ರಾಹುಲ್ ಗಾಂಧಿ ಇಡಿ ವಿಚಾರಣೆ ಕುರಿತಂತೆ ದೆಹಲಿ ಮತ್ತು ರಾಜ್ಯ ರಾಜಧಾನಿ ಸೇರಿ ಅನೇಕ ರಾಜ್ಯಗಳಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಕೂಡ ಇಂದು ಇಡಿ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ದೆಹಲಿಯಲ್ಲಿ ಮಾತನಾಡಿದ ಪಿ ಚಿದಂಬರಂ ಅವರು, ಕಾನೂನಿನ ದುರುಪಯೋಗದ ವಿರುದ್ಧ ನಾವು ಪ್ರತಿಭಟಿಸುತ್ತಿದ್ದೇವೆ, ಇಡಿ ಕಾನೂನನ್ನು ಅನುಸರಿಸಿದರೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಇಡಿ ಕಾನೂನನ್ನು ಅನುಸರಿಸುತ್ತಿಲ್ಲ. ನಿಗದಿತ ಅಪರಾಧ ಯಾವುದು? ಯಾವ ಪೊಲೀಸ್ ಏಜೆನ್ಸಿ ಎಫ್‌ಐಆರ್ ದಾಖಲಿಸಿದೆ? ಎಂಬ ನಾವು ಕೇಳುತ್ತಿರುವ ಯಾವ ಪ್ರಶ್ನೆಗೂ ಅವರ ಬಳಿ ಉತ್ತರವಿಲ್ಲ ಎಂದು ಕಡಿಕಾರಿದ್ದಾರೆ.

ನಿಸ್ಸಂಶಯವಾಗಿ, ಅವರು ಕಾನೂನನ್ನು ಅನುಸರಿಸುತ್ತಿಲ್ಲ ಮತ್ತು ಪ್ರಜಾಪ್ರಭುತ್ವದಲ್ಲಿ ನಾವು ಪ್ರತಿಭಟಿಸಲು ಅರ್ಹರು … ಕಳೆದ 4-5 ವರ್ಷಗಳಲ್ಲಿ ಬಿಜೆಪಿ ನಾಯಕರ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆಯೇ? ಬಿಜೆಪಿ ಆಡಳಿತವಿರುವ ಯಾವುದಾದರೂ ರಾಜ್ಯದಲ್ಲಿ ಅವರ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದೆಯೇ? ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಪ್ರಶ್ನಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು ಸೋಮವಾರ ಒಂಬತ್ತು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತು. ಇದೀಗ ಇಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.