ದೇಶದಲ್ಲಿ ನಡೆಯುವ ಭಯೋತ್ಪಾದಕ ಕೃತ್ಯಗಳು ಸೇರಿದಂತೆ ಇನ್ನಿತರೆ ವಿಧ್ವಂಸಕಾರಿ ಕೃತ್ಯಗಳ ಪ್ರಕರಣಗಳ ತನಿಖೆಯನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಅದರಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ಕೇಂದ್ರ ಸರ್ಕಾರಿ ಸ್ವಾಮ್ಯದ ತನಿಖಾ ಸಂಸ್ಥೆಯ ಬಗ್ಗೆಯೂ ಹಲವು ಅನುಮಾನಗಳು ವ್ಯಕ್ತವಾಗತೊಡಗಿವೆ.
ಈ ತನಿಖಾ ಸಂಸ್ಥೆಯ ಅಸ್ತಿತ್ವ ಮತ್ತು ಪಾವಿತ್ರ್ಯತೆಯ ಬಗ್ಗೆ ಅನುಮಾನಗಳು ಬರತೊಡಗಿರುವುದರಿಂದ ಸಂಸ್ಥೆಯ ಕಾನೂನಿನ ಸಂಪೂರ್ಣ ವಿವರಗಳನ್ನು ಕೋರಿ ಹಲವಾರು ಅರ್ಜಿಗಳು ಸಲ್ಲಿಕೆಯಾಗುತ್ತಿವೆ.
ಈ ಎನ್ಐಎ ಕಾಯ್ದೆಯೇ ಅಸಂವಿಧಾನಿಕವಾಗಿದೆ ಎಂದು ಛತ್ತೀಸ್ ಘಡ ಸರ್ಕಾರ ಹೇಳಿದೆ. ಇದರ ಬೆನ್ನಲ್ಲೇ ಎನ್ಐಎ ಕಾಯ್ದೆ ವಿರುದ್ಧ ಬಿಲಾಸ್ಪುರ ಹೈಕೋರ್ಟಿನಲ್ಲಿ ಎರಡು ಅರ್ಜಿಗಳು ದಾಖಲಾಗಿವೆ. ಈ ಎನ್ಐಎ ಕಾಯ್ದೆ 2008 ಸಂವಿಧಾನದ 131 ನೇ ವಿಧಿಗೆ ವಿರುದ್ಧವಾಗಿದೆ ಎಂದು ಛತ್ತೀಸ್ ಘಡ ಸರ್ಕಾರ ಹೇಳಿದೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಈ ಎನ್ಐಎ ಕಾಯ್ದೆಯನ್ನು ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅನುಷ್ಠಾನಕ್ಕೆ ತಂದಿತ್ತು. ಆದರೆ, ಇದೀಗ ಇದೇ ಪಕ್ಷ ನ್ಯಾಯಾಲಯದಲ್ಲಿ ಈ ಕಾಯ್ದೆಯ ವಿರುದ್ಧ ನ್ಯಾಯಾಲಯದ ಕಟಕಟೆ ಹತ್ತಿದೆ.
ಬಿಜೆಪಿ ಶಾಸಕ ಭೀಮಾ ಮಾಂಡವಿ ಹತ್ಯೆಗೆ ಸಂಬಂಧಿಸಿದಂತೆ ಛತ್ತೀಸ್ ಘಡ ಪೊಲೀಸರು ನಡೆಸಿದ ತನಿಖೆಯನ್ನು ಎನ್ಐಎ ಒಪ್ಪಿಕೊಂಡಿರಲಿಲ್ಲ ಮತ್ತು ಆರೋಪಿಗಳನ್ನು ಬಂಧಿಸಿ ಚಾರ್ಜ್ ಶೀಟ್ ದಾಖಲಿಸಿತ್ತು.
ಇದಲ್ಲದೇ ಜೀರಂ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ್ದ ಎನ್ಐಎ ರಾಜ್ಯ ಸರ್ಕಾರ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ತನಿಖಾ ವರದಿಯನ್ನು ನೀಡಲಿಲ್ಲ. ಈ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ವಿ.ಸಿ.ಶುಕ್ಲಾ, ನಂದಕುಮಾರ್ ಮತ್ತು ಮಹೇಂದ್ರ ಕರ್ಮಾ ಅವರು ಹತ್ಯೆಯಾಗಿದ್ದರು. ಈ ಪ್ರಕರಣದ ಪ್ರಮುಖ ರೂವಾರಿಗಳು ಯಾರೆಂಬುದು ಬಹಿರಂಗವಾಗಲಿ ಎಂಬ ಉದ್ದೇಶದಿಂದ ಸರ್ಕಾರ ವರದಿಯನ್ನು ನೀಡುವಂತೆ ಹಲವು ಬಾರಿ ಮನವಿ ಮಾಡಿತ್ತು.
ಮೊದಲ ಪ್ರಕರಣದಲ್ಲಿ ಎನ್ಐಎ ದ ಅಸ್ತಿತ್ವ ಮತ್ತು ರಾಜ್ಯ ಸರ್ಕಾರಗಳ ತನಿಖೆಗಳಲ್ಲಿ ಅದರ ಹಸ್ತಕ್ಷೇಪವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಎರಡನೇ ಪ್ರಕರಣದಲ್ಲಿ ರಾಜ್ಯ ಸರ್ಕಾರಗಳ ವಿಚಾರದಲ್ಲಿ ಮೂಗು ತೂರಿಸುವ ಮೂಲಕ ಸಂವಿಧಾನದ ಆಶಯಕ್ಕೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದು ಆರೋಪಿಸಿ ಎನ್ಐಎ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.
ಇದೀಗ ಎನ್ಐಎ ಮೂಲಕ ಸಂವಿಧಾನದ 131 ನೇ ವಿಧಿಯ ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದೆ. ಕೇಂದ್ರ ಸರ್ಕಾರ ಎನ್ಐಎ ಮೂಲಕ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರಗಳ ತನಿಖಾ ವಿಚಾರಗಳಲ್ಲಿ ತಲೆ ಹಾಕುತ್ತಿದೆ. ಇದು ಸಂವಿಧಾನ ಉಲ್ಲಂಘನೆಯ ಕ್ರಮವಾಗಿದೆ ಎಂದು ಛತ್ತೀಸ್ ಘಡ ಸರ್ಕಾರ ತನ್ನ ಅರ್ಜಿಯಲ್ಲಿ ಹೇಳಿದೆ.
ರಾಜ್ಯ ಸರ್ಕಾರದ ಅನುಮತಿಯಿಲ್ಲದೇ ಯಾವುದೇ ಪೊಲೀಸರು ರಾಜ್ಯದ ವಿಚಾರದಲ್ಲಿ ತಲೆ ಹಾಕುವಂತಿಲ್ಲ. ಅನುಮತಿ ನೀಡುವ ಹಕ್ಕನ್ನು ಸಂವಿಧಾನ ರಾಜ್ಯ ಸರ್ಕಾರಗಳಿಗೆ ಒದಗಿಸಿದೆ. ಎನ್ಐಎ ಕಾಯ್ದೆ ಪ್ರಕಾರ ಈ ತನಿಖಾ ಸಂಸ್ಥೆಯು ರಾಜ್ಯ ಸರ್ಕಾರಗಳ ಪೊಲೀಸರ ಮೇಲೆ ಸವಾರಿ ಮಾಡಲು ಅನುಮತಿ ನೀಡಿದಂತಿದೆ.
ಅಲ್ಲದೇ ಎನ್ಐಎ ಕಾಯ್ದೆಯ ಪ್ರಕಾರ ಯಾವುದೇ ಕಾರಣ ಅಥವಾ ಸಮರ್ಥನೆಯೂ ಇಲ್ಲದೇ ಅಥವಾ ಅನುಮತಿಯನ್ನೂ ಪಡೆಯದೇ ರಾಜ್ಯಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ. ಏಕೆಂದರೆ, ಕೇಂದ್ರ ಸರ್ಕಾರದ ಅಧಿಕಾರವನ್ನು ನಿಯಂತ್ರಿಸುವ ಯಾವುದೇ ನಿಯಮಾವಳಿಗಳು ಇಲ್ಲ. ಈ ಕಾರಣದಿಂದಲೇ ಎನ್ಐಎ ನೇರವಾಗಿ ರಾಜ್ಯ ಸರ್ಕಾರಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ.
ರಾಜ್ಯ ಸರ್ಕಾರದ ಪರವಾಗಿ ವಿವೇಕ್ ತನ್ಖಾ ಅವರು ಎನ್ಐಎ ಕಾರ್ಯ ನಿರ್ವಹಣೆ ವಿರುದ್ಧ ಬಿಲಾಸ್ಪುರ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಿರೀಕ್ಷೆಯಂತೆ ಈ ಅರ್ಜಿಯ ವಿಚಾರಣೆಗೆ ಬಾಕಿ ಉಳಿದಿದ್ದು, ಇದರ ಕುರಿತು ಸುಪ್ರೀಂ ಕೋರ್ಟ್ ನಿರ್ಣಯ ತೆಗೆದುಕೊಳ್ಳಬೇಕಾಗಿದೆ.
ಈ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಎನ್ಐಎ ಹೈಕೋರ್ಟಿನಲ್ಲಿ ವಾದ ಮಂಡಿಸುತ್ತಾ, ತನ್ನ ಪರಿಮಿತಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು, ತನಿಖೆಗಳಿಗೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಮತ್ತು ದೇಶದ ಯಾವುದೇ ರಾಜ್ಯಗಳಲ್ಲಿ ಬೇಕಾದರೂ ಸ್ವಯಂಪ್ರೇರಿತವಾಗಿ ತನಿಖೆ, ವಿಚಾರಣೆ ನಡೆಸಲು ಸ್ವಾತಂತ್ರ್ಯವಿದೆ ಎಂದು ವಾದಿಸಿದೆ.
ಈ ಎನ್ಐಎ ಕಾಯ್ದೆಯ ತಿದ್ದುಪಡಿ ವಿಚಾರದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಲ್.ಪುನಿಯಾ ಅವರು ಹೇಳುವಂತೆ, ಈ ಕಾಯ್ದೆಗೆ ಎನ್ ಡಿಎ ಸರ್ಕಾರ ತಿದ್ದುಪಡಿ ತಂದಿತ್ತು. ಇದು ಸಂಪೂರ್ಣವಾಗಿ ನಿರಂಕುಶವಾಗಿದ್ದು, ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ಎನ್ಐಎ ಯಾವುದೇ ಸಮನ್ವಯತೆ ಸಾಧಿಸದೇ, ರಾಜ್ಯ ಸರ್ಕಾರಗಳ ಅನುಮತಿಯನ್ನೇ ಪಡೆಯದೇ ತನಿಖೆ ನಡೆಸಲು ಅವಕಾಶ ಮಾಡಿಕೊಟ್ಟಿತ್ತು ಅಂದಿನ ಎನ್ ಡಿಎ ಸರ್ಕಾರ. ಈ ಮೂಲಕ ರಾಜ್ಯಗಳ ಸಾರ್ವಭೌಮತೆಯನ್ನು ಉಲ್ಲಂಘಿಸಿತ್ತು. ದೆಹಲಿ ಪೊಲೀಸ್ ಕಾಯ್ದೆಯಡಿಯಲ್ಲಿಯೇ ಸಿಬಿಐ ಸಹ ಕಾರ್ಯನಿರ್ವಹಣೆ ಮಾಡುತ್ತಿದೆ. ಯಾವುದೇ ತನಿಖೆ ನಡೆಸುವ ಮುನ್ನ ಸಂಬಂಧಿತ ರಾಜ್ಯ ಸರ್ಕಾರಗಳ ಅನುಮತಿ ಪಡೆಯಬೇಕೆಂಬ ನಿಯಮಾವಳಿಯನ್ನು ರೂಪಿಸಲಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಭೂಪೇಶ್ ಭಾಗೆಲ್ ನೇತೃತ್ವದ ಛತ್ತೀಸ್ ಘಡ ಅರ್ಜಿ ಸಲ್ಲಿಸುವ ಮೂಲಕ ಸಂವಿಧಾನದ 131 ನೇ ವಿಧಿಯನ್ನು ಕೇಂದ್ರ ಸರ್ಕಾರ ಉಲ್ಲಂಘನೆ ಮಾಡುತ್ತಿದೆ ಎಂದು ಅರ್ಜಿ ಸಲ್ಲಿಸಿರುವ ಎರಡನೇ ರಾಜ್ಯವೆನಿಸಿದೆ. ಕಳೆದ ವಾರ ಸಿಎಎ ವಿಚಾರದಲ್ಲಿ ಕೇರಳ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ.
ಕೃಪೆ: ದಿ ವೈರ್