ಬಿಹಾರದಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದ ಜೆಡಿಯು, ಇದೀಗ ಬಿಜೆಪಿ ಮೈತ್ರಿಯಿಂದ ಹೊರ ಬಂದು ಲಾಲೂ ಪ್ರಸಾದ್ ಯಾದವ್ ಅವರ ಆರ್ಜೆಡಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಇದೀಗ ಮಹತ್ವದ ಘೋಷಣೆ ಮಾಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆ ಮಾಡಬೇಕು ಎನ್ನುವ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ಚುನಾವಣೆಯನ್ನು ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಅವರ ನೇತೃತ್ವದಲ್ಲಿ ಎದುರಿಸುತ್ತೇವೆ ಎಂದಿದ್ದಾರೆ.
ನನಗೆ ಪ್ರಧಾನಿ ಆಸೆಯಿಲ್ಲ, ಇರೋದು ಒಂದೇ ಆಸೆ..!
ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಅಳಿಸಬೇಕು ಎಂದಿರುವ ನಿತೀಶ್ ಕುಮಾರ್, ನನಗೆ ವೈಯಕ್ತಿಕವಾಗಿ ಪ್ರಧಾನಿ ಆಗುವ ಯಾವುದೇ ಆಸೆಯಿಲ್ಲ ಎಂದಿದ್ದಾರೆ. ನನಗೆ ಇರುವುದು ಒಂದೇ ಆಸೆ, ಅದು ಬಿಜೆಪಿ ಸರ್ಕಾರವನ್ನು ಕೇಂದ್ರವನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವುದು ಎಂದಿದ್ದಾರೆ. 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಆ ಚುನಾವಣೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರವನ್ನು ಕೆಳಕ್ಕಿಳಿಸಲು ಏನೇನು ಬೇಕು ಅದೆಲ್ಲವನ್ನು ಮಾಡೋಣ ಎನ್ನುವ ಮೂಲಕ ತೃತೀಯ ರಂಗದ ಸರ್ಕಾರ ರಚನೆ ಮಾಡುವ ಭರವಸೆಯ ಮಾತುಗಳನ್ನು ಹೇಳಿದ್ದಾರೆ. ಇನ್ನು ಬಿಹಾರದಲ್ಲಿ 2025ಕ್ಕೆ ವಿಧಾನಸಭಾ ಚುನಾವಣೆ ಎದುರಾಗಲಿದ್ದು, ಆ ಚುನಾವಣೆಯನ್ನು ಲಾಲೂ ಪುತ್ರ ತೇಜಸ್ವಿ ಯಾದವ್ ನೇತೃತ್ವದಲ್ಲಿ ಎದುರಿಸುತ್ತೇವೆ ಎನ್ನುವ ಮೂಲಕ ನಿತೀಶ್ ಕುಮಾರ್ ತನ್ನ ಉತ್ತರಾಧಿಕಾರಿಯಾಗಿ ತೇಜಸ್ವಿಯನ್ನು ಆಯ್ಕೆ ಮಾಡಿದ್ದಾರೆ.
ಪ್ರಾದೇಶಿಕ ಪಕ್ಷಗಳ ಒಟ್ಟುಗೂಡಿಸಿ ಸರ್ಕಾರ ರಚನೆ..!
ತೇಜಸ್ವಿ ಯಾದವ್ಗೆ ಬಿಹಾರದ ಹೊಣೆ ನೀಡಿ ರಾಷ್ಟ್ರರಾಜಕಾರಣಕ್ಕೆ ಮರಳುವ ಬಗ್ಗೆ ನಿತೀಶ್ ಕುಮಾರ್ ಘೋಷಣೆ ಮಾಡಿದ್ದಾರೆ. 2024ರಲ್ಲಿ ಬಿಜೆಪಿಯನ್ನ ಸೋಲಿಸಲು ಪಣತೊಟ್ಟಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಈಗಾಗಲೇ 10ಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷಗಳ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಈಗಾಗಲೇ ದೇಶಾದ್ಯಂತ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್ ಹೊರತುಪಡಿಸಿ ಉಳಿದ ಪ್ರಾದೇಶಿಕ ಪಕ್ಷಗಳ ಜೊತೆಗೆ ಚರ್ಚೆ ಮಾಡುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ನಿತೀಶ್ ಕುಮಾರ್ ತಯಾರಿ ಆರಂಭ ಮಾಡಿದ್ದು, ಪ್ರಧಾನಿ ಅಭ್ಯರ್ಥಿ ಆಗುವ ತಯಾರಿ ಮಾಡಿದ್ದಾರೆ. ಇದೇ ಕಾರಣಕ್ಕೆ ಬಿಹಾರದಲ್ಲಿ 2025ಕ್ಕೆ ತೇಜಸ್ವಿ ಯಾದವ್ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆ ಎದುರಿಸುತ್ತೇವೆ ಎಂದಿರುವುದು ಪ್ರಧಾನಿ ಅಭ್ಯರ್ಥಿ ಆಗುವ ಸೂಚನೆ ಎನ್ನಲಾಗ್ತಿದೆ.
ಈ ಹಿಂದೆ ಮಮತಾ ಬ್ಯಾನರ್ಜಿ ಕೂಡ ಮಾತುಕತೆ ನಡೆಸಿದ್ದರು..!
ಪ್ರಾದೇಶಿಕ ಪಕ್ಷಗಳಲ್ಲಿ ಸಾಕಷ್ಟು ನಾಯಕರು ಇದ್ದಾರೆ. ಮಮತಾ ಬ್ಯಾನರ್ಜಿ, ಶರದ್ ಪವಾರ್, ನಿತೀಶ್ ಕುಮಾರ್, ಅರವಿಂದ್ ಕೇಜ್ರಿವಾಲ್, ಕೆ. ಚಂದ್ರಶೇಖರ್ ರಾವ್ ಸೇರಿದಂತೆ ಹಲವಾರು ನಾಯಕರು ಪ್ರಬಲ ಆಗಿದ್ದರೂ ಒಗ್ಗಟ್ಟಿನ ಕೊರತೆ ಇದೆ. ಕಳೆದ ಬಾರಿ ಮಮತಾ ಬ್ಯಾನರ್ಜಿ ಕೂಡ ಹತ್ತಾರು ಪಕ್ಷದ ನಾಯಕರ ಜೊತೆಗೆ ಸಭೆ ನಡೆಸಿದ್ದರು. ಈ ಬಾರಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕೂಡ ಭಾರತ್ ಜೋಡೋ ಯಾತ್ರೆ ಮಾಡುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಪ್ರಯತ್ನ ನಡೆಸಿದೆ. ಇದರ ನಡುವೆ ಪ್ರಾದೇಶಿಕ ಪಕ್ಷಗಳೂ ಕೂಡ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಘಟಬಂಧನ್ ನಿರ್ಮಾಣ ಮಾಡುವ ಮನಸ್ಸು ಮಾಡಿರುವುದು ಬಿಜೆಪಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯನ್ನೂ ಹುಟ್ಟಿಸಿದೆ.
ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರೋದು 9 ರಾಜ್ಯ ಮಾತ್ರ..!
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಇರುತ್ತಾರೆ. ಆದರೆ ಇಡೀ ದೇಶದಲ್ಲಿ 5 ಈಶಾನ್ಯ ರಾಜ್ಯಗಳು ಸೇರಿ ಕೇವಲ 9 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಗೋವಾ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಸರ್ಕಾರವಿದೆ. ಮಧ್ಯಪ್ರದೇಶದ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರ ಹಿಡಿದಿದೆ. ಉಳಿದ ಎಲ್ಲಾ ಕಡೆಯಲ್ಲೂ ಬಿಜೆಪಿಯೇತರ ಸರ್ಕಾರಗಳೇ ಇವೆ. ಇದೀಗ ಎಲ್ಲರೂ ಒಗ್ಗಟ್ಟಾಗಿ ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಪಣತೊಟ್ಟರೆ ಮೋದಿ ಸರ್ಕಾರಕ್ಕೆ ಕುತ್ತು ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಕೃಷ್ಣಮಣಿ