ಭಾರತದ ಹಲವು ಆಚರಣೆಗಳಿಗೆ ಸಾಮಾನ್ಯ ಜನರ ನಂಬಿಕೆ ವಿಶ್ವಾಸಗಳೇ ಬುನಾದಿ ಅಲ್ಲವೇ ?
– ನಾ ದಿವಾಕರ
ಮೈಸೂರು ಸಾಂಸ್ಕೃತಿಕ ನಗರಿ ಎಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಇಲ್ಲಿ ಪರಂಪರಾನುಗತವಾಗಿ ಬಂದಿರುವ ಕೆಲವು ಐತಿಹ್ಯಗಳು, ನಂಬಿಕೆಗಳು ಹಾಗೂ ಆಚರಣೆಗಳು. ಶತಮಾನಗಳಿಂದಲೂ ಭಾರತೀಯ ಸಮಾಜದಲ್ಲಿ ಅತಿ ಹೆಚ್ಚು ಮಾನ್ಯತೆ ಪಡೆಯುತ್ತಿರುವುದು ಜನಸಾಮಾನ್ಯರ ನಂಬಿಕೆ, ವಿಶ್ವಾಸ ಹಾಗೂ ಶ್ರದ್ಧೆಯನ್ನು ಅವಲಂಬಿಸಿದ ಆಚರಣೆಗಳೇ ಹೊರತು, ಪುರಾತತ್ವಶೋಧನೆಯ ಮೂಲಕ ಸ್ಥಾಪಿತವಾದ ಚಾರಿತ್ರಿಕ ಸಂಗತಿಗಳಲ್ಲ. ದಾಖಲಿತ ಚರಿತ್ರೆಗಿಂತಲೂ ಹೆಚ್ಚು ಮೌಲ್ಯಯುತವಾಗಿ ಮೌಖಿಕ ಇತಿಹಾಸವನ್ನು ನಂಬುವ ಹಾಗೂ ಅನುಸರಿಸುವ ಅನೇಕಾನೇಕ ಸಮುದಾಯಗಳು ಭಾರತದಲ್ಲಿವೆ. ಈ ಸಮುದಾಯಗಳ ಸಾಂಸ್ಕೃತಿಕ ಬದುಕು ಮತ್ತು ಜೀವನಶೈಲಿಯಲ್ಲಿ ನೆಲೆಮಾಡಿರುವುದು ಇದೇ ಮೌಖಿಕ ಪರಂಪರೆ. ಹಾಗಾಗಿಯೇ ಆಧುನಿಕ ಇತಿಹಾಸದ ಚೌಕಟ್ಟಿನಲ್ಲಿ ಮಾನ್ಯತೆ ಪಡೆಯಲಾಗದ ಪುರಾಣಗಳು, ಪೌರಾಣಿಕ ಕಥನಗಳು ಸಾಮಾನ್ಯ ಜನರ ಬದುಕಿನಲ್ಲಿ ನೆಲೆ ಮಾಡಿಬಿಡುತ್ತವೆ.
ಮೈಸೂರಿನಲ್ಲಿ ಕಳೆದ ಒಂದು ತಿಂಗಳಿನಿಂದ ಸದ್ದು ಮಾಡುತ್ತಿರುವ ಮಹಿಷ ದಸರಾ ಆಚರಣೆಯನ್ನೂ ಈ ದೃಷ್ಟಿಯಿಂದಲೇ ನೋಡಬೇಕಿದೆ. ತಳಸಮುದಾಯಗಳು ಅಪೇಕ್ಷಿಸುವ ಸಾಂಸ್ಕೃತಿಕ ಮಾರ್ಗಗಳನ್ನು, ಆರಾಧಿಸುವ ಪಾರಂಪರಿಕ ದೈವಗಳನ್ನು, ಅನುಸರಿಸುವ ಜನಪದೀಯ ನೆಲೆಗಳನ್ನು ಸದಾ ನಿಕೃಷ್ಟವಾಗಿಯೇ ಕಾಣುವ ಒಂದು ಪರಂಪರೆಯನ್ನೂ ಆಧುನಿಕ ಭಾರತ ಮೈಗೂಡಿಸಿಕೊಂಡು ಬಂದಿದ್ದು, ಈ ಸಮುದಾಯಗಳ ಸಂಸ್ಕೃತಿ ಹಾಗೂ ಆಚರಣೆಗಳನ್ನೇ ರೂಪಾಂತರಗೊಳಿಸಿ ವೈದಿಕೀಕರಣಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇವೆ. ಆದಾಗ್ಯೂ ತಳಮಟ್ಟದ ಸಾಮಾಜಿಕ ನೆಲೆಯಲ್ಲಿ ಜನಸಾಮಾನ್ಯರ ನಂಬಿಕೆಗಳನ್ನು ಅಲುಗಾಡಿಸಲಾಗಿಲ್ಲ. ಎಂತಹುದೇ ಹೊಸ ರೂಪ ಪಡೆದುಕೊಂಡರೂ ಈ ಪಾರಂಪರಿಕ ಅಭಿವ್ಯಕ್ತಿಯು ಸಾಮುದಾಯಿಕವಾಗಿ ಆವರಿಸಿಕೊಂಡಿದ್ದು ಅನೇಕ ರೀತಿಯ ಪ್ರಾಚೀನ ಆಚರಣೆಗಳಿಗೂ ಸಹ ಇಂದಿಗೂ ತೆರೆದುಕೊಂಡಿದೆ.
ಶ್ರದ್ಧೆ ನಂಬಿಕೆಗಳ ಸುತ್ತ
ಈ ವೈವಿಧ್ಯತೆಯನ್ನು ಹಾಗೂ ಭಿನ್ನತೆಯನ್ನು ಗೌರವಿಸಬೇಕಾದ್ದು ಪ್ರಜಾಪ್ರಭುತ್ವವನ್ನು ಒಪ್ಪುವ ಪ್ರತಿಯೊಬ್ಬರ ನೈತಿಕ ಕರ್ತವ್ಯ. ಭಾರತೀಯ ಸಂಸ್ಕೃತಿಯೊಳಗಿನ ಈ ವೈವಿಧ್ಯತೆಯನ್ನು ಒಪ್ಪಿಕೊಂಡೇ ಸಂವಿಧಾನದಲ್ಲಿ ಎಲ್ಲ ರೀತಿಯ ಆಚರಣೆಯ ಸ್ವಾತಂತ್ರ್ಯವನ್ನು ಸಾರ್ವಭೌಮ ಜನತೆಗೆ ಕಲ್ಪಿಸಲಾಗಿದೆ. ಸಮಸ್ತ ಭಾರತೀಯರಿಗೂ ಒಪ್ಪಿಗೆಯಾಗುವಂತಹ ಯಾವುದೇ ಆಚರಣೆ ಅಥವಾ ಶ್ರದ್ಧಾ ನಂಬಿಕೆಯ ನೆಲೆಗಳು ನಮ್ಮಲ್ಲಿ ಗುರುತಿಸುವುದು ಸಾಧ್ಯವೇ ಇಲ್ಲ. ಮತಾಧಾರಿತ ಅಸ್ಮಿತೆಗಳ ಸಲುವಾಗಿ ಅಥವಾ ಸಾಂಸ್ಕೃತಿಕ ರಾಜಕಾರಣದ ಅನಿವಾರ್ಯತೆಗಳಿಂದ ಏಕ ಸಂಸ್ಕೃತಿಯನ್ನು ಎಷ್ಟೇ ಬಲವಾಗಿ ಪ್ರತಿಪಾದಿಸಿದರೂ, ಭಾರತದಲ್ಲಿ ಪ್ರತಿ 200 ಕಿಲೋಮೀಟರ್ ಅಂತರದಲ್ಲಿ ಪ್ರತ್ಯೇಕವಾದ ಸಾಂಸ್ಕೃತಿಕ ನಂಬಿಕೆಗಳು, ಅಚರಣೆಗಳು ಕಂಡುಬರುವುದು ಸುಡುವಾಸ್ತವ. ಮೈಸೂರಿನಲ್ಲಿ ವಿವಾದಕ್ಕೊಳಗಾಗಿರುವ ಮಹಿಷಾಸುರನನ್ನು ಕುರಿತು ಕರ್ನಾಟಕದಲ್ಲೇ ಹಲವು ರೀತಿಯ ಐತಿಹ್ಯಗಳು, ಕಥನಗಳು ಲಭ್ಯವಾಗುತ್ತವೆ.
ಇಡೀ ವಿವಾದವನ್ನು ಚಾಮುಂಡಿ Vs ಮಹಿಷ ಎಂದು ಬಿಂಬಿಸುವ ಕೆಲವು ಪ್ರಯತ್ನಗಳು ಬೌದ್ಧಿಕ ವ್ಯರ್ಥಾಲಾಪಗಳಷ್ಟೇ. ಚಾಮುಂಡಿ ಅಥವಾ ಚಾಮುಂಡೇಶ್ವರಿಯೂ ಒಂದು ನಂಬಿಕೆ, ಮಹಿಷನೂ ಒಂದು ನಂಬಿಕೆ. ಎರಡೂ ಸಹ ಪೌರಾಣಿಕ ಕಥನಗಳಿಂದ ಹೆಕ್ಕಿ ತೆಗೆದಂತಹ ಘಟನೆಗಳು. ಎರಡೂ ಘಟನೆಗಳು ಶತಮಾನಗಳ ನಂತರವೂ ಜನಮಾನಸದ ನಡುವೆ ಆಚರಣಾತ್ಮಕವಾಗಿ ಉಳಿದು ಬಂದಿದ್ದರೆ ಅದಕ್ಕೆ ಕಾರಣ ಪುರಾಣ ಮತ್ತು ಮಿಥ್ಯೆಗಳು ನಮ್ಮ ಸಮಾಜದಲ್ಲಿ ಸೃಷ್ಟಿಸಿರುವ ಶ್ರದ್ಧಾನಂಬಿಕೆಗಳು. ಮಹಿಷನನ್ನು ಚಾರಿತ್ರಿಕ ವ್ಯಕ್ತಿಯನ್ನಾಗಿ ಮಾಡುವ ಭರದಲ್ಲಿ ಚಾಮುಂಡಿಗೂ ಅದೇ ಅಸ್ಮಿತೆಯನ್ನು ನೀಡುವುದು ಆಧುನಿಕ ಇತಿಹಾಸದ ಚೌಕಟ್ಟಿನಲ್ಲಿ ಸಾಧ್ಯವಾಗುವುದಿಲ್ಲ. ಈ ಎರಡೂ ನಂಬಿಕೆಗಳು ಜನಸಾಮಾನ್ಯರಲ್ಲಿ ಆಳವಾಗಿ ಬೇರೂರಿವೆ. ಈ ನಂಬಿಕೆಗಳನ್ನು ಗೌರವಿಸಬೇಕೆಂದು ಭಾರತದ ಸಂವಿಧಾನ ಅಪೇಕ್ಷಿಸುತ್ತದೆ.
ಆದಾಗ್ಯೂ ಮಹಿಷ ಎಂಬ ವ್ಯಕ್ತಿ ಸಾವಿರಾರು ವರ್ಷಗಳ ಹಿಂದೆ ಮೈಸೂರು ಎಂದು ಈಗ ಗುರುತಿಸಲಾಗುತ್ತಿರುವ ಭೂಪ್ರದೇಶವನ್ನು ಆಳುತ್ತಿದ್ದ ಪಾಳೆಗಾರನೋ, ದೊರೆಯೋ, ವೈದಿಕ ಪುರಾಣಗಳು ಹೇಳುವಂತೆ ಅಸುರನೋ ಇವೆಲ್ಲವೂ ವಿದ್ವತ್ ವಲಯದಲ್ಲಿ ಚರ್ಚೆಗೊಳಗಾಗಬೇಕಾದ ವಿಚಾರ. ಮಹಿಷನನ್ನು ಬೌದ್ಧ ಭಿಕ್ಕು ಎಂದೂ ಸಹ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಹಲವು ವಿದ್ವತ್ ಪೂರ್ಣ ಅಧ್ಯಯನ ಯೋಗ್ಯ ಬರಹಗಳು ಪ್ರಕಟವಾಗುತ್ತಲೇ ಇವೆ. ( ಪ್ರತಿಭಾ ನಂದಕುಮಾರ್ ಅವರ ಲೇಖನ : ಮಹಿಷಾಸುರ ಯಾರು ? ಪ್ರ.ವಾ. 12-10-2023, ಲಕ್ಷ್ಮಿಪತಿ ಕೋಲಾರ ಅವರ : ಮಹಿಷಾಸುರ ಸತ್ಯ-ಮಿಥ್ಯೆ ಅಂಬೇಡ್ಕರ್‌ವಾದ ಪತ್ರಿಕೆ ಸೆಪ್ಟಂಬರ್ 2023) . ಮಹಿಷನನ್ನು ಬೌದ್ಧ ಪರಂಪರೆಯಲ್ಲಿ ಗುರುತಿಸುವ ಹಲವು ಪ್ರಯತ್ನಗಳು ಚಾರಿತ್ರಿಕ ದಾಖಲೆಗಳೊಂದಿಗೆ ಪ್ರಕಟವಾಗುತ್ತಲೇ ಇವೆ. ಈ ಪ್ರಯತ್ನಗಳ ನಡುವೆಯೇ ಪಾರಂಪರಿಕ ನಂಬಿಕೆಗಳನ್ನೂ ನಿರಾಕರಿಸುವ ಅಥವಾ ತುಚ್ಚವಾಗಿ ಕಾಣುವ ಪ್ರಯತ್ನಗಳೂ ಸಹ ನಡೆಯುತ್ತಿವೆ. 2023ರ ಮೈಸೂರು ದಸರಾ ಈ ಒಂದು ಹಗ್ಗ ಜಗ್ಗಾಟಕ್ಕೆ ಸಾಕ್ಷಿಯಾಗಿರುವುದು ವಿಪರ್ಯಾಸ.
“ ಭಾವನೆಗಳಿಗೆ ಧಕ್ಕೆ ಉಂಟುಮಾಡುವ “ ಒಂದು Template ದೇಶದ ರಾಜಕೀಯ ರೂಪುರೇಷೆಗಳನ್ನೇ ಬದಲಿಸುತ್ತಿರುವ ಈ ಹೊತ್ತಿನಲ್ಲಿ, ತಳಸಮುದಾಯಗಳ, ದಲಿತರ, ಶೋಷಿತರ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದೂ ತಪ್ಪಲ್ಲವೇ ? ಅಥವಾ ಶೋಷಿತರಿಗೆ ಭಾವನೆಗಳೇ ಇರುವುದಿಲ್ಲ ಎಂಬ ಗ್ರಹಿಕೆಯೇನಾದರೂ ಉಂಟೇ ? ಭಾರತೀಯ ಸಮಾಜದಲ್ಲಿ ನಂಬಿಕೆ ಮತ್ತು ಆಚರಣೆಗೆ ಪೂರಕವಾಗಿ ಆಳವಾಗಿ ಜನಮಾನಸದಲ್ಲಿ ಕಾಣುವುದೇ “ ಭಾವನೆಗಳು” . ಹಾಗಾಗಿಯೇ ಭಾವನೆಗಳೂ ಸಹ ಜಾತಿ-ಮತ-ಧರ್ಮ ಮತ್ತು ಭಾಷಿಕ ನೆಲೆಗಳಲ್ಲಿ ವ್ಯಕ್ತವಾಗುತ್ತಲೂ, ಅಭಿವ್ಯಕ್ತಿಗೊಳಗಾಗುತ್ತಲೂ, ಘಾಸಿಗೊಳಗಾಗುತ್ತಲೂ ಇರುತ್ತವೆ. ಸಾಂಸ್ಥೀಕರಣಗೊಂಡ ಮತಗಳು ಅಥವಾ ಧಾರ್ಮಿಕ ಆಚರಣೆಗಳು ಈ “ಭಾವನೆ”ಗಳಿಗೂ ಒಂದು ಸಾಂಸ್ಥಿಕ-ಸಾರ್ವತ್ರಿಕ ಆಯಾಮವನ್ನು ನೀಡಿಬಿಡುತ್ತವೆ. ಸಾಂಸ್ಥೀಕರಣಗೊಂಡ ಧರ್ಮದ ಚೌಕಟ್ಟುಗಳಲ್ಲಿರುವ ಈ ಭಾವನೆಗಳಿಗೆ ಧಕ್ಕೆ ಉಂಟಾದಾಗಲೆಲ್ಲಾ ಇದನ್ನು ಸಂರಕ್ಷಿಸಲೆಂದೇ ಇರುವ ಕಾರ್ಯಪಡೆಗಳು ವಿಚಲಿತಗೊಂಡು ಸಿಡಿದೇಳುತ್ತವೆ. ಇದು ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣದ ಒಂದು ಕೊಡುಗೆ.
ಮುಸ್ಲಿಂ ಸಮುದಾಯಗಳಿಗೆ ಪ್ರವಾದಿ ಅಥವಾ ಅಲ್ಲಾಹು ಈ ಸಾಂಸ್ಥೀಕರಣಕ್ಕೊಳಗಾದ ಭಾವನಾತ್ಮಕ ಪ್ರಪಂಚದ ಪ್ರಶ್ನಾತೀತ ಶಕ್ತಿಗಳಾಗಿ ಕಂಡರೆ ಹಿಂದೂ ಸಮುದಾಯಗಳಿಗೆ ಸಮಸ್ತ ದೇವಾಧಿದೇವತೆಗಳೂ ಸಹ ಹೀಗೆಯೇ ಕಾಣುತ್ತಾರೆ. ಹಾಗಾಗಿ ಪ್ರವಾದಿಯನ್ನು ವಿಡಂಬನೆ ಮಾಡುವ ಒಂದು ವ್ಯಂಗ್ಯ ಚಿತ್ರವೂ ಸಹ ತೀಕ್ಷ್ಣ ದಾಳಿಗೊಳಗಾಗುವಂತೆಯೇ ಹಿಂದೂ ದೇವಾಧಿದೇವತೆಗಳ ಬಗ್ಗೆ ವ್ಯಕ್ತಪಡಿಸಲಾಗುವ ಭಿನ್ನ ಅಭಿಪ್ರಾಯ/ಚಿತ್ರಣಗಳೂ ಹಲ್ಲೆಗಳೊಗಾಗುತ್ತವೆ. ಈ ವಿದ್ಯಮಾನವನ್ನು ಸ್ವೀಕೃತವೆಂದೇ ಭಾವಿಸುವುದಾದರೆ ಈ ದೇಶದ ತಳಸಮುದಾಯಗಳು ಗಾಢವಾಗಿ ನಂಬುವ ಅಥವಾ ಆರಾಧಿಸುವ ದೈವೀಕ/ಅತೀತ ಶಕ್ತಿಗಳ ಸುತ್ತ ಬೆಳೆದುಬಂದಿರುವ ಶ್ರದ್ಧಾಭಕ್ತಿಪೂರ್ವಕ ಭಾವನೆಗಳನ್ನೂ ಸಮಾನ ನೆಲೆಯಲ್ಲಿ ಗೌರವಿಸಬೇಕಲ್ಲವೇ ? ಸಾವಿರಾರು ವರ್ಷಗಳ ಹಿಂದಿನ ಪುರಾಣಗಳಲ್ಲಿ ಅಸುರರೆಂದು ಚಿತ್ರಿತವಾದ ಬಲಿಚಕ್ರವರ್ತಿ, ರಾವಣ ಮುಂತಾದ ಪೌರಾಣಿಕ ವ್ಯಕ್ತಿಗಳು ದೇಶದ ವಿವಿಧೆಡೆಗಳಲ್ಲಿ ಪೂಜಿಸಲ್ಪಡುತ್ತಿದ್ದಾರೆ. ಇವರ ಸಾಲಿಗೆ ಈಗ ಮಹಿಷಾಸುರನೂ ಸೇರಿದ್ದಾನೆ.
ಸಾಂಸ್ಕೃತಿಕ ಸಂಕಥನಗಳ ನಡುವೆ
ಇದು ತಪ್ಪೋ ಸರಿಯೋ ಎನ್ನುವ ಪ್ರಶ್ನೆ ಬೌದ್ಧಿಕ ವಲಯದಲ್ಲಿ ಚರ್ಚೆಗೊಳಗಾಗಬೇಕಾದ ವಿಚಾರ. ಆದರೆ ಉನ್ನತ ಸಮಾಜದ ಬೌದ್ಧಿಕ ವಲಯದಲ್ಲಿ ನಡೆಯುವ ವಿದ್ವತ್ ಪೂರ್ಣ ವಾದ-ವಾಗ್ವಾದಗಳು ತಳಮಟ್ಟದ ಅನಕ್ಷರಸ್ತ ಸಮುದಾಯಗಳನ್ನಾಗಲೀ, ಕಾಯಕ ಸಮಾಜವನ್ನಾಗಲೀ ಬಾಧಿಸುವುದಿಲ್ಲ. ತಳಮಟ್ಟದಲ್ಲಿ ಜನತೆಗೆ ತಮ್ಮ ಪಾರಂಪರಿಕ ಅನುಸರಣೆ, ಸಾಂಪ್ರದಾಯಿಕ ಶ್ರದ್ಧೆ ಮತ್ತು ಸಾಂಸ್ಕೃತಿಕ ಆಚರಣೆಗಳು ಮುಖ್ಯವಾಗುತ್ತವೆ. ಸಾಮಾಜಿಕವಾಗಿ ಮೇಲ್ದರ್ಜೆಯಲ್ಲಿರುವ ಹಿತವಲಯದ ಕಲಿತವರ ಪ್ರಪಂಚದಲ್ಲಿ ನಡೆಯುವ ಬೌದ್ಧಿಕ ಚರ್ಚೆಗಳು ಇತಿಹಾಸವನ್ನು ಶೋಧಿಸುತ್ತಾ, ಪರಂಪರೆಗಳನ್ನು ಭೇದಿಸುತ್ತಾ ಚಿಂತನ ಮಂಥನಗಳ ಮೂಲಕ ಪುರಾಣ, ಮಿಥ್ಯೆ, ಇತಿಹಾಸ ಮತ್ತು ಪೌರಾಣಿಕ ಕಥನಗಳ ಮೂಲ ನೆಲೆಯನ್ನು ಶೋಧಿಸುವ ಪ್ರಯತ್ನಗಳನ್ನು ಮಾಡುತ್ತವೆ. ಆದರೆ ಇದಾವುದರ ಪರಿವೆಯೂ ಇಲ್ಲದ ಒಂದು ಸಮಾಜ ತಳಮಟ್ಟದಲ್ಲಿ ತನ್ನ ಪರಂಪರೆ ಮತ್ತು ಸಂಪ್ರದಾಯಗಳಿಗೆ ಅಂಟಿಕೊಂಡು ಬದುಕಿನ ಅವಿಭಾಜ್ಯ ಅಂಗವಾಗಿ ಪುರಾಣ ಕಥನಗಳನ್ನು ಅನುಸರಿಸುತ್ತಿರುತ್ತವೆ.
ಈ ವೈವಿಧ್ಯತೆಯನ್ನು ಭೇದಿಸಿ, ಶೋಧಿಸಿ ಸಾಂಸ್ಕೃತಿಕ ಅವಲೋಕನ ಮಾಡುವುದು ಬಾಹ್ಯ ಸಮಾಜದ ಬೌದ್ಧಿಕ ವಲಯದ ವೈಚಾರಿಕ ಜವಾಬ್ದಾರಿ. ಆದರೆ ತಮ್ಮ ಜೀವನ ನಿರ್ವಹಣೆಯ ಹಾದಿಯಲ್ಲಿ ಇಂತಹ ಪಾರಂಪರಿಕ ನೆಲೆಗಳಲ್ಲೇ ತಮ್ಮ ಜೀವನ ನಿರ್ವಹಣೆಯನ್ನು ನಿರೂಪಿಸಿಕೊಳ್ಳುವ ತಳಸಮುದಾಯಗಳಿಗೆ ಕಾಯಕ ಬದುಕು ಹಾಗೂ ಸಾಂಸ್ಕೃತಿಕ ಶ್ರದ್ಧಾನಂಬಿಕೆಗಳ ಆಚರಣೆಗಳು ಸದಾ ಬೆಸೆದುಕೊಂಡೇ ಇರುವ ವಿದ್ಯಮಾನಗಳಾಗಿ ಕಾಣುತ್ತವೆ. ಮಾನವ ಸಮಾಜದ ವಿಕಾಸದಲ್ಲಿ ತಳಮಟ್ಟದ ಕಾಯಕ ಸಮುದಾಯಗಳು ತಮ್ಮ ಪಾರಂಪರಿಕ-ಪೌರಾಣಿಕ ಐತಿಹ್ಯಗಳಿಂದ ಕೆಲವು ಸನ್ನಿವೇಶಗಳನ್ನು ಅಥವಾ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು ವರ್ಷಕ್ಕೊಮ್ಮೆ ಅದನ್ನು ಸ್ಮರಿಸುವ ರೀತಿಯಲ್ಲಿ ಹಬ್ಬಗಳನ್ನು ಆಚರಿಸುವುದು ಸಹಜವಾಗಿ ಕಾಣುವ ಪ್ರಕ್ರಿಯೆ. ಆದರೆ ಸಮಾಜ ವಿಕಾಸಗೊಂಡು ಆಧುನಿಕೀಕರಣಕ್ಕೊಳಗಾದಂತೆಲ್ಲಾ ಈ ಹಬ್ಬಗಳು, ಉತ್ಸವಗಳು , ಸಾರ್ವಜನಿಕವಾಗಿ ಆಚರಿಸಲ್ಪಡುವ ಜಾತ್ರೆಗಳೂ ಸಹ ಸಮಾಜದ ಪ್ರಬಲ ವರ್ಗಗಳ ವಶಕ್ಕೊಳಗಾಗಿ ರೂಪಾಂತರ ಹೊಂದಿರುವುದನ್ನೂ ಗುರುತಿಸಬಹುದು. ಈ ಸಾಂಸ್ಕೃತಿಕ ಚರಿತ್ರೆಯಲ್ಲೇ ನಮಗೆ ಕಾಣಬೇಕಾಗಿರುವುದು ಎರಡು ವಿಭಿನ್ನ ಪ್ರಪಂಚಗಳು.
ಇಂದು ವರ್ತಮಾನದ ಸಾಮಾಜಿಕ ಶ್ರೇಣಿಯಲ್ಲಿ ಮೇಲ್‌ಸ್ತರದಲ್ಲಿರುವ ಮೆಲ್ಜಾತಿ, ಮೇಲ್ವರ್ಗಗಳು ತಮ್ಮ ಸಾಂಸ್ಕೃತಿಕ ಚರಿತ್ರೆಯನ್ನು ಹಾಗೂ ಪೌರಾಣಿಕ ಮಿಥ್ಯೆಗಳನ್ನು ಸಾಂಸ್ಥೀಕರಿಸಿ ಅದನ್ನು ಇಡೀ ಸಮಾಜದ ಮೇಲೆ ಹೊರಿಸುವ ಪ್ರಯತ್ನಗಳನ್ನು ಮಾಡುತ್ತಿವೆ. ಸಾರ್ವಜನಿಕ ಸಂಕಥನಗಳಲ್ಲಿ ಇದನ್ನು ಸ್ಪಷ್ಟವಾಗಿ ಗುರುತಿಸಬಹುದು. ಈ ಪ್ರಯತ್ನಗಳ ನಡುವೆಯೇ ತಳಸಮುದಾಯಗಳಿಗೂ ಮೂಲ ಸಂಸ್ಕೃತಿ ಎಂಬುದೊಂದಿದೆ, ಆ ಸಂಸ್ಕೃತಿಗೂ ಒಂದು ಚಾರಿತ್ರಿಕ ಪರಂಪರೆಯಿದೆ, ಆಚರಣೆಯ ವಿಧಾನಗಳಿವೆ, ಅಲ್ಲಿಯೂ ಪುರಾಣ-ಮಿಥ್ಯೆಗಳಿಂದ ಸೃಷ್ಟಿಯಾದ ನಂಬಿಕೆಗಳಿವೆ ಎನ್ನುವುದನ್ನು ಸಮ್ಮಾನಿಸುವುದು ಸಮಾಜದ ನೈತಿಕ ಜವಾಬ್ದಾರಿ. ಈ ನಂಬಿಕೆಗಳನ್ನು ಒಪ್ಪುವುದು-ನಿರಾಕರಿಸುವುದು ಅಥವಾ ಚಾರಿತ್ರಿಕ-ವೈಚಾರಿಕ-ವೈಜ್ಞಾನಿಕ ವಿಶ್ಲೇಷಣೆಗೊಳಪಡಿಸಿ ಪ್ರಶ್ನಿಸುವುದು ವ್ಯಕ್ತಿಗತ ತಾತ್ವಿಕ-ಸೈದ್ಧಾಂತಿಕ ನೆಲೆಯಲ್ಲಿ ಸಾಧ್ಯ. ಹೀಗೆ ಮಾಡುತ್ತಲೇ ಒಂದು ಸಮಾಜ ತನ್ನೊಳಗೆ ಅಡಗಿರಬಹುದಾದ ಅಭೇದ್ಯ ಸಂಗತಿಗಳನ್ನು ಹೊರಗೆಳೆದು, ಚಾರಿತ್ರಿಕ ಸತ್ಯಾಸತ್ಯತೆಗಳನ್ನು ಪರಾಮರ್ಶಿಸಿ, ಮಿಥ್ಯಾ ಪ್ರಜ್ಞೆಯನ್ನು ಹೋಗಲಾಡಿಸಲು ಯತ್ನಿಸುತ್ತದೆ.
ಭಾರತದ ಈ ಸಾಂಸ್ಕೃತಿಕ ವೈವಿಧ್ಯತೆಯನ್ನು ಮನಗಾಣುತ್ತಲೇ ಡಾ. ಅಂಬೇಡ್ಕರ್ ನಮ್ಮ ಸಂವಿಧಾನದಲ್ಲಿ ಬಹುಸಾಂಸ್ಕೃತಿಕ ವೈವಿಧ್ಯಯತೆಯನ್ನು ಅನುಸರಿಸುವ, ಆಚರಿಸುವ ಹಾಗೂ ಕಾಪಾಡುವ ನಾಗರಿಕರ ಜವಾಬ್ದಾರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ. ಈ ವೈವಿಧ್ಯತೆಯನ್ನು ಅಲ್ಲಗಳೆಯುವ ಯಾವುದೇ ಪ್ರವೃತ್ತಿಯು ಸಂವಿಧಾನ ವಿರೋಧಿಯೇ ಆಗುತ್ತದೆ. ಮೈಸೂರಿನಲ್ಲಿ ಆಚರಿಸಲಾಗುತ್ತಿರುವ ಮಹಿಷ ದಸರಾ ಆಚರಣೆಯನ್ನು ವಿರೋಧಿಸುವ ಪ್ರವೃತ್ತಿ ಸಂವಿಧಾನ ವಿರೋಧಿಯಾಗಿ ಕಾಣುವುದೂ ಈ ಕಾರಣಕ್ಕಾಗಿಯೇ. ಮಹಿಷ ದಸರಾ ಆಚರಣೆಯನ್ನು ಅಥವಾ ಮಹಿಷ ಆರಾಧನೆಯನ್ನು ಹಿಂದೂ ವಿರೋಧಿ ಎಂದು ವ್ಯಾಖ್ಯಾನಿಸುವುದು ಮಹಿಷನನ್ನೇ ಹಿಂದೂಗಳ ಪೌರಾಣಿಕ ಕಥನಗಳಿಂದ ಹೊರಗಿಟ್ಟಂತಾಗುವುದಿಲ್ಲವೇ ? ಒಂದು ಬೃಹತ್ ಜನಸಮುದಾಯದ ನಂಬಿಕೆಯ ಮೂಲಕ ಸಾಂಸ್ಕೃತಿಕ ಅಸ್ಮಿತೆಗೆ ಒಳಗಾಗಿರುವ ಮಹಿಷಾಸುರ ಸತ್ಯವೋ ಮಿಥ್ಯವೋ ಎಂಬ ಪ್ರಶ್ನೆಯನ್ನು ಶೋಧಿಸುತ್ತಲೇ, ಮಹಿಷ ದಸರಾ ಆಚರಿಸಲು ಇರುವ ಸಾಂವಿಧಾನಿಕ ಹಕ್ಕನ್ನು ಗೌರವಿಸುವುದು ನಮ್ಮ ಆದ್ಯತೆಯಾಗಬೇಕಿದೆ.
-೦-೦-೦-