ರಾಜ್ಯದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಪದೇ ಪದೇ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿ ಸುಮಾರು ೩೪ ಗಣ್ಯ ವ್ಯಕ್ತಿಗಳು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಜಂಟಿ ಬಹಿರಂಗ ಪತ್ರ ಬರೆದಿದ್ದಾರೆ.
ಈ ಪತ್ರಕ್ಕೆ ಇತಿಹಾಸಕಾರರಾದ ರಾಮಚಂದ್ರ ಗುಹಾ, ಪ್ರೊ.ಜಾನಕಿ ನಾಯರ್, ವಿಜ್ಞಾನಿಗಳಾದ ಪ್ರೊ.ಶರದ್ ಚಂದ್ರ ಲೇಲೆ, ಪ್ರೊ.ವಿನೋದ್ ಗೌರ್ ಮತ್ತು ಪ್ರೊ.ವಿದ್ಯಾನಂದ್ ನಂಜುಂಡಯ್ಯ ಸೇರಿದಂತೆ ರಾಜ್ಯದ 34 ಗಣ್ಯ ವ್ಯಕ್ತಿಗಳು ಸಹಿ ಹಾಕಿದ್ದಾರೆ. ಸಮಾಜಶಾಸ್ತ್ರಜ್ಞರಾದ ಎ.ಆರ್.ವಾಸವಿ ಮತ್ತು ಪ್ರೊ.ಸತೀಶ್ ದೇಶಪಾಂಡೆ, ಕನ್ನಡ ಲೇಖಕರಾದ ವಿವೇಕ ಶಾನಭಾಗ, ಪುರುಷೋತ್ತಮ ಬಿಳಿಮಲೆ ಮತ್ತು ಕೆ.ಪಿ.ಸುರೇಶ, ಹೋರಾಟಗಾರ ಬೆಜವಾಡ ವಿಲ್ಸನ್ ಬೆಂಬಲ ಸೂಚಿಸಿದ್ದಾರೆ.
ಬಹಿರಂಗ ಪತ್ರದಲ್ಲಿ, ʼಕಳೆದ ಕೆಲವು ತಿಂಗಳುಗಳಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ದಾರುಣ ಹತ್ಯೆಗಳಾಗಿವೆ. ನಿರಂತರ ದ್ವೇಷ ಭಾಷಣಗಳು ಜರಗಿವೆ. ಧಾರ್ಮಿಕ ಅಲ್ಪಸಂಖ್ಯಾತರ ಆರಾಧನೆಗಳ ಮೇಲೆ ಸಾರ್ವಜನಿಕ ಬೆದರಿಕೆ ಮತ್ತು ಧಾಳಿಗಳು ನಡೆದಿವೆ. ಮಾನಗೇಡಿ ಹತ್ಯೆಗಳು, ಅನೈತಿಕ ಪೊಲೀಸ್ ಗಿರಿ, ಮಹಿಳೆಯರ ಮೇಲೆ ಶಾಸಕರೇ ಅವಮಾನಕಾರಿ ಹೇಳಿಕೆ ನೀಡುತ್ತಿರುವ ವಿದ್ಯಾಮಾನಗಳು ನಡೆದಿವೆ. ಭಿನ್ನ ಧಾರ್ಮಿಕ ಗುಂಪುಗಳ ನಡುವೆ ಹಗೆತನದ ಜಗಳಗಳು ನಡೆದಿವೆ. ಇವೆಲ್ಲಾ ಘಟನೆಗಳಿಗೆ ಶಾಸಕರ ಸಂವಿಧಾನ ಬಾಹಿರ ಹೇಳಿಕೆಗಳೂ ಪ್ರೋತ್ಸಾಹ ನೀಡಿವೆ; ಹಾಗೇ ಇಂಥ ಅಂಚಿನ ಸಾಮಾಜ ವಿದ್ರೋಹಿ ಗುಂಪುಗಳ ವಿರುದ್ಧ ರಾಜ್ಯ ಸರಕಾರಿ ಯಂತ್ರವು ಕ್ರಮ ಕೈಗೊಳ್ಳಲು ವಿಫಲವಾಗಿರುವುದೂ ಕಾರಣವಾಗಿದೆ ಎಂದು ಬರೆಯಲಾಗಿದೆ.
ಮುಂದುವೆರೆದು, ಈ ಘಟನಾವಳಿಗಳು ಪ್ರಗತಿಪರ ರಾಜ್ಯವೆಂಬ ಕರ್ನಾಟಕದ ಸುದೀರ್ಘ ಚರಿತ್ರೆಗೇ ಕಳಂಕವಾಗಿದೆ. ಕರ್ನಾಟಕವು ಬಹುತ್ವದ ಸಮಾಜವೊಂದರ ಸೌಹಾರ್ದಯುತ ಬಾಳ್ವೆಗೆ ನೀರೆರೆದ ರಾಜ್ಯ. ಎಲ್ಲಾ ವರ್ಗಗಳ ಅಭ್ಯುದಯಕ್ಕೆ ಮಾದರಿ ಕಲ್ಯಾಣ ಕಾರ್ಯಕ್ರಮಗಳನ್ನೂ ಆರಂಭಿಸಿದ ರಾಜ್ಯ. ನಮ್ಮ ರಾಜ್ಯದ ಸಾಂಸ್ಕೃತಿಕ ಚರಿತ್ರೆಯೂ ಧಾರ್ಮಿಕ ಸಹಿಷ್ಣುತೆ ಮತ್ತು ಬಹುತ್ವಗಳನ್ನು ಸಂಭ್ರಮಿಸುವ ಚರಿತ್ರೆಯಾಗಿದೆ. ಬಸವಣ್ಣ, ಅಕ್ಕಮಹಾದೇವಿ, ಕನಕದಾಸ, ಪುರಂದರದಾಸ, ಶೀಶುನಾಳ ಶರೀಫ ಮುಂತಾದವರೇ ನಮ್ಮ ನಾಯಕರು. ಬೇಂದ್ರೆ, ಕುವೆಂಪು ಸಹಿತ ನಮ್ಮ ಸಾಹಿತಿಗಳು ಬಹು ಸಂಸ್ಕೃತಿಯ ಚಹರೆಗಳನ್ನೇ ಆಧಾರವಾಗಿಟ್ಟುಕೊಂಡ ಕರ್ನಾಟಕತ್ವವನ್ನು ಸಂಭ್ರಮಿಸಿದವರು. ಈ ಬಹುಸಂಸ್ಕೃತಿಯ ಹೆಣಿಗೆಯ ಮೂಲಕ ಸೃಷ್ಟಿಯಾದ ಒಂದು ಸೌಹಾರ್ದದ ಸಾಮಾಜಿಕ ಹಂದರ ನಮ್ಮ ಹೆಮ್ಮೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಹಾಗೆ ಈ ಸಹಿಷ್ಣುತೆ ಮತ್ತು ಹಂಚಿಕೊಂಡ ಸಹಬಾಳ್ವೆಯ ಪರಂಪರೆ ಈಗ ಛಿದ್ರವಾಗುತ್ತಿದೆ ಎಂಬುದನ್ನು ನಾವು ವಿಷಾದ ಮತ್ತು ಆತಂಕದಿಂದ ನೋಡಿ ಹೇಳುತ್ತಿದ್ದೇವೆ. ರಾಜ್ಯವು ಹಲವು ದಿಸೆಗಳಲ್ಲಿ ಈ ಗುರುತನ್ನು ಕಳೆದುಕೊಳ್ಳುತ್ತಿದೆ. ಆರ್ಥಿಕ, ಆಡಳಿತಾತ್ಮಕ ಮತ್ತು ರಾಜಕೀಯ ಆಯಾಮಗಳಲ್ಲಿ ಕರ್ನಾಟಕವು ತನ್ನ ಒಕ್ಕೂಟ ಭಾಗಿದಾರಿಯ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಇತ್ತೀಚೆಗಿನ ದಮನಕಾರಿ ಗೋಸಂರಕ್ಷಣಾ ಕಾಯಿದೆ ಮತ್ತು ಮತಾಂತರ ನಿಷೇಧ ಕಾಯಿದೆಗಳು ಧಾರ್ಮಿಕ ಅಲ್ಪಸಂಖ್ಯಾತರ ಆರ್ಥಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ದಮನಿಸುವ ಕಾಯಿದೆಗಳಾಗಿವೆ. ಶಾಂತಿ, ಸಹಿಷ್ಣುತೆ ಮತ್ತು ಸೌಹಾರ್ದತೆಗಳು ನಮ್ಮ ರಾಜ್ಯದ ಮೇರು ಗುರುತುಗಳಾಗಿ ಉಳಿದಿಲ್ಲ.
ಇನ್ನೂ ಒತ್ತಿಹೇಳಬೇಕಾದ ಅಂಶವೆಂದರೆ ಈ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ಹೂಡಿಕೆ, ಮತ್ತು ಉದ್ಯಮಗಳ ತಾಣವಾಗಿ ಕರ್ನಾಟಕಕ್ಕಿರುವ ಖ್ಯಾತಿಯೂ ಕೆಡುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳೂ ವರ್ಧಿಸುವುದು ಸಾಮಾಜಿಕ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣದಲ್ಲಿ ಎಂಬುದನ್ನು ನಾವು ಮರೆಯಬಾರದು ಎಂದು ಬರೆಯಲಾಗಿದೆ.
ಎಲ್ಲಾ ಕಾಯಿದೆ, ಕಾರ್ಯಕ್ರಮ, ನೀತಿಗಳ ಬಗ್ಗೆ ಪ್ರಜಾಸತ್ತಾತ್ಮಕವಾಗಿ ಪಾರದರ್ಶಕವಾಗಿ ಚರ್ಚಿಸಬೇಕಾದ್ದು ಚುನಾಯಿತ ಪ್ರತಿನಿಧಿಗಳಾಗಿ ಮುಖ್ಯಮಂತ್ರಿಗಳ ಜವಾಬ್ದಾರಿಯಾಗಿದೆ. ಸಂಕುಚಿತ ಕೋಮು ಹಿತಾಸಕ್ತಿಯ ಅಜೆಂಡಾಗಳ ಯಾರಿಂದಲೋ ಪಡೆದ ಸಲಹೆಗಳನ್ನು ಅನುಷ್ಠಾನಗೊಳಿಸುವುದು ರಾಜ್ಯದ ಮತ್ತು ರಾಜ್ಯದ ಪ್ರಜೆಗಳ ಹಿತಾಸಕ್ತಿಗೆ ಮಾರಕ. ರಾಜ್ಯದ ಇತ್ತೀಚೆಗಿನ ಇಂಥಾ ನೇತ್ಯಾತ್ಮಕ ಘಟನಾವಳಿಗಳನ್ನು ನೀವು ಗಂಭೀರವಾಗಿ ಪುನರ್ವಿಮರ್ಶಿಸಿ, ಕಾನೂನಿನ ಆಡಳಿತ, ಸಂವಿಧಾನದ ತತ್ವಗಳು , ನಾಗರಿಕರ ಹಕ್ಕುಗಳು ಮತ್ತು ಮೂಲಭೂತ ಮಾನವೀಯತೆಯ ಲಕ್ಷಣಗಳನ್ನು ಮರಳಿ ಸ್ಥಾಪಿಸಬೇಕೆಂದು ವಿನಂತಿಸುತ್ತೇವೆ.
ಈ ಸವಾಲುಗಳನ್ನು ಎದುರಿಸುವ ನಿಮ್ಮ ಸಾಮರ್ಥ್ಯವೇ ಭವಿಷ್ಯದಲ್ಲಿ ನಿಮ್ಮನ್ನು ಅಳೆಯುವ ಮಾನದಂಡಗಳು. ಈ ವಿಶೇಷ ದಿನದಂದು ನಾವು ಗಣರಾಜ್ಯವಾಗಿ ಮತ್ತು ಒಕ್ಕೂಟದ ಒಂದು ರಾಜ್ಯವಾಗಿ ನಮ್ಮ ವಿಶೇಷ ಸ್ಥಾನಮಾನವನ್ನು ಸಂಭ್ರಮಿಸಿ ಆಚರಿಸುತ್ತಿದ್ದೇವೆ. ನೀವು ಸಾಮಾಜಿಕ ಸೌಹಾರ್ದತೆ, ನ್ಯಾಯಯುತ ಕಾನೂನುಗಳು ಮತ್ತು ರಾಜ್ಯಯಂತ್ರದ ಪ್ರಜಾಸತ್ತಾತ್ಮಕ ನಿರ್ವಹಣೆಯನ್ನು ಜಾರಿಗೊಳಿಸುತ್ತೀರೆಂಬ ಆಶಯ ನಮಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಕುರಿತು ಚಿಂತಕ ಕೆ.ಪಿ.ಸುರೇಶ್ ಅವರನ್ನು ʼಪ್ರತಿಧ್ವನಿʼ ಸಂಪರ್ಕಿಸಿದಾಗ, “ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಗ್ಗೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಈ ಪತ್ರ ಚಳವಳಿಗೆ ನಾವು ಬೆಂಬಲ ಸೂಚಿಸಿದ್ದೇವೆ,” ಎಂದರು.
ದೇಶದಲ್ಲಿ ದ್ವೇಷ ಭಾಷಣ ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಭಾಷೆಯ ಪ್ರಯೋಗವಾಗುತ್ತಿದೆ. ಇದು ಅಕ್ಷರ ಸಂಸ್ಕೃತಿಗೆ ಮಾಡುತ್ತಿರುವ ಅವಮನಾನ. ದ್ವೇಷ ಭಾಷಣಕ್ಕೆ ದೇಶದಲ್ಲಿ ಕಡಿವಾಣವೇ ಇಲ್ಲದಂತಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳದೇ ಸಮಾಜಕ್ಕೆ ಸರ್ಕಾರ ಯಾವ ರೀತಿ ಸಂದೇಶ ಕೊಡುತ್ತಿದೆ? ಕೂಡಲೇ ನ್ಯಾಯಾಂಗ ವ್ಯವಸ್ಥೆ ಇದನ್ನು ಗಮನಿಸಿ ಪ್ರಜಾಪ್ರಭುತ್ವದ ಆಶಯವನ್ನು ಎತ್ತಿಹಿಡಿಯಬೇಕು ಎಂದು ಜೆಎನ್ ಯು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮಾಜಿ ಮುಖ್ಯಸ್ಥರು ಹಾಗೂ ಚಿಂತಕ ಪುರುಷೋತ್ತಮ ಬಿಳಿಮಲೆ ʼಪ್ರತಿಧ್ವನಿʼಗೆ ಮಾತನಾಡುತ್ತ ಆಗ್ರಹಿಸಿದರು.