ಕಳೆದೊಂದುವರೆ ತಿಂಗಳಿನಿಂದ ಬೆಂಗಳೂರಿನಲ್ಲಿ ಒಂದಲ್ಲಾ ಒಂದು ಕಟ್ಟಡಗಳು ಬೀಳುತ್ತಲೇ ಇದಾವೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಒಂದ್ಕಡೆಯಾದ್ರೆ, ಬಿಬಿಎಂಪಿಯಿಂದ ಅನುಮತಿ ಪಡೆಯದೇ ನಿರ್ಮಿಸಿರುವ ಕಟ್ಟಡಗಳು ಮತ್ತೊಂದ್ಕಡೆ. ನಿರಂತರವಾಗಿ ಬಿಲ್ಡಿಂಗ್ಸ್ ಬೀಳ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಕೋರ್ಟ್ ಬಿಬಿಎಂಪಿಗೆ ಛೀಮಾರಿ ಹಾಕಿತ್ತು. ಅಷ್ಟೇ ಅಲ್ದೇ ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡಗಳ ಸರ್ವೆ ನಡೆಸಿ ವರದಿ ನೀಡುವಂತೆಯೂ ಸೂಚನೆ ಕೊಟ್ಟಿತ್ತು. ಅದರಂತೆ ಸರ್ವೆ ನಡೆಸಿದ ಪಾಲಿಕೆಗೆ ಶಾಕ್ ಕಾದಿತ್ತು. ಯಾಕಂದ್ರೆ ಕಳೆದೊಂದುವರೆ ವರ್ಷದಲ್ಲಿ ನಿರ್ಮಾಣವಾದ ಕಟ್ಟಡಗಳಲ್ಲಿ ಶೇಕಡಾ 84 ರಷ್ಟು ಕಟ್ಟಡಗಳು ಅಕ್ರಮ ಅನ್ನೋದು ಬೆಳಕಿಗೆ ಬಂದಿದೆ.
ಈಗಾಗಲೇ ನಗರದಲ್ಲಿ ಹಲವು ಕಟ್ಟಡಗಳು ನೆಲಕ್ಕುರುಳಿವೆ. ಸಾವು ನೋವುಗಳಾಗಿವೆ. ಸಂಧಿಗುಂಧಿ ಗಳಲ್ಲಿ ಅವೈಜ್ಞಾನಿಕವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿ ಬಾಡಿಗೆಗೆ ಹಾಗೂ ಇನ್ನಿತರ ಕೆಲಸಕ್ಕೆ ನೀಡಲಾಗುತ್ತಿದೆ. ಇವಕ್ಕೆ ಸರಿಯಾದ ದಾಖಲೆಗಳೂ ಇರುವುದಿಲ್ಲ. ಸೂಕ್ತ ನಕ್ಷೆಯೂ ಇರುವುದಿಲ್ಲ. ಇದರ ಜೊತೆಗೆ ಹಳತ್ತಾದ ಕಟ್ಟಡಗಳನ್ನು ನವೀಕರಣ ಮಾಡದೆಯೂ ಕಟ್ಟಡಗಳು ನಗರದಲ್ಲಿ ಕುಸಿಯುತ್ತಿದೆ. ಈ ಎಲ್ಲಾ ಕಾರಣಗಳಿಂದ ನಗರದಲ್ಲಿ ಸಾಲು ಸಾಲು ದುರಂತಗಳು ನಡೆದಿದೆ. ಮುಂದಕ್ಕೂ ನಡೆಯಬಹುದು ಎಂಬ ಆತಂಕ ಇದೆ. ಹೀಗಾಗಿ ಬಿಬಿಎಂಪಿ ಸರ್ವೆ ನಡೆಸಿದೆ. ಈ ಸರ್ವೆಯಲ್ಲಿ ಆತಂಕಕಾರಿ ಮಾಹಿತಿ ಬಯಲಾಗಿದೆ.

ಬೆಂಗಳೂರಿನ ಯಾವ ವಲಯದಲ್ಲಿ ಎಷ್ಟೆಷ್ಟು ಅಕ್ರಮ ಕಟ್ಟಡಗಳು ಪತ್ತೆ.?
ವಲಯ ಅಕ್ರಮ ಕಟ್ಟಡ
ದಕ್ಷಿಣ ವಲಯ 1147
ಪಶ್ಚಿಮ ವಲಯ 1147
ಪೂರ್ವ ವಲಯ 947
ಮಹದೇವಪುರ ವಲಯ 797
ಆರ್ ಆರ್ ನಗರ ವಲಯ 752
ಯಲಹಂಕ ವಲಯ 661
ಬೊಮ್ಮನಹಳ್ಳಿ ವಲಯ 293
ದಾಸರಹಳ್ಳಿ ವಲಯ 274
ಒಟ್ಟು 5223
ಕಳೆದೊಂದು ತಿಂಗಳಿನಿಂದ ನಿರಂತರವಾಗಿ ನಡೆಸಿದ ಸರ್ವೆಯಲ್ಲಿ ಬಬಿಎಂಪಿಗೆ ಹೌಹಾರುವಂಥಾ ವರದಿ ಸಿಕ್ಕಿದೆ. ಕಳೆದೊಂದು ವರ್ಷದಲ್ಲಿ ಬಿಬಿಎಂಪಿ 8496 ಕಟ್ಟಡಗಳಿಗೆ ನಕ್ಷೆ ಮಂಜೂರಾತಿಯನ್ನ ನೀಡಿದೆ. ಅದರಲ್ಲಿ ಸುಮಾರು 6148 ಕಟ್ಟಡಗಳ ಸರ್ವೆ ನಡೆಸಿದ್ದು, ಇದರಲ್ಲಿ 5223 ಕಟ್ಟಡಗಳು ಅಕ್ರಮವಾಗಿವೆ ಎನ್ನುವ ಅಂಶ ಬೆಳಕಿಗೆ ಬಂದಿದೆ. ನಕ್ಷೆ ಮಂಜೂರಾತಿಗೆ ವ್ಯತಿರಿಕ್ತವಾಗಿ ನಿರ್ಮಾಣ ಮಾಡಿದ್ದು ಒಂದು ಕಡೆಯಾದರೆ ಬಿಬಿಎಂಪಿ ಅನುಮತಿ ಪಡೆಯದೇ ನಿರ್ಮಿಸಿರುವ ಕಟ್ಟಡಗಳು ಮತ್ತೊಂದ್ಕಡೆ ಇವೆರಡರ ಆಧಾರದ ಮೇಲೆ ಪಟ್ಟಿ ಸಿದ್ಧಪಡಿಸಿದೆ ಪಾಲಿಕೆ. ಇದರಲ್ಲಿ ದಕ್ಷಿಣ ಹಾಗೂ ಪಶ್ಚಿಮ ವಲಯದಲ್ಲಿ ತಲಾ 1147 ಕಟ್ಟಡಗಳು, ಪೂರ್ವ ವಲಯದಲ್ಲಿ 947, ಮಹದೇವಪುರ ವಲಯದಲ್ಲಿ 797, ಆರ್ ಆರ್ ನಗರ ವಲಯದಲ್ಲಿ 752 ಕಟ್ಟಡಗಳು ಅನಧಿಕೃತವಾಗಿ ನಿರ್ಮಾಣವಾಗಿವೆ. ಹಾಗೆನೇ ಯಲಹಂಕ ವಲಯದಲ್ಲಿ 661, ಬೊಮ್ಮನಹಳ್ಳಿ ವಲಯದಲ್ಲಿ 293, ದಾಸರಹಳ್ಳಿ ವಲಯದಲ್ಲಿ ಬರೋಬ್ಬರಿ 274 ಕಟ್ಟಡಗಳು ಅನಧಿಕೃತ ಎಂದು ಹೈಕೋರ್ಟ್‌ಗೆ ವರದಿ ನೀಡಲು ಬಿಬಿಎಂಪಿ ಮುಂದಾಗಿದೆ.
ಬಾಡಿಗೆದಾರರ ಹಣದಾಕ್ಕೆ 5,223 ಅಕ್ರಮ ಕಟ್ಟಡ ನಿರ್ಮಾಣ.!?
ಬೆಂಗಳೂರಿನಲ್ಲಿ ಇಷ್ಟೊಂದು ಅಕ್ರಮ ಕಟ್ಟಡಗಳು ಹೇಗೆ ನಿರ್ಮಾಣವಾಯ್ತು ಎನ್ನುವುದೇ ಸದ್ಯದ ಪ್ರಶ್ನೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಬಾಡಿಗೆಗೆ ಮನೆ ನೀಡುವ ಮಾಲೀಕರನ್ನು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಎರಡು ಅಂತಸ್ಥಿನ ಕಟ್ಟಡಕ್ಕೆ ನಕ್ಷೆ ಮಂಜೂರಾತಿ ಪಡೆದುಕೊಂಡು ನಾಲ್ಕು, ಐದು ಅಂತಸ್ಥು ನಿರ್ಮಿಸಲಾಗುತ್ತಿದೆ ಎಂಬ ವಾದ ಪಾಲಿಕೆಯದ್ದು. ಇದು ನಿಜವೇ ಆದರೂ, ಇದನ್ನು ಗಮನಿಸಿ ಕ್ರಮ ಕೈಗೊಳ್ಳ ಬೇಕಿರುವ ವಾರ್ಡ್ ಮಟ್ಟದ ಪಾಲಿಕೆ ಅಧಿಕಾರಿಗಳು ಜಾಣ ಕುರುಡು ವರ್ತನೆ ಬಗ್ಗೆ ಪಾಲಿಕೆ ಸೊಲ್ಲೆತ್ತುತ್ತಿಲ್ಲ. ಅಧಿಕಾರಿಗಳು ತಮ್ಮ ಕರ್ತವ್ಯ ಸೂಕ್ತ ರೀತಿಯಲ್ಲಿ ಮಾಡಿದ್ದರೆ ಅನಧೀಕೃತವಾಗಿ ಅಂತಸ್ಥುಗಳ ನಿರ್ಮಾಣ ಹಾಗೂ ಅನಧಿಕೃತವಾಗಿ ನಿರ್ಮಾಣವಾಗಿರುವ ಹಾಗೂ ವಾಗಲಿರುವುದನ್ನು ತಡೆಯಬಹುದು.

ಕಳೆದೊಂದು ವರ್ಷದಲ್ಲೇ ಇಷ್ಟು ಪ್ರಮಾಣದ ಕಟ್ಟಡಗಳು ಅನಧಿಕೃತವಾಗಿ ನಿರ್ಮಾಣವಾಗಿವೆ ಎಂದರೆ, ಕಳೆದ 10 ವರ್ಷದಲ್ಲಿ ಎಷ್ಟು ನಿರ್ಮಾಣವಾಗಿವೆ ಎನ್ನುವ ಅನುಮಾನ ಸದ್ಯದ್ದು. ಸದ್ಯ ನಗರದಲ್ಲಿ 20 ಲಕ್ಷ ಕಟ್ಟಡಗಳಿದ್ದು, ಇವುಗಳ ಸಂಪೂರ್ಣ ಸರ್ವೆ ಆಗ್ಬೇಕು ಎನ್ನುವ ಕೂಗೂ ಕೇಳಿ ಬರುತ್ತಿದ್ದು, ಅದರ ಸರ್ವೆಯನ್ನೂ ಬಿಬಿಎಂಪಿ ಮಾಡುತ್ತಾ ಎನ್ನುವುದೇ ಯಕ್ಷಪ್ರಶ್ನೆ.