ಸಂಸತ್ತಿಗೆ ಸಮಾನಾಂತರವಾಗಿ ದೆಹಲಿಯ ಜಂತರ್ ಮಂತರ್’ನಲ್ಲಿ ನಡೆಯುತ್ತಿರುವ ರೈತ ಸಂಸತ್ತಿಗೆ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚಾಗುತ್ತಿದೆ. 12ನೇ ದಿನಕ್ಕೆ ಈ ಸಂಸತ್ತು ಕಾಲಿಟ್ಟಿದೆ. ಶುಕ್ರವಾರದಂದು ರೈತ ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿದೆ. ಶುಕ್ರವಾರ ಎಂದಿನಂತೆ 200 ಜನ ರೈತ ಸಂಸದರು ಜಂತರ್ ಮಂತರ್’ನಲ್ಲಿ ಹಾಜರಿದ್ದರು. ಸರ್ಕಾರವು ರೈತರ ಆಂದೋಲನವನ್ನು ಹತ್ತಿಕ್ಕುವ ಎಲ್ಲಾ ಪ್ರಯತ್ನವನ್ನು ಮಾಡಿದ್ದರೂ, ಕಳೆದ ಎಂಟು ತಿಂಗಳಿನಿಂದ ಆಂದೋಲನವು ಯಶಸ್ವಿಯಾಗಿ ನಡೆಯುತ್ತಿದೆ. ಲಕ್ಷಾಂತರ ರೈತರು ಈ ಆಂದೋಲನದಲ್ಲಿ ಭಾಗಿಯಾಗಿದ್ದಾರೆ. ಇಷ್ಟಾದರೂ ರೈತರ ಬೇಡಿಕೆಯನ್ನು ಈಡೇರಿಸದ ಆಧಾರದ ಮೇಲೆ ಅವಿಶ್ವಾಸ ನಿರ್ಣಯವನ್ನು ಸದನದಲ್ಲಿ ಮಂಡಿಸಲಾಗಿದೆ.
ಮೋದಿ ನೇತೃತ್ವದ ಸರ್ಕಾರವು ರೈತರ ಆದಾಯವನ್ನು ದ್ವಿಗುಣಗೊಳಿಸುವ ಸುಳ್ಳು ಹೇಳಿರುವುದನ್ನು ಅವಿಶ್ವಾಸ ನಿರ್ಣಯ ಮಂಡಿಸುವಾಗ ಪರಿಗಣಿಸಲಾಗಿದೆ. ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಜರುಗಿಸದಿದ್ದರೂ, ಪದೇ ಪದೇ ಆ ಸುಳ್ಳನ್ನು ಹೇಳಲಾಗುತ್ತಿದೆ ಎಂದು ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ. ಇದರೊಂದಿಗೆ ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ನೀಡುವ ವಿಚಾರವಾಗಿ ಬಿಜೆಪಿ ಮತ್ತು ಪ್ರಧಾನ ಮಂತ್ರಿಗಳು ಪ್ರತೀ ಬಾರಿಯೂ ತಮ್ಮದೇ ಮಾತುಗಳಿಗೆ ವಿರುದ್ದವಾಗಿ ನಡೆದುಕೊಂಡಿದ್ದಾರೆ ಎಂದು ರೈತ ಸಂಸದರು ಹೇಳಿದ್ದಾರೆ.

“ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನಾ ಎಂಬ ಹೆಸರಿನಲ್ಲಿ ರೈತರಿಗೆ ಮೋಸ ಮಾಡಲಾಗಿದೆ. ಈ ಯೋಜನೆಯಿಮದ ಸರ್ಕಾರದ ಖರ್ಚು ಹೆಚ್ಚಾಯಿತು, ರೈತರಿಗೆ ಸಿಗುತ್ತಿದ್ದ ವಿಮೆಯ ಮೊತ್ತ ಕಡಿಮೆಯಾಯಿತು, ವಿಮಾ ಕಂಪನಿಗಳಿಗೆ ಹೆಚ್ಚುವರಿ ಲಾಭವಾಯಿತು. ಆಮದು ಮತ್ತು ರಫ್ತಿನ ನಡುವಿನ ವ್ಯತ್ಯಾಸ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಆಮದು ಹೆಚ್ಚಾಗುತ್ತಿದೆ. ರಫ್ತು ಕಡಿಮೆಯಾಗುತ್ತಿದೆ. ನೈಸರ್ಗಿಕ ವಿಕೋಪಗಳು ಉಂಟಾದಾಗ ರೈತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ಸಂಪೂರ್ಣವಾಗಿ ಸೋತಿದೆ,” ಎಂದು ಅವಿಶ್ವಾಸ ನಿರ್ಣಯ ಮಂಡಿಸುವಾಗ ಚರ್ಚೆ ಮಾಡಲಾಗಿದೆ.
ಇದರೊಂದಿಗೆ, ಮೋದಿ ಸರ್ಕಾರವು ಕಾರ್ಪೊರೇಟ್ ಪರ, ರೈತ ವಿರೋಧಿ ಕಾನೂನುಗಳನ್ನು ಜಾರಿ ಮಾಡಿದೆ. ರೈತರ ಬೇಡಿಕೆಯಂತೆ ರೈತ ವಿರೋಧಿ ಕರಾಳ ಕಾನೂನುಗಳನ್ನು ರದ್ದುಗೊಳಿಸಿ ಎಂ ಎಎಸ್ ಪಿಗೆ ಕಾನೂನಿನ ಮಾನ್ಯತೆ ನೀಡುವ ಕೆಲಸವನ್ನು ಸರ್ಕಾರ ಮಾಡಿಲ್ಲ, ಎಂದು ರೈತರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, ಸರ್ಕಾರದ ನೀತಿಗಳಿಂದ ಜನರು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತಾಗಿಯೂ ಚರ್ಚೆ ನಡೆಸಲಾಗಿದೆ. ಇಂಧನ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಅಭಿವೃದ್ದಿ ಹೊಂದದ ಆರೋಗ್ಯ ಕ್ಷೇತ್ರದಿಂದಾಗಿ ಜನರು ಕರೋನಾದಿಂದ ಪರಿತಪಿಸುತ್ತಿದ್ದಾರೆ. ಜನರ ಮೇಲೆ ಅವರಿಗೆ ಅರಿವಿಲ್ಲದಂತೆಯೇ ಬೇಹುಗಾರಿಕೆ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ. ಸರ್ಕಾರದ ವಿರುದ್ದ ದನಿ ಎತ್ತಿದವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿದ್ದರಿಂದ ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ, ಎಂದು ರೈತ ಸಂಸತ್ತಿನಲ್ಲಿ ಚರ್ಚಿಸಲಾಗಿದೆ.
ರೈತ ಸಂಸತ್ತಿಗೆ ವಿರೋಧ ಪಕ್ಷದ ನಾಯಕರ ಬೆಂಬಲವೂ ಲಭಿಸುತ್ತಿದ್ದು, ಶುಕ್ರವಾರವೂ ಹಲವು ಸಂಸದರು ಜಂತರ್ ಮಂತರ್’ಗೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್, ಡಿಎಂಕೆ, ಆರ್ ಜೆ ಡಿ, ಸಿಪಿಐಎಂ, ಸಿಪಿಐ, ಶಿವಸೇನೆ, ಆರ್ ಎಸ್ ಪಿ, ಟಿಎಂಸಿ, ಐಯುಎಂಎಲ್ ಸೇರಿದಂತೆ ಇತರೆ ಪಕ್ಷಗಳ ನಾಯಕರು ರೈತ ಸಂತ್ತಿಗೆ ಬೆಂಬಲ ಸೂಚಿಸಿದ್ದಾರೆ.
ಸಿಂಘು ಹಾಗೂ ಟಿಕ್ರಿ ಗಡಿಗಳಲ್ಲಿ ರೈತರ ಆಂದೋಲನ ಮತ್ತಷ್ಟು ಬಲಿಷ್ಟವಾಗುತ್ತಿದೆ. ಗುರುವಾರದಂದು ತಮಿಳುನಾಡಿನಿಂದ ಸುಮಾರು ಒಂದು ಸಾವಿರ ರೈತರು ಸಿಂಘು ಗಡಿಯನ್ನು ತಲುಪಿದ್ದಾರೆ. ಹರಿಯಾಣದಿಂದ 1500ಕ್ಕೂ ಹೆಚ್ಚು ವಾಹನಗಳಲ್ಲಿ ರೈತರು ಪ್ರತಿಭಟನೆಗೆ ಆಗಮಿಸಿದ್ದಾರೆ. ಉತ್ತರಾಖಂಡ್’ನಿಂದಲೂ ರೈತರ ದೊಡ್ಡಗುಂಪೊಂದು ಗಾಝೀಪುರ ಗಡಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಸೇರಿಕೊಂಡಿದೆ.











