ಕರ್ನಾಟಕದಲ್ಲಿ ಜಾತ್ರೆ, ಹಬ್ಬ ಮತ್ತು ದೇವಸ್ಥಾನಗಳ ಸುತ್ತಮುತ್ತ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂಬ ಒತ್ತಾಯಗಳ ಬೆನ್ನಲ್ಲೇ , ಕೇರಳದಲ್ಲಿ ಹಿಂದೂ ಅಲ್ಲ ಎಂಬ ಕಾರಣಕ್ಕೆ ದೇವಸ್ಥಾನದ ಉತ್ಸವವೊಂದರಲ್ಲಿ ಶಾಸ್ತ್ರೀ ಯ ನೃತ್ಯಗಾರ್ತಿಯೊಬ್ಬರ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ ಈ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲಿದೆ ‘ವಸುದೈವ ಕುಟುಂಬಕಂ’? ಎಂದು ಪ್ರಶ್ನಿಸಿದ್ದಾರೆ.
ಹೌದು, ಕೇರಳದ ತ್ರಿಶೂರ್ ಜಿಲ್ಲೆಯ ಇರಿಂಜಲಕುಡದಲ್ಲಿರುವ ಕೂಡಲ್ಮಾಣಿಕ್ಯಂ ದೇವಸ್ಥಾನವು ರಾಜ್ಯ ಸರ್ಕಾರದ ನಿಯಂತ್ರಿತ ದೇವಸ್ಥಾನ ಮಂಡಳಿಗೆ ಒಳಪಟ್ಟಿದ್ದು, ತಾನು ಹಿಂದೂ ಅಲ್ಲ ಎಂಬ ಕಾರಣಕ್ಕಾಗಿ ದೇವಸ್ಥಾನದ ಆವರಣದಲ್ಲಿ ನಿಗದಿತ ನೃತ್ಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದೆ ಎಂದು ಭರತನಾಟ್ಯ ಪ್ರತಿಪಾದಕಿ ಮಾನ್ಸಿಯಾ ವಿ ಪಿ ಆರೋಪಿಸಿದ ಬೆನ್ನಲ್ಲೇ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದು, ಅನ್ಯ ಧಾರ್ಮಿಕ ನಂಬಿಕೆಯುಳ್ಳವರಿಂದಲೂ ತಮ್ಮ ಧರ್ಮಕ್ಕೆ ಗೌರವ ಪಡೆಯುವ ಸಲುವಾಗಿ ಮಸೀದಿ, ಚರ್ಚ್, ಗುರುದ್ವಾರಗಳನ್ನೆಲ್ಲ ತೆರೆದಿರುತ್ತಾರೆ. ಆದರೆ ಕೆಲವು ಹಿಂದೂಗಳು ಅನ್ಯ ಧರ್ಮದವರಿಗೆ ದೇವಸ್ಥಾನದ ಬಾಗಿಲು ಮುಚುತ್ತಿದ್ದಾರೆ ಎಂಧು ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.
”ಅನ್ಯ ಧಾರ್ಮಿಕ ನಂಬಿಕೆಯುಳ್ಳವರು ಬೇರೆಯವರಿಂದ ತಮ್ಮ ಧರ್ಮಕ್ಕೆ ಗೌರವ ಪಡೆಯುವ ಸಲುವಾಗಿ ಮಸೀದಿ, ಚರ್ಚ್, ಗುರುದ್ವಾರ ಮತ್ತು ಸಿನಗಾಂಗ್ಗಳನ್ನು ಎಲ್ಲರಿಗೂ ಪ್ರವೇಶ ಮುಕ್ತಗೊಳಿಸಿರುತ್ತಾರೆ. ಆದರೆ ಕೆಲವು ಹಿಂದೂ ಒಡನಾಡಿಗಳು ಬೇರೆಯವರು ಪ್ರವೇಶಿಸದಂತೆ ದೇವಸ್ಥಾನಗಳ ಬಾಗಿಲು ಮುಚ್ಚುತ್ತಿದ್ದಾರೆ. ಎಲ್ಲಿದೆ ವಸುದೈವ ಕುಟುಂಬಕಂ?” ಎಂದು ಶಶಿ ತರೂರ್ ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ.

ಭರತನಾಟ್ಯದಲ್ಲಿ ಪಿಎಚ್ಡಿ ಸಂಶೋಧನಾ ವಿದ್ವಾಂಸರಾದ ಮಾನ್ಸಿಯಾ ಅವರು ಮುಸ್ಲಿಮರಾಗಿ ಹುಟ್ಟಿ ಬೆಳೆದರೂ ಶಾಸ್ತ್ರೀಯ ನೃತ್ಯ ಪ್ರಕಾರಗಳ ಪ್ರದರ್ಶನ ಕಲಾವಿದೆ ಎಂಬ ಕಾರಣಕ್ಕಾಗಿ ಇಸ್ಲಾಮಿಕ್ ಧರ್ಮಗುರುಗಳ ಕೋಪ ಮತ್ತು ಬಹಿಷ್ಕಾರವನ್ನು ಎದುರಿಸಿದ್ದರು.
ತನ್ನ ಫೇಸ್ಬುಕ್ ಪೋಸ್ಟ್ನಲ್ಲಿ, ಮಾನ್ಸಿಯಾ ತನ್ನ ನೃತ್ಯ ಕಾರ್ಯಕ್ರಮವನ್ನು ಏಪ್ರಿಲ್ 21 ರಂದು ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ. “ನಾನು ಹಿಂದೂ ಅಲ್ಲದ ಕಾರಣ ದೇವಸ್ಥಾನದಲ್ಲಿ ನಾನು ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ದೇವಸ್ಥಾನದ ಪದಾಧಿಕಾರಿಯೊಬ್ಬರು ನನಗೆ ತಿಳಿಸಿದರು. ಎಲ್ಲಾ ಹಂತಗಳನ್ನು ಧರ್ಮದ ಆಧಾರದ ಮೇಲೆ ನಿಗದಿಪಡಿಸಲಾಗಿದೆ, ನೀವು ಉತ್ತಮ ನೃತ್ಯಗಾರ್ತಿ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸುವುದಿಲ್ಲ. ಈ ಮಧ್ಯೆ, ನಾನು ಮದುವೆಯಾದ ನಂತರ ಹಿಂದೂ ಆಗಿ ಪರಿವರ್ತನೆ ಹೊಂದಿದ್ದೇನೆ ಎಂಬ ಪ್ರಶ್ನೆಗಳನ್ನು ಸಹ ಎದುರಿಸುತ್ತಿದ್ದೇನೆ. (ಮಾನ್ಸಿಯಾ ಅವರು ಸಂಗೀತಗಾರ ಶ್ಯಾಮ್ ಕಲ್ಯಾಣ್ ಅವರನ್ನು ವಿವಾಹವಾದರು). ನನಗೆ ಯಾವುದೇ ಧರ್ಮವಿಲ್ಲ ಮತ್ತು ನಾನು ಎಲ್ಲಿಗೆ ಹೋಗಬೇಕು, ”ಎಂದು ಅವರು ಹೇಳಿದರು.
ಧರ್ಮ ಆಧಾರಿತ ಕಾರ್ಯಕ್ರಮದಿಂದ ಈ ರೀತಿ ಹೊರಗಿಡುವುದು ತನಗೆ ಮೊದಲ ಅನುಭವವಲ್ಲ, ಕೆಲವು ವರ್ಷಗಳ ಹಿಂದೆ, ಗುರುವಾಯೂರ್ನಲ್ಲಿರುವ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ಹಿಂದೂ ಅಲ್ಲ ಎಂಬ ಕಾರಣಕ್ಕೆ ಪ್ರದರ್ಶನ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.
“ಕಲೆ ಮತ್ತು ಕಲಾವಿದರು ಧರ್ಮ ಮತ್ತು ಜಾತಿಯೊಂದಿಗೆ ಗಂಟು ಹಾಕುತ್ತಲೇ ಇದ್ದಾರೆ. ಒಂದು ಧರ್ಮಕ್ಕೆ ನಿಷೇಧವಾದಾಗ ಅದು ಇನ್ನೊಂದು ಧರ್ಮದ ಏಕಸ್ವಾಮ್ಯವಾಗುತ್ತದೆ. ಈ ಅನುಭವ ನನಗೆ ಹೊಸದಲ್ಲ. ನಮ್ಮ ಜಾತ್ಯತೀತ ಕೇರಳದಲ್ಲಿ ಏನೂ ಬದಲಾಗಿಲ್ಲ ಎಂಬುದನ್ನು ನೆನಪಿಸಲು ನಾನು ಫೇಸ್ಬುಕ್ನಲ್ಲಿ ದಾಖಲಿಸುತಿದ್ದೇನೆ, ”ಎಂದು ಅವರು ಹೇಳಿದರು.





