ಬೀದರ್: ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಸಹಕಾರ ನೀಡದ್ದಕ್ಕೆ ಕಮಲನಗರ ತಾಲ್ಲೂಕಿನ ಮುಧೋಳ (ಬಿ) ಗ್ರಾಮ ಪಂಚಾಯಿತಿ ಸದಸ್ಯ ಸೋಮನಾಥ ಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಜಲ ಜೀವನ್ ಮಿಷನ್ ಅಡಿಯಲ್ಲಿ 2021-22 ನೇ ಸಾಲಿನಲ್ಲಿ ರೂ. 3.21 ಕೋಟಿ ವೆಚ್ಚದಲ್ಲಿ 1,253 ಮನೆಗಳಿಗೆ ಕಾರ್ಯಾತ್ಮಕ ನಲ್ಲಿ ಅಳವಡಿಕೆ ಕಾಮಗಾರಿ ಕೈಗೊಳ್ಳಲಾಗಿದೆ.ವಾರ್ಡ್ ಸಂಖ್ಯೆ 1 ರಲ್ಲಿ ನಲ್ಲಿ ಸರಿಯಾಗಿ ಅಳವಡಿಸದ ಕಾರಣ ಸಾರ್ವಜನಿಕರಿಗೆ ನೀರಿನ ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ.
ಜಿ.ಪಂ. ಎದುರು ಧರಣಿ ನಡೆಸಿದಾಗ ಅಧಿಕಾರಿಗಳು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು.ನಂತರ ಅನೇಕ ಬಾರಿ ಮನವಿ ಮಾಡಿದರೂ ಯೋಜನೆಗೆ ಸಂಬಂಧಿಸಿದ ಎಂಜಿನಿಯರ್ ಸ್ಪಂದಿಸಿಲ್ಲ ಎಂದು ದೂರಿದ್ದಾರೆ.ಎಂಜಿನಿಯರ್ ಅಸಹಕಾರದಿಂದ ಜನರಿಗೆ ಉತ್ತರ ಕೊಡಲಾಗದೆ ರಾಜೀನಾಮೆ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.