• Home
  • About Us
  • ಕರ್ನಾಟಕ
Wednesday, January 28, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಸಾಂಸ್ಥಿಕ ಸವಾಲುಗಳೂ ಸಾಂಸ್ಕೃತಿಕ ಸಮನ್ವಯತೆಯೂ

ನಾ ದಿವಾಕರ by ನಾ ದಿವಾಕರ
June 8, 2023
in ಅಂಕಣ
0
ಸಾಂಸ್ಥಿಕ ಸವಾಲುಗಳೂ ಸಾಂಸ್ಕೃತಿಕ ಸಮನ್ವಯತೆಯೂ
Share on WhatsAppShare on FacebookShare on Telegram

( ಕಾಂಗ್ರೆಸ್ ಸರ್ಕಾರದ ಆಯ್ಕೆಗಳೂ ಜನಸಾಮಾನ್ಯರ ಆದ್ಯತೆಗಳೂ–

ADVERTISEMENT

ಆಡಳಿತ ಜವಾಬ್ದಾರಿಯೂ ಸಾರ್ವಜನಿಕ ಹಿತಾಸಕ್ತಿಯೂ– ಲೇಖನಗಳ ಮುಂದುವರೆದ ಭಾಗ)

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂಲತಃ ಪ್ರಜೆಗಳ ಯೋಗಕ್ಷೇಮ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿರುವಷ್ಟೇ, ಅಥವಾ ಇನ್ನೂ ಹೆಚ್ಚಿನದಾಗಿ, ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳ ಮೇಲಿರುತ್ತದೆ. ಸಾಮಾನ್ಯ ಪ್ರಜೆಗಳಿಗೆ ತಮ್ಮ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಲು ಅಥವಾ ತಮ್ಮ ವ್ಯಕ್ತಿಗತ ಅಭಿಪ್ರಾಯಗಳನ್ನು ದಾಖಲಿಸಲು ಮೊದಲು ಲಭ್ಯವಾಗುವುದೇ ಈ ಸಂಸ್ಥೆಗಳು. ಸಾಂವಿಧಾನಿಕ ಸಂಸ್ಥೆಗಳನ್ನು ಎರಡು ನೆಲೆಗಳಲ್ಲಿ ನಿಷ್ಕರ್ಷೆ ಮಾಡಬಹುದು. ಮೊದಲನೆಯದು ಸರ್ಕಾರಗಳು ಆಡಳಿತ ವ್ಯವಸ್ಥೆಯ ನಿರ್ವಹಣೆಯಲ್ಲಿ ಅವಲಂಬಿಸುವ ಶಾಸನಬದ್ಧ ಸಂಸ್ಥೆಗಳು. ಸಿಬಿಐ, ಸಿಒಡಿ, ಜಾರಿ ನಿರ್ದೇಶನಾಲಯ, ಲೋಕಾಯುಕ್ತ ಮತ್ತಿತರ ಆಡಳಿತ ನಿಯಂತ್ರಣದ ಸಂಸ್ಥೆಗಳು ನೇರವಾಗಿ ಸರ್ಕಾರದ ಹಿಡಿತದಲ್ಲೇ ಇರುತ್ತವೆ. ಈ ಸಂಸ್ಥೆಗಳಲ್ಲಿ ಆಡಳಿತಾರೂಢ ರಾಜಕೀಯ ಪಕ್ಷಗಳ ಹಸ್ತಕ್ಷೇಪವೂ ಸಹ ಧಾರಾಳವಾಗಿ ಇರುತ್ತದೆ. ಆದರೆ ಈ ಸಂಸ್ಥೆಗಳು ತಮ್ಮ ಕಾರ್ಯನಿರ್ವಹಣೆಯಲ್ಲಿ ಜನಸಾಮಾನ್ಯರ ಹಿತಾಸಕ್ತಿಯನ್ನೇ ಪ್ರಧಾನವಾಗಿರಿಸಿಕೊಂಡು, ಆಡಳಿತ ಲೋಪಗಳನ್ನು ಸರಿಪಡಿಸುವುದು ಪ್ರಜೆಗಳ ಅಪೇಕ್ಷೆ ಮತ್ತು ನಿರೀಕ್ಷೆಯೂ ಆಗಿರುತ್ತದೆ.

ಎರಡನೆಯದಾಗಿ ಸಾಮಾಜಿಕ ಸಾಮರಸ್ಯ ಹಾಗೂ ಸಮಸ್ತ ಜನತೆಯ ನಿತ್ಯ ಬದುಕು ಮುಕ್ತ ವಾತಾವರಣದಲ್ಲಿ ಸಾಗಿಸಲು ಅನುಕೂಲವಾಗುವಂತಹ ಸಾಂಸ್ಕೃತಿಕ ಸಂಸ್ಥೆಗಳು ಸರ್ಕಾರಗಳ ಪೋಷಣೆಯಲ್ಲೇ ಸ್ಥಾಪಿಸಲ್ಪಡುತ್ತವೆ. ಮೂಲತಃ ಇಂತಹ ಸಂಸ್ಥೆಗಳು ವಿಶಾಲ ಸಮಾಜದ ವಿಭಿನ್ನ ಆಲೋಚನೆಗಳನ್ನು, ವೃತ್ತಿ-ಪ್ರವೃತ್ತಿಗಳನ್ನು ಹಾಗೂ ಸೈದ್ಧಾಂತಿಕ ನಿಲುಮೆಗಳನ್ನು ಪೋಷಿಸಿ, ಪ್ರೋತ್ಸಾಹಿಸಿ ಮುನ್ನಡೆಸುವ ಉದ್ದೇಶದಿಂದ ಸ್ಥಾಪನೆಯಾಗಿರುತ್ತವೆ. ಸಂಸ್ಕೃತಿ ಎಂಬ ವಿದ್ಯಮಾನವನ್ನು ಜಾತಿ-ಮತಧರ್ಮಗಳ ಸೀಮಿತ ಚೌಕಟ್ಟಿನೊಳಗೆ ಬಂಧಿಸದೆ, ವಿಶಾಲ ಸಮಾಜದಲ್ಲಿನ ತಳಮಟ್ಟದ ಜನಸಮುದಾಯಗಳನ್ನೂ ತಲುಪುವ ಒಂದು ಸಾಮಾಜಿಕ ವಿದ್ಯಮಾನ ಎಂದು ಭಾವಿಸಿದಲ್ಲಿ, ಸಾಂಸ್ಕೃತಿಕ ಸಂಘಟನೆಗಳ ಆಳ ಮತ್ತು ವ್ಯಾಪ್ತಿಯನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಬಹುದು. ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ-ಜಾನಪದ-ನಾಟಕ-ನೃತ್ಯ-ಸಂಗೀತ ಅಕಾಡೆಮಿಗಳು, ಪುಸ್ತಕ ಪ್ರಾಧಿಕಾರ, ಭಾಷಾ ಪ್ರಾಧಿಕಾರ ಮತ್ತು ರಂಗಭೂಮಿಯನ್ನು ಪೋಷಿಸಲೆಂದೇ ರೂಪಿಸಲಾದ ರಂಗಾಯಣ-ರಂಗಸಮಾಜ ಇವೇ ಮುಂತಾದ ಸಾಂಸ್ಕೃತಿಕ ಸಂಸ್ಥೆಗಳು ತಮ್ಮ ಚಾರಿತ್ರಿಕ ಜವಾಬ್ದಾರಿಯನ್ನರಿತು ಒಂದು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಲು ಆಯಾ ಪ್ರಕಾರಗಳ ಕಲಾಭಿವ್ಯಕ್ತಿಗಳನ್ನು ಬಳಸಿಕೊಳ್ಳುತ್ತವೆ.

ಸಾಹಿತ್ಯ ಸಂಸ್ಕೃತಿ ಮತ್ತು ಸಮಾಜ

ಸಾಹಿತ್ಯ ಕಲೆ ಮತ್ತು ಸಂಸ್ಕೃತಿ ಈ ಮೂರೂ ನೆಲೆಗಳು ಮೂಲತಃ ಸಾಮಾಜಿಕ ಸಾಮರಸ್ಯ, ಸೌಹಾರ್ದತೆ, ಸೋದರತ್ವ ಹಾಗೂ ಸಂವೇದನಾಶೀಲ  ಮನುಜ ಸಂಬಂಧಗಳನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ದೃಷ್ಟಿಯಿಂದಲೇ ಈ ವಲಯಗಳನ್ನು ಪ್ರತಿನಿಧಿಸುವಂತಹ ಸಾಂಸ್ಥಿಕ ಚೌಕಟ್ಟು ಸಹ ಜಾತಿ-ಮತಧರ್ಮ-ಭಾಷೆಯ ಸೀಮಿತ ಆವರಣವನ್ನು ದಾಟಿ ಸಮಗ್ರತೆಯನ್ನು ಹೊಂದಿರುವುದು ಅತ್ಯವಶ್ಯ. ವಿಶೇಷವಾಗಿ ಸಾಹಿತ್ಯ ಪರಿಷತ್ತು ಮತ್ತು ರಂಗಾಯಣದಂತಹ ರಂಗಭೂಮಿ ಪೋಷಕ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಂಡು ಅಧಿಕಾರ ರಾಜಕಾರಣದ ಅಧೀನತೆಗೆ ಒಳಗಾದರೆ, ಸಾಮಾಜಿಕ ಸಾಮರಸ್ಯ ಹದಗೆಡುತ್ತದೆ. ಈ ಎಚ್ಚರಿಕೆ ಇರಬೇಕಾದ್ದು ಇಂತಹ ಸಂಸ್ಥೆಗಳನ್ನು ನಿರ್ವಹಿಸುವ ಪದಾಧಿಕಾರಿಗಳಿಗೆ ಮತ್ತು ಅದರೊಳಗಿನ ಸಕ್ರಿಯ ಭಾಗಿದಾರರಿಗೆ. ದುರದೃಷ್ಟವಶಾತ್‌ ಕರ್ನಾಟಕದಲ್ಲಿ ಈ ಎರಡೂ ಕ್ಷೇತ್ರಗಳು ರಾಜಕೀಯ ಹಸ್ತಕ್ಷೇಪದಿಂದ ಕಲುಷಿತವಾಗಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ಅಳಿದುಳಿದ ಸ್ವಾಯತ್ತತೆಯನ್ನೂ ಕಳೆದುಕೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ತು ಬಹುಮಟ್ಟಿಗೆ ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡಿರುವುದನ್ನು ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಸ್ಪಷ್ಟವಾಗಿ ಗುರುತಿಸಬಹುದಿತ್ತು.

ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ರಾಜಕೀಯ ಪೊರೆಯನ್ನು, ಜಾತಿಪೀಡಿತ ಹೊರಮೈಯ್ಯನ್ನು ಸಂಪೂರ್ಣವಾಗಿ ಕಳಚಿಕೊಳ್ಳಬೇಕಿದೆ. ಸರ್ಕಾರದ ಅನುದಾನ ಮತ್ತು ಹಣಕಾಸು ಪ್ರೋತ್ಸಾಹ ಪಡೆದ ಮಾತ್ರಕ್ಕೆ, ಸಮಸ್ತ ಕನ್ನಡಿಗರನ್ನೂ ಪ್ರತಿನಿಧಿಸುವ ಈ ಸಾಹಿತ್ಯಕ ಸಂಸ್ಥೆ, ಸರ್ಕಾರದ ಅಧೀನತೆಗೆ ಒಳಪಡಬೇಕಿಲ್ಲ. ಆಡಳಿತಾರೂಢ ಪಕ್ಷದ ಸೈದ್ಧಾಂತಿಕ ನಿಲುವುಗಳು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಪ್ರಭಾವಿಸುವುದು ಇಡೀ ಸಾರಸ್ವತ ಲೋಕಕ್ಕೆ ಅಪಚಾರ ಮಾಡಿದಂತಾಗುತ್ತದೆ. ಅಧಿಕಾರ ರಾಜಕಾರಣದಲ್ಲಿ ಸಹಜ ಎನಿಸುವಂತಾಗಿರುವ ಜಾತಿ ಅಸ್ಮಿತೆಗಳು ಮತ್ತು ಬಂಡವಾಳದ ಪ್ರಭಾವ ಸಾಹಿತ್ಯ ಪರಿಷತ್ತಿನ ಕಾರ್ಯವ್ಯಾಪ್ತಿಯಿಂದ ನಿಷಿದ್ಧವಾಗಿದ್ದಷ್ಟೂ ಈ ಸಂಸ್ಥೆಯ ಅಂತಃಸತ್ವ ಜೀವಂತವಾಗಿರುತ್ತದೆ. ದುರಂತ ಎಂದರೆ ಕಳೆದ ಎರಡು ಮೂರು ದಶಕಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಅಂತಃಸತ್ವವನ್ನು ಕಳೆದುಕೊಂಡು ಜಡಗಟ್ಟಿದೆ. ಬಿಜೆಪಿ ಆಳ್ವಿಕೆಯಲ್ಲಿ ಹಿಂದುತ್ವ ರಾಜಕಾರಣದ ಮತ್ತೊಂದು ಅಂಗವಾಗಿ ಕಾರ್ಯನಿರ್ವಹಿಸಿದೆ. ಸಹಜವಾಗಿಯೇ ಸಾಹಿತ್ಯ ಪರಿಷತ್ತು ತನ್ನ ಸಾಹಿತ್ಯಕ ಮೌಲ್ಯಗಳನ್ನು ಕಳೆದುಕೊಂಡು, ವಂದಿಮಾಗಧ ಸಾಂಸೃತಿಕ ಸಂಸ್ಥೆಯಾಗಿ ನಿಂತಿದೆ.

ಈ ಸಾಂಸ್ಕೃತಿಕ ಮಾಲಿನ್ಯವನ್ನು ತೊಡೆದು ಹಾಕುವ ಜವಾಬ್ದಾರಿ ಸಿದ್ಧರಾಮಯ್ಯ ಸರ್ಕಾರದ ಮೇಲಿದೆ. ಮುಖ್ಯವಾಗಿ ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ನಡೆಯುವ ಸಾಹಿತ್ಯ ಪರಿಷತ್ತಿನ ಕಾಲಕಾಲದ ಚುನಾವಣೆಗಳನ್ನು ಅಧಿಕಾರ ರಾಜಕಾರಣದ ಪ್ರಭಾವದಿಂದ ಮುಕ್ತಗೊಳಿಸಬೇಕಿದೆ. ಆಡಳಿತಾರೂಢ ಸರ್ಕಾರದ ನಿಕಟವರ್ತಿಗಳೇ ಪರಿಷತ್ತಿನ ವಿವಿಧ ಸ್ತರಗಳಲ್ಲಿ ಪದಾಧಿಕಾರಿಗಳಾಗುವ ಒಂದು ವಿಕೃತ ಪರಂಪರೆಗೆ ಹೊಸ ಸರ್ಕಾರ ಅಂತ್ಯ ಹಾಡಬೇಕಿದೆ. ಸಾಹಿತ್ಯ ಪರಿಷತ್ತು ಮೂಲತಃ ಕನ್ನಡ ಸಾಹಿತ್ಯವನ್ನು ಪೋಷಿಸಿ ಬೆಳೆಸುವ ಹಾಗೂ ಭವಿಷ್ಯದ ತಲೆಮಾರಿಗೆ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ದಾಟಿಸುತ್ತಲೇ, ಸಮಕಾಲೀನ-ಆಧುನಿಕ ಸಾಹಿತ್ಯ ಕೃಷಿಯನ್ನು ವಿಸ್ತರಿಸುವ ಜವಾಬ್ದಾರಿಯನ್ನು ಹೊತ್ತಿರುತ್ತದೆ. ಹಾಗೆಯೇ ಸಮಸ್ತ ಕನ್ನಡಿಗರನ್ನು ಪ್ರತಿನಿಧಿಸುವ ಈ ಸಂಸ್ಥೆ ಕರ್ನಾಟಕದ ಜನತೆ (ಕನ್ನಡಿಗರು ಎನಿಸಿಕೊಳ್ಳುವ ಪ್ರತಿಯೊಬ್ಬ ಪ್ರಜೆಯನ್ನೂ ಒಳಗೊಂಡಂತೆ) ಎದುರಿಸುವ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವಂತಿರಬೇಕು. ಗಡಿ ವಿವಾದ, ಆಂತರಿಕ ಕ್ಷೋಭೆ, ಶಿಕ್ಷಣ ವಲಯದ ದುರವಸ್ಥೆ, ಕನ್ನಡ ಶಾಲೆಗಳ ಅವಸಾನ, ಸಮಕಾಲೀನ ಸಾಹಿತ್ಯದ ಬೆಳವಣಿಗೆ, ಕ್ಷೀಣವಾಗುತ್ತಿರುವ ಅನೇಕ ಸ್ಥಳೀಯ ಭಾಷೆಗಳ ಸಮಸ್ಯೆಗಳು, ಈ ಭಾಷಿಕರು ಎದುರಿಸುವ ಸಂಕೀರ್ಣ ಸಾಮಾಜಿಕ-ಸಾಂಸ್ಕೃತಿಕ ಸವಾಲುಗಳು, ಕನ್ನಡ ಭಾಷೆಯ  ಸಾರ್ವಜನಿಕ ಬಳಕೆಯ ಸಮಸ್ಯೆಗಳು ಹಾಗೂ ಮತೀಯವಾದ-ಕೋಮುವಾದ-ಮತಾಂಧತೆಯಿಂದ ವಿಘಟಿತವಾಗುತ್ತಿರುವ ತಳಮಟ್ಟದ ಸಾಮಾಜಿಕ ನೆಲೆಗಳು ಇವೆಲ್ಲವೂ ಸಾಹಿತ್ಯ ಪರಿಷತ್ತಿನ ಕಾರ್ಯಸೂಚಿಯ ಒಂದು ಭಾಗವಾದಾಗ ಮಾತ್ರ ಕನ್ನಡ ಸಾಹಿತ್ಯ ಪರಿಷತ್ತು ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ.

ಈ ಸವಾಲುಗಳನ್ನು ಸಾಹಿತ್ಯಕ ನೆಲೆಯಲ್ಲಿ ಹೇಗೆ ಎದುರಿಸಬಹುದು ಎಂಬ ಜಿಜ್ಞಾಸೆ ಸಾಹಿತ್ಯ ಪರಿಷತ್ತಿನ ಪರಿಚಾರಕರನ್ನು ಕಾಡದೆ ಹೋದರೆ, ಅದು ಕೇವಲ ಸನ್ಮಾನ-ಸಮ್ಮಾನ-ದತ್ತಿ ಪ್ರಶಸ್ತಿಗಳ ಸಾಂಸ್ಥಿಕ ಮಾರುಕಟ್ಟೆಯಾಗಿಬಿಡುತ್ತದೆ. ಒಂದು ಜವಾಬ್ದಾರಿಯುತ ಸರ್ಕಾರ ಮತ್ತು ನಾಗರಿಕ ಸಮಾಜ ಇದನ್ನು ಗಮನಿಸದೆ ಹೋಗುವುದು ಬೌದ್ಧಿಕ ದಾರಿದ್ರ್ಯದ ಸಂಕೇತವಾಗಿ ಮಾತ್ರ ಕಾಣಲು ಸಾಧ್ಯ. ಶಾಸ್ತ್ರೀಯ ಕನ್ನಡದಿಂದ ಆಧುನಿಕ ಕನ್ನಡದವರೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಸೃಷ್ಟಿಯಾಗಿರುವ ಸಂವೇದನಾಶೀಲ, ಮಾನವೀಯ ಸಾಹಿತ್ಯಕ ನೆಲೆಗಳನ್ನು ಇಂದಿನ ಯುವ ಪೀಳಿಗೆಗೆ, ಭವಿಷ್ಯದ ತಲೆಮಾರಿಗೆ ಪರಿಚಯಿಸಬೇಕಾದ ನೈತಿಕ ಹೊಣೆ ಸಾಹಿತ್ಯ ಪರಿಷತ್ತಿನ ಮೇಲಿರುತ್ತದೆ. ಈ ನಿಟ್ಟಿನಲ್ಲಿ  ಕನ್ನಡ ಸಾಹಿತ್ಯ ತನ್ನ ಮೇರು ಕೃತಿಗಳಿಂದ ಸಂಪದ್ಭರಿತವಾಗಿದೆ. ಸಮೃದ್ಧ ಸಾಹಿತ್ಯದ ಕೃಷಿಯ ಮೂಲಕ ಸಾವಿರಾರು ಸಾಹಿತಿಗಳು ಕನ್ನಡ ನಾಡಿನ ಸಮನ್ವಯ ಸಂಸ್ಕೃತಿ ಹಾಗೂ ಸಾಮರಸ್ಯದ ನೆಲೆಗಳನ್ನು ಪ್ರತಿಧ್ವನಿಸುತ್ತಲೇ ಬಂದಿದ್ದಾರೆ. ಇವುಗಳನ್ನು ಕಟ್ಟಕಡೆಯ ಕನ್ನಡಿಗನಿಗೂ ತಲುಪಿಸುವುದು ಸಾಹಿತ್ಯ ಪರಿಷತ್ತಿನ ಜವಾಬ್ದಾರಿ ಮತ್ತು ಕರ್ತವ್ಯ ಆಗಬೇಕಿದೆ. ಹೊಸ ಸರ್ಕಾರ ಈಗಲಾದರೂ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಇಟ್ಟರೆ ಬೌದ್ಧಿಕ ಮಾಲಿನ್ಯ ನಿಯಂತ್ರಣದೊಂದಿಗೆ ನಿವಾರಣೆಯೂ ಸಾಧ್ಯವಾಗಬಹುದು. ಆಗಲೇ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಆಗಲು ಸಾಧ್ಯ.

ರಂಗಭೂಮಿಯ ನಾಟಕರಂಗ

ಈ ಸಾಹಿತ್ಯಕ ಸವಾಲುಗಳ ಮತ್ತೊಂದು ಆಯಾಮವನ್ನು ನಾವು ರಂಗಭೂಮಿಯ ಕ್ಷೇತ್ರದಲ್ಲಿ ಕಾಣುತ್ತಿದ್ದೇವೆ. ರಂಗಭೂಮಿಯ ಮೂಲ ಪರಿಕಲ್ಪನೆಯೇ ಮನುಜ ಸಂವೇದನೆಯ ಚೌಕಟ್ಟಿನಲ್ಲಿ ಉಗಮಿಸಿದೆ. ಮಾನವ ಸಮಾಜದಲ್ಲಿ  ಕಾಣಬಹುದಾದ ಎಲ್ಲ ರೀತಿಯ ಅಮಾನುಷ ಧೋರಣೆಗಳನ್ನು, ಸಮಾಜವಿರೋಧಿ ಚಿಂತನೆಗಳನ್ನು ಹಾಗೂ ಸಾಂಸ್ಕೃತಿಕ ವಿಕೃತಿಗಳನ್ನು ಮೀರಿ, ಸಮಾಜದ ನಿತ್ಯ ಜೀವನದ ಆಗುಹೋಗುಗಳನ್ನು ಒರೆಹಚ್ಚಿ ನೋಡುವ ಒಂದು ಭೂಮಿಕೆಯಾಗಿ ರಂಗಭೂಮಿಯನ್ನು ನಾವು ನೋಡಬೇಕಿದೆ. ಸಮಕಾಲೀನ ಸಮಾಜ ಇತಿಹಾಸದಿಂದ ಕಲಿಯಬೇಕಾದ ಪಾಠಗಳನ್ನು ವರ್ತಮಾನದ ನೆಲೆಯಲ್ಲಿ ಹೇಗೆ ಅರ್ಥಮಾಡಿಕೊಳ್ಳುವುದು ಎಂಬ ಪ್ರಶ್ನೆಗೆ ರಂಗಭೂಮಿಯ ಪ್ರಯೋಗಗಳು ಸ್ಪಷ್ಟ ಉತ್ತರ ನೀಡುತ್ತವೆ. ಹಾಗಾಗಿಯೇ ರಂಗಭೂಮಿಯ ಮಹಾನ್‌ ನಿರ್ದೇಶಕರು, ಕಲಾವಿದರು ಇತಿಹಾಸದ ಪ್ರಸಂಗಗಳನ್ನು ಸಮಕಾಲೀನ ನೆಲೆಯಲ್ಲಿಟ್ಟು ವಿಡಂಬನೆಯ ಮೂಲಕ, ವಾಸ್ತವ ಚಿತ್ರಣದ ಮೂಲಕ, ವಿಭಿನ್ನ ದೃಷ್ಟಿಕೋನದಲ್ಲಿಟ್ಟು ವರ್ತಮಾನದ ಸಮಾಜಕ್ಕೆ ಪೂರಕವಾದ ಸಂದೇಶವನ್ನು ರವಾನಿಸುವ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಎಲ್ಲಿಯೂ ಸಹ ಚಾರಿತ್ರಿಕ ವ್ಯಕ್ತಿ ಅಥವಾ ಘಟನೆಗಳನ್ನು ವರ್ತಮಾನದ ಸಾಂದರ್ಭಿಕ ಮಸೂರ ತೊಟ್ಟು ನೋಡುವ ಪ್ರಯತ್ನಗಳು ನಡೆದಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಕನ್ನಡದ ರಂಗಭೂಮಿಯ ಇತಿಹಾಸ ತನ್ನದೇ ಆದ ಪ್ರತಿಷ್ಠಿತ ಹೆಮ್ಮೆಯ ಸ್ಥಾನ ಪಡೆದಿದೆ.

ಆದರೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಮೈಸೂರಿನ ರಂಗಾಯಣದಲ್ಲಿ ನಡೆದಂತಹ ಬೆಳವಣಿಗೆಗಳು ಈ ಸಾಂಸ್ಕೃತಿಕ ಅಭಿವ್ಯಕ್ತಿಗೆ ತದ್ವಿರುದ್ಧ ದಿಕ್ಕಿನಲ್ಲಿ ಸಾಗಿವೆ. ನಿರ್ದಿಷ್ಟ ಸೈದ್ಧಾಂತಿಕ ಪ್ರಭಾವಳಿಯಿಂದ ಮುಕ್ತವಾಗಿ ಸಮಾಜಮುಖಿ ಧೋರಣೆಯಲ್ಲೇ ನಡೆದುಬಂದಿದ್ದ ರಂಗಾಯಣದಂತಹ ಸಂಸ್ಥೆಯನ್ನು ಎಡ-ಬಲ-ಮಧ್ಯ ಪಂಥಗಳ ಸೀಮಿತ ಚೌಕಟ್ಟುಗಳಲ್ಲಿಟ್ಟು ವ್ಯಾಖ್ಯಾನಿಸುವ ಒಂದು ವಿಕೃತ ಪ್ರಯತ್ನಗಳು ನಡೆದಿರುವುದನ್ನು ಗಮನಿಸಿದ್ದೇವೆ.  ತನ್ಮೂಲಕ ಚರಿತ್ರೆಯ ಹೆಜ್ಜೆಗಳನ್ನು, ಚಾರಿತ್ರಿಕ ವ್ಯಕ್ತಿ ಮತ್ತು ಘಟನೆಗಳನ್ನು ವರ್ತಮಾನದ ಬೌದ್ಧಿಕ ಚಿಂತನೆಗಳ ದೃಷ್ಟಿಯಿಂದ ವ್ಯಾಖ್ಯಾನಿಸುವ ಪ್ರಯತ್ನಗಳೂ ನಡೆದಿವೆ. ಸಹಜವಾಗಿಯೇ ಅಧಿಕಾರ ರಾಜಕಾರಣದಲ್ಲಿ ಬಳಕೆಯಾಗುವ ಪರಿಭಾಷೆ ಮತ್ತು ಅಭಿವ್ಯಕ್ತಿಯ ವಿವಿಧ ಆಯಾಮಗಳು ರಂಗಭೂಮಿಗೂ ವ್ಯಾಪಿಸಿದೆ. ತತ್ಪರಿಣಾಮವಾಗಿ ಬಾಹ್ಯ ಸಮಾಜದಲ್ಲಿ ರಾಜಕೀಯ ಪ್ರೇರಿತವಾಗಿ ರೂಪುಗೊಂಡ ಸಾಂಸ್ಕೃತಿಕ ಅಭಿವ್ಯಕ್ತಿಯ ನೆಲೆಗಳು ರಂಗ ಪ್ರವೇಶ ಮಾಡಿ ತಮ್ಮ ಸಕಲ ವಿಕೃತಿಗಳನ್ನೂ ರಂಗಭೂಮಿಯಲ್ಲಿ ಪ್ರಸ್ತುತ ಪಡಿಸಿರುವುದನ್ನು ಕಂಡಿದ್ದೇವೆ. ಉರಿಗೌಡ-ನಂಜೇಗೌಡ ಎಂಬ ಕಪೋಲ ಕಲ್ಪಿತ ಪಾತ್ರಗಳು ಚಾರಿತ್ರಿಕ ಅಸ್ಮಿತೆಗಳನ್ನು ಗಳಿಸಿದ್ದನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ.

ಕಾಂಗ್ರೆಸ್‌ ಸರ್ಕಾರ ಈ ಸಾಂಸ್ಕೃತಿಕ ವ್ಯತ್ಯಯಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ರಂಗಾಯಣದಂತಹ ಪ್ರತಿಷ್ಠಿತ ಸಂಸ್ಥೆಗಳ ಸ್ವಾಯತ್ತತೆಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕಿದೆ. ರಂಗಾಯಣಗಳನ್ನು ನಿರ್ವಹಿಸುವ ರಂಗ ಸಮಾಜದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಳವಡಿಸುವ ಮೂಲಕ ಈ ಸಾಂಸ್ಕೃತಿಕ ಸಂಸ್ಥೆಯನ್ನು ಮತ್ತಷ್ಟು ಸ್ವಾಯತ್ತಗೊಳಿಸಬೇಕಿದೆ. ರಂಗ ಸಮಾಜ ಎಂಬ ಸಂಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೆ, ಯಾವುದೇ ಪಂಥೀಯ ಭಾವನೆಗಳಿಗೆ ಆಸ್ಪದ ನೀಡದೆ, ರಂಗಭೂಮಿಯ ಉದಾತ್ತ ಮೌಲ್ಯಗಳನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಹಾಗಾಗಿ ಈ ಸಂಸ್ಥೆಗಳ ಮುಖ್ಯಸ್ಥರನ್ನು, ಪದಾಧಿಕಾರಿಗಳನ್ನು ನೇಮಕ ಮಾಡುವ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿಯೂ, ನಿಷ್ಪಕ್ಷಪಾತವಾಗಿ̧ಯೂ ಸಮಾಜಮುಖಿ-ಜನಮುಖಿಯಾಗಿಯೂ ಇರಬೇಕಾಗುತ್ತದೆ. ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟ, ಅವಕಾಶವಂಚಿತ, ಶೋಷಿತ ಸಮುದಾಯಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಾತಿನಿಧಿಕವಾಗಿ ಈ ಸಂಸ್ಥೆಗಳ ಪುನರುಜ್ಜೀವನಕ್ಕಾಗಿ ಸರ್ಕಾರ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಬಾಹ್ಯ ಸಮಾಜದ ರಾಜಕೀಯ-ಸಾಂಸ್ಕೃತಿಕ ವಿಕೃತಿಗಳಿಂದ ರಂಗಭೂಮಿಯನ್ನು ರಕ್ಷಿಸಬೇಕಾದರೆ, ಸಾಂಸ್ಥಿಕ ಸ್ವಾಯತ್ತತೆ ಬಹಳ ಮುಖ್ಯವಾಗುತ್ತದೆ. ಸ್ವಾಯತ್ತತೆಯನ್ನು ಕಾಪಾಡುವ ಹೊಣೆ ಸರ್ಕಾರದ ಮೇಲಿದೆ.

ಶಾಸ್ತ್ರೀಯ ಮತ್ತು ಸಮಕಾಲೀನ ಕನ್ನಡ

ಹೊಸ ಕಾಂಗ್ರೆಸ್‌ ಸರ್ಕಾರದ ಮತ್ತೊಂದು ಸವಾಲು ಮೈಸೂರಿನಲ್ಲಿರುವ ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆಗಾಗಿ ಹೋರಾಡುವುದು. ಈ ಸಂಸ್ಥೆ ಸದ್ಯಕ್ಕೆ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸ್ವಾಯತ್ತತೆ ಇಲ್ಲದಿರುವ ಕಾರಣ ಕಳೆದ ಹದಿನೈದು ವರ್ಷಗಳಲ್ಲಿ ಯಾವುದೇ ಮಹತ್ತರ ಸಾಧನೆ ಇಲ್ಲದೆ ಮುಂದುವರೆದಿದೆ. ತಮಿಳು ಶಾಸ್ತ್ರೀಯ ಕೇಂದ್ರವು ಹಲವು ವರ್ಷಗಳ ಹಿಂದೆಯೇ ಸ್ವಾಯತ್ತತೆಯನ್ನು ಪಡೆದು ತನ್ನದೇ ಆದ ಭವ್ಯ ಕಟ್ಟಡವನ್ನೂ ನಿರ್ಮಿಸಿದೆ. ಆದರೆ ಕರ್ನಾಟಕದ ಸಾಹಿತ್ಯ ವಲಯದ ನಿಷ್ಕ್ರಿಯ ಮೌನ, ರಾಜಕೀಯ ನಾಯಕರ ಅನಾಸಕ್ತಿ ಹಾಗೂ ಸಾಹಿತ್ಯ ಪರಿಷತ್ತಿನಂತಹ ಕನ್ನಡ ಸಂಸ್ಥೆಗಳ ನಿರ್ಲಕ್ಷ್ಯದಿಂದ ಈ ಪ್ರತಿಷ್ಠಿತ ಸಂಸ್ಥೆಗೆ ಸ್ವಾಯತ್ತತೆ ಪಡೆಯುವ ಕೂಗು ಬಲಪಡೆದಿಲ್ಲ. ಮೈಸೂರಿನ ಕೆಲವೇ ಸಾಹಿತಿ ಕಲಾವಿದರು, ಕನ್ನಡ ಪರ ಹೋರಾಟಗಾರರು ಸ್ವಾಯತ್ತತೆಗಾಗಿ ದನಿ ಎತ್ತಿದ್ದಾರೆ. ಈ ಸಂಸ್ಥೆ ಮೈಸೂರಿನಲ್ಲೇ ಉಳಿಯುವುದಕ್ಕೆ ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ತಳೆದ ದೃಢ ನಿಶ್ಚಯ ಮತ್ತು ಸ್ಥಳೀಯ ಹೋರಾಟಗಾರರ ಒತ್ತಾಸೆಯೇ ಕಾರಣವಾಗಿದೆ. ಈಗಲಾದರೂ ಈ ಸಂಸ್ಥೆಗೆ ಸ್ವಾಯತ್ತತೆ ಪಡೆಯುವ ನಿಟ್ಟಿನಲ್ಲಿ ಸರ್ಕಾರ ಆಸಕ್ತಿ ವಹಿಸಬೇಕಿದೆ.

ಈ ಸಾಂಸ್ಥಿಕ ನೆಲೆಗಳಷ್ಟೇ ಅಲ್ಲದೆ ಕರ್ನಾಟಕದ ಸಮನ್ವಯ ಸಂಸ್ಕೃತಿಯ ಮೂಲ ನೆಲೆಗಳನ್ನು ಕಾಪಾಡುವ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಪ್ರತಿನಿಧಿಸುವ ಎಲ್ಲ ಭಾಷಾ ಪ್ರಾಧಿಕಾರಗಳನ್ನು, ಅಕಾಡೆಮಿಗಳನ್ನು ಪ್ರಜಾಸತ್ತಾತ್ಮಕವಾದ ವಾತಾವರಣದಲ್ಲಿ ಪುನರುಜ್ಜೀವನಗೊಳಿಸಲು ಸರ್ಕಾರ ಮುಂದಾಗಬೇಕಿದೆ. ಸಾಹಿತ್ಯ, ಕಲೆ ಮತ್ತು ರಂಗಭೂಮಿಯಲ್ಲೂ ಇರಬಹುದಾದ ಸ್ವಾರ್ಥಪರ ವ್ಯಕ್ತಿಗಳನ್ನು ದೂರ ಇಟ್ಟು, ಕನ್ನಡ ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯ-ಸಮನ್ವಯನ್ನು ಪೋಷಿಸುವ ಉದಾತ್ತ ಚಿಂತನೆ ಹೊಂದಿರುವ ವ್ಯಕ್ತಿಗಳನ್ನು ಈ ಅಧಿಕಾರ ಪೀಠಗಳಲ್ಲಿ ಕೂರಿಸುವುದು ಸರ್ಕಾರದ ನೈತಿಕ ಕರ್ತವ್ಯವಾಗಿರುತ್ತದೆ. ಈ ಸಂಸ್ಥೆಗಳನ್ನು ಸ್ವಾಯತ್ತಗೊಳಿಸುವುದರೊಂದಿಗೇ ರಾಜಕೀಯ ಪ್ರಭಾವದಿಂದ ಮುಕ್ತಗೊಳಿಸುವುದು ಮತ್ತು ಅಧಿಕಾರ ರಾಜಕಾರಣದ ಹಸ್ತಕ್ಷೇಪದಿಂದ ಹೊರಗುಳಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ. ರಾಜ್ಯವನ್ನು “ ಸರ್ವ ಜನಾಂಗದ ಶಾಂತಿಯ ತೋಟ”ಮಾಡುತ್ತೇವೆ ಎಂಬ ಆಶಯದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಈ  ಕಾವ್ಯಾತ್ಮಕ ಅಭಿವ್ಯಕ್ತಿಯ ಹಿಂದಿರುವ ಸಂವೇದನಾಶೀಲ ಔನ್ನತ್ಯ ಮತ್ತು ಉದಾತ್ತ ಆಶಯಗಳನ್ನು ಸಾಕಾರಗೊಳಿಸಬೇಕಾದರೆ ಕರ್ನಾಟಕದ ಎಲ್ಲ ಸಾಂಸ್ಕೃತಿಕ ಸಂಸ್ಥೆಗಳನ್ನು ಸ್ವಾಯತ್ತಗೊಳಿಸಲು ಮುಂದಾಗಬೇಕು.

Tags: Institutional ChallengeKannada Sahitya ParishadKarnatakaState Governmentಕನ್ನಡ ಸಾಹಿತ್ಯ ಪರಿಷತ್​ಕರ್ನಾಟಕಕಾಂಗ್ರೆಸ್​ರಾಜ್ಯ ಸರ್ಕಾರಸಾಂಸ್ಥಿಕ ಸವಾಲು
Previous Post

ಭಾರತೀಯರೇಕೆ ಮಾನಸಿಕ ಆರೋಗ್ಯ ಸಲಹೆಗಾರರನ್ನು ಸುಲಭವಾಗಿ ನಂಬುತ್ತಿಲ್ಲ?

Next Post

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದೆ ಹುದ್ದೆ

Related Posts

ಕುಟುಂಬ ರಾಜಕಾರಣ: ಭಾರತೀಯ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಭೀಕರ ದಾಳಿ! 
ಅಂಕಣ

ಕುಟುಂಬ ರಾಜಕಾರಣ: ಭಾರತೀಯ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಭೀಕರ ದಾಳಿ! 

by ಪ್ರತಿಧ್ವನಿ
January 26, 2026
0

ಬೆಂಗಳೂರು : ಗಣರಾಜ್ಯೋತ್ಸವದಂದು ನಾವು ಸಂವಿಧಾನವನ್ನು ಹೊಗಳುತ್ತೇವೆ. ಸಮಾನತೆ, ಸ್ವಾತಂತ್ರ್ಯ, ಅವಕಾಶಗಳ ನ್ಯಾಯ ಎಂಬ ಘೋಷಣೆಗಳನ್ನು ಜೋರಾಗಿ ಕೂಗುತ್ತೇವೆ. ಆದರೆ ಅದೇ ಸಂವಿಧಾನವನ್ನು ಪ್ರತಿದಿನ ಮೌನವಾಗಿ ಕುಸಿತಗೊಳಿಸುವ...

Read moreDetails

ಬೆಂಗಳೂರಿನ ಹೃದಯಭಾಗದಲ್ಲೊಂದು ಅತ್ಯಾಕರ್ಷಕ ಹಾಗೂ ಸುಸಜ್ಜಿತ ಸಿನಿಮಾ ಮಲ್ಟಿಪ್ಲೆಕ್ಸ್ “AMB ಸಿನಿಮಾಸ್”(ಕಪಾಲಿ ಮಾಲ್)

January 22, 2026
Eshwar Khandre: ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಆಯ್ಕೆಯಾದ ಸಚಿವ ಈಶ್ವರ ಖಂಡ್ರೆ..!!

Eshwar Khandre: ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಆಯ್ಕೆಯಾದ ಸಚಿವ ಈಶ್ವರ ಖಂಡ್ರೆ..!!

January 21, 2026

Davos Summit: 2ನೇ ದಿನ ರೆನ್ಯೂ ಪವರ್, ಝೈಲಂ, ಆಕ್ಟೋಪಸ್ ಎನರ್ಜಿ ಜತೆ ಮಾತುಕತೆ ನಡೆಸಿದ ಸಚಿವ ಎಂ ಬಿ ಪಾಟೀಲ

January 20, 2026
ದಾವೋಸ್‌ ಸಮಾವೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಚರ್ಚೆ ಮಾಡಿದ ಸಚಿವ ಎಂ. ಬಿ. ಪಾಟೀಲ

ದಾವೋಸ್‌ ಸಮಾವೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಚರ್ಚೆ ಮಾಡಿದ ಸಚಿವ ಎಂ. ಬಿ. ಪಾಟೀಲ

January 20, 2026
Next Post
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದೆ ಹುದ್ದೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದೆ ಹುದ್ದೆ

Please login to join discussion

Recent News

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!
Top Story

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

by ಪ್ರತಿಧ್ವನಿ
January 28, 2026
ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ
Top Story

ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 27, 2026
ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ಹಣ ದರೋಡೆ: 1.37 ಕೋಟಿ ದೋಚಿ ಸಿಬ್ಬಂದಿ ಎಸ್ಕೇಪ್‌
Top Story

ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ಹಣ ದರೋಡೆ: 1.37 ಕೋಟಿ ದೋಚಿ ಸಿಬ್ಬಂದಿ ಎಸ್ಕೇಪ್‌

by ಪ್ರತಿಧ್ವನಿ
January 27, 2026
ಇನ್ನುಂದೆ ಗ್ರಾಮ ಪಂಚಾಯತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರು: ಡಿಸಿಎಂ ಡಿ.ಕೆ ಶಿವಕುಮಾರ್
Top Story

ಇನ್ನುಂದೆ ಗ್ರಾಮ ಪಂಚಾಯತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರು: ಡಿಸಿಎಂ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
January 27, 2026
400 ಕೋಟಿ ರೂ ದರೋಡೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಮಹಾರಾಷ್ಟ್ರದಲ್ಲಿ ಚಾಲಕರ ಬಂಧನ..?
Top Story

400 ಕೋಟಿ ರೂ ದರೋಡೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಮಹಾರಾಷ್ಟ್ರದಲ್ಲಿ ಚಾಲಕರ ಬಂಧನ..?

by ಪ್ರತಿಧ್ವನಿ
January 27, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

January 28, 2026
ಐರೋಪ್ ಒಕ್ಕೂಟ- ಭಾರತ ಮುಕ್ತ ಮಾರುಕಟ್ಟೆ ಒಪ್ಪಂದ

ಐರೋಪ್ ಒಕ್ಕೂಟ- ಭಾರತ ಮುಕ್ತ ಮಾರುಕಟ್ಟೆ ಒಪ್ಪಂದ

January 28, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada