2023ರ ವಿಧಾನಸಭಾ ಚುನಾವಣೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಆಪರೇಷನ್ ಹಸ್ತಕ್ಕೆ ಮುಂದಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ಹಿರಿಯ ಕಾಂಗ್ರೆಸ್ ನಾಯಕರಾದ ಕೆ.ಎಚ್ ಮುನಿಯಪ್ಪ, ಬಿ.ಕೆ ಹರಿಪ್ರಸಾದ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದು ಅಷ್ಟೇ ಸತ್ಯ. ಈ ಬೆನ್ನಲ್ಲೀಗ ಚುನಾವಣಾ ಮೈತ್ರಿ ಮತ್ತು ಆಪರೇಷನ್ ಕಾಂಗ್ರೆಸ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಭಿಪ್ರಾಯಕ್ಕೆ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಕಾಂಗ್ರೆಸ್ 2023ರ ವಿಧಾನಸಭಾ ಚುನಾವಣೆ ಗೆಲ್ಲಲೇಬೇಕಿದೆ. ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ನಿಂದ ಕಾಂಗ್ರೆಸ್ ಡಜನ್ಗಟ್ಟಲೇ ನಾಯಕರು ಕರೆದುಕೊಂಡು ಬರಲು ಮುಂದಾಗಿದ್ದೇವೆ. ಹಾಗಾಗಿ ಆಪರೇಷನ್ ಹಸ್ತ ಮಾಡಬೇಕೇ ಬೇಡವೇ ಮತ್ತು ಚುನಾವಣಾ ಮೈತ್ರಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದಿದ್ದಾರೆ ಡಿ.ಕೆ ಶಿವಕುಮಾರ್.
ಚುನಾವಣಾ ಮೈತ್ರಿ, ಆಪರೇಷನ್ ಹಸ್ತ ಮಾಡಲು ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನ ಪರಿಷತ್, ಜಿಲ್ಲಾ ಪಂಚಾಯತ್ ಚುನಾವಣೆ ಕುರಿತು ಸಭೆ ನಡೆಸುತ್ತಿದ್ದಾರೆ. ಜಿಲ್ಲವಾರು ಕಾಂಗ್ರೆಸ್ ನಾಯಕರ ಸಭೆ ನಡೆಸಿ ಈ ವಿಚಾರ ಮುಂದಿಟ್ಟಿದ್ದಾರೆ.
ಇನ್ನು, ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಚುನಾವಣಾ ಮೈತ್ರಿ ಮತ್ತು ಆಪರೇಷನ್ ಹಸ್ತದ ವಿಚಾರ ಭಾರೀ ಸದ್ದು ಮಾಡುತ್ತಿದೆ. ನಿಮ್ಮ ಜಿಲ್ಲೆಯಲ್ಲಿ ಯಾರು ಕಾಂಗ್ರೆಸ್ಗೆ ಬರಬಹುದು ಎಂದು ನೋಡಿ. ಯಾರು ಕಾಂಗ್ರೆಸ್ ಜತೆ ಹೊಂದಾಣಿಕೆ ರಾಜಕೀಯ ಮಾಡಲು ಸೂಕ್ತ ಇದ್ದಾರೆ ಎಂದು ಅಭಿಪ್ರಾಯ ಸಂಗ್ರಹಿಸಿ ಎಂದು ಜಿಲ್ಲಾವಾರು ಕಾಂಗ್ರೆಸ್ ನಾಯಕರು ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಜೆಡಿಎಸ್‍ನಿಂದ ಸುಮಾರು ಕನಿಷ್ಠ 10 ಜನ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುವ ನಿರೀಕ್ಷೆಗಳಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಬಲ ಪಕ್ಷವಾಗಿದ್ದು, ಕಾಂಗ್ರೆಸ್‍ಗೆ ಪೈಪೋಟಿ ನೀಡುತ್ತಿದೆ. ಈ ಭಾಗದಲ್ಲಿ ಅತೀ ಹೆಚ್ಚು ಶಾಸಕರನ್ನು ಹೊಂದಿರುವ ಜೆಡಿಎಸ್ ಪಕ್ಷ ಸಂಘಟನೆಗೆ ಹೆಚ್ಚು ಆದ್ಯತೆ ನೀಡುತ್ತಿದೆ. ನಾವು ಅಧಿಕಾರ ಹಿಡಿಯಲು ಆಪರೇಷನ್ ಹಸ್ತ ಅಗತ್ಯ ಎಂದು ಡಿ.ಕೆ ಶಿವಕುಮಾರ್ ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಎಷ್ಟೇ ಸ್ಟ್ರಾಂಗ್ ಇದ್ದರೂ ಹಲವರು ಕಾಂಗ್ರೆಸ್‍ನತ್ತ ಮುಖ ಮಾಡಲು ಸಿದ್ಧರಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜಿ.ಟಿ.ದೇವೇಗೌಡ ಜೆಡಿಎಸ್ ತೊರೆಯುವುದನ್ನು ಖಚಿತಪಡಿಸಿದ್ದಾರೆ. ಅಲ್ಲದೇ ನಮ್ಮೊಂದಿಗೆ ಕಾಂಗ್ರೆಸ್ ಸೇರುವ ಕುರಿತು ಮಾತುಕತೆ ನಡೆಸಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದ ಎಸ್.ಆರ್ ಶ್ರೀನಿವಾಸ್ ಕೂಡ ಕಾಂಗ್ರೆಸ್ ಜತೆ ಗುರುತಿಸಿಕೊಳ್ಳಲಾರಂಭಿಸಿದ್ದಾರೆ ಎಂದು ಜಿಲ್ಲಾವಾರು ಕಾಂಗ್ರೆಸ್ ನಾಯಕರ ಸಭೆಯಲ್ಲಿ ಮನವರಿಕೆ ಮಾಡಲಾಗಿದೆ.
ಮೈಸೂರು, ಮಂಡ್ಯ, ತುಮಕೂರು, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜೆಡಿಎಸ್‍ನ ಪ್ರಮುಖ ನಾಯಕರು ಹಾಗೂ ಶಾಸಕರು ಕಾಂಗ್ರೆಸ್ ಸೇರಲು ಒಲವು ತೋರಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಈಗಾಗಲೇ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಗುರುತಿಸುವ ಪ್ರಯತ್ನ ಮಾಡುತ್ತಿದೆ. ಜೆಡಿಎಸ್ ಅಥವಾ ಇನ್ಯಾವುದೇ ಪಕ್ಷದಿಂದ ಹಾಲಿ ಶಾಸಕರು ಬಂದಲ್ಲಿ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂಬ ಚರ್ಚೆಯೂ ನಡೆಯುತ್ತಿದೆ.
ಕಾಂಗ್ರೆಸ್ ನಾಯಕರು ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಹಿರಿಯ ನಾಯಕ ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿ ಅಂಗೀಕಾರ ನೀಡಿದ ಬಳಿಕವಷ್ಟೇ ವಿವಿಧ ಪಕ್ಷಗಳ ನಾಯಕರನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಈಗ ಜಿಲ್ಲಾವಾರು ಕಾಂಗ್ರೆಸ್ ನಾಯಕರ ಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದು, ಕಾರ್ಯಕರ್ತರ ಅಭಿಪ್ರಾಯಕ್ಕೆ ಮುಂದಾಗಿದ್ದಾರೆ.
ಕಾಂಗ್ರೆಸ್ನಲ್ಲಿ ನಾಯಕರ ದಂಡೇ ಇದೆ. ಬಿಜೆಪಿ ಜೆಡಿಎಸ್ನಿಂದ ನಾಯಕರನ್ನು ಕರೆ ತಂದು ಎಲ್ಲರಿಗೂ ಹೇಗೆ ಟಿಕೆಟ್ ನೀಡುತ್ತೀರಿ. ಎಲ್ಲರನ್ನು ಕರೆ ತಂದರೆ ನಾಳೆ ಟಿಕೆಟ್ ಕೊಡಲು ಸಮಸ್ಯೆಯಾಗಲಿದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಪರ ವಾತಾವರಣ ನಿರ್ಮಾಣವಾಗಿದೆ. ನಾವು ಈಗ ಚುನಾವಣೆಗೆ ಹೋದರು ಗೆಲ್ಲಲಿದ್ದೇವೆ. ಆದರೆ, ಈ ಆಪರೇಷನ್ ಕಾಂಗ್ರೆಸ್ ಅನಿವಾರ್ಯ ಎಂಬ ಅಭಿಪ್ರಾಯಗಳು ಮತ್ತೆ ವ್ಯಕ್ತವಾಗಿದೆ.