ಉಜ್ಬೇಕಿಸ್ತಾನದ ರಾಜಧಾನಿ ತಾಷ್ಕೆಂಟ್ನಲ್ಲಿ ಶುಕ್ರವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ, ಪಾಕಿಸ್ತಾನ ಸರ್ಕಾರದ ವಾಗ್ದಾಳಿ ನಡೆಸುತ್ತಾ ಇಸ್ಲಾಮಾಬಾದ್ ಅಫ್ಘಾನಿಸ್ತಾನದಲ್ಲಿ ಹಿಂಸಾಚಾರವನ್ನು ಹುಟ್ಟುಹಾಕುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ಲಾಮಾಬಾದ್ನಲ್ಲಿ ಶನಿವಾರ ಆಯೋಜಿಸಲು ಉದ್ದೇಶಿಸಿದ್ದ ಅಫ್ಘಾನಿಸ್ತಾನದಲ್ಲಿನ ಶಾಂತಿ ಕುರಿತ ಮೂರು ದಿನಗಳ ಸಮಾವೇಶವನ್ನು ಪಾಕಿಸ್ತಾನ ತಾತ್ಕಾಲಿಕವಾಗಿ ರದ್ದುಗೊಳಿಸಿ ಅದನ್ನು ಈದ್ ಉಲ್ ಅಝ್ಹಾವರೆಗೆ ಮುಂದೂಡಿದೆ.
ಕಳೆದ ತಿಂಗಳಲ್ಲಿ 10,000 ಕ್ಕೂ ಹೆಚ್ಚು ಭಯೋತ್ಪಾದಕರು ಪಾಕಿಸ್ತಾನದಿಂದ ತಮ್ಮ ದೇಶಕ್ಕೆ ಬಂದಿದ್ದಾರೆ ಎಂದು ಘನಿ ಹೇಳಿದ್ದಾರೆ. ಇದಲ್ಲದೆ, ಅಫಘಾನ್ ಸೈನಿಕರೊಂದಿಗಿನ ಘರ್ಷಣೆಯ ನಂತರ ತಾಲಿಬಾನ್ ಉಗ್ರರಿಗೆ ಪಾಕಿಸ್ತಾನದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಘನಿ ಹೇಳಿದ್ದಾರೆ. ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರು ಪಾಕಿಸ್ತಾನದ ವಾಯುಪಡೆಯು ಚಮನ್ ಮತ್ತು ಸ್ಪಿನ್ ಬೋಲ್ಡಾಕ್ ಗಡಿ ಪ್ರದೇಶಗಳಲ್ಲಿನ ತಾಲಿಬಾನ್ ಉಗ್ರರಿಗೆ ವಾಯು ಬೆಂಬಲವನ್ನು ನೀಡುತ್ತಿದೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಆದರೆ ಈ ಹೇಳಿಕೆಯನ್ನು ತಿರಸ್ಕರಿಸಿದ ಪಾಕಿಸ್ತಾನದ ವಿದೇಶಾಂಗ ಕಚೇರಿ “ಇಂತಹ ಹೇಳಿಕೆಗಳು ಅಫ್ಘಾನ್ ಒಡೆತನದ ಮತ್ತು ಅಫಘಾನ್ ನೇತೃತ್ವದ ಪರಿಹಾರದಲ್ಲಿ ಪಾತ್ರ ವಹಿಸುವ ಪಾಕಿಸ್ತಾನದ ಪ್ರಾಮಾಣಿಕ ಪ್ರಯತ್ನಗಳನ್ನು ಹಾಳುಮಾಡುತ್ತವೆ” ಎಂದು ಹೇಳಿದೆ.
ಅಫ್ಘಾನ್ ಪಡೆ ಮತ್ತು ಕಂದಹಾರ್ನಲ್ಲಿ ತಾಲಿಬಾನ್ ನಡುವೆ ಕಳೆದ ಕೆಲವು ದಿನಗಳಿಂದ ತೀವ್ರ ಹೋರಾಟ ನಡೆಯುತ್ತಿದೆ. ಇತ್ತೀಚಿನ ವಾರಗಳಲ್ಲಿ ತಾಲಿಬಾನ್ ಉಗ್ರರು ಡಜನ್ಗಟ್ಟಲೆ ಜಿಲ್ಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಯುಎಸ್ ಮತ್ತು ಪಾಶ್ಚಿಮಾತ್ಯ ಸೈನ್ಯವನ್ನು ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ಮುನ್ನ ದೇಶದ ಮೂರನೇ ಒಂದು ಭಾಗದಷ್ಟು ಜನರನ್ನು ತಾಲಿಬಾನ್ ನಿಯಂತ್ರಿಸಲಿದೆ ಎಂದು ಈಗಾಗಲೇ ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ ವಾರ, ತಾಲಿಬಾನ್ ಅವರು ಈಗ ಅಫ್ಘಾನಿಸ್ತಾನದ ಶೇಕಡಾ 85 ರಷ್ಟು ಭೂಪ್ರದೇಶವನ್ನು ತಾವು ನಿಯಂತ್ರಿಸುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದರು.
ಯುಎಸ್ ಮತ್ತು ಮಿತ್ರ ಪಡೆಗಳ ಸಾಂಪ್ರದಾಯಿಕ ಭದ್ರಕೋಟೆಯಾಗಿದ ಉತ್ತರ ಅಫ್ಘಾನಿಸ್ತಾನದಲ್ಲಿ 1,000ಕ್ಕೂ ಹೆಚ್ಚು ಅಫಘಾನ್ ಸೈನಿಕರು ಕಳೆದ ವಾರ ಗಡಿಯುದ್ದಕ್ಕೂ ಓಡಿ ಉತ್ತರ ತಜಕಿಸ್ತಾನ ತಲುಪಿದ್ದರು. ಇರಾನ್ ಸರ್ಕಾರವು ನೂರಾರು ಅಫ್ಘಾನ್ ಸೈನಿಕರು ಇರಾನ್ ಗಡಿ ದಾಟಿದ್ದಾರೆ ಎಂದು ಹೇಳಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಾವು ಅಫ್ಘಾನಿಸ್ತಾನದ 85 ಶೇಕಡಾ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿಕೊಂಡಿರುವ ತಾಲಿಬಾನ್ ಹೇಳಿಕೆಯನ್ನು ನಂಬಲೇ ಬೇಕಾಗಿದೆ. ಪ್ರಮುಖ ಗಡಿಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವುದು ತಾಲಿಬಾನ್ಗೆ ಗಮನಾರ್ಹ ಆದಾಯವನ್ನು ನೀಡುತ್ತದೆ ಮತ್ತು ಕಾಬೂಲ್ ಸರ್ಕಾರದೊಂದಿಗೆ ಮುಂದಿನ ಯಾವುದೇ ಮಾತುಕತೆಗಳಲ್ಲಿ ತಮ್ಮ ಕೈಯನ್ನು ಬಲಪಡಿಸಲು ಸಹಾಯ ಮಾಡಲಿದೆ.
ಅಫ್ಘಾನ್ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಿಂದ ಭಾರತ ಸೇರಿದಂತೆ ಜಗತ್ತಿನಾದ್ಯಂತ ಆತಂಕ ಮನೆ ಮಾಡಿದೆ. ಆಗಸ್ಟ್ ಅಂತ್ಯದ ವೇಳೆಗೆ ಯುಎಸ್ ತನ್ನ ಸೈನ್ಯವನ್ನು ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಹಿಂದೆಗೆಯಲಿದೆ ಎಂದು ಘೋಷಿಸಿದ್ದು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಇನ್ಪುಟ್ಸ್: ಪಿಟಿಐ