ಕೊಡಗು :ಭಾರತೀಯ ಅರಣ್ಯ ಸೇವೆ (I F S) ಅಧಿಕಾರಿ, ಮೂಲತಹ ನಾಪೋಕ್ಲು ವಿನ ಪಾಡ್ಯಮಂಡ ಆನಂದ್ (ಸಾಬು ) ಕಮಲ ದಂಪತಿಗಳ ಪುತ್ರಿ, ಮತ್ತೂರು ಗ್ರಾಮದ ಪುತ್ತಾಮನೆ ಡಾಕ್ಟರ್ ಅಶೋಕ್, ಶಾಂತಿ ರವರ ಸೊಸೆ, ಪುತ್ತಾಮನೆ ರಂಜನ್ ರವರ ಪತ್ನಿ ಪಿ..ಎ ಸೀಮಾ ರವರು ನಾಗರಹೊಳೆ ಹುಲಿ ಸಂರಕ್ಷಿತರಣ್ಯದ ಮೊಟ್ಟ ಮೊದಲ ಮಹಿಳಾ ನಿರ್ದೇಶಕಿಯಾಗಿ ಆಗಸ್ಟ್ 14ರಂದು ನೇಮಕಗೊಂಡಿದ್ದಾರೆ.
ಕರ್ನಾಟಕ ಸರ್ಕಾರದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಿದ ಮಹಿಳೆ ಎಂದೆನಿಸಿಕೊಂಡಿದ್ದಾರೆ.ಶ್ರೀಮತಿ ಸೀಮಾ ಅವರು ಈ ಹಿಂದೆ ಹುಣಸೂರು ವಿಭಾಗದ ಡಿ.ಸಿ.ಎಫ್ ಆಗಿ ಸೇವೆ ಸಲಿಸಿದ್ದರು.2017ರ ಗುಂಪಿನ ಇವರು ಮೈಸೂರು, ಮಂಡ್ಯ ಹುಣಸೂರು, ಮಡಿಕೇರಿಯಲ್ಲಿ ಡಿ ಸಿ ಎಫ್ ಆಗಿ ಸೇವೆ ಸಲ್ಲಿಸಿದ್ದರು.
ಕಳೆದ ಎರಡು ವರ್ಷಗಳ ಹಿಂದೆ ಆನೆಗಳ ಕಾರ್ಯಪಡೆಯ ಹೆಚ್ಚುವರಿ ಡಿ.ಸಿ.ಎಫ್ ಆಗಿ ಕಾರ್ಯನಿರ್ವಹಿಸಿ ಹುಣಸೂರು ಹಾಗೂ ಕೆ ಆರ್ ನಗರದ ವಿಭಾಗದಲ್ಲಿ ಮಾನವ ಹಾಗೂ ಆನೆಗಳ ನಡುವೆ ಸಂಘರ್ಷವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿ ಪ್ರಶಂಸೆಗೆ ಒಳಗಾಗಿದ್ದರು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಕೇರಳ ಕರ್ನಾಟಕ ಭಾಗ ಹಾಗೂ ಕೊಡಗು ಮತ್ತು ಮೈಸೂರು ಗಡಿ ಭಾಗವನ್ನು ಕೂಡ ಹೊಂದಿದ್ದು ಇಲ್ಲಿ ನಿರಂತರ ಬೇಟೆಯಾಡುವುದು ಹಾಗೂ ಆನೆ ಮಾನವ ನಡುವೆ ಸಂಘರ್ಷವನ್ನು ತಡೆಗಟ್ಟಲು ಉತ್ತಮ ಅಧಿಕಾರಿಯ ನಿರೀಕ್ಷೆಯಲ್ಲಿದ್ದ ಸ್ಥಳೀಯರಿಗೆ ಪಿ.ಎ ಸೀಮಾ ರವರ ಆಯ್ಕೆ ಹೆಚ್ಚಿನ ನಿರೀಕ್ಷೆಯನ್ನು ಮೂಡಿಸಿದೆ.