ಒಂಬತ್ತು ಯುರೋಪಿಯನ್ ರಾಷ್ಟ್ರಗಳು ಕೋವಿಶೀಲ್ಡ್ ಲಸಿಕೆ ಪಡೆದ ಪ್ರಯಾಣಿಕರಿಗೆ ತಮ್ಮ ದೇಶಕ್ಕೆ ಪ್ರಯಾಣಕ್ಕೆ ಅನುಮತಿ ನೀಡಿದ್ದು, ಕೊವಿಶೀಲ್ಡ್ ಲಸಿಕೆಗೆ ಗ್ರೀನ್ ಸಿಗ್ನಲ್ ತೋರಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಐಸ್ಲ್ಯಾಂಡ್, ಐರ್ಲೆಂಡ್, ಸ್ಪೇನ್, ಸ್ವಿಟ್ಝರ್‌ಲ್ಯಾಂಡ್ ಹಾಗೂ ಎಸ್ಟೀನಿಯಾ ದೇಶಗಳು ತಮ್ಮ ದೇಶದ ಒಳಕ್ಕೆ ಕೊವಿಶೀಲ್ಡ್ ಲಸಿಕೆ ಪಡೆದವರಿಗೆ ಅವಕಾಶ ಕೊಟ್ಟಿವೆ.
ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಜನರ ಪ್ರಯಾಣಕ್ಕೆ ತೊಂದರೆ ಆಗಬಾರದು ಎಂಬ ಹಿತದೃಷ್ಟಿಯಿಂದ ಲಸಿಕೆ ಪಡೆದವರಿಗೆ ‘ಡಿಜಿಟಲ್ ಕೋವಿಡ್ ಪ್ರಮಾಣಪತ್ರ (ಗ್ರೀನ್ ಪಾಸ್) ’ ವಿತರಿಸುವ ಕಾರ್ಯರೂಪವನ್ನು ಐರೋಪ್ಯ ಒಕ್ಕೂಟವು ಜಾರಿಗೊಳಿಸಿದೆ. ಈ ವ್ಯವಸ್ಥೆಯಡಿ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ(ಇಎಂಎ) ಅನುಮೋದಿಸಿರುವ ಲಸಿಕೆಯನ್ನು ಪಡೆದವರು ಯಾವುದೇ ನಿಬಂಧನೆಗಳಿಲ್ಲದೇ ಯುರೋಪಿಯನ್ ರಾಷ್ಟ್ರಗಳಿಗೆ ಪ್ರಯಾಣಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಕೋವಿಶೀಲ್ಡ್ ಲಸಿಕೆಯನ್ನು ಪಡೆದವರಿಗೆ ಯುರೋಪ್ ರಾಷ್ಟ್ರಗಳಿಗೆ ಪ್ರಯಾಣಿಸಲು ಅನುಮತಿ ಸಿಗಲಿಕ್ಕಿಲ್ಲ ಎಂಬ ಆತಂಕ ಅಧ್ಯಯನಕ್ಕಾಗಿ ಯುರೋಪ್ ದೇಶಗಳಿಗೆ ತೆರಳುವವರಲ್ಲಿ ಮನೆ ಮಾಡಿತ್ತು. ಆದರೆ ಐರೋಪ್ಯ ರಾಷ್ಟ್ರಗಳು ಇಂದು ಕೈಗೊಂಡ ನಿರ್ಧಾರವು ಜನತೆಯಲ್ಲಿ ಆಶಾಭಾವನೆ ಮೂಡಿಸಿದೆ.
ಈ ನಡುವೆ, ZyCoV-D ತಯಾರಿಕಾ ಸಂಸ್ಥೆ ಜೈಡಸ್ ಕ್ಯಾಡಿಲಾವು ಭಾರತದಲ್ಲಿ ಕೋವಿಡ್ -19 ಲಸಿಕೆಯ ತುರ್ತು ಬಳಕೆಯ ಅನುಮೋದನೆಗಾಗಿ ದೇಶದ ಔಷಧ ನಿಯಂತ್ರಕ ಕೇಂದ್ರಕ್ಕೆ ಅರ್ಜಿಸಲ್ಲಿಸಿದ್ದು, ವರ್ಷಕ್ಕೆ 120 ದಶಲಕ್ಷ ಡೋಸ್ ತಯಾರಿಸಲು ಯೋಜನೆ ಮಾಡಲಾಗಿದೆ ಎಂದು ತಿಳಿಸಿದೆ.
ಮಾಡರ್ನಾ, ಅಸ್ಟ್ರಾಜೆನೆಕಾ & ಕೋವಿಶೀಲ್ಡ್, ಕೊವಾಕ್ಸಿನ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ನಂತರ ZyCoV-D ಲಸಿಕೆಯು ಭಾರತದಲ್ಲಿ ಬಳಕೆಗೆ ಅವಕಾಶ ಪಡೆದ ಐದನೇ ಲಸಿಕೆಯಾಗಿದೆ.