ಶತ್ರುವಿನ ಶತ್ರು ಮಿತ್ರ ಅನ್ನೋ ಮಾತಿದೆ. ಆದರೆ ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ ಎನ್ನುವ ಮಾತಿನಂತೆ ಹೊಸ ಶತ್ರುಗಳನ್ನು ಸೋಲಿಸುವ ಉದ್ದೇಶದಿಂದ ಹಳೇ ಶತ್ರುಗಳು ಒಂದಾಗಿದ್ದಾರೆ. ಭಾರತೀಯ ಜನತಾ ಪಾರ್ಟಿಗೆ ಹೊಸ ಶತ್ರುಗಳು ಎಂದರೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗು ಮಾಜಿ ಸಿಎಂ ಜಗದೀಶ್ ಶೆಟ್ಟರ್. ಕಾಂಗ್ರೆಸ್ಗಿಂತಲೂ ಈ ಇಬ್ಬರು ನಾಯಕರು ಭಾರತೀಯ ಜನತಾ ಪಾರ್ಟಿಗೆ ಶತ್ರುಗಳಾಗಿದ್ದಾರೆ. ಹೀಗಾಗಿ ಹಳೇ ಸ್ನೇಹಿತರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಒಂದಾಗಿದ್ದಾರೆ.
ಭ್ರಷ್ಟಾಚಾರದ ಆರೋಪ ಈಗ ನಗಣ್ಯ ಆಗಿದ್ಹೇಗೆ..?
ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಬಿ.ವೈ ವಿಜಯೇಂದ್ರ ಮೂಲಕ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಕಾವೇರಿ ನಿವಾಸದ ಹಿಂದಿನ ಅಪಾರ್ಟ್ಮೆಂಟ್ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಬಿ.ವೈ ವಿಜಯೇಂದ್ರ ಎಲ್ಲಾ ಅಧಿಕಾರಿಗಳನ್ನು ಮನೆಗೆ ಕರೆಸಿಕೊಂಡು ವರ್ಗಾವಣೆ ದಂಧೆ ಮಾಡುತ್ತಿದ್ದಾರೆ. ಕೋಟಿ ಕೋಟಿ ವ್ಯವಹಾರ ನಡೆಯುತ್ತಿದೆ. ಕೇಂದ್ರಕ್ಕೂ ಹೋಗಬೇಕಿರುವ ಪಾಲು ಹೋಗುತ್ತಿದೆ ಎಂದಿದ್ದರು. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ನಾಯಕರು ನೋಟಿಸ್ ಕೊಟ್ಟರೂ ಕ್ಯಾರೇ ಎನ್ನದೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದ ಯತ್ನಾಳ್, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ 2 ಸಾವಿರ ಕೋಟಿ ಕೊಟ್ಟವರು ಸಿಎಂ ಆಗುತ್ತಾರೆ ಎನ್ನುವ ಮೂಲಕ ಕೋಟಿ ಕೋಟಿ ಲಂಚ ಕೊಟ್ಟವರು ಸಿಎಂ, ಮಂತ್ರಿ ಆಗುತ್ತಾರೆ ಎಂದಿದ್ದರು. ಇದೀಗ ಚುನಾವಣೆ ಹತ್ತಿರ ಬಂದ ಬಳಿಕ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ ಅನ್ನೋ ಕಾರಣಕ್ಕೆ ಎಲ್ಲವೂ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ.
ಯತ್ನಾಳ್ ಆರೋಪವನ್ನು ಒಪ್ಪಿಕೊಂಡ್ರಾ ಯಡಿಯೂರಪ್ಪ..?
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪುಂಕಾನುಪುಂಕವಾಗಿ ವಾಗ್ದಾಳಿ ಮಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೆ ಬಿ.ಎಸ್ ಯಡಿಯೂರಪ್ಪ ವೇದಿಕೆ ಹಂಚಿಕೊಂಡಿದ್ದಾರೆ. ಅಂದರೆ ಯತ್ನಾಳ್ ಹೇಳಿದ ಮಾತುಗಳಿಗೆ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ ಎಂದರ್ಥ. ಭ್ರಷ್ಟಾಚಾರ ಮಾಡಲು ಬಿ.ವೈ ವಿಜಯೇಂದ್ರ ಮೂಲಕ ಕೋಟಿ ಕೋಟಿ ಲೂಟಿ ಮಾಡಿದ್ದಾರೆ ಎನ್ನುವುದನ್ನು ಒಪ್ಪಿಕೊಂಡಂತಾಗಿದೆ. ಇಲ್ಲವೇ ಮಗನ ಮೇಲಿನ ವ್ಯಾಮೋಹದಿಂದ ಪಕ್ಷದ ಆದೇಶವನ್ನು ಪಾಲನೆ ಮಾಡುತ್ತಿದ್ದಾರೆ. ಇನ್ನೊಂದು ರೀತಿಯಲ್ಲಿ ನೋಡುವುದಾದರೆ ಯಡಿಯೂರಪ್ಪ ಅಧಿಕಾರವಧಿಯಲ್ಲಿ ಮಾಡಿರುವ ಭ್ರಷ್ಟಾಚಾರದ ಪ್ರಕರಣಗಳನ್ನೇ ಇಟ್ಟುಕೊಂಡು ಸಿಕ್ಕಿಹಾಕಿಸುವ ಭೀತಿ ಸೃಷ್ಟಿಸಿ, ಯಡಿಯೂರಪ್ಪ ಅವರನ್ನು ಬಿಜೆಪಿ ಕೈಗೊಂಬೆ ಮಾಡಿಕೊಂಡು ತಾಳಕ್ಕೆ ತಕ್ಕಂತೆ ಕುಣಿಸುತ್ತಿದೆ ಎನ್ನಬಹುದು.
ಅಥಣಿಯಲ್ಲಿ ಎದುರಾಳಿ ಬಗ್ಗೆ ಯಡಿಯೂರಪ್ಪ ಹೇಳಿದ್ದೇನು..?
ಬೆಳಗಾವಿಯ ಅಥಣಿಯಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಅಥಣಿಯ ಶಿವಯೋಗಿ ಮಠದ ಆವರಣದಲ್ಲಿ ನಡೆದ ಸಮಾವೇಶದಲ್ಲಿ ಜಗದೀಶ ಶೆಟ್ಟರ್ ಸೋಲಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೆನೆ. ಲಕ್ಷ್ಮಣ ಸವದಿಯನ್ನ ಸೋಲಿಸುವ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳಿ. ೨೫ ರಿಂದ ೩೦ ಸಾವಿರ ಅಂತರದಿಂದ ಮಹೇಶ್ ಕುಮಟಳ್ಳಿ ಗೆಲ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಉತ್ತರ ಪ್ರದೇಶದಲ್ಲಿ ಕೇವಲ ೪ ರಿಂದ ೫ ಸೀಟ್ ಗೆದ್ದಿದ್ದಾರೆ. ರಾಹುಲ್ ಗಾಂಧಿ, ಮೋದಿ, ಅಮೀತ್ ಷಾ ಎದುರು ಸರಿಸಮ ಆಗಲು ಸಾಧ್ಯವೇ ಇಲ್ಲ. ಕರ್ನಾಟಕದಲ್ಲಿ ಬಿಜೆಪಿ ಬಹುಮತ ಪಡೆದು ಸರ್ಕಾರ ರಚನೆ ಆಗೋದು ನಿಶ್ಚಿತ. ಲಕ್ಷ್ಮಣ ಸವದಿ ನಮಗೆ ದ್ರೋಹ ಮಾಡಿದ್ದಾರೆ. ಪರಿಷತ್ ಅವಧಿ ೫ ವರ್ಷ ೨ ತಿಂಗಳು ಇದ್ದರೂ ಸಹ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಯತ್ನಾಳ್ಗೆ ಶತ್ರು ಯಡಿಯೂರಪ್ಪ, ಈಗ ದೋಸ್ತಿ..!
ಅಥಣಿ ಸಮಾವೇಶದಲ್ಲೇ ಮಾತನಾಡಿದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕರ್ನಾಟಕದಲ್ಲಿ ಹುಬ್ಬಳ್ಳಿ ಮತ್ತು ಅಥಣಿ ಬಹಳ ಚರ್ಚೆಯ ವಸ್ತು ಆಗಿದೆ. ರಮೇಶ ಹಾಗೂ ಮಹೇಶ ನೇತೃತ್ವದಲ್ಲಿ ೧೭ ಜನ ಬಂದಿದ್ದಕ್ಕೆ ಸರ್ಕಾರ ಆಯ್ತು. ಅವರು ಬಂದ ಮೇಲೆ ಮಂತ್ರಿ ಕುಂತ್ರಿ ಏನೇಲ್ಲ ಆಯ್ತು. ಯಡಿಯೂರಪ್ಪ ಲಕ್ಷ್ಮಣ ಸವದಿಯವರನ್ನ ಉಪಮುಖ್ಯಮಂತ್ರಿ ಮಾಡಿದ್ರು, ಮಹೇಶ ಕುಮಟಳ್ಳಿಯವರೂ ಮಂತ್ರಿ ಆಗಬೇಕಿತ್ತು. ನಾನು ಕೂಡ ಯಾವಾಗಲೋ ಮಂತ್ರಿ ಆಗಬೇಕಿತ್ತು. ಯಡಿಯೂರಪ್ಪನವರು ನೀವು ತ್ಯಾಗ ಮಾಡಬೇಕು ಅಂತ ಹೇಳಿದ್ರು, ೧೭ ಜನ ಬರ್ತಿದ್ದಾರೆ ಅವರನ್ನು ಮಂತ್ರಿ ಮಾಡಬೇಕು ಅಂತ ಯಡಿಯೂರಪ್ಪ ಹೇಳಿದ್ರು. ನನಗೇನು ಸಿನಿಯಾರಿಟಿ ಕಡಿಮೆ ಇರಲಿಲ್ಲ. ಮೋಸ್ಟ್ ಸಿನಿಯರ್ ಮನುಷ್ಯ ನಾನು, ಆದರೂ ತ್ಯಾಗ ಮಾಡಿದ್ದೇನೆ ಎಂದಿದ್ದಾರೆ. ಇನ್ನು ಲಕ್ಷ್ಮಣ ಸವದಿ ಜೊಳ್ಳು ಹೊರಗೆ ಗೋಗಿದೆ, ಗಟ್ಟಿಕಾಳು ಪಕ್ಷದಲ್ಲೇ ಉಳಿದಿದೆ ಎಂದಿದ್ದಾರೆ.
ಕೃಷ್ಣಮಣಿ