ಒಡಿಶಾ : ಏ.21: 70 ವರ್ಷದ ವೃದ್ಧೆಯೊಬ್ಬರು ಬ್ಯಾಂಕ್‌ನಿಂದ ಪಿಂಚಣಿ ಪಡೆಯಲು ಸುಡುವ ಬಿಸಿಲಿನಲ್ಲಿ ಕಿಲೋಮೀಟರ್ ವರೆಗೆ ಬರಿಗಾಲಿನಲ್ಲಿ ನಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಪಿಂಚಣಿ ಪಡೆಯಲು ವಯೋವೃದ್ಧೆಯೊಬ್ಬರು ಪ್ಲಾಸ್ಟಿಕ್ ಕುರ್ಚಿಯ ಸಹಾಯದಿಂದ ಬರಿಗಾಲಿನಲ್ಲೇ ನಡೆದುಕೊಂಡು ಬಂದಿದ್ದಾರೆ. ಏಪ್ರಿಲ್ 17 ರಂದು ಒಡಿಶಾದ ನಬ್ರಂಗ್‌ಪುರ ಜಿಲ್ಲೆಯ ಜರಿಗಾಂವ್ ಬ್ಲಾಕ್‌ನಲ್ಲಿಈ ಘಟನೆ ನಡೆದಿದೆ. ವೃದ್ಧೆ ಪಿಂಚಣಿ ಪಡೆಯಲು ಎಸ್ ಬಿಐ ಬ್ಯಾಂಕ್‌ಗೆ ಹೋಗಿದ್ದಾರೆ, ಆದ್ರೆ ಆಕೆಯ ಹೆಬ್ಬೆರಳಿನ ಗುರುತು ದಾಖಲೆಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದರು. ಇದರಿಂದ ಅವರು ಮತ್ತೆ ಮನೆಗೆ ಹೋಗುವಂತೆ ವಾಪಸ್ ಒತ್ತಾಯಿಸಿದ್ದಾರೆ. ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್, ‘ತನ್ನ’ ಮುರಿದ ಬೆರಳುಗಳಿಂದ’ ಹಣವನ್ನು ಹಿಂಪಡೆಯಲು ತೊಂದರೆಯನ್ನು ಎದುರಿಸುತ್ತಿದ್ದಾರೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ’ ಎಂದು ಹೇಳಿದ್ದಾರೆ.

‘ವೃದ್ಧೆಯ ಬೆರಳುಗಳು ಮುರಿದುಹೋಗಿವೆ. ಆದ್ದರಿಂದ ಆಕೆಯು ಪಿಂಚಣಿಯನ್ನು ಪಡೆಯಲು ತೊಂದರೆ ಎದುರಿಸುತ್ತಿದ್ದಾಳೆ. ಆಕೆಗೆ ನಮ್ಮ ಬ್ಯಾಂಕ್‌ನಿಂದ ಕೈಯಾರೆ 3,000 ರೂ.ಗಳನ್ನು ನೀಡಿದ್ದೇವೆ. ನಾವು ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುತ್ತೇವೆ’ ಎಂದು ಜರಿಗಾಂವ್ ಶಾಖೆಯ ಎಸ್‌ಬಿಐ ವ್ಯವಸ್ಥಾಪಕರು ತಿಳಿಸಿದ್ದಾರೆ.
ಸೂರ್ಯ ಹರಿಜನ ಎಂಬ ವೃದ್ಧೆಯದು ಬಡತನದ ಕುಟುಂಬ. ಆಕೆಯ ಹಿರಿಯ ಮಗ ಬೇರೆ ರಾಜ್ಯದಲ್ಲಿ ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಅವರು ತಮ್ಮ ಕಿರಿಯ ಮಗನ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ ಮತ್ತು ಆತ ಇತರರ ದನಗಳನ್ನು ಮೇಯಿಸುತ್ತಾ ತನ್ನ ಜೀವನವನ್ನು ನಡೆಸುತ್ತಿದ್ದಾರೆ. ಉಳುಮೆ ಮಾಡಲು ಜಮೀನಿಲ್ಲದ ಈ ಕುಟುಂಬ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದೆ.