ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡೆಯನ್ನು ಸಾಲುಸಾಲಾಗಿ ಟೀಕಿಸಿದ್ದಾರೆ. ಬಿಪಿಎಲ್ ಫಲಾನುಭವಿಗಳ ಪಟ್ಟಿ ಪರಿಷ್ಕರಣೆ ನಡೆಸಿದರೆ ತಪ್ಪಲ್ಲ. ಆದರೆ ಟಿವಿ- ಬೈಕ್ಗಳು ಬಡತನದ ಮಾನದಂಡಗಳಲ್ಲ. ಜನ ಸಾಲ ಮಾಡಿ ಬೈಕ್ – ಟಿವಿ ಇಟ್ಕೊಂಡಿರ್ತಾರೆ, ಅವರೆಲ್ಲ ಶ್ರೀಮಂತರಾ? ಬಡವರ ಸೇವೆ ಮಾಡಲು ಮನಸ್ಸಿಲ್ಲದ ಉಮೇಶ್ ಕತ್ತಿಯಂತಹವರಿಗೆ ಮಾತ್ರ ಇಂತಹ ಅಸಂಬದ್ಧ ಯೋಚನೆಗಳು ಬರುತ್ತದೆ ಎಂದು ಹರಿಹಾಯ್ದಿದ್ದಾರೆ
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕುರುಬ ಸಮುದಾಯದ ಮೀಸಲಾತಿ ಹೋರಾಟ
ಸಂವಿಧಾನದ 15, 16 ಹಾಗೂ 340ನೇ ವಿಧಿಗಳಿಗನುಸಾರ ಅರ್ಹರಾಗಿ ಇರುವವರಿಗೆ ಮೀಸಲಾತಿ ನೀಡಲೇಬೇಕು. ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಮಾತ್ರ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿದೆ ಎಂದಿದ್ದಾರೆ.·
ಕುರುಬ ಸಮುದಾಯದ ಎಸ್.ಟಿ ಮೀಸಲಾತಿ ಹೋರಾಟಕ್ಕೆ ಇದು ಸೂಕ್ತ ಸಮಯವಲ್ಲ. ಕುಲಶಾಸ್ತ್ರ ಅಧ್ಯಯನ ವರದಿ ಬಂದ ನಂತರ, ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿ, ಆ ಶಿಫಾರಸನ್ನು ಕೇಂದ್ರ ತಿರಸ್ಕರಿಸಿದರೆ ಹೋರಾಟದ ಅಗತ್ಯ ಬೀಳಲಿದೆ. ಈಗಲೇ ಹೋರಾಟ ಮಾಡುವುದು ವ್ಯರ್ಥ ಎಂದು ಹೋರಾಟಗಾರರಿಗೆ ಸಲಹೆ ನೀಡಿದ್ದಾರೆ.
ಕುರುಬರ ಎಸ್.ಟಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಈಶ್ವರಪ್ಪ ಬಿಜೆಪಿ ನಾಯಕ. ಮೀಸಲಾತಿಗಾಗಿ ಶಿಫಾರಸ್ಸು ಮಾಡಬೇಕಾದ, ಆ ಶಿಫಾರಸನ್ನು ಅನುಮೋದಿಸಬೇಕಾದ ಸರ್ಕಾರಗಳು ಬಿಜೆಪಿ ಕೈಯಲ್ಲಿದೆ. ಹಾಗಾಗಿ ಇದೊಂದು ರೀತಿ ಈಶ್ವರಪ್ಪನವರ ವಿರುದ್ಧ ಈಶ್ವರಪ್ಪನೇ ಹೋರಾಟ ನಡೆಸಿದಂತಿದೆ ಎಂದು ವ್ಯಂಗ್ಯಮಾಡಿದ್ದಾರೆ.
ಪಿಎಂ ಕೇರ್ಸ್ ನಿಧಿಯ ಲೆಕ್ಕವನ್ನೇ ಕೊಡದಿರುವವರು…ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹಿಸುವ ಹಣದ ಲೆಕ್ಕ ನೀಡ್ತಾರಾ..?
ರಾಮಮಂದಿರ ನಿರ್ಮಾಣಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಇದೇ ಬಿಜೆಪಿ ಹಿಂದೊಮ್ಮೆ ರಾಮ ಮಂದಿರ ನಿರ್ಮಾಣಕ್ಕಾಗಿ ಇಟ್ಟಿಗೆ-ಹಣ ಸಂಗ್ರಹಿಸಿತ್ತಲ್ಲಾ, ಅದು ಏನಾಯಿತೆಂದು ಯಾರಿಗೂ ಗೊತ್ತಿಲ್ಲ. ಅದರ ಲೆಕ್ಕವನ್ನು ಮೊದಲು ಸಾರ್ವಜನಿಕರಿಗೆ ನೀಡಬೇಕು ಎಂದಿದ್ದಾರೆ.
ಸಾರ್ವಜನಿಕರಿಂದ ಹಣ ಸಂಗ್ರಹಿಸುವವವರು ಪಾರದರ್ಶಕವಾಗಿ ನಡೆದುಕೊಳ್ಳಬೇಕಾಗುತ್ತದೆ. ಪಿಎಂ ಕೇರ್ಸ್ ನಿಧಿಯ ಲೆಕ್ಕವನ್ನೇ ಕೊಡದಿರುವ ಈಗಿನ ಬಿಜೆಪಿ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹಿಸುವ ಹಣದ ಲೆಕ್ಕ ನೀಡುತ್ತಾ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಉತ್ತರಿಸುವಂತೆ ಪರೋಕ್ಷವಾಗಿ ಸಿದ್ದರಾಮಯ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬಸವನಗೌಡ ಯತ್ನಾಳ್ ಆರೋಪಕ್ಕೆ ಸುಪ್ರೀಂ ಕೋರ್ಟ್ ಮೂಲಕ ತನಿಖೆಯಾಗ ಬೇಕು
ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರದಲ್ಲಿ ಸಂಪಾದನೆ ಮಾಡಿದ್ದ ಹಣವನ್ನು ಮಾರಿಷಸ್ನಲ್ಲಿಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದಾರೆ. ಈ ಪ್ರಕರಣ ಕುರಿತು ತಕ್ಷಣ ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಾಧೀಶರ ಮೂಲಕ ತನಿಖೆಗೆ ಪ್ರಧಾನಿ ನರೇಂದ್ರ ಮೋದಿ ಆದೇಶಿಸಬೇಕೆಂದು ಒತ್ತಾಯಿಸಿದ್ದಾರೆ.