ಸಾತಗಳ್ಳಿ ಬಸ್ ನಿಲ್ದಾಣದ ಕಟ್ಟಡವನ್ನು ಬಾಡಿಗೆಗೆ ಪಡೆದಿರುವ ಷಫಿ ಅಹಮದ್, 1.80 ಕೋಟಿ ರೂ.ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಷಫಿ ಅಹಮದ್ ಖಾಸಗಿ ಶಾಲೆ ನಡೆಸಲು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಕಟ್ಟಡದ ಬಾಡಿಗೆಗೆ ಪಡೆದಿದ್ದು, ಕಳೆದ ಮೂರ್ನಾಲ್ಕು ವರ್ಷಗಳಿಂದ ಬಾಡಿಗೆ ಪಾವತಿಸಿಲ್ಲ ಎನ್ನಲಾಗಿದೆ.
ಮೈಸೂರು: ಸಾರಿಗೆ ಇಲಾಖೆ ಅಧಿಕಾರಿಗಳ ಮೇಲೆ ಶಾಸಕ ತನ್ವೀರ್ ಸೇಠ್ ಬೆಂಬಲಿಗರು ಗೂಂಡಾಗಿರಿ ನಡೆಸಿರುವ ಘಟನೆ ನಡೆದಿದ್ದು, ಪೊಲೀಸರ ಎದುರಿನಲ್ಲೇ ಶಾಸಕರ ಬೆಂಬಲಿಗನ ಪತ್ನಿ ಅಧಿಕಾರಿಗಳಿಗೆ ಮಚ್ಚು ತೋರಿಸಿ ಧಮ್ಕಿ ಹಾಕಿದ್ದಾರೆ.
ಮೈಸೂರಿನ ಹೊರವಲಯದ ಸಾತಗಳ್ಳಿ ಬಸ್ ಡಿಪೋ ಆವರಣದಲ್ಲಿ ಈ ಘಟನೆ ನಡೆದಿದ್ದು, ಶಾಸಕ ತನ್ವೀರ್ ಸೇಠ್ ಬೆಂಬಲಿಗ ಷಫಿ ಅಹಮದ್ ಹಾಗೂ ಆತನ ಪತ್ನಿ ಬಹಿರಂಗ ಅಟ್ಟಹಾಸ ನಡೆಸಿದ್ದಾರೆ. ಸಾತಗಳ್ಳಿ ಬಸ್ ನಿಲ್ದಾಣದ ಕಟ್ಟಡವನ್ನು ಬಾಡಿಗೆಗೆ ಪಡೆದಿರುವ ಷಫಿ ಅಹಮದ್, 1.80 ಕೋಟಿ ರೂ.ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಷಫಿ ಅಹಮದ್ ಖಾಸಗಿ ಶಾಲೆ ನಡೆಸಲು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಕಟ್ಟಡದ ಬಾಡಿಗೆಗೆ ಪಡೆದಿದ್ದು, ಕಳೆದ ಮೂರ್ನಾಲ್ಕು ವರ್ಷಗಳಿಂದ ಬಾಡಿಗೆ ಪಾವತಿಸಿಲ್ಲ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸೋಮವಾರ ಕೆಎಸ್ಆರ್ಟಿಸಿ ಅಧಿಕಾರಿಗಳು ಬಾಡಿಗೆ ವಸೂಲಿ ಮಾಡಲು ಮುಂದಾದ ಸಂದರ್ಭದಲ್ಲಿ ಷಫಿ ಅಹಮದ್, ತನ್ನ ರೌದ್ರಾವತಾರ ತೋರಿದ್ದಾರೆ. ಪೇಪರ್ ಕವರ್ನಲ್ಲಿ ಮಚ್ಚು ತಂದಿದ್ದ ಷಫಿ ಪತ್ನಿ, ಪೊಲೀಸರ ಮುಂದೆಯೇ ಸಾರಿಗೆ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದು, ನಾವು ಮುಸ್ಲಿಮರು.. ಮಚ್ಚಿನಲ್ಲಿ ಕೊಚ್ಚಿ ಹಾಕಿ ಜೈಲಿಗೆ ಹೋಗಲು ಮುಂದಾಗಲ್ಲ ಎಂದು ಬಹಿರಂಗ ಬೆದರಿಕೆವೊಡ್ಡಿದ್ದಾರೆ.
ಈ ನಡುವೆ ಸ್ಥಳದಲ್ಲಿದ್ದ ಪೊಲೀಸರು ಮಹಿಳೆಯ ಕೈಯಲ್ಲಿದ್ದ ಮಚ್ಚು ಕಸಿಯಲು ಸಾಕಷ್ಟು ಯತ್ನ ನಡೆಸಿದರು, ರಂಪಾಟ ನಡೆಸಿದ ಮಹಿಳೆ ಇದಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ ಮಹಿಳೆಯ ರಂಪಾಟದಿಂದಾಗಿ ಪೊಲೀಸರು ಹೈರಾಣಾದರೆ, ಶಾಸಕರ ಬೆಂಬಲಿಗರ ಬಹಿರಂಗ ಗೂಂಡಾಗಿರಿ ಕಂಡು ಸ್ಥಳೀಯ ನಿವಾಸಿಗಳು ಕಂಗಾಲಾಗಿದ್ದಾರೆ.
ಎಫ್ಐಆರ್ ದಾಖಲು:
ಸಾರಿಗೆ ಇಲಾಖೆ ಅಧಿಕಾರಿಗಳ ಮೇಲೆ ಗೂಂಡಾಗಿರಿ ತೋರಿದ ಶಾಸಕರ ಬೆಂಬಲಿಗ ಷಫಿ ಅಹಮದ್ ಹಾಗೂ ಆತನ ಪತ್ನಿ ಸೈಯ್ಯದ್ ಮುನಿ ಬನ್ನೀಸ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಇಬ್ಬರ ವಿರುದ್ಧ ನಗರದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರಿಗೆ ಇಲಾಖೆ ಅಧಿಕಾರಿ ಮರೀಗೌಡ ಅವರು ನೀಡಿದ ದೂರು ಹಿನ್ನೆಲೆ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಮಚ್ಚಿನಿಂದ ಕೊಲೆಗೆ ಯತ್ನ ಮಾಡಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.