ಈಗಾಗಲೇ ಪ್ರತಿಪಕ್ಷ ಒಕ್ಕೂಟಕ್ಕೆ ಒಂದು ಸ್ಪಷ್ಟ ರೂಪ ಬರುವ ಮುನ್ನವೇ ಕಾಂಗ್ರೆಸ್ಸಿನ ದೊಡ್ಡಣ್ಣನ ವರಸೆಯ ಬಗ್ಗೆ ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಸೇರಿದಂತೆ ಹಲವು ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.
—
“ಸಂವಿಧಾನದ ಆಶಯ ಮತ್ತು ತತ್ವಗಳನ್ನು ಎತ್ತಿ ಹಿಡಿಯಲು ಜನಪರ ಸರ್ಕಾರ ರಚನೆಯ ನಿಟ್ಟಿನಲ್ಲಿ ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಬಿಜೆಪಿಯ ವಿರುದ್ದ ಹೋರಾಡುವುದು ನಮ್ಮೆಲ್ಲರ ಗುರಿ” ಎಂದು ಶುಕ್ರವಾರ ನಡೆದ ಪ್ರತಿಪಕ್ಷಗಳ ನಾಯಕರ ಆನ್ ಲೈನ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯ ಬಳಿಕ ಸರಿಯಾದ ತಂತ್ರಗಾರಿಕೆ ಮತ್ತು ಪರಿಶ್ರಮದಿಂದ ಹೋರಾಡಿದರೆ, ದೇಶದ ಪ್ರಬಲ ರಾಜಕೀಯ ಶಕ್ತಿ ಬಿಜೆಪಿಯನ್ನು ಮಣಿಸುವುದು ಸಾಧ್ಯ ಎಂಬ ಭರವಸೆ ಪ್ರತಿಪಕ್ಷಗಳಲ್ಲಿ ಹುಟ್ಟಿದೆ. ಹಾಗಾಗಿಯೇ ಬಂಗಾಳದಲ್ಲಿ ಬಿಜೆಪಿಯ ಭಾರೀ ತಂತ್ರಗಾರಿಕೆಗಳ ಹೊರತಾಗಿಯೂ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಅಲ್ಲಿ ಮೂರನೇ ಬಾರಿಗೆ ಗೆಲುವು ಪಡೆಯುತ್ತಲೇ ದೆಹಲಿಯಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ಜಪ ಆರಂಭವಾಗಿತ್ತು. ಇದೀಗ ಕಳೆದ ವಾರ ಕೊನೆಗೊಂಡ ಸಂಸತ್ತಿನ ಮುಂಗಾರು ಅಧಿವೇಶದದಲ್ಲಿ ಸಂಸತ್ತಿನ ಒಳಹೊರಗೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ಮ ಎನ್ ಸಿಪಿ, ಎನ್ ಸಿ, ಆರ್ ಜೆಡಿ, ಎಸ್ಪಿ, ಆಮ್ ಆದ್ಮಿ ಸೇರಿದಂತೆ ಸುಮಾರು 19 ಪಕ್ಷಗಳು ಹಿಂದೆಂದೂ ಕಾಣದ ಒಗ್ಗಟ್ಟು ಪ್ರದರ್ಶಿಸಿವೆ. ಬಿಜೆಪಿ ಸರ್ಕಾರದ ವಿರುದ್ಧ ಭರ್ಜರಿ ಹೋರಾಟದ ಮುನ್ಸೂಚನೆ ನೀಡಿವೆ.
ಶುಕ್ರವಾರದ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿಯವರೊಂದಿಗೆ, ಪಶ್ಚಿಮಬಂಗಾಳ ಸಿಎಂ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಸಿಎಂ ಹಾಗೂ ಶಿವಸೇನಾ ನಾಯಕ ಉದ್ಧವ್ ಠಾಕ್ರೆ, ತಮಿಳುನಾಡು ಸಿಎಂ ಹಾಗೂ ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎನ್ ಸಿಪಿ ನಾಯಕ ಶರದ್ ಪವಾರ್, ಎನ್ ಸಿ ನಾಯಕ ಫಾರೂಕ್ ಅಬ್ದುಲ್ಲಾ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ, ಸಿಪಿಐ ನಾಯಕ ಡಿ ರಾಜಾ, ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತಿತತರು ಪಾಲ್ಗೊಂಡಿದ್ದರು. ಈ ಒಕ್ಕೂಟದ ಭಾಗವಾಗಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅನಿವಾರ್ಯ ಕಾರಣಗಳಿಂದ ಸಭೆಯಲ್ಲಿ ಭಾಗವಹಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯಕ್ಕೆ ದಿನದಿಂದ ದಿನಕ್ಕೆ ಪ್ರಬಲವಾಗುತ್ತಿರುವ ಮತ್ತು ಮುಂದಿನ ಚುನಾವಣೆಯ ಹೊತ್ತಿಗೆ ಬಿಜೆಪಿಗೆ ದೊಡ್ಡ ಸವಾಲು ಒಡ್ಡುವಂತೆ ತೋರುತ್ತಿರುವ ಪ್ರತಿಪಕ್ಷಗಳ ಈ ಒಕ್ಕೂಟದಿಂದ ಸದ್ಯಕ್ಕೆ ಹೊರಗಿರುವ ಪ್ರಮುಖ ನಾಯಕರು ಬಿಎಸ್ ಪಿಯ ಮಾಯಾವತಿ ಹಾಗೂ ವೈಎಸ್ ಆರ್ ಕಾಂಗ್ರೆಸ್ ನ ಜಗನ್ ಮೋಹನ್ ರೆಡ್ಡಿ. ಇನ್ನುಳಿದಂತೆ ಬಿಜೆಪಿಯ ಮೈತ್ರಿಯಲ್ಲಿ ಗುರುತಿಸಿಕೊಂಡಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಹಾಗೂ ಟಿಡಿಪಿ ನಾಯಕ ಚಂದ್ರಶೇಖರ್ ರಾವ್ ಸದ್ಯಕ್ಕೆ ಪ್ರತಿಪಕ್ಷಗಳ ಒಕ್ಕೂಟದ ಕಡೆ ಒಲವು ತೋರಿಲ್ಲವಾದರೂ, ಮುಂದಿನ ದಿನಗಳಲ್ಲಿ ಒಕ್ಕೂಟ ಪ್ರಬಲವಾದಂತೆ ಅವರೂ ಇತ್ತ ವಾಲುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಹಾಗೇ ನವೀನ್ ಪಟ್ನಾಯಕ್ ಅವರ ವಿಷಯದಲ್ಲಿ ಕೂಡ ಇಂತಹದ್ದೇ ಮಾತುಗಳು ಕೇಳಿಬರುತ್ತಿವೆ.
ಏಕೆಂದರೆ, ಈಗಾಗಲೇ ಮಮತಾ ಬ್ಯಾನರ್ಜಿ ಮತ್ತು ಶರದ್ ಪವಾರ್ ಅವರು ಒಂದು ಕಡೆ ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ರಾಜಕಾರಣದ ದಿಕ್ಕು ಬದಲಾವಣೆಯ ಬಿಹಾರದ ನೆಲದಲ್ಲಿ ಹೊಸ ಬದಲಾವಣೆಯ ದಿಕ್ಕುಗಳನ್ನು ತೋರಿಸುತ್ತಿದ್ದರೆ, ಮತ್ತೊಂದು ಕಡೆ ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ ಸಿ ತ್ಯಾಗಿ ಮತ್ತು ಐಎನ್ ಎಲ್ ಡಿ ನಾಯಕ ಓಂ ಪ್ರಕಾಶ್ ಚೌತಾಲಾ ನಡುವೆ ಮಾತುಕತೆಗಳೂ ನಡೆದಿವೆ. ಅಲ್ಲದೆ, ಚೌತಾಲಾ ಮತ್ತು ಜೆಡಿಯು ನಾಯಕ ಹಾಗೂ ಬಿಹಾರ್ ಸಿಎಂ ನಿತೀಶ್ ಕುಮಾರ್ ಭೇಟಿ ಕೂಡ ಆಗಿದ್ದು, ಇಬ್ಬರ ನಡುವೆ ರಾಜಕೀಯ ಚರ್ಚೆಗಳು ನಡೆದಿಲ್ಲ ಎಂದು ಹೇಳಿದ್ದರೂ, ಚೌತಾಲಾ ಅವರು, ಒಂದು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ಪರ್ಯಾಯ ಶಕ್ತಿಯೊಂದು ಪ್ರಬಲವಾಗಿ ಹೊರಹೊಮ್ಮಿದರೆ, ಸದ್ಯ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ, ಅಧಿಕಾರ ಹಂಚಿಕೊಂಡಿರುವ ಹಲವು ಪಕ್ಷಗಳು ಮತ್ತು ನಾಯಕರು ಅದರಿಂದ ದೂರಸರಿದು ಪರ್ಯಾಯ ಶಕ್ತಿಯೊಂದಿಗೆ ಕೈಜೋಡಿಸಲಿದ್ದಾರೆ ಎಂದಿರುವುದು ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಪ್ರಮುಖವಾಗಿ ದೇಶದ ರಾಜಕೀಯ ದಿಕ್ಕು ದೆಸೆ ನಿರ್ಧರಿಸುವಲ್ಲಿ ನಿರ್ಣಾಯಕ ಎನ್ನಲಾಗುತ್ತಿರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಉಳಿದಿರುವ ಹಿನ್ನಲೆಯಲ್ಲಿ ಪ್ರತಿಪಕ್ಷಗಳ ಈ ಮೈತ್ರಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಹಾಗೆ ನೋಡಿದರೆ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು. ಬಿಜೆಪಿ ಅಧಿಕಾರದಲ್ಲಿದ್ದರೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಾಗುತ್ತದೆ. ಬಡವರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು ಬದುಕು ನರಕವಾಗುತ್ತದೆ ಎಂಬುದು ತಮ್ಮ ಕಾಳಜಿ. ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಹಿರಿಯರು ಕಟ್ಟಿದ ಸಂವಿಧಾನಿಕ ಸಂಸ್ಥೆಗಳನ್ನು ಜನರ ಭರವಸೆಯಾಗಿ ಉಳಿಸುವ ನಿಟ್ಟಿನಲ್ಲಿ ಬಿಜೆಪಿಗೆ ಪರ್ಯಾಯವಾಗಿ ತಾವೊಂದು ರಾಜಕೀಯ ಶಕ್ತಿಯನ್ನು ಕಟ್ಟುತ್ತಿದ್ದೇವೆ. ಬಿಜೆಪಿಯಿಂದ ದೇಶವನ್ನು ಉಳಿಸಲು ಜನರ ಮುಂದೆ ಹೊಸ ರಾಜಕೀಯ ಪರ್ಯಾಯವನ್ನು ಇಡುವುದು ತಮ್ಮ ಉದ್ದೇಶ ಎಂದು ಪ್ರತಿಪಕ್ಷಗಳ ಈ ಒಕ್ಕೂಟದ ಬಹುತೇಕ ಪ್ರಮುಖರು ತಮ್ಮ ನಡೆಯ ಕುರಿತು ಭಾರೀ ಆದರ್ಶದ ಮಾತುಗಳನ್ನು ಆಡಿದ್ದಾರೆ.
ಆದರೆ, ಅವರ ಅಂತಹ ಆದರ್ಶ ಎಷ್ಟು ಗಟ್ಟಿ? ಎಷ್ಟು ಟೊಳ್ಳು ಎಂಬುದನ್ನು ಬಹುತೇಕ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯೇ ಪರೀಕ್ಷೆಗೊಡ್ಡಲಿದೆ. ಏಕೆಂದರೆ, ಉತ್ತರಪ್ರದೇಶದಲ್ಲಿ ಪರಸ್ಪರ ಪ್ರತಿಸ್ಪರ್ಧಿಗಳಾಗುವ ಈ ಒಕ್ಕೂಟದ ವಿವಿಧ ಪಕ್ಷಗಳು ಸ್ಥಾನ ಹಂಚಿಕೆಯಂತಹ ನಿರ್ಣಾಯಕ ವಿಷಯದಲ್ಲಿ ಎಷ್ಟು ಒಗ್ಗಟ್ಟು ತೋರಿಸುತ್ತವೆ ಎಂಬುದನ್ನು ಕಾದುನೋಡಬೇಕಿದೆ. ಹಾಗೇ, ಈ ಒಕ್ಕೂಟದ ಆಶಯಗಳನ್ನು ಮತದಾರ ಎಷ್ಟು ಗಂಭೀರವಾಗಿ ಪರಿಗಣಿಸುತ್ತಾನೆ ಮತ್ತು ಹೇಗೆ ಸ್ವೀಕರಿಸುತ್ತಾನೆ ಎಂಬುದು ಆ ವಿಧಾನಸಭಾ ಚುನಾವಣೆಯಲ್ಲಿ ಗೊತ್ತಾಗಲಿದೆ.
ಹಾಗೆ ನೋಡಿದರೆ, ಈಗಾಗಲೇ ಪ್ರತಿಪಕ್ಷ ಒಕ್ಕೂಟಕ್ಕೆ ಒಂದು ಸ್ಪಷ್ಟ ರೂಪ ಬರುವ ಮುನ್ನವೇ ಕಾಂಗ್ರೆಸ್ಸಿನ ದೊಡ್ಡಣ್ಣನ ವರಸೆಯ ಬಗ್ಗೆ ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಸೇರಿದಂತೆ ಹಲವು ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ. ಸಂಸತ್ ಅಧಿವೇಶನದ ವೇಳೆ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುವ ವಿಷಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಿಢೀರನೇ ನಿರ್ಧಾರ ಕೈಗೊಂಡ ಬಗ್ಗೆ ಕೆಲವು ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ. ಆ ಹಿನ್ನೆಲೆಯಲ್ಲೇ ಶುಕ್ರವಾರದ ಸಭೆಯಿಂದಲೂ ಆಮ್ ಆದ್ಮಿ ದೂರ ಉಳಿದಿದೆ ಎನ್ನಲಾಗುತ್ತಿದೆ. ಅಲ್ಲದೆ, ಉತ್ತರಪ್ರದೇಶದಂತೆಯೇ ಚುನಾವಣೆ ಸಮೀಪಿಸುತ್ತಿರುವ ಪಂಜಾಬಿನ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿಗಳ ನಡುವೆ ಹಣಾಹಣಿ ಈ ಬಾರಿಯೂ ಉಂಟಾಗುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿಯೂ ಈಗಾಗಲೇ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಮಹತ್ತರ ಉದ್ದೇಶದ ಘೋಷಣೆ ಮಾಡುತ್ತಿರುವ ಕಾಂಗ್ರೆಸ್ ಮತ್ತು ಆಮ್ ಆದ್ಮಿ ನಡುವೆ ಈಗಾಗಲೇ ಒಕ್ಕೂಟದ ಒಳಗೇ ಮುಸುಕಿನ ಗುದ್ದಾಟ ಆರಂಭವಾಗಿದೆ ಎಂಬ ಮಾತುಗಳೂ ಇವೆ.
ಜೊತೆಗೆ ಉತ್ತರಪ್ರದೇಶದಂತಹ ಕಾಂಗ್ರೆಸ್ ಮತ್ತು ಎಸ್ಪಿ ಹಾಗೂ ಮತ್ತಿತರ ಪಕ್ಷಗಳ ಮೈತ್ರಿಕೂಟ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಎದುರಿಸುವ ಕಡೆ, ಮುಖ್ಯಮಂತ್ರಿ ಅಭ್ಯರ್ಥಿಯ ವಿಷಯದಲ್ಲಿ ಕೂಡ ಯಾವುದೇ ಕ್ಷಣದಲ್ಲಿ ಬಿಜೆಪಿ ವಿರೋಧಿ ಪಾಳೆಯದಲ್ಲಿ ಒಡಕು ಮೂಡಬಹುದು. ಮಿತ್ರಪಕ್ಷಗಳ ಮೈತ್ರಿಮುರಿದುಕೊಂಡು ದಿಕ್ಕಾಪಾಲಾಗಬಹುದು.
ಹಾಗಾಗಿ ಹಲವು ವಿಷಯದಲ್ಲಿ ಉತ್ತರಪ್ರದೇಶ, ಪಂಜಾಬ್ ಸೇರಿದಂತೆ ಕೆಲವೇ ದಿನಗಳಲ್ಲಿ ಚುನಾವಣೆ ಎದುರಿಸುವ ಉತ್ತರಭಾರತದ ರಾಜ್ಯಗಳೇ ಬಹುತೇಕ ಬಿಜೆಪಿ ವಿರೋಧಿ ಪಾಳೆಯದ ಶಕ್ತಿ ಮತ್ತು ದೌರ್ಬಲ್ಯಗಳನ್ನು ಜಗಜ್ಜಾಹೀರುಮಾಡಲಿವೆ. ಆ ಅರ್ಥದಲ್ಲಿ ಬಹುತೇಕ ಆ ರಾಜ್ಯಗಳ ಚುನಾವಣೆ ಘೋಷಣೆಯಾಗುವವರೆಗಂತೂ ಬಿಜೆಪಿಯ ಪರ್ಯಾಯ ಶಕ್ತಿ ಗಟ್ಟಿಯಾಗೇ ಇರಲಿದೆ. ಒಮ್ಮೆ ಚುನಾವಣೆ ಘೋಷಣೆಯಾದ ಬಳಿಕ ಆ ಪ್ರತಿಪಕ್ಷಗಳ ಒಗ್ಗಟ್ಟು ಎಷ್ಟು ಗಟ್ಟಿ ಮತ್ತು ಎಷ್ಟು ಪೊಳ್ಳು ಎಂಬುದು ಗೊತ್ತಾಗಲಿದೆ. ಹಾಗಾಗಿ ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ಈ ಒಕ್ಕೂಟ ಹೊರಹೊಮ್ಮುವುದೇ ಅಥವಾ ಇಲ್ಲವೇ ಎಂಬುದಕ್ಕೆ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯೇ ಟ್ರೈಲರ್! ಆವರೆಗೆ ಎಲ್ಲಾ ಒಗ್ಗಟ್ಟಿನ ಮಾತುಗಳು, ಆದರ್ಶದ ದೊಡ್ಡದೊಡ್ಡ ಮಾತುಗಳು ಕೇಳುತ್ತಲೇ ಇರುತ್ತವೆ!!