
ಧಾರವಾಡ: ಸರ್ಕಾರಕ್ಕೆ ಗ್ಯಾರಂಟಿ ಹೊರೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆ ಬಗ್ಗೆ ಧಾರವಾಡದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ಪರಮೇಶ್ವರ ನಡೆಸಿದ ಸಭೆಯಲ್ಲಿ ನಾನೂ ಇದ್ದೆ. ಗ್ಯಾರಂಟಿಯಲ್ಲಿ ಎಷ್ಟೆಷ್ಟು ಕಡಿವಾಣ ಹಾಕಬಹುದು ನೋಡುತ್ತಿದ್ದಾರೆ. ಕಡಿವಾಣ ಹಾಕುವ ಬಗ್ಗೆಯೇ ವಿಚಾರ ಮಾಡುತ್ತಿದ್ದಾರೆ. ಆದರೆ ಆದಾಯ ಹೆಚ್ಚಿಸುವ ಬಗ್ಗೆ ಗಮನ ಹರಿಸುತ್ತಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಗುತ್ತಿಗೆದಾರರೆಲ್ಲಾ ಬೀದಿಗೆ ಬಂದಿದ್ದಾರೆ. ಮಾಡಿದ ಕೆಲಸಕ್ಕೂ ಹಣ ಕೊಡುತ್ತಿಲ್ಲ. ಕೆಲವರು ನೇಣು ಹಾಕಿಕೊಳ್ಳುವ ಪ್ರಸಂಗ ಆಯ್ತು. ಈ ಹಿಂದೆ ರೇವಣ್ಣ ಪಿಡಬ್ಲ್ಯುಡಿ ಸಚಿವರಿದ್ದರು, ಪ್ರತಿ ತಿಂಗಳು ಗುತ್ತಿಗೆದಾರರ ಬಿಲ್ ಆಗುತ್ತಿತ್ತು. ಎರಡು ವರ್ಷದಿಂದ ಗುತ್ತಿಗೆದಾರರ ಬಿಲ್ ಸರಿಯಾಗಿ ಆಗುತ್ತಿಲ್ಲ. ಇಲಾಖೆ ಅಧಿಕಾರಿಗಳೂ ಕೈ ಚೆಲ್ಲಿ ಕುಳಿತಿದಾರೆ. ಅನುದಾನ ಇಲ್ಲ ಅಂತಾ ಕಚೇರಿಗಳಲ್ಲಿ ಕುಳಿತಿದಾರೆ. ರಾಜ್ಯದಲ್ಲಿ 3 ಲಕ್ಷ ಬಜೆಟ್ ಇದೆ. ಆದರೂ ಎಲ್ಲ ಇಲಾಖೆ ಆರ್ಥಿಕ ಮಟ್ಟ ಸುಧಾರಿಸುತ್ತಿಲ್ಲ ಎಂದಿದ್ದಾರೆ. ಈ ಸರ್ಕಾರ ಸಚಿವರು ವಾಮಮಾರ್ಗದಲ್ಲಿ ಹಣ ಮಾಡುತ್ತಿದ್ದಾರೆ. ಸಿಎಂ ಕಂಡರೂ ಕಾಣದಂತೆ ಕಣ್ಣು ಮುಚ್ಚಿ ಕುಳಿತಿದಾರೆ ಎಂದು ಟೀಕಿಸಿದ್ದಾರೆ.

ಗ್ಯಾರಂಟಿ ಯೋಜನೆ ಪರಿಷ್ಕರಣೆ ಬಗ್ಗೆ ಪರಮೇಶ್ವರ್ ಹೇಳಿಕೆ ವಿಚಾರದ ಬಗ್ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ. ‘ಗ್ಯಾರಂಟಿಗಳಿಗೆ ಮುಂದುವರೆಯುವ ಗ್ಯಾರಂಟಿ ಇಲ್ಲ’ ‘ಗ್ಯಾರಂಟಿ ಅನುಷ್ಠಾನಗೊಳಿಸಲಾಗದೆ ಬಂದ್ ಮಾಡಲು ಹೊರಟಿದೆ’ ಎಂದು ಟೀಕಿಸಿದ್ದಾರೆ. ‘ಅವಾಸ್ತವಿಕ ಗ್ಯಾರಂಟಿ ಕಾಕಾ ಪಾಟೀಲ್‌ಗೂ ಇಲ್ಲ ಮಹಾದೇವಪ್ಪಗೂ ಇಲ್ಲ’ ಎಂದು ಆರ್ ಅಶೋಕ್ ಸಾಮಾಜಿಕ ಜಾಲತಾಣ X ಮೂಲಕ ಟೀಕಿಸಿದ್ದಾರೆ. ‘ಮರ್ಯಾದೆಯಿಂದ ಗ್ಯಾರಂಟಿ ಯೋಜನೆ ಕೊಡಬೇಕು’. ‘ಹಣಕಾಸು ಹೊಂದಾಣಿಕೆ ಮಾಡಲು ಪರದಾಡುತ್ತಿದ್ದಾರೆ’ ಎಂದು ಪರಮೇಶ್ವರ್ ಹೇಳಿಕೆಗೆ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.
