ಕೆಲ ದಿನಗಳು ಬ್ರೇಕ್ ಪಡೆದ ಪಾಲಿಕೆ ಮತ್ತೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನ ಆರಂಭಿಸಿದೆ. ರಾಜಧಾನಿಯ ಎರಡು ವಲಯಗಳಲ್ಲಿ ಆಪರೇಷನ್ 2.O ಆರಂಭಗೊಂಡಿದೆ. ಆದ್ರೆ ಈ ಬಾರಿಯೂ ಬಡಬಗ್ಗರ ಮನೆ ಮೇಲೆಯೇ ಬಿಬಿಎಂಪಿ ಪೌರುಷ ಪ್ರದರ್ಶನವಾಗ್ತಿರೋದು ಮೊದಲ ದಿನವೇ ಸಾಬೀತಾಗಿದೆ.
ನುಂಗಣ್ಣ ಸಿರಿವಂತರಕಡೆ ಮುಖಮಾಡದ ಪಾಲಿಕೆ!
ಕೊನೆಗೂ ಎರಡನೇ ಹಂತದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನ ಪಾಲಿಕೆ ಆರಂಭಿಸಿದೆ. ಕೆಆರ್ ಪುರಂ ಹಾಗೂ ಮಹಾದೇವಪುರದ ಹಲವು ಕಡೆಗಳಲ್ಲಿ ಪಾಲಿಕೆ ಜೆಸಿಬಿಗಳು ಘರ್ಜಿಸಿದ್ವು. ಆದ್ರೆ ಈ ಬಾರಿಯೂ ಬಡವರನ್ನೇ ಪಾಲಿಕೆ ಟಾರ್ಗೆಟ್ ಮಾಡ್ತಿದೆ ಎಂಬ ಆರೋಪ ಕೇಳಿಬಂತು. ಮಹಾದೇವಪುರದ ಶೀಲವಂತ ಕೆರೆ ಸಂಪರ್ಕಕಲ್ಪಿಸೋ ರಾಜಕಾಲುವೆಯನ್ನ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಳ್ಳಲಾಗಿತ್ತು. ಆದ್ರೆ ಇದನ್ನ ತೆರವಿಗೆ ಮುಂದಾದಾಗ ಪಾಲಿಕೆ ದೊಡ್ಡವರನ್ನ ಸೇವ್ ಮಾಡಲು ರಾಜಕಾಲುವೆ ಪಥವನ್ನೇ ತಿರುಚಿದೆ ಎಂಬ ಆರೋಪ ಕೇಳಿಬಂತು. ಮಾನೆ ಮಾಲೀಕರು ನಾನಾರೀತಿಯಲ್ಲಿ ಬೇಡಿಕೊಂಡ್ರು. ಇನ್ನು ಮನೆಯಲ್ಲಿದ್ದ ಇಳಿವಯಸ್ಸಿನ ಅಜ್ಜಿ ತೆರವಿಗೆ ಅಡ್ಡ ಕುಳಿತ ಪ್ರಸಂಗವೂ ನಡೆಯಿತು. ಆದ್ರೆ ಪಾಲಿಕೆ ಅಧಿಕಾರಿಗಳು ಇದ್ಯಾವ್ದಕ್ಕೂ ಕ್ಯಾರೇ ಎನ್ನದೇ ಮನೆಯನ್ನ ಒಡೆದು ಕೆಡವಿದ್ರು.
ಇನ್ನು ಕೆಆರ್ ಪುರಂ ವ್ಯಾಪ್ತಿಯ ಕೇಂಬ್ರಿಡ್ಜ್ ಕಾಲೇಜು ಹಿಂಭಾಗ ಒತ್ತುವರಿ ತೆರವು ಕಾರ್ಯಾಚರಣೆ ವೇಳೆಯೂ ಮನೆ ಮಾಲೀಕರುಗಳಿಂದ ತೀವ್ರ ವಿರೋಧ ಕೇಳಿಬಂತು. ಮನೆ ತೆರವಿಗೆ ಮುಂದಾದ ಪಾಲಿಕೆ ಅಧಿಕಾರಿಗಳ ವಿರುದ್ಧ ಮಹಿಳೆಯರು ಕೆಂಡಕಾರಿದ್ರು. ಇನ್ನು ಈಬಾರಿಯೂ ಒತ್ತುವರಿ ತೆರವು ವೇಳೆ ಬಡವರ ಮೇಲೆಯೇ ಪಾಲಿಕೆ ಗಧಾ ಪ್ರಹಾರ ಮಾಡ್ತಿದೆ ಎಂಬ ಆರೋಪ ಆರಂಭದಲ್ಲೇ ಕೇಳಿಬಂತು. ಆದ್ರೆ ಪಾಲಿಕೆ ಇದಕ್ಕೆ ಬೇರೆಯದ್ದೇ ಕತೆ ಹೇಳಿ ಸಮಜಾಯಿಷಿ ನೀಡೋ ಪ್ರಯತ್ನವನ್ನೂ ಮಾಡ್ತು. ಸ್ಟೇ ಇದ್ದ ಆಸ್ತಿ ತೆರವಿಗೆ ಇನ್ನೊಮ್ಮೆ ತಹಶೀಲ್ದಾರ್ ನೋಟೀಸ್ ಕೊಟ್ಟು ಜಂಟಿ ಸರ್ವೆ ಮಾಡಿ ತೆರವು ಮಾಡ್ತಿವಿ. ಇದಕ್ಕೆ ಎರಡು ದಿನ ಕಾಲಾವಕಾಶ ಬೇಕು ಅಂತ ಪಾಲಿಕೆ ಮುಖ್ಯ ಇಂಜಿನಿಯರ್ ಬಸವರಾಜ ಕಬಾಡೆ ಹೇಳಿಕೆ ನೀಡಿದ್ರು.
ಒಟ್ಟಿನಲ್ಲಿ ಪಾಲಿಕೆ ರಾಜಕಾಲುವೆ ತೆರವು ಕಾರ್ಯಾಚರಣೆಯನ್ನ ಪುನಃ ಆರಂಭಿಸಿದೆ. ನಾಳೆಯೂ ಮಹಾದೇವಪುರ ವಲಯದ 10ಕ್ಕೂ ಹೆಚ್ಚುಕಡೆ ತೆರವು ಮಾಡಲು ಪಟ್ಟಿ ಸಿದ್ದಪಡಿಸಿಕೊಂಡಿದೆ. ಆದ್ರೆ ದೊಡ್ಡ ದೊಡ್ಡ ನುಂಗಣ್ಣರ ಮೇಲೆ ಅದ್ಯಾವಾಗ ಪಾಲಿಕೆ ಜೆಸಿಬಿಗಳು ಘರ್ಜಿಸ್ತವೆ ಅನ್ನೋದು ಸದ್ಯ ಪ್ರತಿಯೊಬ್ಬರ ಪ್ರಶ್ನೆಯಾಗಿದೆ.