ಚಿಕ್ಕಬಳ್ಳಾಪುರ ; ಹಿಂದಿನ ಸರ್ಕಾರಕ್ಕೆ ( government ) ಸಂಬಂಧಿಸಿದಂತೆ ಯಾವುದೇ ವಿಚಾರಣೆ ( Enquiry ) ಮಾಡಿದರೂ ನಾವು ಹೆದರುವುದಿಲ್ಲ. ಅಭಿವೃದ್ಧಿ ( Development ) ವಿಚಾರದಲ್ಲಿ ಬಿಜೆಪಿ ಸರ್ಕಾರ ( BJP Government ) ಯಾವುದೇ ತಪ್ಪು ಮಾಡಿಲ್ಲ. ಆದರೆ ಈಗಿನ ಕಾಂಗ್ರೆಸ್ ( Congress ) ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಭ್ರಷ್ಟಾಚಾರ ಆರಂಭಿಸಿದೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ವಿರುದ್ಧ ಒಂದಲ್ಲ, ನಾಲ್ಕು ವಿಚಾರಣೆಗಳನ್ನು ಮಾಡಿದರೂ ಹೆದರಿಕೆ ಇಲ್ಲ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನಾವ್ಯಾರೂ ತಪ್ಪು ಮಾಡಿಲ್ಲ ಎಂದು ವಿಶ್ವಾಸದಿಂದ ಹೇಳುತ್ತೇನೆ. ಕೋವಿಡ್ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮುಂಜಾನೆ ಐದೂವರೆಗೆ ಕರೆ ಮಾಡಿ ಸಭೆಗೆ ಕರೆಯುತ್ತಿದ್ದರು. ಆಗ ಕಾಂಗ್ರೆಸ್ ನಾಯಕರು ಹೆಲ್ಮೆಟ್, ಮಾಸ್ಕ್ ಧರಿಸಿಕೊಂಡು, ಮನೆಗೆ ಪ್ರವೇಶವಿಲ್ಲ ಎಂಬ ಬೋರ್ಡು ಹಾಕಿಕೊಂಡು ಕುಳಿತಿದ್ದರು. ಆದರೆ ನಾವೆಲ್ಲರೂ ಆಸ್ಪತ್ರೆಗೆ ತೆರಳಿ, ರೋಗಿಗಳ ಬಳಿ ತೆರಳಿ ಪರಿಶೀಲನೆ ನಡೆಸಿ ರಾಜ್ಯದ ಜನರ ರಕ್ಷಣೆ ಮಾಡಿದ್ದೇವೆ ಎಂದರು.
ನಮ್ಮ ಸರ್ಕಾರ ಇದ್ದಾಗ ಯಾವುದೇ ತಪ್ಪು ಮಾಡಿಲ್ಲ. ಈಗಿನ ಸರ್ಕಾರದಲ್ಲಿ ಅನುದಾನವಿಲ್ಲದೆ ಕೆಲಸಗಳೇ ನಡೆಯುತ್ತಿಲ್ಲ. ಕೆಲಸವಿಲ್ಲದ ಕಾಂಗ್ರೆಸ್ ನಾಯಕರು ವಿಚಾರಣೆಗಾಗಿ ಸಮಿತಿ ರಚಿಸಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಸತ್ಯ ಹರಿಶ್ಚಂದ್ರರೇ ಆಗಿದ್ದರೆ, 2013 ರಿಂದ ಈವರೆಗೆ ತನಿಖೆ ಮಾಡಲಿ. ಆಗ ಕಾಂಗ್ರೆಸ್‌ನವರು ಕೂಡ ನ್ಯಾಯಬದ್ಧವಾಗಿ ಇದ್ದಾರೆ ಎಂದು ಜನರು ಒಪ್ಪಿಕೊಳ್ಳುತ್ತಾರೆ. 2013 ರ ಅವಧಿಯಲ್ಲಿ ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅದನ್ನು ತನಿಖೆ ಮಾಡಿಸಲು ಎದೆಗಾರಿಕೆ ಇಲ್ಲ. ಸರ್ಕಾರ ಎಷ್ಟೇ ವಿಚಾರಣಾ ಸಮಿತಿ ರಚಿಸಿದರೂ, ಅದನ್ನು ಎದುರಿಸುವ ತಾಕತ್ತು ಹಾಗೂ ಮನೋಸ್ಥೈರ್ಯ ನಮಗೆ ಇದೆ. ಕಳ್ಳರೇ ಸಾಚಾಗಳಂತೆ ಓಡಾಡುತ್ತಿರುವಾಗ, ಸಾಚಾಗಳಾದ ನಾವ್ಯಾಕೆ ಹೆದರಬೇಕು? ಎಂದು ಪ್ರಶ್ನಿಸಿದರು.
ನಾವು ಜನರ ಬಳಿ ಹೋಗಿ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ. ಆದಷ್ಟು ಬೇಗ ಈ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಮಾಡೋಣ ಎಂದು ಡಾ.ಕೆ.ಸುಧಾಕರ್ ಹೇಳಿದರು.ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಮಾಡಲು ಹೊರಟರೆ ಅದನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗಲು ಮುಂದಾಗಿದ್ದರು. ಗುತ್ತಿಗೆದಾರರಿಗೂ ಬಿಲ್ ಪಾವತಿಸಿಲ್ಲ. ಸ್ವಾತಂತ್ರ್ಯ ಬಂದ ನಂತರ ಕರ್ನಾಟಕ ಎಂದೂ ನೋಡದಂತಹ ಕೆಟ್ಟ ಸರ್ಕಾರ ಈಗ ಇದೆ ಎಂದರು.
ರೈತರಿಗೆ ವರ್ಷಕ್ಕೆ 6 ಸಾವಿರ ರೂ. ನೀಡುವ ಕಿಸಾನ್ ಸಮ್ಮಾನ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದಾಗ ಆಗಿನ ಸಿಎಂ ಬಿ.ಎಸ್.ಯಡಿಯೂರಪ್ಪನವರು 4 ಸಾವಿರ ರೂ. ಸೇರಿಸಿ ಕೊಡಲು ಆರಂಭಿಸಿದರು. ರೈತರ ಉದ್ಧಾರ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಮೊದಲಿಗೆ 4 ಸಾವಿರ ರೂ. ಕಿತ್ತುಕೊಂಡಿದೆ ಎಂದು ದೂರಿದರು.