ಲೈನ್‌ ಸಾಧನಗಳಿಗೆ ರಾಯಭಾರಿಗಳಾಗಿ (Ambassadorş) ಮಾಜಿ ಕ್ರಿಕೆಟಿಗರನ್ನೇ ಬಳಸಲಾಗುತ್ತದೆ ಅಥವಾ ಕ್ರಿಕೆಟ್‌ ಗಂಧ ಗಾಳಿ ತಿಳಿಯದ ಸಿನೆಮಾ ಸೆಲೆಬ್ರಿಟಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಉತ್ಪಾದನೆಯಾಗುವ ಜಾಹೀರಾತು ಆದಾಯದ ಮಾರುಕಟ್ಟೆ  ಕೋಟ್ಯಂತರ ರೂಗಳಷ್ಟಿರುತ್ತದೆ. ಮೂಲತಃ ಕಾರ್ಪೋರೇಟ್‌ ಉದ್ಯಮಿಗಳೇ ಫ್ರಾಂಚೈಸಿಗಳಾಗಿರುವ ಐಪಿಎಲ್‌ ತಂಡಗಳು ಪ್ರತಿನಿಧಿಸುವುದು ಆ ಮಾರುಕಟ್ಟೆಯ ಹಿತಾಸಕ್ತಿಯನ್ನೇ ಹೊರತು, ಕ್ರಿಕೆಟ್‌ ಎಂಬ ಸುಂದರ ಕ್ರೀಡೆಯನ್ನಲ್ಲ.

 ಈ ಪಂದ್ಯಾವಳಿಯಿಂದ ಅತಿಹೆಚ್ಚು ಆದಾಯ ಪಡೆಯುವ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಯಾವುದೇ ಆದಾಯ ತೆರಿಗೆ ಪಾವತಿಸುವುದಿಲ್ಲ ಎನ್ನುವ ಅಂಶವನ್ನು ಗಮನಿಸಬೇಕಿದೆ. ಈ ಮಂಡಳಿಯ ಪದಾಧಿಕಾರಿಗಳಿಗೂ ಸಹ ಕ್ರಿಕೆಟ್‌ ಆಡಿದ ಅನುಭವವಾಗಲೀ ಅಥವಾ ಈ ಕ್ರೀಡೆಯ ತಾಂತ್ರಿಕ ಸಂಗತಿಗಳ ಪರಿವೆಯಾಗಲೀ ಇರಲೇಬೇಕೆಂದಿಲ್ಲ. ಆಡಳಿತಾರೂಢ ರಾಜಕೀಯ ಪಕ್ಷಗಳ ಹಿತಾಸಕ್ತಿಗನುಗುಣವಾಗಿ ಅಧ್ಯಕ್ಷ, ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗುತ್ತದೆ. ನುರಿತ ಕ್ರಿಕೆಟ್‌ ಆಟಗಾರರಿಗೆ ತರಬೇತುದಾರ (Coach) , ಆಯ್ಕೆ ಸಮಿತಿ ಅಧ್ಯಕ್ಷ ಮುಂತಾದ ಹುದ್ದೆಗಳನ್ನು ನೀಡಲಾಗುತ್ತದೆ. ಬಿಸಿಸಿಐ ಹುದ್ದೆಗಳಿಗೂ ಕಾರ್ಪೋರೇಟ್‌ ಉದ್ದಿಮೆಗಳಿಗೂ ಇರುವ ಅವಿನಾಭಾವ ವಾಣಿಜ್ಯ ಸಂಬಂಧಗಳೇ ಕ್ರಿಕೆಟ್‌ ಪಂದ್ಯಾವಳಿಗಳನ್ನು ನಿರ್ವಹಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ.

 ಐಪಿಎಲ್‌ ಮತ್ತು ಆರ್ಥಿಕತೆ

General view during day one of the TATA Indian Premier League Player Auction held at the ITC Gardenia hotel in Bengaluru on the 12th February 2022 Photo by Arjun Singh / Sportzpics for IPL

 ಈ ಮಾರುಕಟ್ಟೆ ಸಂಬಂಧಗಳಲ್ಲಿ ಐಪಿಎಲ್‌ ಪಂದ್ಯಾವಳಿಯನ್ನು ನಿಷ್ಕರ್ಷೆ ಮಾಡಿದಾಗ, ಅಲ್ಲಿ ಆರ್ಥಿಕತೆಗೆ ಉಂಟಾಗುವ ಲಾಭ, ಜಿಡಿಪಿಗೆ ಸಲ್ಲುವಂತಹ ವ್ಯಾಪಾರ ವಹಿವಾಟುಗಳ ಜಿಎಸ್‌ಟಿ ಇತ್ಯಾದಿ ಆದಾಯಗಳು ಹಾಗೂ ಷೇರು ಮಾರುಕಟ್ಟೆಗೆ ಸಂದಾಯವಾಗುವ ಲಾಭ ಮತ್ತು ಮೂಲ ಬಂಡವಾಳವನ್ನೂ ಗುರುತಿಸಬಹುದು. ಕ್ರಿಕೆಟ್‌ ಆಟಗಾರರ ಹರಾಜು ಪ್ರಕ್ರಿಯೆಯಿಂದ ಪಂದ್ಯಾವಳಿಯ ಸಮಾಪ್ತಿಯವರೆಗೂ ಹರಡಿಕೊಳ್ಳುವ ಈ ಮಾರುಕಟ್ಟೆಯ ವಿಸ್ತಾರದಲ್ಲಿ ಪರ್ಯಾಯ ಆರ್ಥಿಕತೆಯೊಂದು ಸೃಷ್ಟಿಯಾಗುವುದನ್ನು ಬಹುಮುಖ್ಯವಾಗಿ ಗಮನಿಸಬೇಕಿದೆ. ಒಂದು ವರದಿಯ ಅನುಸಾರ ಆರ್‌ಸಿಬಿ ತಂಡಕ್ಕೆ 20 ಕೋಟಿ ರೂಗಳ ಪ್ರಶಸ್ತಿಯನ್ನು ನೀಡಲಾಗಿದೆ. ಆದರೆ ಈ ತಂಡದ ಫ್ರಾಂಚೈಸಿ ಉದ್ದಿಮೆ ಯುನೈಟೆಡ್‌ ಸ್ಪಿರಿಟ್‌ ಲಿಮಿಟೆಡ್‌ನ ಷೇರುಗಳು ಫೈನಲ್‌ ಪಂದ್ಯಾವಳಿಗೆ ಮುನ್ನವೇ ಷೇರು ಮಾರುಕಟ್ಟೆಯಲ್ಲಿ 2,164 ಕೋಟಿ ರೂಗಳಷ್ಟು ಲಾಭ ಗಳಿಸಿದೆ. ಇಷ್ಟೇ ಅಲ್ಲದೆ ಆರ್‌ಸಿಬಿ ʼಒಡೆಯರುʼ ಟಿಕೆಟ್‌ ಮಾರಾಟದ ಮೂಲಕ 24 ಕೋಟಿ ರೂಗಳನ್ನು ಗಳಿಸಿದ್ದಾರೆ.

 ಈ ಔದ್ಯಮಿಕ ಮಾರುಕಟ್ಟೆಯ ಆರ್ಥಿಕತೆಯಲ್ಲೇ ಕಾರ್ಯನಿರ್ವಹಿಸುವ ಜೂಜುಕಟ್ಟೆಗಳು ಯುವ ಸಮೂಹವನ್ನು ಆಕರ್ಷಿಸುವುದು ಸಹಜ. ಐಪಿಎಲ್‌ ಪಂದ್ಯಾವಳಿಗೆ ಈ ಸ್ಫೂರ್ತಿ ಬಹುಶಃ ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ಮುಖೇನ ಬಂದಿರಬಹುದು. ಪ್ರತಿಯೊಂದು ಪಂದ್ಯದ ವೇಳೆಯಲ್ಲೂ ಪ್ರತಿ ಸಿಕ್ಸರ್‌ಗೆ, ಬೌಂಡರಿಗೆ, ಆಟಗಾರರ ವ್ಯಕ್ತಿಗತ ರನ್ನುಗಳಿಗೆ, ವಿಕೆಟ್ಟುಗಳಿಗೆ ಇಂತಿಷ್ಟು ಹಣವನ್ನು ಬಾಜಿ ಕಟ್ಟುವ ಒಂದು ದೊಡ್ಡ ಅರ್ಥವ್ಯವಸ್ಥೆಯೇ ಹೊರಜಗತ್ತಿನಲ್ಲಿ ಸೃಷ್ಟಿಯಾಗುತ್ತದೆ. ಬಹುತೇಕ ಎಲ್ಲ ತಂಡಗಳ ಒಡೆತನವೂ ಕಾರ್ಪೋರೇಟ್‌ ಉದ್ಯಮಿಗಳಿಗೆ ಸೇರಿರುವುದರಿಂದ, ಈ ಸಂಸ್ಥೆಗಳ ಹಿತಾಸಕ್ತಿಯನ್ನು ಬಯಸುವವರೇ ಜೂಜು ಮಾರುಕಟ್ಟೆಯ ವಾರಸುದಾರರಾಗಿರುತ್ತಾರೆ. ಬಾಜಿ ಕಟ್ಟುವವರಿಗೆ ಕ್ರಿಕೆಟ್‌ ಕುರಿತ ಕನಿಷ್ಠ ಜ್ಞಾನ ಇಲ್ಲದಿರುವ ಸಂದರ್ಭಗಳೇ ಹೆಚ್ಚು. ಏಕೆಂದರೆ ಬಾಜಿ ಕಟ್ಟಿದ ಹಣ ವಾಪಸ್‌ ಬರುವ ತವಕ ಅಲ್ಲಿ ಮುಖ್ಯವಾಗುತ್ತದೆ. ಎಲ್ಲ ರಾಜ್ಯಗಳಲ್ಲೂ ಈ ಬಾಜಿ ಮಾರುಕಟ್ಟೆಯ ಮೇಲೆ ಕ್ರಮ ಕೈಗೊಳ್ಳಲಾಗಿದ್ದರೂ, ಇದರ ವಿಶಾಲ ವ್ಯಾಪ್ತಿ ಸರ್ಕಾರದ ಕಠಿಣ ಬಾಹುಗಳನ್ನೂ ಮೀರಿ ಬೆಳೆದಿರುತ್ತದೆ.

 ಪ್ರತಿವರ್ಷ ಐಪಿಎಲ್‌ ಪಂದ್ಯಾವಳಿಯ ಉದ್ದಕ್ಕೂ ನಡೆಯುವ ಈ ಬೆಟ್ಟಿಂಗ್‌ ದಂಧೆ ವಾರ್ಷಿಕ ಶೇಕಡಾ 30ರಷ್ಟು ವೃದ್ಧಿಯಾಗುತ್ತಿದ್ದು, ಈ ವರ್ಷ ನೂರು ಶತಕೋಟಿ ಡಾಲರ್‌ಗಳಷ್ಟು ತಲುಪಿದೆ. ಇಲ್ಲಿ ಹಣ ಕಳೆದುಕೊಳ್ಳುವವರು ಯಾರು ? ಸಾಮಾನ್ಯ ಕೆಳಮಧ್ಯಮ ವರ್ಗದ ದುಡಿಮೆಗಾರರು, ಸಣ್ಣ ವ್ಯಾಪಾರಿಗಳು ಹಾಗೂ ಈ ಮಾರುಕಟ್ಟೆಯ ತಾಂತ್ರಿಕ ಸೂಕ್ಷ್ಮಗಳನ್ನೇ ಅರಿಯದೆ ಹಣದಾಸೆಗಾಗಿ ಹೂಡಿಕೆ ಮಾಡುವ ಅಮಾಯಕ ಜನತೆ. ಕಾನೂನಾತ್ಮಕವಾಗಿ ಇದು ಅಕ್ರಮ ಹೌದಾದರೂ ಇದರ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಿರುವುದು ಕಾಣುವುದಿಲ್ಲ. ಇಲ್ಲಿ ಕ್ರೋಢೀಕೃತವಾಗುವ ಅಕ್ರಮ ಬಂಡವಾಳವೂ ಮಾರುಕಟ್ಟೆಯ ಲಾಭಾಂಶದ ಒಂದು ಭಾಗವಾಗಿಬಿಡುತ್ತದೆ.  ಔದ್ಯಮಿಕ ಜಗತ್ತಿಗೆ ಸಿಹಿಹೂರಣದಂತೆ ಕಾಣುವ ಈ ಅಕ್ರಮ ಸಂಪತ್ತು ಯಾವುದೇ ತೆರಿಗೆ ಹೊರೆ ಇಲ್ಲದೆಯೇ ಬಂಡವಾಳದ ಮಾರುಕಟ್ಟೆಯೊಳಗೆ ಸೇರಿಕೊಳ್ಳುತ್ತದೆ.

 ಆರ್ಥಿಕತೆಯ ದೃಷ್ಟಿಯಿಂದ ಸಕಾರಾತ್ಮಕ ನೆಲೆಯಲ್ಲಿ ನೋಡಿದಾಗ ಐಪಿಎಲ್‌ ಪಂದ್ಯಾವಳಿಗಳು ಸೃಷ್ಟಿಸುವ ಸರಕು ಮಾರುಕಟ್ಟೆಯನ್ನು ಗಮನಿಸಬಹುದು. ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಬಹುದಾದ ಈಡನ್‌ಗಾರ್ಡನ್‌, ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣ, ಮುಂಬೈನ ವಾಂಖೆಡೆ ಮುಂತಾದೆಡೆ ಪಂದ್ಯ ವೀಕ್ಷಿಸಲು ಬರುವ ಸಾವಿರಾರು ಜನರು ಧರಿಸುವ ಒಂದೇ ವಿನ್ಯಾಸದ ಟೀ ಶರ್ಟ್‌ಗಳು ಮತ್ತಿತರ ಮಾರುಕಟ್ಟೆ ಸರಕುಗಳು ಅಪಾರ ಪ್ರಮಾಣದ ಮಾರುಕಟ್ಟೆ ಸೃಷ್ಟಿಸುತ್ತವೆ. ಫೈನಲ್‌ ಪಂದ್ಯಾವಳಿಯ ದಿನದಂದೇ ಬೆಂಗಳೂರಿನಲ್ಲಿ 30 ಕೋಟಿ ರೂ ಮೌಲ್ಯದ ಮದ್ಯ ವ್ಯಾಪಾರವಾಗಿರುವುದು ಮತ್ತೊಂದು ಆಯಾಮ. ಈ ಸರಕು ಮಾರುಕಟ್ಟೆ ಜಿಡಿಪಿ ವೃದ್ಧಿಗೆ ಕಾರಣವಾಗುವುದಾದರೂ, ಬಹುಪಾಲು ಲಾಭಾಂಶ ಕಾರ್ಪೋರೇಟ್‌ ಉದ್ದಿಮೆಗಳ ಸಂಪತ್ತಿನ ಕ್ರೋಢೀಕರಣಕ್ಕೆ ನೆರವಾಗುವುದನ್ನೂ ಅಲ್ಲಗಳೆಯಲಾಗುವುದಿಲ್ಲ.

 ಸರ್ಕಾರಗಳ ಕಾರ್ಪೋರೇಟ್‌ ಒಲವು

 ಈ ಮಾರುಕಟ್ಟೆಯ ಪ್ರಭಾವವೇ ಕರ್ನಾಟಕ ಸರ್ಕಾರವನ್ನೂ ಸಹ ಆರ್‌ಸಿಬಿ ವಿಜಯೊತ್ಸವ ಆಚರಿಸುವಂತೆ ಪ್ರೇರೇಪಿಸಿದೆ. ಖ್ಯಾತ ಕ್ರಿಕೆಟ್‌ ಪಟು ಸೈಯ್ಯದ್‌ ಕಿರ್ಮಾನಿ ಪ್ರಶ್ನಿಸಿರುವಂತೆ, ಕರ್ನಾಟಕದ ತಂಡ ರಣಜಿಟ್ರೋಫಿ ಗೆದ್ದಾಗ ಇದೇ ರೀತಿಯ ಸಂಭ್ರಮಾಚರಣೆ ಕಾಣಲು ಸಾಧ್ಯವೇ ? ಆರ್‌ಸಿಬಿ ತಂಡವನ್ನು ಅಭಿನಂದಿಸುವುದು ಸೌಜನ್ಯದ ಕ್ರಮವೇ ಇರಬಹುದು ಆದರೆ “ ಆರ್‌ಸಿಬಿ ನಮ್ಮದು ” ಎಂದು ಕನ್ನಡಿಗರು ಹೇಳಿಕೊಳ್ಳುವುದರ ಔಚಿತ್ಯವೇನು ? ಅದು ಕರ್ನಾಟಕದ ತಂಡ ಅಲ್ಲ, ಕರ್ನಾಟಕ ಮೂಲದ, ಜನರಲ್ಲಿ ಕುಡಿತದ ದುರ್ವ್ಯಸನ ಹೆಚ್ಚಿಸುವ,  ಮದ್ಯ ತಯಾರಿಸುವ ಒಂದು ಉದ್ದಿಮೆಯ ತಂಡ. ತಂಡದ ಸದಸ್ಯರ ಪೈಕಿ ಕರ್ನಾಟಕದ ಪ್ರಾತಿನಿಧ್ಯವೂ ನಗಣ್ಯವೇ ಆಗಿರುತ್ತದೆ. ಆದಾಗ್ಯೂ ಅದು                 ಕನ್ನಡಿಗರಿಗೆ ʼನಮ್ಮದು ʼ ಹೇಗಾಗುತ್ತದೆ. ಈ ನಿರೂಪಣೆಯನ್ನು (Narrative) ಕಟ್ಟಿಕೊಡುವ ವಿದ್ಯುನ್ಮಾನ ಮಾಧ್ಯಮಗಳು, ಪ್ರತಿ ಪಂದ್ಯದ ಸುತ್ತಲೂ ನಿರ್ಮಿಸುವ ಉನ್ಮಾದ ಮತ್ತು ಭಾವೋದ್ವೇಗದ ಸನ್ನಿವೇಶ ಒಂದು ನೆಲೆಯಲ್ಲಿ ಬಾಜಿ ದಂಧೆಗೂ, ಜೂಜು ಮಾರುಕಟ್ಟೆಗೂ, ಫ್ರಾಂಚೈಸಿ ಉದ್ದಿಮೆಗೂ ಲಾಭದಾಯಕವಾಗುತ್ತದೆ.

ರಾಜ್ಯ ಸರ್ಕಾರ ಯಾವುದೇ ಪೂರ್ವಸಿದ್ಧತೆಗಳಿಲ್ಲದೆ ನಡೆಸಿದ ಸಂಭ್ರಮೋತ್ಸವದಲ್ಲಿ ಕಾಲ್ತುಳಿತಕ್ಕೆ ಬಲಿಯಾದ ಹನ್ನೊಂದು ಅಮಾಯಕ ಯುವಕ-ಯುವತಿಯರ ಜೀವಗಳಿಗೆ ಹತ್ತಿಪ್ಪತ್ತು ಲಕ್ಷಗಳ ಮೌಲ್ಯವನ್ನು ನಿಗದಿಪಡಿಸಿ ಕೈತೊಳೆದುಕೊಳ್ಳುವುದು ಜೀವಹತ್ಯೆಯಷ್ಟೇ ಕ್ರೌರ್ಯ ಅಲ್ಲವೇ ? ಸುದ್ದಿವಾಹಿನಿಗಳಲ್ಲಿ ಈ ಸಂಭ್ರಮೋತ್ಸವದ ಸುತ್ತ ನಡೆಸಲಾಗುತ್ತಿರುವ ಚರ್ಚೆಗಳಲ್ಲಿ , ಅವಸರದ ತೀರ್ಮಾನ ಕೈಗೊಂಡ ಸರ್ಕಾರವನ್ನು  ದೋಷಿಯಾಗಿ ಕಾಣಲಾಗುತ್ತದೆ. ಸರ್ಕಾರವೂ ಒಪ್ಪಿಕೊಂಡಿದೆ, ಕೆಲವು ಪೊಲೀಸ್‌ ಮತ್ತಿತರ ಅಧಿಕಾರಿಗಳ ಅಮಾನತು ಮಾಡಿದೆ, ಹೈಕೋರ್ಟ್‌ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯನ್ನೂ ಘೋಷಿಸಿದೆ. ಆದರೆ ಯಾವುದೇ ಸುದ್ದಿವಾಹಿನಿಯೂ ಐಪಿಎಲ್‌ ಸುತ್ತಲಿನ ಮಾರುಕಟ್ಟೆ ಆಯಾಮಗಳನ್ನಾಗಲೀ, ಅಲ್ಲಿ ಗುರುತಿಸಬಹುದಾದ ಲಾಭಕೋರ ಔದ್ಯಮಿಕ ಹಿತಾಸಕ್ತಿಯನ್ನಾಗಲೀ, ಪರ್ಯಾಯ ಆರ್ಥಿಕತೆಯ ಕರಾಳ ಅಕ್ರಮಗಳನ್ನಾಗಲೀ ಚರ್ಚೆಗೊಳಪಡಿಸುವುದಿಲ್ಲ.

Labour Minister Santhosh Lad: ಅಂಬೇಡ್ಕರ್ ಸಹಾಯ ಹಸ್ತ ಯೋಜನೆ:  ಸಚಿವ ಸಂತೋಷ್‌ ಲಾಡ್‌  #LabourDepartment

 ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರಂತದಲ್ಲಿ ಮಡಿದ 11 ಅಮಾಯಕರು ಒಂದೆಡೆಯಾದರೆ, ಐಪಿಎಲ್‌ ಸೃಷ್ಟಿಸುವ ಬಾಜಿ ದಂಧೆ ಮತ್ತು ಜೂಜು ಮಾರುಕಟ್ಟೆಗೆ ತಮ್ಮ ಸಂಪಾದನೆ, ಉಳಿತಾಯ, ಕೆಲವೊಮ್ಮೆ ಆಸ್ತಿಪಾಸ್ತಿಯನ್ನೂ ಕಳೆದುಕೊಳ್ಳುವ ತಳಸಮಾಜದ ಯುವ ಸಮೂಹವನ್ನು ಇದೇ ತಕ್ಕಡಿಯಲ್ಲಿಟ್ಟು ನೋಡಬೇಕಿದೆ. ಐಪಿಎಲ್‌ ಎಂಬ ಒಂದು ಕ್ರೀಡಾಭೂತ ಕೇವಲ ಕ್ರಿಕೆಟ್‌ ಆಟದ ಸೌಂದರ್ಯ ಮತ್ತು ಕೌಶಲವನ್ನು ನಾಶಪಡಿಸಿಲ್ಲ, ಹಲವು ಕೆಳಮಧ್ಯಮ ದುಡಿಯುವ ವರ್ಗಗಳ ಬದುಕನ್ನೂ ನಾಶಪಡಿಸಿರುವುದು ಪರಾಮರ್ಶೆಗೊಳಗಾಗಬೇಕಿದೆ. ಈ ಅಮಾಯಕರಿಗೆ ಯಾವ ಪರಿಹಾರವೂ ದೊರೆಯುವುದಿಲ್ಲ. ಆದರೆ ಇವರ ಬೆವರಿನ ದುಡಿಮೆಯ ಬುನಾದಿಯ ಮೇಲೆ ಕಾರ್ಪೋರೇಟ್‌ ಮಾರುಕಟ್ಟೆ ಮತ್ತು ಔದ್ಯಮಿಕ ಸಾಮ್ರಾಜ್ಯ ಬೆಳೆಯುತ್ತದೆ.

 ಉತ್ತರದಾಯಿತ್ವ – ಕಾಣೆಯಾಗಿರುವ ಔದಾತ್ಯ

 ಬಾರತದ ಅಧಿಕಾರ ರಾಜಕಾರಣದಲ್ಲಿ ʼಉತ್ತರದಾಯಿತ್ವ ʼ ಎಂಬ  ಉದಾತ್ತ ಪದವೇ ಇಲ್ಲವಾಗಿರುವಾಗ, ವಿರೋಧ ಪಕ್ಷಗಳಿಗೆ ಈಗ ಹಠಾತ್ತನೆ ಈ ಉದಾತ್ತತೆಯ ನೆನಪಾಗಿಬಿಟ್ಟಿದೆ. ನಿಜ, ಸರ್ಕಾರ ಕಾರ್ಯಕ್ರಮವನ್ನು ತರಾತುರಿಯಲ್ಲಿ ಹಟಕ್ಕೆ ಬಿದ್ದು ಆಯೋಜಿಸುವ ಮೂಲಕ ತನ್ನ ಬೇಜವಾಬ್ದಾರಿತನವನ್ನು ಪ್ರದರ್ಶಿಸಿದೆ. ಕೆಲವು ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡುವುದು ಇದಕ್ಕೆ ಪರಿಹಾರವಲ್ಲ. ಸರ್ಕಾರ ನೈತಿಕ ಹೊಣೆ ಹೊತ್ತು ತನ್ನ ತಪ್ಪನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕಿದೆ. ತನಿಖಾ ಆಯೋಗಗಳಿಂದ ಆಗುವ ಪ್ರಯೋಜನಗಳ ಜನರಲ್ಲಿ ವಿಶ್ವಾಸವೇ ಕುಸಿದುಹೋಗಿದೆ. ಆದರೆ ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಉತ್ತರದಾಯಿತ್ವ ಒಪ್ಪಿಕೊಂಡು ನೈತಿಕ ನೆಲೆಯಲ್ಲಿ ರಾಜೀನಾಮೆ ನೀಡಬೇಕು ಎಂಬ ಬಿಜೆಪಿ-ಜೆಡಿಎಸ್‌ ಪಕ್ಷಗಳಿಗೆ ಪ್ರಯಾಗದ ಕುಂಭಮೇಳದ ದುರಂತದಲ್ಲಿ ಈ ಔದಾತ್ಯ ಏಕೆ ಮೂಡಲಿಲ್ಲ ? ಹೆಣಬಿದ್ದ ಕೂಡಲೇ ಅದಕ್ಕೆ ರಾಜಕೀಯ ಸ್ಪರ್ಶ ನೀಡುವ ಒಂದು ಕಲೆಯನ್ನು ಕರಗತ ಮಾಡಿಕೊಂಡಿರುವ ರಾಜಕೀಯ ಪಕ್ಷಗಳಿಗೆ, ಇದು ಲಾಭದಾಯಕವಾಗಿ ಕಾಣಬಹುದು ಆದರೆ ಸಾಮಾನ್ಯ ಜನರ ದೃಷ್ಟಿಯಿಂದ ಇದು ಅವಘಡಗಳಿಗಿಂತಲೂ ಹೆಚ್ಚು ಕ್ರೂರ ಮತ್ತು ಅಪಾಯಕಾರಿಯಾಗಿ ಪರಿಣಮಿಸುತ್ತದೆ.

 ಅಂತಿಮವಾಗಿ ಇಡೀ ದುರಂತದ ಮೂಲ ಇರುವುದೇ ಐಪಿಎಲ್‌ ಸುತ್ತಲೂ ಸೃಷ್ಟಿಸಲಾದ ಉನ್ಮಾದ, ಇದಕ್ಕೆ ಕಾರಣವಾದ ವಿದ್ಯುನ್ಮಾನ ಮಾಧ್ಯಮಗಳು, ಈ ಕ್ರೀಡೆಯನ್ನು ʼ ಕ್ರೀಡೆಯನ್ನಾಗಿ ಉಳಿಸದೆ ʼ ಮನರಂಜನೆ ಮತ್ತು ಮಾರುಕಟ್ಟೆ ವ್ಯವಹಾರವನ್ನಾಗಿ ಮಾಡಿರುವ ಕಾರ್ಪೋರೇಟ್‌ ಉದ್ದಿಮೆಗಳು ಉತ್ತರದಾಯಿತ್ವ ಹೊರಬೇಕಲ್ಲವೇ ? ಪಂದ್ಯಗಳ ಪೂರ್ವಭಾವಿಯಾಗಿ, ಆನಂತರದ ವಿಶ್ಲೇಷಣೆಯಲ್ಲಿ ಮತ್ತು ವೀಕ್ಷಕ ವಿವರಣೆಯಲ್ಲೂ ಬಳಸಲಾಗುವ ಯುದ್ಧ ಪರಿಭಾಷೆಯೇ ಸಮಾಜದ ಯುವ ಸಮೂಹದಲ್ಲಿ ಭಾವೋದ್ವೇಗವನ್ನು ಹೆಚ್ಚಿಸುತ್ತದೆ. ಹಾಗಾಗಿಯೇ ಐಪಿಎಲ್‌ ವೀರರು                                       ʼ ಜನನಾಯಕರಂತೆ ʼ ಬಿಂಬಿಸಲ್ಪಡುತ್ತಾರೆ (ವಿಶ್ವ-ಚಂದ್ರು-ಪ್ರಸನ್ನ ಈ ವ್ಯಾಪ್ತಿಗೆ ಬರುವುದೇ ಇಲ್ಲ. ಈ ವ್ಯಕ್ತಿ ಕೇಂದ್ರಿತ ಉನ್ಮಾದವನ್ನು ತನ್ನ ಮಾರುಕಟ್ಟೆಗಾಗಿ ಸರಕಿನಂತೆ ಬಳಸಿಕೊಳ್ಳುವ ಕಾರ್ಪೋರೇಟ್‌ ಆರ್ಥಿಕ ನೆಲೆಗಳು ಮತ್ತು ಔದ್ಯಮಿಕ ಹಿತಾಸಕ್ತಿಗಳು, ಇಂತಹ ದುರಂತಗಳಿಗೆ ಉತ್ತರದಾಯಿತ್ವ ಹೊರಬೇಕಾಗುತ್ತದೆ. ಕ್ರಿಕೆಟ್‌ ಭಾವನಾತ್ಮಕ ಕ್ರೀಡೆ ಆಗಿರಲಿಲ್ಲ, ಕ್ರೀಡಾ ಸ್ಫೂರ್ತಿಯನ್ನು ಉತ್ತೇಜಿಸುವ ಒಂದು ಸಾಮೂಹಿಕ ವಿದ್ಯಮಾನವಾಗಿತ್ತು.

ಡಿಜಿಟಲ್‌ ಕಾರ್ಪೋರೇಟ್‌ ಆರ್ಥಿಕತೆ ಈ ಜಗತ್ತನ್ನೇ ಬದಲಿಸಿದೆ. ಹಾಗಾಗಿಯೇ ಆಧುನಿಕ ಕ್ರಿಕೆಟ್‌ ಜಗತ್ತಿನಲ್ಲಿ ಜಿ.ಆರ್.‌ ವಿಶ್ವನಾಥ್‌, ಗವಾಸ್ಕರ್‌, ಗ್ರೇಗ್‌-ಇಯಾನ್ ಚಾಪೆಲ್‌, ಗ್ಯಾರಿಫೀಲ್ಡ್‌ ಸೋಬರ್ಸ್‌, ವಿವಿಯನ್‌ ರಿಚರ್ಡ್ಸ್‌, ಜೆಫ್ರಿ ಬಾಯ್ಕಾಟ್‌, ಬಿ.ಎಸ್.‌ ಚಂದ್ರಶೇಖರ್‌, ಇ.ಎ.ಎಸ್‌ ಪ್ರಸನ್ನ, ಬಿಷನ್‌ ಸಿಂಗ್‌ ಬೇಡಿ, ಸೈಯ್ಯದ್‌ ಕಿರ್ಮಾನಿ, ಫರೂಖ್‌ ಇಂಜಿನಿಯರ್‌, ಆಲನ್‌ ನಾಟ್‌, ಇಂತಹ ಕೌಶಲದ ಮೇರು ಪ್ರತಿಭೆಗಳು ಮತ್ತೆ ಕಾಣಲು ಸಾಧ್ಯವಾಗದಾಗಿದೆ. ರನ್‌ ಪೇರಿಸುವುದರಲ್ಲಿ, ವಿಕೆಟ್‌ ಕಬಳಿಸುವುದರಲ್ಲಿ ವ್ಯಕ್ತಿಗತ ಆಟಗಾರರು ಅಂಕಿ ಸಂಖ್ಯೆಗಳನ್ನು ಮೀರಿದರೂ, ಕ್ರಿಕೆಟ್‌ ಎಂಬ ಕ್ರೀಡೆಯ ಸೌಂದರ್ಯ ಪುನರ್‌ ಸ್ಥಾಪಿಸಲಾಗುವುದಿಲ್ಲ. ಏಕೆಂದರೆ ವಿಶಾಲ ಜಾಗತಿಕ ಮಾರುಕಟ್ಟೆಯ ಸಂತೆಯಲ್ಲಿ ಇದು ಶಾಶ್ವತವಾಗಿ ಕಳೆದುಹೋಗಿದೆ. ಐಪಿಎಲ್‌ ನೀಡುವ ಸ್ಪಷ್ಟ ಸಂದೇಶ ಇದು. ಯುವ ಸಮೂಹ ಈ ಉನ್ನತ್ತ ಭಾವನೆಗಳಿಂದ ಹೊರಬಂದು ವಿವೇಕಯುತವಾಗಿ ವರ್ತಿಸುವತ್ತ ಯೋಚಿಸಬೇಕಿದೆ.

 ಈ ಜಾಗೃತಿ ಮೂಡಿಸುವ ಜವಾಬ್ದಾರಿ ನಾಗರಿಕ ಸಮಾಜದ ಮೇಲೆ ಇದೆ ಎನ್ನುವುದನ್ನು ಮರೆಯದಿರೋಣ.

-೦-೦-೦-

Tags: BangaloreBangalore Citybangalore newsbangalore rcb celebrationbangalore skybangalore stampedebreaking news rcbcombat sportcrypto market capdominik mysterio and damian priestEntertainmentgenius sportsgenius sports earningsgenius sports guidancegenius sports secondary offeringhow to invest in sports cardsinvesting in sports cardsmarket capmarket capitalisationmarket capitalizationRCBrcb 2025rcb banglore celebrations livercb bengaluru chaosRCB fansrcb fans deadrcb fans injuredrcb fans stampedercb ipl 2025rcb parade in bangalorercb security breachrcb stampede videorcb victory parade in bangalorercb victory parade newsrcb vs pbksRoyal Challengers bangaloreShare MarketSportssports card investingsports cardssports highlightsrcb victory paradesports licensingsports teamsstock marketworld wrestling entertainmentwwe shorts
Previous Post

ಬೇಕಾದದ್ದು‌ ಪೋಸ್ಟ್ ಮಾ… ಅಲ್ಲ ಪ್ರಾಗ್ನೋಸಿಸ್..!!

Next Post

ನಾಮ್ ನರೇಂದ್ರ..ಕಾಮ್ ಸುರೇಂದರ್..! – ಮೋದಿ ಮೌನದ ಬಗ್ಗೆ ಪ್ರಿಯಾಂಕ್ ಮತ್ತೊಂದು ಟೀಕಾಸ್ತ್ರ ! 

Related Posts

Top Story

Santhosh Lad: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ ಸಂತೋಷ ಲಾಡ್..

by ಪ್ರತಿಧ್ವನಿ
June 13, 2025
0

ಅತಿವೃಷ್ಟಿಯಿಂದ ಹಾನಿಗೊಳಗಾದ ಕುಂದಗೋಳ ತಾಲೂಕಿನ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ, ಪರಿಶೀಲನೆ, ಜಿಲ್ಲೆಯ 130 ಮನೆಗಳಿಗೆ ಭಾಗಶಃ ಹಾನಿ, ಜಿಲ್ಲಾಡಳಿತದಿಂದ ತ್ವರಿತ ಪರಿಹಾರ...

Read moreDetails

M B Patil: ಎರಡು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ

June 13, 2025

16ನೇ ಹಣಕಾಸು ಆಯೋಗಕ್ಕೆ ಸಲ್ಲಿಸಿದ ರಾಜ್ಯದ ಶಿಫಾರಸ್ಸುಗಳ ಕುರಿತು ಮುಖ್ಯಮಂತ್ರಿಗಳು ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

June 13, 2025

ಮಳೆ ಹಾನಿ ಪ್ರದೇಶಗಳಿಗೆ ಸಚಿವ ಸಂತೋಷ್‌ ಲಾಡ್‌ ಭೇಟಿ..

June 13, 2025

ಬಹು ನಿರೀಕ್ಷಿತ “45” ಚಿತ್ರದ ಹಾಡಿಗೆ ಉಗಾಂಡದಿಂದ ಬಂದ ನೃತ್ಯಗಾರರು..

June 13, 2025
Next Post
ನಾಮ್ ನರೇಂದ್ರ..ಕಾಮ್ ಸುರೇಂದರ್..! – ಮೋದಿ ಮೌನದ ಬಗ್ಗೆ ಪ್ರಿಯಾಂಕ್ ಮತ್ತೊಂದು ಟೀಕಾಸ್ತ್ರ ! 

ನಾಮ್ ನರೇಂದ್ರ..ಕಾಮ್ ಸುರೇಂದರ್..! - ಮೋದಿ ಮೌನದ ಬಗ್ಗೆ ಪ್ರಿಯಾಂಕ್ ಮತ್ತೊಂದು ಟೀಕಾಸ್ತ್ರ ! 

Recent News

Top Story

Santhosh Lad: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ ಸಂತೋಷ ಲಾಡ್..

by ಪ್ರತಿಧ್ವನಿ
June 13, 2025
Top Story

M B Patil: ಎರಡು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ

by ಪ್ರತಿಧ್ವನಿ
June 13, 2025
Top Story

16ನೇ ಹಣಕಾಸು ಆಯೋಗಕ್ಕೆ ಸಲ್ಲಿಸಿದ ರಾಜ್ಯದ ಶಿಫಾರಸ್ಸುಗಳ ಕುರಿತು ಮುಖ್ಯಮಂತ್ರಿಗಳು ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

by ಪ್ರತಿಧ್ವನಿ
June 13, 2025
Top Story

ಮಳೆ ಹಾನಿ ಪ್ರದೇಶಗಳಿಗೆ ಸಚಿವ ಸಂತೋಷ್‌ ಲಾಡ್‌ ಭೇಟಿ..

by ಪ್ರತಿಧ್ವನಿ
June 13, 2025
Top Story

ಬಹು ನಿರೀಕ್ಷಿತ “45” ಚಿತ್ರದ ಹಾಡಿಗೆ ಉಗಾಂಡದಿಂದ ಬಂದ ನೃತ್ಯಗಾರರು..

by ಪ್ರತಿಧ್ವನಿ
June 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Santhosh Lad: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ ಸಂತೋಷ ಲಾಡ್..

June 13, 2025

M B Patil: ಎರಡು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ

June 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada