ಕೊಪ್ಪಳ: ಅಂಜನಾದ್ರಿ ಬೆಟ್ಟದ ಹುಂಡಿಯಲ್ಲಿ ಪಾಕಿಸ್ತಾನದ ನಾಣ್ಯ ಪತ್ತೆಯಾಗಿದೆ.
ಕೊಪ್ಪಳದ (Koppal) ಗಂಗಾವತಿ ತಾಲೂಕಿನ ಚಿಕ್ಕರಾಂಪೂರ ಗ್ರಾಮದಲ್ಲಿನ ಅಂಜನಾದ್ರಿ ದೇವಸ್ಥಾನ ಧಾರ್ಮಿಕ ಮತ್ತು ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಪ್ರತಿ ತಿಂಗಳು ಹುಂಡಿಯಲ್ಲಿದ್ದ ನಾಣ್ಯಗಳನ್ನು ಎಣಿಕೆ ಮಾಡಲಾಗುತ್ತಿದೆ. ಈ ಬಾರಿಯ ಎಣಿಕೆಯಲ್ಲಿ ಪಾಕ್ ನ ನಾಣ್ಯ ಪತ್ತೆಯಾಗಿದೆ.

ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೂಚನೆ ಮೇರೆಗೆ, ತಹಸೀಲ್ದಾರ್ ಯು. ನಾಗರಾಜ ನೇತೃತ್ವದಲ್ಲಿ ಕಂದಾಯ ಇಲಾಖೆ ಹಾಗೂ ದೇವಸ್ಥಾನ ಸಿಬ್ಬಂದಿ ಮಂಗಳವಾರ ಕಾಣಿಕೆ ಪೆಟ್ಟಿಗೆ ಎಣಿಕೆ ನಡೆಸಿದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ನಾಣ್ಯ ಪತ್ತೆಯಾಗಿದೆ. ಪಾಕ್ ಅಷ್ಟೇ ಅಲ್ಲದೇ, ಮೊರಾಕ್ಕೊ, ಶ್ರೀಲಂಕಾ, ಅಮೆರಿಕಾ ಮತ್ತು ನೇಪಾಳದ ನಾಣ್ಯಗಳು ಕೂಡ ಪತ್ತೆಯಾಗಿವೆ. ದೇಶದ ಮೂಲೆ ಮೂಲೆಗಳಿಂದ ಮಾತ್ರವಲ್ಲದೇ, ವಿದೇಶದಿಂದಲೂ ಭಕ್ತರು ಹೆಚ್ಚಾಗಿ ಅಂಜನಾದ್ರಿ ಬೆಟ್ಟಕ್ಕೆ ಬರುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದೇಸಿ ನಾಣ್ಯಗಳು ಹಾಗೂ ನೋಟುಗಳು ಪತ್ತೆಯಾಗುತ್ತಿರುವುದೇ ಇದಕ್ಕೆ ಸಾಕ್ಷಿ.
ಹುಂಡಿಯಲ್ಲಿ ಒಟ್ಟು 31.21 ಲಕ್ಷ ರೂಪಾಯಿ ಮೊತ್ತದ ನಗದು ಹಣ ಸಂಗ್ರವಾಗಿದೆ. ಕಳೆದ ಮಾರ್ಚ್ 27ರಿಂದ ಇಲ್ಲಿವರೆಗೂ ಅಂದರೆ ಮೇ 21 ರ ವರೆಗಿನ ಒಟ್ಟು 56 ದಿನಗಳಲ್ಲಿ 31.21 ಲಕ್ಷ ಮೊತ್ತದ ಹಣ ಸಂಗ್ರಹವಾಗಿದೆ.