ಪಂಜಾಬ್ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಬಾಕಿ ಉಳಿದಿರುವುದು ಮೂರೇ ದಿನ. ಆದರೂ ಪಂಜಾಬ್ ಚುನಾವಣೆ ಮೇಲೆ ತನ್ನದೇಯಾದ ಪ್ರಭಾವ ಹೊಂದಿರುವ ಮಲೇರ್‌ಕೋಟ್ಲಾ ಜಿಲ್ಲೆಯ ಅಹಮದ್‌ಗಢದಲ್ಲಿರುವ ಡೇರಾ ಸಚ್ಚಾ ಸೌದಾ ಶಾಖೆ ಮೌನವಾಗಿದೆ. ಡೇರಾ ಸಚ್ಚಾ ಸೌದಾದ ಕೇರ್‌ಟೇಕರ್ ಎಂದು ಕರೆಯಲ್ಪಡುವವರು ಮಾತ್ರ ಸಾಂದರ್ಭಿಕವಾಗಿ ಅಲ್ಲಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಒಲವು ಆಡಳಿತಾರೂಢ ಕಾಂಗ್ರೆಸ್, ಸ್ಥಳೀಯ ಪಕ್ಷ ಅಖಾಲಿದಳ ಹಾಗೂ ಹೊಸದಾಗಿ ನೆಲೆ ಕಂಡುಕೊಳ್ಳುತ್ತಿರುವ ಆಮ್ ಆದ್ಮಿ ಪಕ್ಷದ ಪೈಕಿ ಯಾರಿಗೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಡೇರಾದ ‘ಪ್ರೇಮಿ’ ಅಥವಾ ‘ಸೇವದಾರ್’ ಎಂದು ಕರೆಯಲ್ಪಡುವ ಬಲದೇವ್ ಸಿಂಗ್ ಅವರು, ಪಂಜಾಬ್ ಚುನಾವಣೆಗೆ ಮುಂಚಿತವಾಗಿ ಬಾಬಾ ರಾಮ್ ರಹೀಮ್ ಅವರನ್ನು 21 ದಿನಗಳ ಪೆರೋಲ್‌ನಲ್ಲಿ (ಫೆಬ್ರವರಿ 7 ರಿಂದ ಫೆಬ್ರವರಿ 27 ರವರೆಗೆ) ಬಿಡುಗಡೆ ಮಾಡಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ. ಈ ಮುಖಾಂತರ ಚುನಾವಣೆ ಬಗ್ಗೆ ಬಾಬಾ ರಾಮ್ ರಹೀಮ್ ತನ್ನದೇಯಾದ ಸಂದೇಶ ನೀಡಬಲ್ಲರು ಎಂಬ ಸುಳಿವನ್ನು ಬಲದೇವ್ ಸಿಂಗ್ ಕೊಡುತ್ತಾರೆ.
ಡೇರಾ ಸಚ್ಚಾ ಸೌದಾ ಪಂಜಾಬ್‌ನಲ್ಲಿ ಸುಮಾರು 40 ಲಕ್ಷ ಅನುಯಾಯಿಗಳನ್ನು ಹೊಂದಿದೆ. ಅಲ್ಲದೆ ಕನಿಷ್ಠ 40 ವಿಧಾನಸಭಾ ಕ್ಷೇತ್ರಗಳ ಮೇಲೆ ತನ್ನ ಪ್ರಭಾವವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ ರಾಜಕೀಯವಾಗಿ ನಿರ್ಣಾಯಕವಾಗಿರುವ ಮಾಲ್ವಾ ಪ್ರದೇಶದಲ್ಲಿ. ಪಂಜಾಬ್ ಜೊತೆಗೆ ಹರಿಯಾಣ ಮತ್ತು ರಾಜಸ್ಥಾನಗಳಲ್ಲಿಯೂ ಕೆಲವೆಡೆ ತನ್ನ ಪ್ರಭಾವವನ್ನು ಹೊಂದಿದೆ. ಡೇರಾ ಸಚ್ಚಾ ಸೌದಾ ಕೇವಲ ಧಾರ್ಮಿಕ ಅಥವಾ ಸಾಮಾಜಿಕ ಸೇವಾ ಸಂಸ್ಥೆಯಾಗಿಲ್ಲ, ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ಜಾತಿಗಳ ಪರ ಹಲವಾರು ಕೆಲಸ ಮಾಡುತ್ತಿದೆ. ಅದೇ ಕಾರಣಕ್ಕೆ ಆ ಸಮುದಾಯಗಳಲ್ಲಿ ಡೇರಾ ಸಚ್ಚಾ ಸೌದಾ ರಾಜಕೀಯವಾಗಿಯೂ ಪ್ರಭಾವಶಾಲಿಯಾಗಿದೆ. ಡೇರಾಗಳು ವರ್ಷಗಳಿಂದ ತಮ್ಮ ಅನುಯಾಯಿಗಳ ಮತದಾನದ ಮಾದರಿಯ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಡೇರಾ ಕಾರ್ಯಕರ್ತ ಬಲದೇವ್ ಸಿಂಗ್ ಅವರು, ‘ನಮ್ಮಲ್ಲಿ ರಾಜಕೀಯ ಸಮಿತಿ ಇದೆ ಮತ್ತು ಅದು ನಮಗೆ ಮತ್ತು ನಮ್ಮ ಸಹವರ್ತಿ ಗ್ರಾಮಸ್ಥರಿಗೆ ಯಾವ ಪಕ್ಷಕ್ಕೆ ಮತ ಹಾಕಬೇಕೆಂದು ಹೇಳುತ್ತದೆ. ಡೇರಾ ಸೂಚನೆಗೆ ಅನ್ವಯವಾಗಿಯೇ ನಾವು ಮತ ಚಲಾಯಿಸುತ್ತೇವೆ’ ಎಂದು ಹೇಳುತ್ತಾರೆ.
2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಡೇರಾ ಸಚ್ಚಾ ಸೌದಾ ಮತದಾರರ ಮೇಲೆ ಪ್ರಭಾವ ಬೀರಿತ್ತು. ಬಹಳ ಲೆಕ್ಕಾಚಾರ ಹಾಕಿ ಕೆಲವು ಕಡೆ ಅಕಾಲಿದಳ ಮತ್ತು ಹಲವು ಕಡೆ ಕಾಂಗ್ರೆಸ್ ಅನ್ನು ಮೌನವಾಗಿ ಬೆಂಬಲಿಸಿತ್ತು. ಡೇರಾ ಸಚ್ಚಾ ಸೌದಾ ಅಭ್ಯರ್ಥಿಗಳ ಮುಖ ನೋಡಿಕೊಂಡು ಕೂಡ ಬೆಂಬಲ ವ್ಯಕ್ತಪಡಿಸುತ್ತದೆ. ಕಳೆದ ಬಾರಿ ಹಾಗೆ ಮಾಡಿದ ಕಾರಣಕ್ಕಾಗಿಯೇ ಪಂಜಾಬಿನಲ್ಲಿ ಕಾಂಗ್ರೆಸ್ ಸರ್ಕಾರ ಬರಲು ಸಾಧ್ಯವಾಯಿತು. ಕಾಂಗ್ರೆಸ್ ಈ ಬಾರಿಯೂ ಅಂತಹುದೇ ನಿರೀಕ್ಷೆ ಇಟ್ಟುಕೊಂಡಿದೆ. ಆದರೆ ಈ ಬಾರಿ ಯುವ ಮತದಾರರು ಅದರಲ್ಲೂ ಡೇರಾ ಸಚ್ಚಾ ಸೌದಾದ ಅನುಯಾಯಿಗಳ ಪೈಕಿ ಕೆಲವರು ಹೊಸ ಪಕ್ಷ ಆಮ್ ಆದ್ಮಿ ಪರ ಒಲವು ತೋರುತ್ತಿದ್ದಾರೆ. ಹಾಗಾಗಿಯೇ ಡೇರಾ ನಿಲುವು ಪ್ರಕಟಿಸಲು ತಡ ಮಾಡುತ್ತಿದೆ ಎಂದು ಕೂಡ ಹೇಳಲಾಗುತ್ತಿದೆ.

ಹರಿಯಾಣ ಸರ್ಕಾರವು ರಾಮ್ ರಹೀಮ್ ಅವರಿಗೆ ಜೈಲಿನಲ್ಲಿ ನೀಡಿದ ಬೆಂಬಲದ ಕಾರಣಕ್ಕೆ ಪಂಜಾಬಿನಲ್ಲಿ ತನ್ನ ಪರವಾಗಿ ನಿಲುವು ತೆಗೆದುಕೊಳ್ಳಬಹುದು ಎಂದು ಬಿಜೆಪಿ ನಿರೀಕ್ಷೆ ಇಟ್ಟುಕೊಂಡಿದೆ. ಡೇರಾ ಸಚ್ಚಾ ಸೌದಾವನ್ನು ಮಾತ್ರವಲ್ಲದೆ ಇತರ ಪ್ರಭಾವಿ ಪಂಗಡದ ನಾಯಕರನ್ನೂ ತನ್ನತ್ತ ಸೆಳೆಯಲು ಬಿಜೆಪಿ ಬಯಸಿದೆ. ಉದಾಹರಣೆಗೆ ಪಂಜಾಬ್‌ಗೆ ಭೇಟಿ ನೀಡುವ ಒಂದು ದಿನದ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಆರು ಶಕ್ತಿಶಾಲಿ ಡೇರಾಗಳಲ್ಲಿ ಒಂದಾದ ರಾಧಾ ಸೋಮಿ ಸತ್ಸಂಗ್ ಬಿಯಾಸ್‌ನ ಬಾಬಾ ಗುರಿಂದರ್ ಸಿಂಗ್ ಧಿಲ್ಲೋನ್ ಅವರನ್ನು ಭೇಟಿ ಮಾಡಿದ್ದರು.
ಆದರೆ ಅಹಮದ್‌ಗಢದ ಗ್ರಾಮಸ್ಥರು ತಮ್ಮ ಅಗತ್ಯತೆಗಳು ಎಲ್ಲರಂತೆಯೇ ಇದೆ ಎಂದು ಹೇಳುತ್ತಾರೆ. ನಮಗೆ ಉದ್ಯೋಗಗಳು ಮತ್ತು ಉತ್ತಮ ಸೌಲಭ್ಯಗಳು ಬೇಕು. ಬಾಬಾ ರಾಮ್ ರಹೀಮ್ ಅವರು ನಮ್ಮ ಬೇಡಿಕೆಯನ್ನು ರಾಜಕೀಯ ಪಕ್ಷಗಳಿಂದ ಖಚಿತಪಡಿಸಿಕೊಳ್ಳುತ್ತಾರೆ. ನಂತರ ಯಾರಿಗೆ ಮತ ನೀಡಬಹುದು ಎಂದು ಹೇಳುತ್ತಾರೆ. ಅವರಿಗೆ ಮತ ಹಾಕುತ್ತೇವೆ ಎಂದು ಮಾಲ್ವಾ ಭಾಗದ ಬಹುತೇಕ ಜನರ ಅಭಿಪ್ರಾಯವಾಗಿದೆ. ಸಣ್ಣ ಗುಂಪುಗಳಲ್ಲಿ, ಕಡಿಮೆ ಆದಾಯ ಹೊಂದಿರುವ ಸಮುದಾಯಗಳಲ್ಲಿ ಅಥವಾ ಇನ್ನಿತರ ವರ್ಗಗಳು ಸಾಮಾನ್ಯವಾಗಿ ಡೇರಾ ಸಚ್ಚಾ ಸೌದಾ ಹೇಳುವ ಮತದಾನದ ಮಾದರಿಯನ್ನು ಅನುಸರಿಸುತ್ತವೆ. ಆದುದರಿಂದ ಈಗ ರಾಜಕೀಯ ಪಕ್ಷಗಳು ಡೇರಾ ಸಚ್ಚಾ ಸೌದಾದ ನಡೆಯನ್ನು ಗಮನಿಸುತ್ತಿವೆ.
ಅತ್ಯಾಚಾರ ಆರೋಪ ಎದುರಿಸುತ್ತಿರುವ, ಜಾಮೀನಿನ ಮೇಲೆ ಹೊರಗಡೆ ಇರುವ ಬಾಬಾ ರಾಮ್ ರಹೀಮ್ ಅವರನ್ನು ಎಂದಿನಂತೆ ನೇರವಾಗಿ ಭೇಟಿಯಾಗಿ ಬೆಂಬಲ ಕೇಳಲು ರಾಜಕೀಯ ಪಕ್ಷಗಳು ಹಿಂಜರಿಯುತ್ತಿವೆ. ಅತ್ಯಾಚಾರ ಪ್ರಕರಣದಲ್ಲಿ ಆದ ಹಿನ್ನಡೆ ಮತ್ತು ವರ್ಷಗಳ ಕಾಲ ಜೈಲಿನಲ್ಲೇ ಇದ್ದುದರಿಂದ ಹಾಗೂ ಈಗ ನೇರವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲದಿರುವ ಕಾರಣಕ್ಕೆ ಬಾಬಾ ರಾಮ್ ರಹೀಮ್ ವರ್ಚಸ್ಸು ಕೂಡ ಕೊಂಚ ಕುಂದಿರುವುದು ನಿಜ. ಮೇಲಾಗಿ ರಾಜ್ಯದ ನಿರ್ಣಾಯಕ ಮತದಾರರಾಗಿರುವ ದಲಿತ ಸಮುದಾಯದಲ್ಲಿ ಪಂಜಾಬಿನ ಮೊದಲ ದಲಿತ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ ಚರಂಜಿತ್ ಸಿಂಗ್ ಚನ್ನಿ ಅವರು ಕೂಡ ಈ ಬಾರಿ ಡೇರಾ ಅನುಯಾಯಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಲಾಗುತ್ತಿದೆ.
ಕೇಂದ್ರ ಚುನಾವಣಾ ಆಯೋಗ ಗುರು ರವಿದಾಸ್ ಜಯಂತಿ ಸಮಯದಲ್ಲೇ ಪಂಜಾಬಿನ ವಿಧಾನಸಭಾ ದಿನಾಂಕವನ್ನು (ಫೆಬ್ರವರಿ 14) ನಿಗದಿ ಮಾಡುತ್ತಿದ್ದಂತೆ ಎತ್ತೆಚ್ಚುಕೊಂಡ ಮುಖ್ಯಮಂತ್ರಿ ಚರಣಜಿತ್ ಚನ್ನಿ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಪಂಜಾಬಿನಲ್ಲಿ ಗುರು ರವಿದಾಸ್ ಜಯಂತಿ ಅತ್ಯಂತ ದೊಡ್ಡ ಆಚರಣೆ. ಆ ಸಂದರ್ಭದಲ್ಲಿ ಅಂದರೆ ಫೆಬ್ರವರಿ 10ರಿಂದ ಫೆಬ್ರವರಿ 16ರವರೆಗೆ ರಾಜ್ಯದ ಪರಿಶಿಷ್ಠ ಜಾತಿ ಸಮುದಾಯದ ಭಕ್ತರು ಉತ್ತರ ಪ್ರದೇಶದ ವಾರಣಾಸಿಗೆ ತೆರಳುತ್ತಾರೆ. ಸುಮಾರು 20 ಲಕ್ಷ ಮತದಾರರು ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಅವರು ಮತ ಚಲಾವಣೆಯಿಂದ ಅಥವಾ ಗುರು ರವಿದಾಸ್ ಜಯಂತಿ ಆಚರಣೆಯಿಂದ ವಂಚಿತರಾಗಬೇಕಾಗುತ್ತದೆ. ಆದುದರಿಂದ ಮತದಾನದ ದಿನಾಂಕವನ್ನು ಮುಂದೂಡಬೇಕು ಎಂದು ಪತ್ರ ಬರೆದಿದ್ದರು. ಚರಣಜಿತ್ ಸಿಂಗ್ ಚನ್ನಿ ಅವರ ಮನವಿಗೆ ಸ್ಪಂದಿಸಿದ ಕೇಂದ್ರ ಚುನಾವಣಾ ಆಯೋಗ ಮತದಾನದ ದಿನಾಂಕವನ್ನು ಫೆಬ್ರವರಿ 14ರ ಬದಲು ಫೆಬ್ರವರಿ 20ಕ್ಕೆ ನಿಗದಿ ಮಾಡಿತು. ಚರಣಜಿತ್ ಸಿಂಗ್ ಚನ್ನಿ ಅವರ ಈ ನಡೆ ಬಗ್ಗೆ ದಲಿತ ಸಮುದಾಯದಲ್ಲಿ ವ್ಯಾಪಕವಾದ ಮೆಚ್ಚುಗೆ ಇದೆ. ಇದು ಫಲಿತಾಂಶದ ಮೇಲೂ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.
			
                                
                                
                                
