ರೈತರ ಬೇಡಿಕೆಗೆ ಅನುಗುಣವಾಗಿ ಬೀಜ, ರಸಗೊಬ್ಬರ ವಿತರಿಸಲು ಸೂಚನೆ
ಧಾರವಾಡ, ಜೂನ್.10: ರೈತರ ಬೇಡಿಕೆಗೆ ಅನುಗುಣವಾಗಿ ಬೀಜ, ರಸಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಮುಂಗಾರು ಪೂರ್ವ ಮಳೆ ಚನ್ನಾಗಿ ಆಗಿದ್ದರಿಂದ ಜಿಲ್ಲೆಯ ರೈತರು ಬಿತ್ತನೆ ಆರಂಭಿಸಿದ್ದಾರೆ. ಈಗ ಸುಮಾರು ಶೇ. 36 ರಷ್ಟು ಕೃಷಿ ಭೂಮಿ ಬಿತ್ತನೆ ಆಗಿದೆ. ಉಳಿದ ರೈತರು ಬಿತ್ತನೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಬೀಜ ಮತ್ತು ರಸಗೊಬ್ಬರ ಕೊರತೆಯಾಗಬಾರದು ಎಂದು ಸಚಿವರು ತಿಳಿಸಿದರು.
ಪ್ರೂಟ್ ಐಡಿ ಹೊಂದುವುದು ಅಗತ್ಯ
ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಪ್ರತಿ ರೈತ ಪ್ರೂಟ್ ಐಡಿ ಹೊಂದುವುದು ಅಗತ್ಯ. ಜಿಲ್ಲೆಯಲ್ಲಿ ಈಗಾಗಲೇ ಶೇ. 76 ರಷ್ಟು ರೈತರು ಪ್ರೂಟ್ ಐಡಿ ಹೊಂದಿದ್ದಾರೆ. ಉಳಿದ ರೈತರು ಪ್ರೂಟ್ ಐಡಿ ಹೊಂದುವಂತೆ ಜಾಗೃತಿ ಮೂಡಿಸಿ, ಪ್ರಗತಿ ಸಾಧಿಸಲು ರೈತರ ಜಾಗೃತಿಗಾಗಿ ಅಭಿಯಾನ ಹಮ್ಮಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ, ಉಪನಿರ್ದೇಶಕರಾದ ಜಯಶ್ರೀ ಹಿರೇಮಠ, ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ. ಭದ್ರಣ್ಣವರ, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ರಮೇಶ ಬಿ.ಎಸ್., ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಶೀಲ್ದಾರರಾದ ಡಾ.ಡಿ.ಎಚ್.ಹೂಗಾರ, ಪ್ರಕಾಶ ನಾಶಿ, ಮಲ್ಲಿಕಾರ್ಜುನ ಹೆಗ್ಗನ್ನವರ ಸೇರಿದಂತೆ ಭೂದಾಖಲೆಗಳ ಇಲಾಖೆ, ನಗರ ಯೋಜನಾ ಇಲಾಖೆ, ಪುರಸಭೆಗಳ ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.