ಮಂಗಳೂರು : ಸಂಸದ ಸ್ಥಾನದಿಂದ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿರುವ ವಿಚಾರವಾಗಿ ಆಕ್ರೋಶ ಹೊರಹಾಕಿದ ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಕಳ್ಳರನ್ನು ಕಳ್ಳರೆಂದು ಕರೆದರೂ ಅದನ್ನು ತಪ್ಪು ಎಂದು ಕರೆಯುವ ಮನಸ್ಥಿತಿಯ ಜನರು ಬಿಜೆಪಿಯಲ್ಲಿದ್ದಾರೆಂದು ಕಿಡಿಕಾರಿದ್ದಾರೆ .
56 ಇಂಚು ನರೇಂದ್ರ ಮೋದಿ ಈ ದೇಶದಲ್ಲಿ ರಣಹೇಡಿ ಎಂದು ತೋರಿಸಿಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ಮೇಲೆ ತೆಗೆದುಕೊಳ್ಳಲಾಗಿರುವ ಕಾನೂನು ಕ್ರಮಗಳ ವಿರುದ್ಧ ನಾವು ರಾಜಕೀಯವಾಗಿ ಹೋರಾಡುತ್ತೇವೆ. ಕೋರ್ಟ್ನಲ್ಲಿ ನ್ಯಾಯದೇವತೆ ಕಣ್ಣಿನಲ್ಲಿದ್ದ ಕಪ್ಪು ಪಟ್ಟಿಯನ್ನು ಇವರು ಬಿಚ್ಚಿದ್ದಾರೆ. ಬಿಜೆಪಿಯು ಪ್ರಜಾಪ್ರಭುತ್ವದ ಎಲ್ಲಾ ನೀತಿ ಸಂಹಿತೆಗಳನ್ನು ಗಾಳಿಗೆ ತೂರುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ನರಮೇಧ, ಕೈ – ಕಾಲು ಕತ್ತರಿಸಬೇಕು, ಪಾಕಿಸ್ತಾನಕ್ಕೆ ಓಡಿಸಬೇಕು ಎಂದು ಹೇಳಿದವರ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ಇಲ್ಲಿಯವರೆಗೆ ಕೈಗೊಂಡಿಲ್ಲ. ನರಮೇಧದ ಭಾಷಣ ಮಾಡಿದವರು ಇಂದಿಗೂ ಆರಾಮಾಗಿ ತಿರುಗಾಡುತ್ತಿದ್ದಾರೆ. ಬಿಜೆಪಿಗೊಂದು ಕಾನೂನು ಬೇರೆಯವರಿಗೆ ಒಂದು ಕಾನೂನು ಎಂಬ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ ಎಂದು ಬಿ.ಕೆ ಹರಿಪ್ರಸಾದ್ ಆಕ್ರೋಶ ಹೊರ ಹಾಕಿದ್ದಾರೆ.
ಮುಸ್ಲಿಮರ ಮೀಸಲಾತಿಗೆ ಕತ್ತರಿ ಹಾಕಿದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಸಂಪೂರ್ಣ ಮೀಸಲಾತಿಯನ್ನು ರದ್ದುಗೊಳಿಸಲು ಬಿಜೆಪಿ ಮಾಡಿರುವ ಹುನ್ನಾರ ಇದಾಗಿದೆ. 2015ರಲ್ಲಿ ಬಿಹಾರದಲ್ಲಿ ಮೋಹನ್ ಭಾಗವತ್ ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆಯುತ್ತೇವೆ ಎಂದಿದ್ದರು. ಈ ಸಂವಿಧಾನದ ಅಡಿಯಲ್ಲಿ ಸರ್ಕಾರ ನಡೆಸಲು ಸಾಧ್ಯವಿಲ್ಲ ಅಂತಾ ಜೋಷಿ ಹೇಳಿದ್ದರು. ಬಿಜೆಪಿಯ ಸೂತ್ರಧಾರಿಗಳ ಹೇಳಿಕೆಯಂತೆ ಪಾತ್ರಧಾರಿಗಳು ಕೆಲಸ ಮಾಡ್ತಿದ್ದಾರೆ. ಸಂಪೂರ್ಣ ಮೀಸಲಾತಿ ವಿರೋಧಿ ನೀತಿ ಬಿಜೆಪಿಯದ್ದು ಎಂದು ಕಿಡಿಕಾರಿದ್ದಾರೆ.









