ಹೊಸದಿಲ್ಲಿ: ಧ್ವೇಷಭಾಷಣದ ಬಗ್ಗೆ ಯಾವುದೇ ದೂರು ನೀಡದಿದ್ದರೂ ಸಹ ಪ್ರಕರಣಗಳನ್ನು ದಾಖಲಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸುವ ತನ್ನ 2022 ರ ಆದೇಶದ ವ್ಯಾಪ್ತಿಯನ್ನು ಸುಪ್ರೀಂ ಕೋರ್ಟ್ ಇಂದು ವಿಸ್ತರಿಸಿದೆ. ಅಲ್ಲದೆ, ಪ್ರಕರಣಗಳನ್ನು ದಾಖಲಿಸುವಲ್ಲಿ ವಿಳಂಬ ಮಾಡಿದರೆ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಸಿದೆ.
ಇದನ್ನು ಗಂಭೀರ ಅಪರಾಧ ಎಂದು ಬಣ್ಣಿಸಿದ ಸುಪ್ರೀಂ ಕೋರ್ಟ್, ದ್ವೇಷದ ಭಾಷಣವು ದೇಶದ ಜಾತ್ಯತೀತ ರಚನೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದೆ.
ದ್ವೇಷ ಭಾಷಣ ಅಪರಾಧಗಳ ಕುರಿತ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವು, ದ್ವೇಷದ ಭಾಷಣಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯ ಕುರಿತು ಪೀಠವು ಈ ಹಿಂದೆ ಮಹಾರಾಷ್ಟ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿತ್ತು.
ದ್ವೇಷ ಭಾಷಣ ಪ್ರಕರಣಗಳಲ್ಲಿ ಸ್ವಯಂ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಲು ಅಕ್ಟೋಬರ್ 2022 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಯುಪಿ, ದೆಹಲಿ ಮತ್ತು ಉತ್ತರಾಖಂಡ ಸರ್ಕಾರಗಳ ವಿರುದ್ಧ ಮಾತ್ರ ರವಾನಿಸಲಾಗಿದೆ.
“ಧ್ವೇಷ ಭಾಷಣ ಮಾಡುವವರ ಧರ್ಮವನ್ನು ಲೆಕ್ಕಿಸದೆ ಅಂತಹ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ನಾವು ಸ್ಪಷ್ಟಪಡಿಸುತ್ತೇವೆ, ಇದರಿಂದಾಗಿ ಪೀಠಿಕೆಯಿಂದ ಕಲ್ಪಿಸಲ್ಪಟ್ಟಿರುವ ಭಾರತದ ಜಾತ್ಯತೀತ ಪಾತ್ರವನ್ನು ಸಂರಕ್ಷಿಸಿದಂತಾಗುತ್ತದೆ” ಎಂದು ಪೀಠವು ಇಂದು ತನ್ನ ಆದೇಶದಲ್ಲಿ ಹೇಳಿದೆ.