ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಮಾಡಿ ಯು ಎ ಪಿ ಎ ಮತ್ತು ದೇಶದ್ರೋಹ ಆರೋಪದಡಿಯಲ್ಲಿ ಬಂಧಿಸಲ್ಪಟ್ಟಿದ್ದ ಅಖಿಲ್ ಗೋಗೋಯ್‌ರನ್ನು ಅಸ್ಸಾಮಿನ ಎನ್ ಐ ಎ ನ್ಯಾಯಾಲಯ ದೋಷಮುಕ್ತಗೊಳಿಸಿದೆ.
‘ಹಿಂಸಾಚಾರಕ್ಕೆ ದುಷ್ಪ್ರೇರಣೆ ನೀಡದ ಬಂದ್ ಮತ್ತು ಪ್ರತಿಭಟನೆಗಳು ಯುಎಪಿಎ ಕಾಯ್ದೆಯಡಿಯಲ್ಲಿ ‘ಭಯೋತ್ಪಾದನಾ ಕೃತ್ಯ’ಗಳೆಂದು ಪರಿಗಣಿಸಲ್ಪಡುವುದಿಲ್ಲ ‘ ಎಂದು ಎನ್ ಐ ಎ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

‘ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ನಡೆಯುವ ಪ್ರತಿಭಟನೆಗಳು ಮತ್ತು ರಸ್ತೆ ತಡೆಗಳು ಕೆಲವೊಮ್ಮೆ ಸಾರ್ವಜನಿಕರಿಗೆ ಅನಾನುಕೂಲವಾಗುವ ಸಾಧ್ಯತೆಗಳೂ ಇವೆ ಆದಾಗ್ಯೂ ಇಂತಹ ತಾತ್ಕಾಲಿಕ ಬಂದ್‌ಗಳು ಗುಂಪುಗಳನ್ನು ಹಿಂಸಾಚಾರವೆಸಗಲು ಉದ್ರೇಕಿಸುವ ಸಾಧ್ಯತೆಗಳಿಲ್ಲದಿದ್ದರೆ ಅದು ಈ ಕಾಯ್ದೆಯ ಕಲಂ ೧೫ ರಡಿಯಲ್ಲಿ ಭಯೋತ್ಪಾದನಾ ಕೃತ್ಯವಾಗಲಾರದು ಎಂದು ನನ್ನ ಅಭಿಪ್ರಾಯವಾಗಿದೆ. ಇದು ಆ ಕಾನೂನಿನ ಆಶಯಕ್ಕೂ ಅತೀತವಾಗಿದೆ ಮತ್ತು ಇಂತಹ ಕೃತ್ಯಗಳನ್ನು ಬೇರೆ ಕಾನೂನುಗಳಿಂದಲೂ ನಿಭಾಯಿಸಲು ಸಾಧ್ಯವಿದೆ. ಪ್ರತಿಭಟನೆ ನಡೆಸುವವರೆಲ್ಲರ ಮೇಲೆ ಯು ಎ ಪಿ ಎ ಕಾನೂನನ್ನೇ ಜಾರಿಗೊಳಿಸುವ ಅಗತ್ಯವಿಲ್ಲ ‘ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಆದಕಾರಣ ಅಖಿಕ್ ಗೊಗೋಯ್, ಮನಸ್ ಕೋನ್ವಾರ ಮತ್ತು ಬಿಟ್ಟು ಸೋನೋವಾಲರ ವಿರುದ್ಧವಿದ್ದ ಎಲ್ಲಾ ಆರೋಪಗಳನ್ನು ರದ್ದುಗೊಳಿಸಿದೆ.
ಅಸ್ಸಾಮ್ ರಾಜ್ಯದ ಶಿಬ್ ಸಾಗರ್ ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ದಿಸಿದ್ದ ಅಖಿಲ್ ಗೊಗೋಯ್ ಬಿಜೆಪಿ, ಕಾಂಗ್ರೆಸ್ ಹಾಗೂ ಇನ್ನಿಬ್ಬರು ಪಕ್ಷೇತರ ಅಭ್ಯರ್ಥಿಗಳ ವಿರುದ್ಧ ಜಯ ಸಾಧಿಸಿದ್ದರು.

ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟನೆಗಿಳಿದು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ(UAPA)ಯಡಿಯಲ್ಲಿ ರಾಷ್ಟ್ರೀಯ ತನಿಖಾದಳದಿಂದ ಬಂಧನಕ್ಕೊಳಗಾಗಿದ್ದ ಗೋಗೋಯಿಗೆ ಗುವಾಹಟಿ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿದ್ದರೂ ಕೂಡಾ NIA ಅವರನ್ನು ಪುನಃ ಬಂಧಿಸಿತ್ತು. ಒಮ್ಮೆಯೂ ಚುನಾವಣಾ ಪ್ರಚಾರಕ್ಕಾಗಿ ತನ್ನ ಕ್ಷೇತ್ರಕ್ಕೆ ಬರದೆ ತಾನು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದಲೇ ನಾಮಪತ್ರ ಸಲ್ಲಿಸಿದ್ದರು.
ಇದೀಗ ಅಖಿಲ್ ಗೋಗೋಯ್ ದೋಷಮುಕ್ತರಾಗಿದ್ದು ಮಾತ್ರವಲ್ಲದೆ ಶಾಸಕರಾಗಿ ತನ್ನ ಕ್ಷೇತ್ರದ ಜನರನ್ನು ಪ್ರತಿನಿಧಿಸಲಿದ್ದಾರೆ.