ಭಾರತದಲ್ಲಿ ಪತ್ರಿಕಾ ಸೆನ್ಸಾರ್‌ಶಿಪ್ (Press Censorship) ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಎಕ್ಸ್ (X) ಗಂಭೀರ ಆರೋಪ ಮಾಡಿದೆ. ಆದರೆ, ಈ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ.

ರಾಯಿಟರ್ಸ್ ಸುದ್ದಿ ಸಂಸ್ಥೆಯ ಎರಡು ಖಾತೆಗಳು ಸೇರಿದಂತೆ 2,300 ಕ್ಕೂ ಹೆಚ್ಚು ಖಾತೆಗಳನ್ನು ನಿರ್ಬಂಧಿಸಲು ಭಾರತ ಸರ್ಕಾರ ಆದೇಶಿಸಿದೆ. ಭಾರತದಲ್ಲಿ ನಡೆಯುತ್ತಿರುವ ಪತ್ರಿಕಾ ಸೆನ್ಸಾರ್‌ಶಿಪ್ ತೀವ್ರ ಕಳವಳ ಮೂಡಿಸಿದೆ ಎಂದು ಎಕ್ಸ್ ಹೇಳಿದೆ.
ಎಲಾನ್ ಮಸ್ಕ್ ಒಡೆತನದ ‘ಎಕ್ಸ್’ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದ, ಭಾರತ ಸರ್ಕಾರ ಜುಲೈ 3 ರಂದು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಭಾರತದಲ್ಲಿ 2,355 ಖಾತೆಗಳನ್ನು ನಿರ್ಬಂಧಿಸಲು ಆದೇಶಿಸಿದೆ. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಒಂದು ಗಂಟೆಯೊಳಗೆ ಯಾವುದೇ ಸಮರ್ಥನೆಯನ್ನು ನೀಡದೆ, ತಕ್ಷಣದ ಕ್ರಮ ಕೈಗೊಳ್ಳುವಂತೆ ತಿಳಿಸಿತು. ಮುಂದಿನ ಸೂಚನೆ ಬರುವವರೆಗೆ ಖಾತೆಗಳನ್ನು ನಿರ್ಬಂಧಿಸುವಂತೆ ಒತ್ತಾಯಿಸಿತು ಎಂದು ಆರೋಪ ಮಾಡಿದೆ.

ಎಕ್ಸ್‌ನ ಆರೋಪಗಳನ್ನು ಭಾರತ ಸರ್ಕಾರ ನಿರಾಕರಿಸಿದೆ. ‘ಸರ್ಕಾರವು ಜುಲೈ 3 ರಂದು ಯಾವುದೇ ಹೊಸ ನಿರ್ಬಂಧ ಆದೇಶವನ್ನು ಹೊರಡಿಸಿಲ್ಲ. ರಾಯಿಟರ್ಸ್ ಮತ್ತು ರಾಯಿಟರ್ಸ್ ವರ್ಲ್ಡ್ ಸೇರಿದಂತೆ ಯಾವುದೇ ಪ್ರಮುಖ ಅಂತರರಾಷ್ಟ್ರೀಯ ಸುದ್ದಿ ವಾಹಿನಿಗಳನ್ನು ನಿರ್ಬಂಧಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಭಾರತದಲ್ಲಿ ಎಕ್ಸ್ ಪ್ಲಾಟ್ ಫಾರ್ಮ್‌ನಲ್ಲಿ ರಾಯಿಟರ್ಸ್ ಮತ್ತು ರಾಯಿಟರ್ಸ್ ವರ್ಲ್ಡ್ ಅನ್ನು ನಿರ್ಬಂಧಿಸಿದ ಕ್ಷಣ, ಸರ್ಕಾರವು ತಕ್ಷಣವೇ ಅವುಗಳನ್ನು ಅನಿರ್ಬಂಧಿಸಲು ‘ಎಕ್ಸ್’ ಗೆ ಪತ್ರ ಬರೆದಿತ್ತು. ಸರ್ಕಾರವು ಜುಲೈ 5 ರ ತಡರಾತ್ರಿಯಿಂದ ‘ಎಕ್ಸ್’ ನೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಎಕ್ಸ್ ಅಂತಿಮವಾಗಿ ಜುಲೈ 6 ರಂದು ರಾತ್ರಿ 9 ಗಂಟೆಯ ನಂತರ ರಾಯಿಟರ್ಸ್ ಮತ್ತು ಇತರ URL ಗಳನ್ನು ಅನಿರ್ಬಂಧಿಸಿದೆ. ಅವರು ರಾಯಿಟರ್ಸ್ ಅನ್ನು ಅನಿರ್ಬಂಧಿಸಲು 21 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡರು ಎಂದು ಭಾರತ ಸರ್ಕಾರ ತಿಳಿಸಿದೆ