ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ಆಧರಿಸಿ 2025-26ನೇ ಸಾಲಿನ ಸಮಗ್ರ ಸಹಭಾಗಿತ್ವ ವಾರ್ಷಿಕ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಲು ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಿಗೆ ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 309(ಬಿ)ರಡಿಯಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಮುಂದಿನ ಐದು ವರ್ಷದ ದೂರದೃಷ್ಟಿ ಯೋಜನೆಯನ್ನು ಗ್ರಾಮ ಯೋಜನಾ ಸಮಿತಿ ಮತ್ತು ಗ್ರಾಮ ಪಂಚಾಯಿತಿ ಯೋಜನಾ ಸಮಿತಿಗಳ ಸಹಕಾರದೊಂದಿಗೆ ಸಿದ್ದಪಡಿಸಿದೆ. ದೂರದೃಷ್ಟಿ ಯೋಜನೆಯಲ್ಲಿ 9 ಆದ್ಯತಾ ವಲಯಗಳನ್ನು ಗುರುತಿಸಲಾಗಿದ್ದು ಅದಕ್ಕೆ ಪೂರಕವಾದ ಎಲ್ಲಾ ಚಟುವಟಿಕೆಗಳನ್ನು ಯೋಜನೆಯಲ್ಲಿ ಗುರುತಿಸಿ 2023-24ನೇ ಸಾಲಿನಿಂದ 2028-29ನೇ ಸಾಲಿನವರೆಗೆ ದೂರದೃಷ್ಟಿ ಯೋಜನೆಯನ್ನು ಸಿದ್ದಪಡಿಸಲಾಗಿದೆ.
ಈ ದೂರದೃಷ್ಟಿ ಯೋಜನೆ ಆಧರಿಸಿ ಗ್ರಾಮ ಪಂಚಾಯಿತಿಗಳು ಸಮಗ್ರ ಭಾಗವಹಿಸುವಿಕೆಯನ್ನು ಒಳಗೊಂಡ ವಾರ್ಷಿಕ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಬೇಕು, ಅದಕ್ಕೂ ಮುನ್ನ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸುವ ಸಲುವಾಗಿ ಸರಣಿ ಚಟುವಟಿಕೆಗಳನ್ನು ಅಭಿಯಾನದ ರೂಪದಲ್ಲಿ ಹಮ್ಮಿಕೊಳ್ಳಬೇಕು ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
2025-26ನೇ ಸಾಲಿನ ಸಮಗ್ರ ಸಹಭಾಗಿತ್ವ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸುವ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳನ್ನು ಪಾಲಿಸಬೇಕೆಂದು ಸಚಿವರು ಹೇಳಿದ್ದಾರೆ.
ವಾರ್ಷಿಕ ಕ್ರಿಯಾ ಯೋಜನೆಯ ಎಲ್ಲಾ ಚಟುವಟಿಕೆಗಳನ್ನು ಗ್ರಾಮ ಪಂಚಾಯಿತಿಗಳ ಐದು ವರ್ಷದ ದೂರದೃಷ್ಟಿ ಯೋಜನೆಯ ಗುರಿಯ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ದಪಡಿಸವುದು. ಸಮುದಾಯದ ಸಹಭಾಗಿತ್ವದೊಂದಿಗೆ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸಲು ಕ್ರಮ ವಹಿಸುವುದು. ಗ್ರಾಮ ಪಂಚಾಯಿತಿಯ ಎಲ್ಲಾ ಅನುದಾನದ ಮೂಲಗಳು ಒಳಗೊಂಡಂತೆ ಒಂದು ಸಮಗ್ರ ಸಹಭಾಗಿತ್ವ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸುವುದು.
ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆಯಲ್ಲಿ ಇರುವಂತೆ ಗ್ರಾಮ ಪಂಚಾಯಿತಿ ಹಂತದ ಇತರೆ ಅಭಿವೃದ್ಧಿ ಇಲಾಖೆಗಳ ಅನುದಾನ, ಯೋಜನೆಗಳು, ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳುವುದು. ಗ್ರಾಮ ಪಂಚಾಯಿತಿ ಹಂತದಲ್ಲಿ ಕೈಗೊಳ್ಳಲಾಗುವ ಕಡಿಮೆ ಖರ್ಚಿನಲ್ಲಿ ನಿರ್ವಹಿಸುವ ಚಟುವಟಿಕೆಗಳು ಹಾಗೂ ವೆಚ್ಚಗಳನ್ನು ಭರಿಸದೆ ಕೈಗೊಳ್ಳಬಹುದಾದ ಚಟುವಟಿಕೆಗಳನ್ನು ಗುರುತಿಸುವುದು. ಯೋಜನೆವಾರು ಅವಶ್ಯವಿರುವ ಚಟುವಟಿಕೆಗಳನ್ನು ಕಡ್ಡಾಯವಾಗಿ ಸಮಗ್ರ ಸಹಭಾಗಿತ್ವ ವಾರ್ಷಿಕ ಕ್ರಿಯಾ ಯೋಜನೆಯ ಅಂಗವಾಗಿರುವುದನ್ನು ಖಾತರಿಪಡಿಸಿಕೊಂಡು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಗ್ರಾಮ ಪಂಚಾಯತಿಗಳಿಗೆ ಸೂಚಿಸಿದ್ದಾರೆ.