ನವದೆಹಲಿ:ಮಾ.16: ವಿದೇಶದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಾವು ಅಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲೋಕಸಭೆಯಲ್ಲಿ ನನಗೆ ಅವಕಾಶ ನೀಡಿದರೆ ಖಂಡಿತ ಈ ಕುರಿತು ಮಾತನಾಡುತ್ತೇನೆ ಎಂದಿದ್ದಾರೆ.
ನಾನು ವಿದೇಶದಲ್ಲಿ ಭಾರತ ವಿರೋಧಿ ಹೇಳಿಕೆಯನ್ನು ನೀಡಿಲ್ಲ. ಭಾರತದ ಸದ್ಯದ ಪರಿಸ್ಥಿತಿಯ ಕುರಿತು ಮಾತ್ರ ಮಾತನಾಡಿದ್ದೇನೆ. ಭಾರತದ ಪ್ರಜಾಪ್ರಭುತ್ವ ಉಳಿಸಲು ನಾನು ವಿದೇಶಿ ನೆರವು ಕೇಳಿದ್ದೇನೆ ಎಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರವಾದುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಲಂಡನ್ನಲ್ಲಿ ನಾನು ಮಾಡಿದ ಭಾಷಣಕ್ಕೆ ಕ್ಷಮೆ ಕೋರಬೇಕು ಎಂದು ಆಡಳಿತಾರೂಢ ಬಿಜೆಪಿ ಆಗ್ರಹಿಸಿದೆ. ಕ್ಷಮೆ ಕೇಳುವಂತಹ ಯಾವುದೇ ಹೇಳಿಕೆಯನ್ನು ನಾನು ನೀಡಿಲ್ಲ. ಈ ಕುರಿತು ನಾನು ಇಂದು ಲೋಕಸಭೆಯಲ್ಲಿ ಮಾತನಾಡಲು ಸಿದ್ಧವಿದ್ದು, ಆಡಳಿತಾರೂಢ ಸದಸ್ಯರು ನನ್ನ ಮಾತನ್ನು ಕೇಳುವ ಸಂಯಮ ತೋರಬೇಕಷ್ಟೇ ಎಂದು ರಾಹುಲ್ ಗಾಂಧಿ ಮಾರ್ಮಿಕವಾಗಿ ಹೇಳಿದ್ದಾರೆ.

ಅದಾನಿ ವಿವಾದದಿಂದ ದೇಶದ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದಲೇ, ತಮ್ಮ ಭಾಷಣದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಅದಾನಿ ವಿವಾದ ಪ್ರಧಾನಿ ಮೋದಿ ಅವರ ಕೊರಳಿಗೆ ಸುತ್ತಿಕೊಂಡಿರುವುದನ್ನು ಮನಗಂಡಿರುವ ಬಿಜೆಪಿ, ಪ್ರಧಾನಿ ರಕ್ಷಣೆಗಾಗಿ ಸಂಸತ್ತಿನಲ್ಲಿ ಇಷ್ಟೆಲ್ಲಾ ನಾಟಕವಾಡುತ್ತಿದೆ ಎಂದು ರಾಹುಲ್ ಗಾಂಧಿ ಹರಿಹಾಯ್ದರು.
ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದು ಸತ್ಯ. ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ವಶಪಡಿಸಿಕೊಂಡಿದ್ದು, ವಿಪಕ್ಷಗಳ ಅಸ್ತಿತ್ವವನ್ನೇ ನಾಶ ಮಾಡಲು ಹೊರಟಿದೆ. ಸರ್ಕಾರದ ವಿರುದ್ಧ ಮಾತನಾಡುವವರನ್ನು ಗುರಿ ಮಾಡಲಾಗುತ್ತಿದೆ. ಈ ಸತ್ಯವನ್ನೇ ನಾನು ಲಂಡನ್ನ ನನ್ನ ಭಾಷಣದಲ್ಲಿ ಉಲ್ಲೇಖಿಸಿದ್ದೇನೆ. ಭಾರತದ ಇಂದಿನ ಸ್ಥಿತಿ ಜಗತ್ತಿನ ಪ್ರಜಾತಂತ್ರವಾದಿಗಳಿಗೆ ಆತಂಕ ತರಿಸಿರುವುದು ಸುಳ್ಳಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ಭಾರತದ ಪ್ರಜಾತಂತ್ರ ಅದೆಷ್ಟು ಅಪಾಯದಲ್ಲಿದೆ ಎಂಬುದಕ್ಕೆ, ಸಂಸತ್ತಿನಲ್ಲಿ ಆಡಳಿತಾರೂಢ ಸದಸ್ಯರು ಎಬ್ಬಿಸಿರುವ ಗದ್ದಲವೇ ಸಾಕ್ಷಿ. ತಮ್ಮ ಭ್ರಷ್ಟಾಚಾರ, ಪ್ರಜಾತಂತ್ರ ವಿರೋಧಿ ನಿಲುವನ್ನು ಮುಚ್ಚಿಕೊಳ್ಳಲು, ವಿಪಕ್ಷ ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಅವರು ಮಾಡುತ್ತಿದ್ದಾರೆ. ಆದರೆ ಪ್ರಜಾಪ್ರಭುತ್ವದ ಪರವಾಗಿ ಹಾಗೂ ಸತ್ಯದ ಪರವಾಗಿ ನಾನು ನನ್ನ ಧ್ವನಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇನೆ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.