ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಿನಿಮಾಗಳನ್ನು ಜನರು ಅಪ್ಪಿಕೊಳ್ತಿಲ್ಲ. ಕನ್ನಡ ಚಿತ್ರರಂಗಕ್ಕೆ ಸಮಯ ಸರಿಯಾಗಿಲ್ಲ ಅನ್ನೋ ಕಾರಣಕ್ಕೆ ಇಂದು ಕಲಾವಿದರ ಸಂಘದಲ್ಲಿ ಹೋಮ ಹವನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಈಗಾಗಲೇ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ಲೈನ್ ವೆಂಕಟೇಶ್ ತಿಳಿಸಿದ್ದಾರೆ. ಮೊದಲಿಗೆ ದರ್ಶನ್ ಜೈಲಿನಿಂದ ಬಿಡುಗಡೆ ಆಗಲಿ ಅನ್ನೋ ಕಾರಣಕ್ಕೆ ಪೂಜೆ ಹಮ್ಮಿಕೊಳ್ಳಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ರಾಕ್ಲೈನ್ ವೆಂಕಟೇಶ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕಲಾವಿದರ ಸಂಘದಲ್ಲಿ ಹಮ್ಮಿಕೊಂಡಿರುವುದು ಯಾವುದೇ ಒಬ್ಬರ ಪರ ಅಲ್ಲ. ಇಡೀ ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ. ಅದರಿಂದ ಹೊರ ಬರುವ ಉದ್ದೇಶದಿಂದ ಈ ಕಾರ್ಯ ಮಾಡುತ್ತಿದ್ದೇವೆ ಎಂದಿದ್ದರು.

ಆಗಸ್ಟ್ 13 ಮತ್ತು 14 ರಂದು ಪೂಜೆ, ಹೋಮ, ಹವನ ಮಾಡಿಸ್ತಿದ್ದೀವಿ. ಕೊರೊನಾ ನಂತರ ನಾವು ಪೂಜೆ ಮಾಡ್ಸೋಣ ಅಂತ ಇದ್ದೋ, ಕಾರಣಾಂತರಗಳಿಂದ ಪೂಜೆ ಮಾಡಲು ಆಗಿರಲಿಲ್ಲ. ಈಗ ಆಗಸ್ಟ್ 14ಕ್ಕೆ ದಿನ ಚೆನ್ನಾಗಿದೆ. ಹೀಗಾಗಿ ಆಗಸ್ಟ್ 14ಕ್ಕೆ ವಿಶೇಷ ಪೂಜೆ, ಹೋಮ ಹವನ ಮಾಡಿಸುತ್ತೇವೆ. ಚಿತ್ರರಂಗದಲ್ಲಿ ಏನಾದ್ರು ಕಾರ್ಯಕ್ರಮ ಆದ್ರೆ ನಾವು ಆಹ್ವಾನ ಪತ್ರಿಕೆ ಕೊಡ್ತೀವಿ. ಈ ಪೂಜೆಗಾಗಿ ಯಾರಿಗೂ ಆಹ್ವಾನ ಪತ್ರಿಕೆ ಕೊಡುತ್ತಿಲ್ಲ. ವೈಯಕ್ತಿಕವಾಗಿ ಎಲ್ಲರನ್ನೂ ಕರೆಯೋಣ ಅಂತ ನಿರ್ಧಾರ ಮಾಡಿ ಎಲ್ಲರನ್ನೂ ಆಹ್ವಾನಿಸ್ತಿದ್ದೀವಿ. ಚಿತ್ರರಂಗದ ಸದ್ಯದ ಪರಿಸ್ಥಿತಿ ನಮಗೆಲ್ಲಾ ಗೊತ್ತಿದೆ. ಅಣ್ಣಾವ್ರು, ಪಾರ್ವತಮ್ಮ ಅವರನ್ನ ಕಳೆದುಕೊಂಡ ಮೇಲೆ ಪರಭಾಷೆಯ ಚಿತ್ರಗಳು ಡಬ್ಬಿಂಗ್ ಆಗಿ ಸುನಾಮಿ ತರ ಬರ್ತಿವೆ. ಡಬ್ಬಿಂಗ್ ತಪ್ಪು ಅಂತ ಹೇಳಲ್ಲ ನಮ್ಮ ಜನರು ಅದಕ್ಕೆ ಒಗ್ಗಿದ್ದಾರೆ. ಆದರೆ ಕನ್ನಡ ಚಿತ್ರರಂಗದ ಸಂಕಷ್ಟ ಪರಿಹಾರಕ್ಕೆ ಪೂಜೆ ಮಾಡ್ತಿದ್ದೇವೆ ಎಂದಿದ್ದರು. ಈ ಮಾತಿಗೆ ಟೀಕೆಗಳು ವ್ಯಕ್ತವಾಗಿವೆ.
ಸಿನಿಮಾ ಪತ್ರಕರ್ತ ಹಾಗು ಲೇಖಕರೂ ಆಗಿರುವ ಜೋಗಿ ಸಾಮಾಜಿಕ ಕಾಲತಾಣದಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಕನ್ನಡದ ಸಿನಿಮಾಗಳನ್ನು ಜನರು ಸ್ವೀಕಾರ ಮಾಡುತ್ತಿಲ್ಲ ಎಂದಾಗ, ಚಿತ್ರಗಳ ಗುಣಮಟ್ಟ ಚೆನ್ನಾಗಿಲ್ಲ ಎಂದರ್ಥ. ಕನ್ನಡ ಚಿತ್ರರಂಗದ ಸಿನಿಮಾಗಳ ಗುಣಮಟ್ಟ ಹೆಚ್ಚಿಸಲು ಬರವಣಿಗೆಗಾರರು, ತಂತ್ರಜ್ಞರ ಜೊತೆಗೆ ಸಮಾಲೋಚನೆ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಇವರು ಪೂಜೆಯ ಮೊರೆ ಹೋಗಿದ್ದಾರೆ. ದೇವರೇ ದಿಕ್ಕು ಎನ್ನುವ ಸಿನಿಮಾ ರೀತಿಯಲ್ಲೇ ಕನ್ನಡ ಚಿತ್ರರಂಗಕ್ಕೆ ದೇವರೇ ದಿಕ್ಕು ಎನ್ನುವುದು ನಿಜವಾಗಿದೆ. ಕನ್ನಡ ಚಿತ್ರರಂಗದ ಸಂಕಷ್ಟಗಳಿಗೆ ಇಷ್ಟೊಂದು ಸುಲಭದ ಪರಿಹಾರ ಇದು..? ನಿರ್ಮಾಪಕರೇ ಗಮನಿಸಿ, ನೀವು ಎಂಥಹ ಕಳಪೆ ಗುಣಮಟ್ಟದ ಚಿತ್ರವನ್ನಾದರೂ ಕೊಡಿ, ಆ ಬಳಿಕ ವೆಂಕಟೇಶ ಶಾಸ್ತ್ರಿಯವರನ್ನು ಸಂಪರ್ಕಿಸಿ, ಸರ್ಪ ಶಾಂತಿ ಹಾಗು ಮೃತ್ಯುಂಜಯ ಹೋಮ ಮಾಡಿಸಿ ಬಿಡಿ ಎಂದು ಗೇಲಿ ಮಾಡಿದ್ದರು. ಇವರ ಪೋಸ್ಟ್ ನೂರಾರು ಜನರು ಪ್ರತಿಕ್ರಿಯಿಗೆ ಚಿತ್ರರಂಗಕ್ಕೆ ಸರಿಯಾದ ಚಾಟಿ ಎಂದಿದ್ದರು.

ಆ ಬಳಿಕ ಚಿತ್ರರಂಗದ ನಡಾವಳಿಕೆ ಬಗ್ಗೆ ಸಾಕಷ್ಟು ಜನರು ಫೇಸ್ಬುಕ್, ಟ್ವಿಟ್ಟರ್ ಸೇರಿದಂತೆ ಜಾಲತಾಣಗಳಲ್ಲಿ ಕೆಂಗಣ್ಣು ಬೀರುತ್ತಿದ್ದಾರೆ. ಕಲಾವಿದರ ಸಂಘ, ತಂತ್ರಜ್ಞರು, ಪರಿಣಿತರು, ಬರಹಗಾರರನ್ನು ಗೌರವಿಸಬೇಕು. ಕೇವಲ ನಟ, ನಟಿಯರ ಹಿಂದೆ ಬಿದ್ದು ಉಳಿದರವನ್ನು ಅಗೌರವಿಸುವ ಪರಿಪಾಠ ನಿಲ್ಲಬೇಕು ಅನ್ನೋದನ್ನು ಹಲವರು ಬರೆದುಕೊಂಡಿದ್ದಾರೆ. ಇನ್ನೂ ಈ ಫುಜೆ ಪುನಸ್ಕಾರದಿಂದ ಎಲ್ಲವೂ ಆಗುವುದೇ..? ಯಾಕೆ ಈ ಮೌಢ್ಯದ ಹಿಂದೆ ಜನ ಹೋಗುತ್ತಿದ್ದಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಆದರೆ ದರ್ಶನ್ ಜೈಲು ಸೇರಿದ್ದು, ಆದಷ್ಟು ಬೇಗ ಬಿಡುಗಡೆ ಆಗಲಿ ಅನ್ನೋ ಕಾರಣಕ್ಕೆ ಈ ಹೋಮ ಹವನ ಮಾಡಿಸಲಾಗುತ್ತಿದೆ ಎನ್ನುವುದು ಕೆಲವರ ಅಭಿಪ್ರಾಯ. ಅದೇನೇ ಇರಲಿ, ಪೂಜೆ ಪುನಸ್ಕಾರ ಮಾಡುವುದು ಅವರವರ ಇಚ್ಛೆಗೆ ಬಿಟ್ಟಿದ್ದು. ಇದನ್ನು ಮಾಡುವುದರಿಂದ ಒಳ್ಳೆಯದು ಎಂದಾದರೆ ಒಳ್ಳೆಯದು. ಅವರವರ ಭಾವಕ್ಕೆ ಅವರವರ ಭಗುತಿಗೆ ಬಿಟ್ಟ ವಿಚಾರ ಎನ್ನಬಹುದು.
ಕೃಷ್ಣಮಣಿ