ಮುಂಬೈ : ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಛನ್ ತಮ್ಮ ಮುಂದಿನ ಸಿನಿಮಾ ಪ್ರಾಜೆಕ್ಟ್ ಕೆ ಸಿನಿಮಾದ ಶೂಟಿಂಗ್ ವೇಳೆಯಲ್ಲಿ ಗಂಭೀರವಾಗಿ ಗಾಯಗಂಡಿದ್ದಾರೆ. ಹೈದರಾಬಾದ್ನಲ್ಲಿ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ವೇಳೆಯಲ್ಲಿ ತಮಗಾದ ಅಪಘಾತ ಹಾಗೂ ಇದೀಗ ತಮ್ಮ ಆರೋಗ್ಯ ಸ್ಥಿತಿ ಹೇಗಿದೆ ಎನ್ನುವುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಿ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಅಮಿತಾಬ್ ಬಚ್ಛನ್ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆ್ಯಕ್ಷನ್ ಸಿಕ್ವೆನ್ಸ್ ಒಂದರಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಅಮಿತಾಬ್ ಗಾಯಗೊಂಡಿದ್ದಾರೆ. ಬಲ ಪಕ್ಕೆಲುಬಿನ ಸ್ನಾಯುಗಳಿಗೆ ಹೊಡೆತ ಬಿದ್ದಿದೆ ಎನ್ನಲಾಗಿದೆ. ಬಿಗ್ ಬಿ ತಮ್ಮ ಬ್ಲಾಗ್ನಲ್ಲಿ ಆರೋಗ್ಯದಲ್ಲಿ ಉಂಟಾದ ಚೇತರಿಕೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಗಾಯದಿಂದ ನಾನು ಚೇತರಿಸಿಕೊಳ್ಳಲು ಕೆಲವು ವಾರಗಳೇ ಬೇಕಾಗಿರುವ ಹಿನ್ನೆಲೆಯಲ್ಲಿ ಶೂಟಿಂಗ್ ತಾತ್ಕಾಲಿಕವಾಗಿ ರದ್ದುಗೊಂಡಿದೆ ಎಂದು ಅಮಿತಾಬ್ ಮಾಹಿತಿ ನೀಡಿದ್ದಾರೆ.
ಶೂಟಿಂಗ್ ಸಂದರ್ಭದಲ್ಲಿ ಗಾಯಕ್ಕೊಳಗಾದ ಬಳಿಕ ಅಮಿತಾಬ್ ಬಚ್ಛನ್ರನ್ನು ಹೈದರಾಬಾದ್ನ ಎಐಜಿ ಆಸ್ಪತ್ರೆಗೆ ಕೊಂಡೊಯ್ದು ಸಿಟಿ ಸ್ಕ್ಯಾನ್ ಮಾಡಿಸಲಾಯ್ತು. ವೈದ್ಯರು ಗಾಯ ಗುಣವಾಗಲು ಇನ್ನೂ ಕೆಲವು ವಾರಗಳು ತಗುಲಬಹುದು ಎಂದು ಹೇಳಿದ ಬಳಿಕ ಅಮಿತಾಬ್ ಹೈದರಾಬಾದ್ನಿಂದ ಮುಂಬೈಗೆ ಮರಳಿದ್ದಾರೆ ಎನ್ನಲಾಗಿದೆ.
ನಾನು ಉಸಿರಾಡುವಾಗ ಹಾಗೂ ಎಲ್ಲಿಯಾದರೂ ಚಲಿಸುವಾಗ ನನಗೆ ನೋವಿನ ಅನುಭವವಾಗುತ್ತೆ ಅಂತಾ ಸೂಪರ್ ಸ್ಟಾರ್ ಅಮಿತಾಬ್ ಬಚ್ಛನ್ ಮಾಹಿತಿ ನೀಡಿದ್ದಾರೆ. ಅಲ್ಲದೇ ನೋವು ನಿವಾರಣೆಗೆಂದು ಸಾಕಷ್ಟು ಔಷಧಿ ಸೇವಿಸುತ್ತಿದ್ದೇನೆಂದು ಹೇಳಿಕೊಂಡಿದ್ದಾರೆ.
ಇದೇ ಕಾರಣಕ್ಕೆ ಶೂಟಿಂಗ್ನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಅಮಿತಾಬ್ ಬಚ್ಛನ್ ಸದ್ಯ ಬೆಡ್ ರೆಸ್ಟ್ನಲ್ಲಿದ್ದಾರೆ. ಇದೇ ಕಾರಣಕ್ಕೆ ಅಭಿಮಾನಿಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆರೋಗ್ಯ ವಿಚಾರಣೆಗೆ ಅಭಿಮಾನಿಗಳು ತಮ್ಮ ಮನೆಯ ಎದುರು ಜಮಾಯಿಸುವುದು ಬೇಡವೆಂದು ಅಮಿತಾಬ್ ಮನವಿ ಮಾಡಿದ್ದಾರೆ.