ಕಳೆದ ಹಲವು ದಿನಗಳಿಂದ ಕರೋನಾ ಸಾಂಕ್ರಾಮಿಕ ದೇಶದಲ್ಲಿ ನಿಧಾನವಾಗಿ ವ್ಯಾಪಿಸುತ್ತಿರುವುದನ್ನು ಗಮನಿಸಿದ ದೆಹಲಿ ಹೈಕೋರ್ಟ್, ವಿಮಾನ ನಿಲ್ದಾಣ ಮತ್ತು ವಿಮಾನದ ಒಳಗೆ ಮಾಸ್ಕ್ ಧರಿಸುವ ಹಾಗೂ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳುವ ನಿಯಮಗಳನ್ನು ಉಲ್ಲಂಘಿಸುವುದು ಕಂಡುಬಂದ ಪ್ರಯಾಣಿಕರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ಶುಕ್ರವಾರ ಹೇಳಿದೆ. ಕರೋನಾ ನಿರ್ಮೂಲನೆಯಾಗಿಲ್ಲ ಮತ್ತು ಆಗಾಗ್ಗೆ ತಲೆ ಎತ್ತುತಲೇ ಇದೆ ಎಂದು ಅದು ಅಭಿಪ್ರಾಯಪಟ್ಟಿದೆ.
ಈ ಮಾನದಂಡಗಳನ್ನು ಉಲ್ಲಂಘಿಸುವುದು ಕಂಡುಬಂದಲ್ಲಿ ಅಂತಹ ಎಲ್ಲ ಪ್ರಯಾಣಿಕರಿಗೆ ದಂಡ ವಿಧಿಸಬೇಕು ಮತ್ತು ಅವರನ್ನು ನೋ ಫ್ಲೈ ಲಿಸ್ಟ್ಗೆ ಸೇರಿಸಬೇಕು ಎಂದು ಹೇಳಿದೆ. ನಿಯಮಗಳ ಜಾರಿಗೊಳಿಸಲು ಅನಿವಾರ್ಯತೆ ಇದ್ದು ಇದನ್ನು ಮಾಡಲೇಬೇಕಿದೆ ಎಂದು ಹೈಕೋರ್ಟ್ ಹೇಳಿದೆ.
ಅನೇಕ ನಿಯಮಗಳನ್ನು ರೂಪಿಸಿದ್ದರು ಅದನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ ಎಂದು ಗಮನಿಸಿರುವ ಹೈಕೋರ್ಟ್. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಸೇರಿದಂತೆ ಅಧಿಕಾರಿಗಳು ಅದರ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ಅದು ಹೇಳಿದೆ.
“ಈ ಉದ್ದೇಶಕ್ಕಾಗಿ, ಏರ್ಹೋಸ್ಟೆಸ್ಗಳು, ಕ್ಯಾಪ್ಟನ್ಗಳು, ಪೈಲಟ್ಗಳು ಮತ್ತು ಇತರರು ಸೇರಿದಂತೆ ವಿಮಾನ ನಿಲ್ದಾಣಗಳಲ್ಲಿನ ಸಿಬ್ಬಂದಿಗಳಿಗೆ ಮಾಸ್ಕ್ ಮತತು ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳುವ ನಿಯಮಗಳನ್ನು ಪಾಲಿಸಬೇಕು ಎಂದು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಪ್ರತ್ಯೇಕ ಬದ್ಧ ನಿರ್ದೇಶನಗಳನ್ನು ನೀಡಬೇಕುಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ಸಚಿನ್ ದತ್ತಾ ಅವರ ಪೀಠ ಹೇಳಿದೆ.

ಕೋವಿಡ್-19 ಸೋಂಕಿಗೆ ಒಳಗಾಗಿರುವ ಮತ್ತು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾದ ಡಿಜಿಸಿಎಯ ವಕೀಲೆ ಅಂಜನಾ ಗೊಸೈನ್ ಅವರು, ಕೋವಿಡ್-19 ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಾಗರಿಕ ವಿಮಾನಯಾನ ಸಚಿವಾಲಯವು ಮೇ 10 ರಂದು ಮತ್ತೊಂದು ಆದೇಶವನ್ನು ಹೊರಡಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅಧಿಕಾರಿಗಳು ವಿಮಾನ ನಿಲ್ದಾಣಗಳಲ್ಲಿ ಮತ್ತು ವಿಮಾನಗಳಲ್ಲಿ ಕರೋನಾ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಗಂಭೀರವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಾಲಯ, ಜುಲೈ 18ಕ್ಕೆ ವಿಚಾರಣೆಯನ್ನು ಮುಂದೂಡಿದೆ. ವಿಮಾನಗಳು ಮತ್ತು ಏರ್ಪೋರ್ಟ್ಗಳಲ್ಲಿ ಮಾಸ್ಕ್ ಧರಿಸದೆ ಇರುವುದು ಸೇರಿದಂತೆ ಕೋವಿಡ್ ನಿಯಮಗಳ ಉಲ್ಲಂಘನೆಯಾಗುತ್ತಿದೆ ಎಂದು ದಿಲ್ಲಿ ಹೈಕೋರ್ಟ್ನಲ್ಲಿ ಪಿಐಎಲ್ ದಾಖಲಾಗಿದೆ.
ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದ ಒಳಗೆ ವಿಮಾನ ಪ್ರಯಾಣ ಮಾಡಿದ್ದ ಹಾಲಿ ನ್ಯಾಯಮೂರ್ತಿಗಳ ಅನುಭವವನ್ನು ಕೂಡ ಹೈಕೋರ್ಟ್ ಪರಿಗಣಿಸಿದೆ. 2021ರ ಮಾರ್ಚ್ 8ರಂದು ನ್ಯಾ. ಸಿ. ಹರಿಶಂಕರ್ ಅವರು ಪ್ರಯಾಣಿಕರು ಸರಿಯಾಗಿ ಮಾಸ್ಕ್ ಧರಿಸದೆ ಇರುವುದು ಮತ್ತು ಧರಿಸುವುದಿಲ್ಲ ಎಂದು ಮೊಂಡುತನ ಪ್ರದರ್ಶಿಸುವುದರ ಬಗ್ಗೆ ಸುಮೊಟೊ ಪ್ರಕರಣ ಕೈಗೆತ್ತಿಕೊಂಡಿದ್ದರು.