
ಶುಕ್ರವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ದಾಖಲೆಯ 16ನೇ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಮಂಡನೆಗೂ ಮುನ್ನವೇ ಬಿಜೆಪಿ-ಜೆಡಿಎಸ್ ನಾಯಕರು ಪ್ರತಿಭಟನೆ ಮಾಡಲು ನಿರ್ಧಾರ ಮಾಡಿದ್ದಾರೆ. ಇದಕ್ಕೂ ಮೊದಲು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿದ್ದು, ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಟೀಕೆ ವ್ಯಕ್ತಪಡಿಸಿದ್ದಾರೆ.
ಶಾಸಕರಿಗೆ ಅನುದಾನ ಕೊರತೆ ಬಗ್ಗೆ ಸದನದಲ್ಲಿ ಆರ್ ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ನನ್ನ ಕ್ಷೇತ್ರಕ್ಕೆ ಹತ್ತು ಕೋಟಿ ಅನುದಾನ ಕೊಡಲಾಗಿದೆ. ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಬೈರತಿ ಸುರೇಶ್ ಗೆ 100 ಕೋಟಿ ಅನುದಾನ ಕೊಡಲಾಗಿತ್ತು. ಅನುದಾನದ ಕೊಡುವ ಬಗ್ಗೆ ಸಿದ್ದರಾಮಯ್ಯ ಕರೆ ಮಾಡಿದ್ದರು. ಆದರೆ ನನಗೆ ಈ ಸರ್ಕಾರದ ಅವಧಿಯಲ್ಲಿ 10 ಕೋಟಿ ನೀಡಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ನನಗೆ ಮಾತ್ರವಲ್ಲ ಯಾವುದೇ ಶಾಸಕರಿಗೂ ಈ ಸರ್ಕಾರದಲ್ಲಿ ಅನುದಾನ ಸಿಗ್ತಿಲ್ಲ. ನಮ್ಮ ರಸ್ತೆಗಳು ಹದಗೆಟ್ಟಿವೆ, ಇವಾಗ ಮಳೆಗಾಲ ಬರ್ತಿದೆ, ಮಳೆಗೂ ಮುನ್ನ ಡಾಂಬರೀಕರಣ ಮಾಡಬೇಕಿದೆ. ಬ್ರ್ಯಾಂಡ್ ಬೆಂಗಳೂರು ಬ್ಯಾಡ್ ಬೆಂಗಳೂರು ಆಗಿದೆ. ಬೆಂಗಳೂರು ಗಾರ್ಬೆಜ್ ಬೆಂಗಳೂರು ಆಗಿದೆ ಎಂದಿದ್ದಾರೆ ಆರ್ ಅಶೋಕ್.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಆರ್ ಅಶೋಕ್ ಮಾತನಾಡಿ, ಕನ್ನಡ ಕೆಲಸಕ್ಕೂ ಕಾಸಿನ ಕೊರತೆ ಇದೆ. ನಮ್ಮ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 431 ಕೊಡಲಾಗಿತ್ತು. ಇವಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 255 ಕೊಡಲಾಗಿದೆ. ಕನ್ನಡ ಸಮ್ಮೇಳನಕ್ಕೆ 30 ಕೋಟಿ ಬದಲಾಗಿ 10 ಕೋಟಿ ಕೊಡಲಾಗ್ತಿದೆ. ನಾಟಕಗಳಿಗೆ 35,000 ಮೊತ್ತದ ಕ್ರಿಯಾ ಯೋಜನೆಗೆ ಹಣ ಇಲ್ಲ. ಕಲಾವಿದರಿಗೆ, ಸಂಘಗಳಿಗೆ ನೀಡುತ್ತಿದ್ದ ಧನ ಸಹಾಯ 29 ಕೋಟಿಯಿಂದ 10 ಕೋಟಿಗೆ ಇಳಿಕೆ ಮಾಡಲಾಗಿದೆ ಎಂದು ಟೀಕಿಸಿದ್ದಾರೆ.
ರಂಗಮಂದಿರಗಳಿಗೆ ಸರ್ಕಾರ ಹಣ ಕೊಡುತ್ತಿಲ್ಲ. ಕಲಾವಿಧರ ಪಿಂಚಣಿಗೆ ಅರ್ಜಿ ಆಹ್ವಾನ ಇಲ್ಲ. ಕನ್ನಡದ ಕೆಲಸಕ್ಕೂ ಈ ಸರ್ಕಾರದಲ್ಲಿ ಹಣ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಶುಕ್ರವಾರ ಬಜೆಟ್ ಮಂಡನೆಗೂ ಮುನ್ನವೇ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಬಿಜೆಪಿ ಪ್ಲಾನ್ ಮಾಡಿದೆ, ಸರ್ಕಾರದ ಶೂನ್ಯ ಸಾಧನೆ, ವೈಫಲ್ಯಗಳ ವಿರುದ್ಧ ಪ್ರತಿಭಟನೆ ಮಾಡಲಾಗುತ್ತದೆ ಎನ್ನಲಾಗಿದೆ.

ವಿಧಾನಸೌಧದ ಆವರಣದಲ್ಲಿರುವ ಗಾಂಧಿಪ್ರತಿಮೆ ಮುಂಭಾಗ ಬಿಜೆಪಿ – ಜೆಡಿ ಎಸ್ ಶಾಸಕರು ಪ್ರತಿಭಟನೆ ಮಾಡಲು ನಿರ್ಧಾರ ಮಾಡಿದ್ದು, ಬಜೆಟ್ ಮಂಡನೆಗೂ ಮುನ್ನವೇ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ- ಜೆಡಿಎಸ್ ನಿರ್ಧಾರ ಮಾಡಿವೆ. ಬಿ.ವೈ ವಿಜಯೇಂದ್ರ, ಆರ್.ಅಶೋಕ್, ಸುರೇಶ್‌ಬಾಬು ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಪ್ರತಿಭಟನೆ ಮಾಡಲಾಗುತ್ತದೆ.