ಕರುನಾಡು ಕ್ರಮೇಣವಾಗಿ ಓಮೈಕ್ರಾನ್ ಕಬಂಧಬಾಹುವಿಗೆ ಸೇರಿಕೊಳ್ಳುತ್ತಿರುವ ಲಕ್ಷಣಗಳು ಪ್ರತಿ ದಿನವೂ ಗೋಚರವಾಗ ತೊಡಗಿದೆ. ರಾಜ್ಯದ ಮೂಲಕವೇ ದೇಶಕ್ಕೆ ಎಂಟ್ರಿಕೊಟ್ಟ ವೈರಸ್ ಸದ್ದಿಲ್ಲದೆ ಎಲ್ಲೆಡೆಆವರಿಸುತ್ತಿದೆ. ಒಂದಲ್ಲಾ ಎರಡಲ್ಲಾ ಒಂದೇ ದಿನ ಐದು ಹೊಸ ಓಮೈಕ್ರಾನ್ ಕೇಸ್ ಗಳು ಪತ್ತೆಯಾಗಿದ್ದು, ರಾಜ್ಯಕ್ಕೆ ಓಮೈಕ್ರಾನ್ ಕರಿನೆರಳು ಆವರಿಸಿದೆ. ಕೇಸ್ ಜಾಸ್ತಿಯಾಗ್ತಿದ್ದಂತೆ ಈ ಓಮೈಕ್ರಾನ್ ಕಡಿವಾಣಕ್ಕೆ ಸರ್ಕಾರ ಸಜ್ಜಾಗುತ್ತಿದೆ. ಜೊತೆಗೆ ಬೆಂಗಳೂರಿನ ಮಟ್ಟಕ್ಕೆ ಬಿಬಿಎಂಪಿ ಪಣತೊಟ್ಟಿದೆ.
ರೂಪಾಂತರಿ ವೈರಸ್ ಗೆ ಕಡಿವಾಣ ಹಾಕಲು ಟಫ್ ರೂಲ್ಸ್ ಗೆ ತಯಾರಿ
ಓಮೈಕ್ರಾನ್ ವೈರಸ್ ಸೈಲೆಂಟಾಗಿ ಇಡೀ ರಾಜ್ಯಕ್ಕೆ ಕಂಟಕವಾಗುವತ್ತ ದಾಪುಗಾಲಿಡುತ್ತಿದೆ. ರಾಜಧಾನಿಯಲ್ಲಿ ಆ್ಯಕ್ಟೀವ್ ಆಗಿದ್ದ ವೈರಸ್, ರಾಜ್ಯದೆಲ್ಲೆಡೆ ಪಸರಿಸುತ್ತಿದ್ದು ಐದು ಹೊಸ ಓಮೈಕ್ರಾನ್ ಕೇಸ್ ಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ 19ಕ್ಕೇರಿದ್ದು ಆತಂಕ ಹೆಚ್ಚಾಗಿದೆ. ಧಾರವಾಡದ 54 ವರ್ಷದ ಪುರುಷ, ಭದ್ರಾವತಿಯ 20 ವರ್ಷದ ಯುವತಿ, ಉಡುಪಿಯ 82, 73 ವರ್ಷದ ವೃದ್ಧ ದಂಪತಿಗಳು ಹಾಗೂ ಮಂಗಳೂರಿನ 19 ವರ್ಷದ ಯುವತಿಗೆ ೋಮೈಕ್ರಾನ್ ಸೋಂಕು ಹೊಸದಾಗಿ ದೃಢವಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
ಓಮೈಕ್ರಾನ್ ಕಡಿವಾಣ ಸರ್ಕಾರಕ್ಕೆ ಸವಾಲಾಗಿ ಎದುರಾಗಿದೆ. ಈ ಹೊಸ ತಳಿಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ. ಇನ್ನು ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಸುಧಾಕರ್ ಆತಂಕ ಹೊರ ಹಾಕಿದ್ದಾರೆ. ಈ ತಳಿ ವೇಗವಾಗಿ ಹರಡುತ್ತದೆ. ಇಂತಹ ತಳಿಯನ್ನ ನೋಡೆಯಿಲ್ಲ ಅಂತ WHO ಹೇಳಿದೆ. ಜೊತೆಗೆ ಹಲವು ಮಾರ್ಗದರ್ಶನಗಳನ್ನು ನೀಡಿದೆ. ಆ ರೀತಿಯೆ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಬೇರೆ 79-80 ದೇಶದಲ್ಲಿ ನೋಡಿದಾಗ ವೇಗವಾಗಿ ಹರಡುತ್ತಿರೋದು ಗೊತ್ತಾಗುತ್ತಿದೆ. ನಮ್ಮ ರಾಜ್ಯದಲ್ಲೇ ಸಧ್ಯ 19 ಜನರಲ್ಲಿ ಓಮೈಕ್ರಾನ್ ಪತ್ತೆಯಾಗಿದೆ. ಆ ಪೈಕಿ ಅನೇಕ ಮಂದಿ ವಿದೇಶಿ ಪ್ರಯಾಣ ಮಾಡಿ ಬಂದವರು. ಈ ವೈರಸ್ ನಿಯಂತ್ರಿಸಬೇಕಾದರೆ, ಬಹಿರಂಗ ಸಭೆ, ದೊಡ್ಡ ಒಳಾಂಗಣ ಸಭಾ ಕಾರ್ಯಕ್ರಮಗಳಿಗೆ ಒಂದೆರೆಡು ತಿಂಗಳು ಕಾಲ ಕಡಿವಾಣ ಹಾಕಬೇಕು. ನಿಯಂತ್ರಣ ಮಾಡದೇ ಹೋದರೆ ಮುಂದೆ ಸಮಸ್ಯೆಯಾಗುತ್ತದೆ. ಹೆಚ್ಚು ಕೇಸ್ ಆದಾಗ ಆಸ್ಪತ್ರೆ ಗಳ ಮೇಲೆ ಲೋಡ್ ಆಗುತ್ತೆ. ಹೆಚ್ಚು ಜನರಿಗೆ ಹರಡಿದಾಗ ನಿಯಂತ್ರಿಸೋದು ಸವಾಲಾಗುತ್ತದೆ ಎಂದು ಹೇಳೊ ಮೂಲಕ ಟಫ್ ರೂಲ್ಸ್ ಜಾರಿಯ ಸುಳಿವು ಬಿಟ್ಟು ಕೊಟ್ಟಿದ್ದಾರೆ.

ಓಮೈಕ್ರಾನ್ ಕಪಿಮುಷ್ಟಿಗೆ ಒಳಗಾಗುತ್ತಾ ಬೆಂಗಳೂರು
ಇತ್ತ ಓಮೈಕ್ರಾನ್ ಅಬ್ಬರದ ನಡುವೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಮುಂದಿನ ದಿನಗಳಲ್ಲಿ ಕೊರೋನಾ ಕೇಸ್ ಹೆಚ್ಚಳ ಕಾಣಲಿದೆ ಎಂಬ ಆತಂಕ ಪಾಲಿಕೆಗೆ ಇದೆ. ಇನ್ನು ಈ ಬಗ್ಗೆ ಮಾತನಾಡಿರೊ ಪಾಲಿಕೆ ಆಯುಕ್ತರು, ವಿದೇಶಗಳಲ್ಲಿ ಪ್ರತಿದಿನ 70-80 ಸಾವಿರ ಕೇಸ್ ಗಳು ಹೆಚ್ಚಳ ಆಗುತ್ತಿದೆ. ಲಂಡನ್ ನಿಂದ ಈ ಅಂಕಿ ಅಂಶ ಅಪ್ಡೇಟ್ ಆಗುತ್ತಿದೆ. ನಮ್ಮ ದೇಶಕ್ಕೂ ವಿಶ್ವದ ಜತೆ ಸಂಪರ್ಕ ಇರುವುದರಿಂದ, ಹೈರಿಸ್ಕ್ ದೇಶದ ಪ್ರಯಾಣಿಕರ ಮೇಲೆ ನಿಗಾ ಇದೆ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. ಹೊಸ ರೂಪ ಪಡೆದ್ಕೊಂಡು ಪ್ರತ್ಯಕ್ಷವಾಗಿರುವ ಕೊರೊನಾ ಸೋಂಕು ಮಾನವ ಕುಲಕ್ಕೆ ಮಾರಕವಾಗುತ್ತಿದೆ. ಇತ್ತ ನಾವುಗಳು ಸಹ ಸೋಂಕಿದೆ ಎಂಬುದನ್ನ ಮೈ ಮರೆತರೆ ಕೊರೊನಾಗೆ ಆಹ್ವಾನ ನೀಡಿದಂತಾಗಲಿದೆ. ಹೀಗಾಗಿ ಸಾಧ್ಯವದಷ್ಟು ಎಚ್ಚರಿಕೆಯಿಂದ ಇರುವುದು ಒಳಿತು. ಇದನ್ನೇ ತಜ್ಞರು ಹೇಳುತ್ತಿದ್ದಾರೆ. ಜನರು ಎಲ್ಲಾ ನಿಯಮಗಳನ್ನ ಪಾಲಿಸಿ ತಮ್ಮ ಎಚ್ಚರಿಕೆಯಲ್ಲಿರುವುದು ಸೂಕ್ತ.













