ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ ವರದಿಯ ಪ್ರಕಾರ 2017-2019ರ ವರೆಗೆ 14-18ವರ್ಷದೊಳಗಿನ 24,568 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವುಗಳಲ್ಲಿ 4,000ಕ್ಕೂ ಅಧಿಕ ಮಕ್ಕಳು ಪರೀಕ್ಷೆಗಳ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಆಘಾತಕಾರಿ ವರದಿಯನ್ನು ವರದಿಯನ್ನು ಇತ್ತೀಚಿಗೆ ಸಂಸತ್ತಿಗೆ ಸಲ್ಲಿಸಲಾಗಿತ್ತು. ಆತ್ಮಹತ್ಯೆ ಮಾಡಿಕೊಂಡಿರುವವರಲ್ಲಿ 13,325 ಜನರು ಬಾಲಕಿಯರಾಗಿದ್ದಾರೆ.
2017ರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 8,029 ಇದ್ದರೆ, 2018ರಲ್ಲಿ ಈ ಸಂಖ್ಯೆ 8,162ಕ್ಕೆ ಏರಿಕೆಯಾಗಿದೆ. 2019ರಲ್ಲಿ ಆತ್ಮಹತ್ಯೆಗಳ ಪ್ರಮಾಣ ಮತ್ತಷ್ಟು ಏರಿಕೆಯಾಗಿ 8,377ಕ್ಕೆ ತಲುಪಿದೆ, ಎಂದು ವರದಿ ಹೇಳಿದೆ.
ಇವುಗಳಲ್ಲಿ 4,046 ವಿದ್ಯಾರ್ಥಿಗಳು ಪರೀಕ್ಷೆಗಳ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 639 ಮಕ್ಕಳು ಮದುವೆಯ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಬಾಲಕಿಯರ ಸಂಖ್ಯೆ 411. 3,315 ಮಕ್ಕಳು ಪ್ರೇಮ ವೈಫಲ್ಯದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಆರೋಗ್ಯ ಸಂಬಂಧಿತ ಕಾರಣಕ್ಕಾಗಿ 2,567 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. 81 ಮಕ್ಕಳ ಆತ್ಮಹತ್ಯೆಗೆ ದೈಹಿಕ ಹಿಂಸೆ ಕಾರಣವೆಂದು ವರದಿಯಾಗಿದೆ. ಇದರೊಂದಿಗೆ, ಆತ್ಮೀಯರ ಸಾವಿನಿಂದ ಕಂಗಾಲಾಗಿ ಆತ್ಮಹತ್ಯೆ, ಡ್ರಗ್ಸ್ ಅಥವಾ ಆಲ್ಕೊಹಾಲ್ ಸಂಬಂಧಿ ಸಮಸ್ಯೆಗಳಿಂದ, ನ್ಯಾಯಸಮ್ಮತವಲ್ಲದ ಗರ್ಭಧಾರಣೆ, ಸಾಮಾಜಿಕ ಅಪಮಾನ, ನಿರುದ್ಯೋಗ, ಬಡತನ, ಸೈದ್ದಾಂತಿಕ ಕಾರಣಗಳಿಂದಲೂ ಆತ್ಮಹತ್ಯೆಗಳು ಸಂಭವಿಸಿವೆ.
ಆಧುನಿಕತೆಯೆಡೆಗೆ ನಾವು ಹೆಚ್ಚಾಗಿ ತೆರೆದುಕೊಳ್ಳುತ್ತಿದ್ದಂತೆಯೇ, ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗುತ್ತಿರುವುದ ನಿಜಕ್ಕೂ ಆತಂಕಕಾರಿ. ಆದರಲ್ಲಿಯೂ, 14-18ವರ್ಷದೊಳಗಿನ ಮಕ್ಕಳು, ವಿವಿಧ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ, ಶಿಕ್ಷಣ ವ್ಯವಸ್ಥೆ ಹಾಗು ಮಕ್ಕಳ ಮಾನಸಿಕ ಆರೋಗ್ಯದ ಸ್ಥಿತಿಗತಿಯ ಕುರಿತು ನಾವು ನೀಡುವ ಪ್ರಾಮುಖ್ಯತೆಯನ್ನು ಪ್ರಶ್ನಿಸಲೇಬೇಕಾಗಿದೆ.
ಕರೋನಾ ಸೋಂಕು ದೇಶಕ್ಕೆ ಅಪ್ಪಳಿಸಿದ ನಂತರ ಆತ್ಮಹತ್ಯೆಗಳ ಪ್ರಕರಣಗಳು ಇನ್ನಷ್ಟು ಹೆಚ್ಚಾಗುವ ಸಂಭವವೂ ಇದೆ. ಈ ಆತ್ಮಹತ್ಯೆಗಳನ್ನು ತಡೆಯಲು ಮಕ್ಕಳ ಹಕ್ಕುಗಳ ಕಾರ್ಯಕರ್ತರು, ಜೀವನ ಕೌಶಲ್ಯ ತರಬೇತಿಯನ್ನು ಶಾಲಾ ಪಠ್ಯದಲ್ಲಿ ಅಳವಡಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.
ಇದೆಲ್ಲದರ ಹೊರತಾಗಿ, ನಾವು ಪ್ರಮುಖವಾಗಿ ಗಮನಹರಿಸಬೇಕಾದ ಸಂಗತಿಯೆಂದರೆ, ಮಕ್ಕಳ ಮಾನಸಿಕ ಆರೋಗ್ಯ. ಈ ವಿಚಾರದಲ್ಲಿ ಭಾರತ ತುಂಬಾ ಹಿಂದೆ ಉಳಿದಿದೆ. ವರದಿಗಳ ಪ್ರಕಾರ 1,00,000 ಜನರಿಗೆ ಭಾರತದಲ್ಲಿ ಕೇವಲ 0.75ರಷ್ಟು ಸೈಕಿಯಾಟ್ರಿಸ್ಟ್’ಗಳಿದ್ದಾರೆ. ಈ ಸಂಖ್ಯೆ 0.75ರಿಂದ 3ಕ್ಕೆ ಏರಬೇಕಾದ ಜರೂರತ್ತಿದೆ.
ಮೌಂಟ್‌ಫೋರ್ಟ್ ಕಾಲೇಜು, ಬೆಂಗಳೂರು ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿರುವ ಯಾಮಿನಿ ಗೌಡ ಅವರು, ಹದಿಹರೆಯದಲ್ಲಿ ಮಕ್ಕಳಲ್ಲಿ ಉಂಟಾಗುವ ಖಿನ್ನತೆಯೂ ಆತ್ಮಹತ್ಯೆ ಕಾರಣವಾಗುತ್ತದೆ. ಈ ವಯಸ್ಸಿನಲ್ಲಿ ಮಕ್ಕಳು ಪೋಷಕರೊಂದಿಗೆ ಎಲ್ಲಾ ವಿಚಾರಗಳನ್ನು ಚರ್ಚಿಸಲು ಇಷ್ಟಪಡುವುದಿಲ್ಲ. ಹಾಗಾಗಿ, ಮಕ್ಕಳ ಮನಸ್ಸಿನಲ್ಲಿ ನಿಜವಾಗಿಯೂ ಇರುವಂತಹ ಭಾವನೆಗಳು ಹೊರಜಗತ್ತಿಗೆ ತಿಳಿಯುವುದೇ ಇಲ್ಲ. ಈ ಕಾರಣಕ್ಕಾಗಿ, ಪಠ್ಯದಲ್ಲಿ ಜೀವನ ಕೌಶಲ್ಯದ ಜತೆಗೆ, ಮಾನಸಿಕ ಆರೋಗ್ಯದ ಕುರಿತ ವಿಷಯಗಳೂ ಇರಬೇಕಾದ ಅವಶ್ಯಕತೆ ಇದೆ, ಎಂದು ‘ಪ್ರತಿಧ್ವನಿ’ಯೊಂದಿಗೆ ಮಾತನಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
“ಭಾರತದಲ್ಲಿ ಮಾನಸಿಕ ಆರೋಗ್ಯದ ಕುರಿತಾಗಿ ಇರುವ ಜಾಗೃತಿಯ ಪ್ರಮಾಣ ಕಡಿಮೆ. ಈಗ ಬಹಳಷ್ಟು ಜನರು ಕೋವಿಡ್ ಕುರಿತು ಜಾಗೃತಿ ಹೊಂದಿದ್ದಾರೆ. ಏಕೆಂದರೆ, ಅದೊಂದು ಭೌತಿಕವಾಗಿ ಇರುವಂತಹ ರೋಗ. ಅದರಿಂದ ಉಂಟಾಗುವ ಅನಾಹುತಗಳನ್ನು ನಾವು ನೋಡಿದ್ದೇವೆ. ಮಾನಸಿಕ ಆರೋಗ್ಯವೆಂಬುದು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಹೀಗೆಂದು ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ,” ಎಂದಿದ್ದಾರೆ.
ಮುಂದುವರಿದು, ಮಕ್ಕಳು ಖಿನ್ನರಾದಂತೆ ಕಾಣುವಾಗ ಅಥವಾ ಅವರ ದೈನಂದಿನ ದಿನಚರಿಯಲ್ಲಿ ಏರುಪೇರು ಉಂಟಾದಾಗ ಜನರು ಮೂಢನಂಬಿಕೆಗಳ ಮೊರೆಹೋಗುವುದು ಇನ್ನೂ ನಿಂತಿಲ್ಲ. ಮೂಢನಂಬಿಕೆಗಳಿಗಿಂತಲೂ ಜನರು ಮನೋವಿಜ್ಞಾನವನ್ನು ನಂಬಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಬೇಸರದ ವಿಷಯವೇನೆಂದರೆ, ಜನರಿಗೆ ಸೈಕಾಲಜಿಸ್ಟ್ ಹಾಗೂ ಸೈಕಿಯಾಟ್ರಿಸ್ಟ್’ಗಳ ನಡುವಿನ ವ್ಯತ್ಯಾಸವೇ ತಿಳಿದಿಲ್ಲ. ಯಾವ ರೀತಿಯ ಸಮಸ್ಯೆಗಳಿಗೆ ಯಾರನ್ನು ಸಂಪರ್ಕಿಸಬೇಕು ಎಂಬ ಕುರಿತು ಅರಿವು ಇಲ್ಲ. ಹೀಗಾಗಿ, ಮನೋವಿಜ್ಞಾನದ ಕುರಿತು ಪೋಷಕರಲ್ಲಿರುವ ತಪ್ಪು ತಿಳಿವಳಿಕೆ ಹಾಗೂ ಋಣಾತ್ಮಕ ಭಾವನೆಗಳಿಂದ ಮಕ್ಕಳ ಮನೋಭಾವನೆಗಳನ್ನು ಅರ್ಥೈಸುವಲ್ಲಿ ವಿಫಲರಾಗುತ್ತಿದ್ದಾರೆ.
ಈ ಕುರಿತಾಗಿ ಸರ್ಕಾರವು ತಕ್ಷಣವೇ ಅಳವಡಿಸಿಕೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಿರುವ ಯಾಮಿನಿ ಗೌಡ ಅವರು, ಮೊತ್ತಮೊದಲು ಮಾನಸಿಕ ಸ್ವಾಸ್ಥ್ಯ ಕಾಯ್ದೆ, 2017ನ್ನು ಮತ್ತಷ್ಟು ಬಲಪಡಿಸಬೇಕು ಎಂದಿದ್ದಾರೆ. ಇದರೊಂದಿಗೆ, ಪ್ರತಿ ಶಾಲೆಗಳಲ್ಲೂ ಕಡ್ಡಾಯವಾಗಿ ಮನೋವಿಜ್ಞಾನದ ಹಿನ್ನೆಲೆ ಇರುವಂತಹವರನ್ನು ಕೌನ್ಸೆಲಿಂಗ್’ಗಾಗಿ ನೇಮಿಸಬೇಕು. ಖಾಸಗಿ ಶಾಲೆಗಳಲ್ಲಿ ಈ ಪರಿಪಾಠ ಇದೆಯಾದರೂ, ಅದು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಕೌನ್ಸೆಲಿಂಗ್ ಎಂಬುದು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾದ ವಿಷಯವಾಗಿದೆ, ಎಂದಿದ್ದಾರೆ.
“ಈವರೆಗೆ ಕೌನ್ಸೆಲಿಂಗ್’ಗಾಗಿ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುತ್ತಿದ್ದರು. ಅದನ್ನು ತಕ್ಷಣದಿಂದಲೇ ನಿಲ್ಲಿಸಿ ಖಾಯಂ ಹುದ್ದೆಗಳನ್ನು ಸೃಷ್ಟಿಸಬೇಕಿದೆ. ಇದರಿಂದ, ಮನೋವಿಜ್ಞಾನದ ಕುರಿತು ಜನರಲ್ಲಿ ಆಸಕ್ತಿಯೂ ಹೆಚ್ಚಾಗುತ್ತದೆ ಮತ್ತು ಮಕ್ಕಳ ವಿಕಾಸಕ್ಕೂ ಸಹಕಾರಿಯಾಗುತ್ತದೆ,” ಎಂದಿದ್ದಾರೆ.
ಒಟ್ಟಿನಲ್ಲಿ, ದೇಶದ ಭವಿಷ್ಯವನ್ನು ರೂಪಿಸಬೇಕಿದ್ದ ಮಕ್ಕಳು ಇಂತಹ ದುರಂತ ಅಂತ್ಯವನ್ನು ಕಾಣುತ್ತಿರುವುದು ಒಪ್ಪಲಸಾಧ್ಯವಾದ ಮಾತು. ಅದರಲ್ಲಿಯೂ, ಆತ್ಮಹತ್ಯೆಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ನಿಜಕ್ಕೂ ಆತಂಕಕಾರಿ. ಈ ಋಣಾತ್ಮಕ ಬೆಳವಣಿಗೆಯನ್ನು ಹತೋಟಿಗೆ ತರಲು ವೈಜ್ಞಾನಿಕವಾದಂತಹ ಕ್ರಮಗಳನ್ನು ಜಾರಿಗೊಳಿಸುವ ತುರ್ತು ಅಗತ್ಯವಿದೆ.












