ದೇಶಾದ್ಯಂತ ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್ಆರ್ ಸಿ) ಬಗ್ಗೆ ತೀವ್ರ ರೀತಿಯ ಚರ್ಚೆಗಳು, ವಿವಾದಗಳು ನಡೆಯುತ್ತಿವೆ. 2019 ರಲ್ಲಿ ಈ ವಿವಾದಿತ ಎನ್ಆರ್ ಸಿಯನ್ನು ಅಸ್ಸಾಂಗೆ ಸೀಮಿತವಾಗಿ ಪರಿಚಯಿಸಲಾಗಿತ್ತು. ಇದರ ಪ್ರಕಾರ 1.9 ದಶಲಕ್ಷ ಜನರನ್ನು ಇದರಿಂದ ಹೊರಗಿಡಲಾಗಿದೆ. ಇದರಿಂದ ತೀವ್ರ ವಿವಾದವೆದ್ದಿದ್ದು, ಸಮರ್ಪಕ ದಾಖಲೆ ಇಲ್ಲದಿರುವವರಿಗೆ ತಾವು ಯಾವ ರಾಜ್ಯದ ನಾಗರಿಕರು ಎಂಬುದೇ ತಿಳಿಯದಂತಾಗಿದೆ.
ಇಷ್ಟೆಲ್ಲಾ ರಾದ್ಧಾಂತವಾಗಿದ್ದರೂ ಕೇಂದ್ರ ಸರ್ಕಾರ ಇದನ್ನು ದೇಶದ ಎಲ್ಲಾ ರಾಜ್ಯಗಳಲ್ಲೂ ಜಾರಿಗೆ ತರುವುದಾಗಿ ಹೇಳುತ್ತಾ ಬರುತ್ತಿದೆ. ಅಸ್ಸಾಂನಲ್ಲಿ ಬರೋಬ್ಬರಿ 19 ಲಕ್ಷ ಜನರನ್ನು ಹೊರಗಿಟ್ಟಿರುವ ಹಿನ್ನೆಲೆಯಲ್ಲಿ ಅವಾಂತರ ಉಂಟಾಗಿರುವುದರಿಂದ ದೇಶದ ಎಲ್ಲಾ ರಾಜ್ಯಗಳ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಕಾರಣದಿಂದಾಗಿಯೇ ಎನ್ಆರ್ ಸಿಯನ್ನು ವಿರೋಧಿಸಲಾಗುತ್ತಿದೆ.
ಈ ಎನ್ಆರ್ ಸಿಯ ಪ್ರಸ್ತಾವನೆಯನ್ನು ಮಾಡುತ್ತಿದ್ದಂತೆಯೇ ಪ್ರತಿಭಟನೆಗಳು ನಡೆದಿವೆ. ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ತೀವ್ರ ರೀತಿಯ ಹೋರಾಟಕ್ಕೆ ಧುಮುಕಿದ್ದಾರೆ.
ಇಷ್ಟೆಲ್ಲಾ ವಾದ ವಿವಾದಗಳು ಪ್ರತಿಭಟನೆಗಳು ನಡೆದ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಎನ್ಆರ್ ಸಿ ಬಗ್ಗೆ ಸರ್ಕಾರ ಯಾವುದೇ ಚರ್ಚೆಯನ್ನೂ ಮಾಡಿಲ್ಲ ಎಂದು ಘೋಷಿಸಿದರು. ಆದಾಗ್ಯೂ, ಕೇಂದ್ರ ಸರ್ಕಾರ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್ ಪಿಆರ್) ಅನ್ನು ಜಾರಿಗೆ ತರಲು ಸಿದ್ಧತೆಯನ್ನು ಆರಂಭಿಸಿದೆ. ಇದು ಎನ್ಆರ್ ಸಿ ಜಾರಿಗೊಳಿಸುವ ಆರಂಭಿಕ ಹಂತವಾಗಿದೆ. ಇದರ ವಿರುದ್ಧವೂ ತೀವ್ರ ವಿವಾದಗಳು ಎದ್ದಿವೆ. ಹಾಗಾದರೆ, ಈ ಎನ್ಆರ್ ಸಿ ಯಾರ ಕನಸಿನ ಕೂಸು? ಇದಕ್ಕೆ ಉತ್ತರ ಇಲ್ಲಿದೆ.
ಭಾರತದಲ್ಲಿ ಇದುವರೆಗೆ ಎರಡು ಬಾರಿ ಎನ್ಆರ್ ಸಿಯನ್ನು ಸಿದ್ಧಪಡಿಸಲಾಗಿದೆ. ಅದೂ ಕೂಡ ಕೇವಲ ಅಸ್ಸಾಂನಲ್ಲಿ. ಆದರೆ, ಈ ಬಗ್ಗೆ ಸಂವಿಧಾನದಲ್ಲಿ ಎಲ್ಲಿಯೂ ಸಹ ಉಲ್ಲೇಖವಾಗಿಲ್ಲ ಮತ್ತು ಸಂವಿಧಾನದಲ್ಲಿ ಇದಕ್ಕೆ ಅವಕಾಶವನ್ನೂ ನೀಡಿಲ್ಲ. ಆದಾಗ್ಯೂ, 1951 ರಲ್ಲಿ ಆ ವರ್ಷ ಜನಗಣತಿಯಲ್ಲಿ ಸಂಗ್ರಹಿಸಲಾದ ವ್ಯಕ್ತಿಗಳ ವಿವರಗಳ ಆಧಾರದಲ್ಲಿ ಅಸ್ಸಾಂನಲ್ಲಿ ಮೊದಲ ಬಾರಿಗೆ ನಾಗರಿಕರ ನೋಂದಣಿಯನ್ನು ಪ್ರಕಟಿಸಲಾಯಿತು. ಬಾಂಗ್ಲಾದೇಶದಿಂದ ಭಾರೀ ಪ್ರಮಾಣದಲ್ಲಿ ಅಲ್ಲಿನ ನಾಗರಿಕರು ವಲಸೆ ಬಂದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದರಿಂದ ಎನ್ಆರ್ ಸಿಯನ್ನು ಮಾಡಲಾಗಿತ್ತು. 1951 ರ ಜನಗಣತಿ ಪ್ರಕಾರ ಸುಮಾರು 1 ರಿಂದ 1.5 ದಶಲಕ್ಷ ಬಾಂಗ್ಲಾ ವಲಸಿಗರು ಬಂದು ನೆಲೆಸಿದ್ದಾರೆ ಎಂದು ಅಂದಾಜಿಸಲಾಗಿತ್ತು. ಅಂದರೆ, ಆಗಿನ ಅಸ್ಸಾಂನ ಒಟ್ಟು ಜನಸಂಖ್ಯೆಯ ಶೇ.12-18 ರಷ್ಟು ಅಕ್ರಮ ವಲಸಿಗರಿದ್ದರು. ಇಷ್ಟೆಲ್ಲಾ ಪ್ರಕ್ರಿಯೆಗಳನ್ನು ನಡೆಸಲಾಗಿತ್ತಾದರೂ ಅಕ್ರಮ ವಲಸಿಗರೆಂದು ಗುರುತಿಸಲಾಗಿದ್ದ ಯಾರೊಬ್ಬರನ್ನೂ ಹೊರಹಾಕುವ ಪ್ರಕ್ರಿಯೆಗಳು ನಡೆಯಲೇ ಇಲ್ಲ.
ಅಸ್ಸಾಂ ಒಪ್ಪಂದದಲ್ಲಿ ಎನ್ಆರ್ ಸಿ ಉಲ್ಲೇಖವಾಗಿದೆಯೇ?
1985 ರಲ್ಲಿ ಅಂದಿನ ಪ್ರಧಾನಮಂತ್ರಿಯಾಗಿದ್ದ ರಾಜೀವ್ ಗಾಂಧಿ ಸಮ್ಮುಖದಲ್ಲಿ ಕೇಂದ್ರ ಸರ್ಕಾರದ ಗೃಹ ಕಾರ್ಯದರ್ಶಿ ಮತ್ತು ಅಸ್ಸಾಂನ ಎರಡು ವಿದ್ಯಾರ್ಥಿ ಸಂಘಟನೆಗಳ ನಡುವೆ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಬಾಂಗ್ಲಾದೇಶದಿಂದ ಬಂದಿರುವ ಅಕ್ರಮ ವಲಸಿಗರನ್ನು ಹೊರಹಾಕುವಂತೆ ಒತ್ತಾಯಿಸಿ ನಿರಂತರವಾಗಿ ಆರು ವರ್ಷಗಳ ಕಾಲ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ಒಪ್ಪಂದದಲ್ಲಿ ಎಲ್ಲಿಯೂ ಎನ್ಆರ್ ಸಿ ಬಗ್ಗೆ ಉಲ್ಲೇಖ ಮಾಡಿರಲಿಲ್ಲ. ಆದರೆ, ಇದರಲ್ಲಿನ 8 ನೇ ಷರತ್ತಿನಲ್ಲಿ ಎನ್ಆರ್ ಸಿಗೆ ಅಡಿಗಲ್ಲು ಹಾಕಲಾಗಿತ್ತು. ಇದರ ಪ್ರಕಾರ ಸರ್ಕಾರವು ಪೌರತ್ವ ಪ್ರಮಾಣ ಪತ್ರಗಳನ್ನು ನೀಡಲಿದೆ ಎಂದು ತಿಳಿಸಿತ್ತು. ಈ ಮೂಲಕ ಎನ್ಆರ್ ಸಿಗೆ ಅಡಿಪಾಯ ಹಾಕಲಾಗಿತ್ತು. ಆದರೆ, ಯಾವ ವಿಧಾನದಲ್ಲಿ ಪ್ರಮಾಣಪತ್ರಗಳನ್ನು ನೀಡಬೇಕು ಎಂಬುದರ ಬಗ್ಗೆ ನಿಗದಿಪಡಿಸಿರಲಿಲ್ಲ.
ಕೇಂದ್ರ ಸರ್ಕಾರ, ಅಸ್ಸಾಂ ಸರ್ಕಾರ ಮತ್ತು ವಿದ್ಯಾರ್ಥಿ ಸಂಘಟನೆಗಳ ಮುಖಂಡರ ನಡುವೆ 17 ಸುತ್ತುಗಳ ಸಭೆಗಳು, ಚರ್ಚೆಗಳು ನಡೆದ ನಂತರ ಈ ಒಪ್ಪಂದವನ್ನು ಸಿದ್ಧಪಡಿಸಲಾಗಿತ್ತು.
ಹೀಗೆ ಮೂರನೇ ಸುತ್ತಿನ ಸಭೆಯು 1998 ರ ಏಪ್ರಿಲ್ 6 ರಂದು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದಿತ್ತು. ಇದರ ಉದ್ದೇಶ ನಾಗರಿಕರ ಪಟ್ಟಿಯನ್ನು ಸಿದ್ಧಪಡಿಸಲು ರೂಪುರೇಶೆಗಳನ್ನು ಅಂತಿಮಗೊಳಿಸುವುದಾಗಿತ್ತು. 1971 ರ ಮತದಾರರ ಪಟ್ಟಿಯ ಪ್ರಕಾರ ಅಸ್ಸಾಂನ ನಾಗರಿಕರ ಪಟ್ಟಿಯನ್ನು ಸಿದ್ಧಪಡಿಸುವ ಅಗತ್ಯವಿದೆ ಎಂಬುದನ್ನು ಸಭೆಯಲ್ಲಿ ನಿರ್ಧರಿಸಲಾಗಿತ್ತು.
2003 ರಲ್ಲಿ ಎನ್ಆರ್ ಸಿ ರಾಷ್ಟ್ರಕ್ಕೆ ಅನ್ವಯ
2003 ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರದ ಅವಧಿಯಲ್ಲಿ ಪೌರತ್ವ ಪ್ರಮಾಣ ಪತ್ರ ನೀಡುವ ವಿಚಾರ ರಾಷ್ಟ್ರೀಯ ವಿಚಾರವಾಗಿ ಪರಿಣಮಿಸಿತು. ಕಾರ್ಗಿಲ್ ಯುದ್ಧದ ನಂತರ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸಲಾಯಿತು. ಈ ದಿಸೆಯಲ್ಲಿ ಸಚಿವರನ್ನೊಳಗೊಂಡ ಸಮಿತಿಯು 1955 ರ ಪೌರತ್ವ ಕಾಯ್ದೆ ತಿದ್ದುಪಡಿ ತರುವಂತೆ ಶಿಫಾರಸು ಮಾಡಿತು. ಅದರಂತೆ ತಿದ್ದುಪಡಿ ತಂದು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಪೌರತ್ವ ಪ್ರಮಾಣ ಪತ್ರ ನೀಡಲು ನಿರ್ಧರಿಸಲಾಯಿತು. ವಿಶೇಷವಾಗಿ ಗಡಿ ಭಾಗದ ಪ್ರದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಗುರುತಿನ ಚೀಟಿ ನೀಡಲು ತೀರ್ಮಾನಿಸಲಾಯಿತು.
ಸ್ಥಳೀಯ ಭಾರತೀಯ ಪೌರತ್ವ ನೋಂದಣಿಯನ್ನು ಸಿದ್ಧಪಡಿಸುವುದು ಮತ್ತು ಸೇರ್ಪಡೆ ಮಾಡುವ ದೃಷ್ಟಿಯಿಂದ ಪ್ರತಿಯೊಂದು ಕುಟುಂಬ ಮತ್ತು ವ್ಯಕ್ತಿಗಳ ಎಲ್ಲಾ ವಿವರಗಳನ್ನು ದಾಖಲಿಸಿ ಸ್ಥಳೀಯ ರಿಜಿಸ್ಟ್ರಾರ್ ಪರಿಶೀಲಿಸಿ ಅನುಮೋದನೆ ನೀಡಬೇಕೆಂದು 2003 ರ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿತ್ತು.
ಇನ್ನು 2004 ರ ಡಿಸೆಂಬರ್ ನಲ್ಲಿ ಕಾಂಗ್ರೆಸ್ ನೇತೃತದ್ವ ಯುಪಿಎ ಸರ್ಕಾರದಲ್ಲಿ ಪ್ರಧಾನಮಂತ್ರಿಯಾಗಿ ಡಾ.ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದರು. ಆ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನ ನೋಂದಣಿ ಮಾಡುವ ರಾಷ್ಟ್ರೀಯ ನಾಗರಿಕರ ನೋಂದಣಿ ಜಾರಿಗೆ ಬಂದಿತ್ತು.
ಅಸ್ಸಾಂನಲ್ಲಿ ಎರಡನೇ ಬಾರಿಗೆ ಎನ್ಆರ್ ಸಿ
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 2005 ರ ಮೇ 5 ರಂದು ನಡೆದ ಅಸ್ಸಾಂ ಒಪ್ಪಂದದ 8 ನೇ ಸಭೆಯಲ್ಲಿ 1951 ಎನ್ಆರ್ ಸಿ ಬಗೆಗಿನ ಅಪ್ಡೇಟ್ ಪಡೆದು ಚರ್ಚೆ ನಡೆಸಲಾಯಿತು. ಈ ಸಭೆಯ ಪ್ರಮುಖ ಅಂಶವೆಂದರೆ, ಅಸ್ಸಾಂನ ಮುಖ್ಯಮಂತ್ರಿಗಳು 1951 ರ ಎನ್ಆರ್ ಸಿಯನ್ನು ಅಪ್ಡೇಟ್ ಮಾಡಲು ಒಪ್ಪಿಕೊಂಡಿದ್ದರು. ಇದರ ಪ್ರಕಾರ 1971 ರ ಮತದಾರರ ಪಟ್ಟಿಯ ಪ್ರಕಾರ ಎನ್ಆರ್ ಸಿಯಲ್ಲಿ ನಾಗರಿಕರ ಹೆಸರನ್ನು ಸೇರಿಸುವುದಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಮತ್ತು ನಾಗರಿಕರಿಗೆ ಗುರುತಿನ ಚೀಟಿ ವಿತರಿಸಲಾಗುವುದು ಎಂದು ತಿಳಿಸಿದ್ದರು.
2010 ರಲ್ಲಿ ಚಾಯ್ ಗಾಂವ್ ಮತ್ತು ಬಾರ್ಪೆಟಾದಲ್ಲಿ ಪೈಲಟ್ ಯೋಜನೆಯನ್ನಾಗಿ ಜಾರಿಗೊಳಿಸಲಾಯಿತಾದರೂ ಇದರ ವಿರುದ್ಧ ಪ್ರತಿಭಟನೆಗಳು ಮತ್ತು ಹಿಂಸಾಚಾರ ನಡೆದಿದ್ದರಿಂದ ರದ್ದು ಮಾಡಲಾಗಿತ್ತು. ಈ ಮಧ್ಯೆ, 2009 ರಲ್ಲಿ ಅಸ್ಸಾಂ ಪಬ್ಲಿಕ್ ವರ್ಕ್ಸ್ ಎಂಬ ಎನ್ ಜಿಒ ಸುಪ್ರೀಂಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿರುವ 4.1 ದಶಲಕ್ಷ ವಿದೇಶಿ ನಾಗರಿಕರ ಹೆಸರನ್ನು ತೆಗೆದು ಹಾಕುವಂತೆ ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡುವಂತೆ ಮನವಿ ಮಾಡಿತ್ತು. ಇನ್ನು 2013 ರಲ್ಲಿ ಸುಪ್ರೀಂಕೋರ್ಟಿನ ಸೂಚನೆ ಮೇರೆಗೆ ಅಸ್ಸಾಂನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಎನ್ಆರ್ ಸಿ ಜಾರಿಗೆ ಚಾಲನೆ ನೀಡಿತು. ರಾಜ್ಯ ಸರ್ಕಾರದ ವಿಳಂಬ ಧೋರಣೆಯಿಂದಾಗಿ ಸ್ವತಃ ಸುಪ್ರೀಂಕೋರ್ಟ್ 2013 ರ ಏಪ್ರಿಲ್ ನಿಂದ ಎನ್ಆರ್ ಸಿ ಪ್ರಗತಿಯನ್ನು ಪರಿಶೀಲನೆ ಮಾಡುತ್ತಾ ಬಂದಿತ್ತು ಮತ್ತು 2019 ರಲ್ಲಿ ಪೂರ್ಣಗೊಳ್ಳುವಂತೆ ಮಾಡಿತು. 2016 ರಲ್ಲಿ ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಎನ್ಆರ್ ಸಿಗೆ ಹೆಚ್ವು ಆಸಕ್ತಿ ತೋರಿತು. ಅಷ್ಟೇ ಅಲ್ಲ, 2019 ರ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಎನ್ಆರ್ ಸಿಯನ್ನು ಸೇರ್ಪಡೆ ಮಾಡಿಕೊಂಡಿತ್ತು ಮತ್ತು ಹಂತಹಂತವಾಗಿ ದೇಶಾದ್ಯಂತ ಜಾರಿಗೆ ತರುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಎನ್ಆರ್ ಸಿಯನ್ನು ಜಾರಿಗೆ ತರಲು ಮುಂದಾಗಿರುವ ಬಿಜೆಪಿ ಸರ್ಕಾರಕ್ಕೆ ದೇಶದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
ಕೃಪೆ: ಇಂಡಿಯಾ ಟುಡೆ