ಸಾರ್ವತ್ರಿಕ ಶಿಕ್ಷಣದ ಅವಕಾಶವನ್ನು ತಳಮಟ್ಟ ಸಮಾಜಕ್ಕೆ ತಲುಪಿಸುವುದು ಆದ್ಯತೆಯಾಗಬೇಕು
ನಾ ದಿವಾಕರ
2023ರ ವಿಧಾನಸಭಾ ಚುನಾವಣೆಗಳಲ್ಲಿ ಕರ್ನಾಟಕದ ಮತದಾರರು ಕೇವಲ ಒಂದು ಹೊಸ ಸರ್ಕಾರವನ್ನು ಆಯ್ಕೆ ಮಾಡಿಲ್ಲ ಬದಲಾಗಿ ಒಂದು ಹೊಸ ವ್ಯವಸ್ಥೆಯ ಸ್ಥಾಪನೆಗಾಗಿ ತಮ್ಮ ಹಂಬಲವನ್ನು ಮತಪೆಟ್ಟಿಗೆಗಳ ಮೂಲಕ ವ್ಯಕ್ತಪಡಿಸಿದ್ದಾರೆ. ರಾಜಕೀಯ-ಸಾಂಸ್ಕೃತಿಕ-ಸಾಮಾಜಿಕ ವಲಯಗಳನ್ನೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸೃಷ್ಟಿಯಾಗಿದ್ದ ಕ್ಷೋಭೆ ಹಾಗೂ ಪ್ರಕ್ಷುಬ್ಧತೆಯಿಂದ ಹೊರಬರುವ ಸಾಮಾನ್ಯ ಜನತೆಯ ಸದಾಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಸಿದ್ಧರಾಮಯ್ಯ ಸರ್ಕಾರದ ಮುಂದೆ ಬಹುದೊಡ್ಡ ಸವಾಲುಗಳೂ ಇವೆ. ಮತೀಯ ಸೌಹಾರ್ದತೆ, ಲಿಂಗ ಸಮಾನತೆಯನ್ನ ಸಾಧಿಸುವುದರೊಂದಿಗೇ ಜಾತಿ ತಾರತಮ್ಯಗಳನ್ನು ಹೋಗಲಾಡಿಸುವ, ಪ್ರಜಾಪ್ರಭುತ್ವವನ್ನು ರಕ್ಷಿಸುವ ಜವಾಬ್ದಾರಿ ಹೊಸ ಸರ್ಕಾರದ ಮೇಲಿದೆ. ಇವೆಲ್ಲದಕ್ಕೂ ಮೂಲ ಆಧಾರವಾದ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸುವ ಹೊಣೆಗಾರಿಕೆಯೂ ಇದೆ.
ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯನ್ನು ಅವಸರದಲ್ಲಿ ಜಾರಿಗೊಳಿಸುವ ಮೂಲಕ ಹಿಂದಿನ ಸರ್ಕಾರವು ವಿದ್ಯಾರ್ಥಿಗಳಲ್ಲಿ ಸಾಕಷ್ಟು ಗೊಂದಲ ಮತ್ತು ಆತಂಕಗಳನ್ನೂ ಸೃಷ್ಟಿಸಿದೆ. ಪ್ರಾಥಮಿಕ ಹಂತದಿಂದ ಆರಂಭವಾಗಿ ಪದವಿ ತರಗತಿಯವರೆಗೆ ವಿಸ್ತರಿಸಬೇಕಿದ್ದ ಶಿಕ್ಷಣ ನೀತಿಯನ್ನು ಪದವಿ ಹಂತದ ಮೂಲಕ ಮೇಲ್‌ಸ್ತರದಿಂದ ಜಾರಿಗೊಳಿಸುವ ಬಿಜೆಪಿ ಸರ್ಕಾರದ ಅತಾರ್ಕಿಕ ಕ್ರಮವೇ ಚರ್ಚಾಸ್ಪದವಾಗಿದ್ದು, ಇದು ವಿದ್ಯಾರ್ಥಿಗಳ ನಡುವೆ ಸಾಕಷ್ಟು ಸಮಸ್ಯೆಗಳನ್ನೂ ಸೃಷ್ಟಿಸಿದೆ. ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯನ್ನು ರದ್ದುಪಡಿಸುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದ್ದು, ಕರ್ನಾಟಕದ ಸಮನ್ವಯ ಸಂಸ್ಕೃತಿಗೆ ಪೂರಕವಾದ ಹೊಸ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಜವಾಬ್ದಾರಿ ಸಿದ್ಧರಾಮಯ್ಯ ಸರ್ಕಾರದ ಮೇಲಿದೆ.

ಶಿಕ್ಷಣ ವ್ಯವಸ್ಥೆಯ ಆದ್ಯತೆಗಳು
ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ಭವಿಷ್ಯ ಭಾರತದ ಕಾರ್ಪೋರೇಟ್ ಮಾರುಕಟ್ಟೆಗಾಗಿ ಬೌದ್ಧಿಕ ಸರಕುಗಳನ್ನುಉತ್ಪಾದಿಸುವ ಕಾರ್ಖಾನೆಗಳನ್ನು ನಿರ್ಮಿಸಲು ಬಯಸುತ್ತದೆ. ಮೂಲತಃ ವಾಣಿಜ್ಯಾಸಕ್ತಿ ಹಾಗೂ ಬಂಡವಾಳ ಪೋಷಣೆಯ ಉದ್ದೇಶಗಳಿಗೆ ಪೂರಕವಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಅಗ್ಗದ ಶ್ರಮವನ್ನು ಒದಗಿಸುವ ನವ ಉದಾರವಾದಿ ಬಂಡವಾಳದ ಹಿತಾಸಕ್ತಿಗೆ ಅನುಗುಣವಾಗಿ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಪ್ರಾಥಮಿಕ ಹಂತದಿಂದಲೇ ವಾಣಿಜ್ಯೀಕರಣಕ್ಕೊಳಪಡಿಸಿ, ಉನ್ನತ ವಿದ್ಯಾಭ್ಯಾಸದ ಹಂತದಲ್ಲಿ ಕಾರ್ಪೋರೇಟೀಕರಣಕ್ಕೆ ಒಳಪಡಿಸುವ ಒಂದು ಆಲೋಚನೆಯನ್ನು ಹೊಸ ಶಿಕ್ಷಣ ನೀತಿಯಲ್ಲಿ ಗಮನಿಸಬಹುದು. ಮಾತೃಭಾಷೆಯ ಶಿಕ್ಷಣ ಮುಂತಾದ ಸಕಾರಾತ್ಮಕವಾದ ಅಂಶಗಳ ನಡುವೆಯೂ ಈ ನೀತಿಯಲ್ಲಿ ಸಾಂಪ್ರದಾಯಿಕತೆಯನ್ನು ಪೋಷಿಸುವ ಅಂಶಗಳೂ ಇರುವುದನ್ನು ಗಮನಿಸಬಹುದು.
ರಾಜ್ಯ ಸರ್ಕಾರದ ಹೊಸ ಶಿಕ್ಷಣ ನೀತಿ ಇದರಿಂದ ಭಿನ್ನವಾಗಿರುವುದು ಅತ್ಯವಶ್ಯ. ಕಲಿಕೆ ಮತ್ತು ಬೋಧನೆಯ ಹೊರತಾಗಿಯೂ ಮಕ್ಕಳ ಜ್ಞಾನಾರ್ಜನೆಗೆ ಬೇಕಾಗಿರುವುದು ಉತ್ತಮ ಶೈಕ್ಷಣಿಕ ವಾತಾವರಣ ಹಾಗೂ ಸಾಂಸ್ಕೃತಿಕ ಪರಿಸರ. ಅತ್ಯಾಧುನಿಕ ಕಾರ್ಪೋರೇಟ್ ಶಾಲೆಗಳಲ್ಲಿ ಈ ವಾತಾವರಣವನ್ನು ಐಷಾರಾಮಿ ಸೌಲಭ್ಯಗಳು, ಪರಿಕರಗಳು, ಉಪಕರಣಗಳು, ಆಟೋಟಗಳ ಅವಕಾಶಗಳು ಹಾಗೂ ಕಲಿಕಾ ಮಾದರಿಗಳ ಮೂಲಕ ಕಲ್ಪಿಸಲಾಗುತ್ತದೆ. ಆದರೆ ಮೂಲತಃ ಶಾಲಾ ಕಾಲೇಜುಗಳಲ್ಲಿ ಸೃಷ್ಟಿಯಾಗಬೇಕಿರುವುದು ಸಮ ಸಮಾಜಕ್ಕೆ ಪೂರಕವಾದ ಸಾಂಸ್ಕೃತಿಕ ವಾತಾವರಣ ಮತ್ತು ಮನುಜ ಸಂಬಂಧಗಳನ್ನು ಬೆಳೆಸುವಂತಹ ಸಾಮಾಜಿಕ ಪರಿಸರ. ಯಾವುದೇ ಶಿಕ್ಷಣ ನೀತಿಯಲ್ಲಿ ಈ ಅಂಶಗಳು ಇಲ್ಲವಾದರೆ ಅಲ್ಲಿ ಮಾರುಕಟ್ಟೆ ತನ್ನ ಪಾತ್ರ ವಹಿಸುವ ಮೂಲಕ ಶಾಲಾ ಕಾಲೇಜುಗಳನ್ನು ಬೌದ್ಧಿಕ ಸರಕುಗಳ ಕಾರ್ಖಾನೆಗಳನ್ನಾಗಿ ಪರಿವರ್ತಿಸುತ್ತದೆ.

ಭಾರತ ಚಂದ್ರನ ಮೇಲೆ ಕಾಲಿರಿಸಿದ್ದರೂ ಭಾರತೀಯ ಸಮಾಜ ಇನ್ನೂ ತನ್ನ ಸಾಂಪ್ರದಾಯಿಕತೆಯಿಂದ, ಪ್ರಾಚೀನ ಆಚರಣೆಗಳಿಂದ, ಮೂಢ ನಂಬಿಕೆ ಮತ್ತು ಮೌಢ್ಯಾಚರಣೆಗಳಿಂದ ಮುಕ್ತವಾಗಿಲ್ಲ ಎನ್ನುವ ಅಂಶವೇ ಸರ್ಕಾರ ರೂಪಿಸುವ ಶಿಕ್ಷಣ ನೀತಿಯನ್ನು ನಿರ್ದೇಶಿಸಬೇಕಾಗುತ್ತದೆ. ಕಲಿಕೆ ಮತ್ತು ಬೋಧನೆಯ ವಿದ್ಯಾಭ್ಯಾಸದ ಸಾಧನಗಳೊಂದಿಗೇ ಮಕ್ಕಳಲ್ಲಿ ತಮ್ಮ ಸುತ್ತಲಿನ ಸಮಾಜದೊಡನೆ ಬೆರೆತು ಬಾಳುವ, ಎಲ್ಲರನ್ನೊಳಗೊಂಡು ಬದುಕುವ ಹಾಗೂ ಸುತ್ತಲೂ ಆವರಿಸಿರುವ ವೈವಿಧ್ಯಗಳನ್ನು ಅರ್ಥಮಾಡಿಕೊಳ್ಳುವ ಪರಿಜ್ಞಾನವನ್ನು ಬೆಳೆಸುವುದು ಶಿಕ್ಷಣದ ಪ್ರಥಮ ಆದ್ಯತೆಯಾಗಬೇಕಿದೆ. ಶಾಲಾ ಕಾಲೇಜುಗಳ ಆವರಣಗಳು ಬಾಹ್ಯ ಸಮಾಜದ ತಾತ್ವಿಕ-ಸೈದ್ಧಾಂತಿಕ ಚಿಂತನಾ ವಾಹಿನಿಗಳಿಂದ ಮುಕ್ತವಾಗಿ, ಮಕ್ಕಳ ನಡುವೆ ಸಮನ್ವಯದ ಭಾವನೆ, ಸೌಹಾರ್ದತೆಯ ಮನಸ್ಥಿತಿ ಹಾಗೂ ವೈಚಾರಿಕತೆಯ ಮನೋಧರ್ಮವನ್ನು ಬಿತ್ತುವ ಅಂಗಳಗಳಾಗಿ ರೂಪುಗೊಳ್ಳಬೇಕಾಗುತ್ತದೆ.
ಹೊಸ ನೀತಿಯ ಆಶಯಗಳು
ಈ ನಿಟ್ಟಿನಲ್ಲಿ ಯೋಚಿಸುವಾಗ ಹೊಸ ಶಿಕ್ಷಣ ನೀತಿ ಮತ್ತು ವ್ಯವಸ್ಥೆಯ ಮೂಲ ಆಧಾರ ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಧರ್ಮವಷ್ಟೇ ಆಗಿರಬೇಕಾಗುತ್ತದೆ. ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೂ ಸಹ ಇತ್ತೀಚೆಗೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಮಕ್ಕಳು ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸಿಕೊಳ್ಳಲು ಕರೆ ನೀಡಿರುವುದು ಸ್ವಾಗತಾರ್ಹವಾದುದು. ತಾವು ಜನ್ಮತಃ ಪಡೆದುಕೊಂಡು ಬಂದ ಮತ್ತು ಅನುಸರಿಸುವ ಮತಧರ್ಮಗಳು, ಧಾರ್ಮಿಕ ಆಚರಣೆಗಳು, ಜಾತಿ ನಿರ್ದಿಷ್ಟ ಅನುಸರಣೆಗಳು ಹಾಗೂ ಸಾಂಸ್ಕೃತಿಕ ಚಿಂತನೆಗಳ ಹೊರತಾಗಿಯೂ ಮಕ್ಕಳಲ್ಲಿ ವೈಚಾರಿಕ ಮನೋಧರ್ಮವನ್ನು ಬಿತ್ತುವ ಮೂಲಕ ಕುರುಡು ನಂಬಿಕೆಗಳನ್ನು, ಪರಂಪರಾನುಗತವಾಗಿ ಬಂದಿರಬಹುದಾದ ಮೌಢ್ಯಗಳನ್ನು, ಅತೀತ ಶಕ್ತಿಗಳಲ್ಲಿನ ಅಂಧ ವಿಶ್ವಾಸವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇಡೀ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಬೇಕಿದೆ.
ಈಗಾಗಲೇ ಹಿಂದಿನ ಬಿಜೆಪಿ ಸರ್ಕಾರ ಪಠ್ಯಕ್ರಮ ಪರಿಷ್ಕರಣೆಯ ಮೂಲಕ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಗೊಂದಲ ಮೂಡಿಸಿದೆ. ಬಾಹ್ಯ ಸಮಾಜದಲ್ಲಿ ವ್ಯಾಪಿಸಿರುವ ಮತೀಯವಾದ, ಮತಾಂಧತೆ, ಕೋಮುಭಾವನೆ ಹಾಗೂ ಜಾತಿ ಪೀಡಿತ ಆಲೋಚನೆಗಳಿಂದ ಶಾಲಾ ಮಕ್ಕಳನ್ನು ಮುಕ್ತವಾಗಿರಿಸುವುದು ಪಠ್ಯಕ್ರಮದ ಮೂಲ ಉದ್ದೇಶವಾಗಬೇಕಿದೆ. ಹಾಗಾಗಿ ಪಠ್ಯಕ್ರಮ ಮಾತ್ರವೇ ಅಲ್ಲದೆ ಶಾಲಾ ಕಾಲೇಜುಗಳಲ್ಲಿನ ಶೈಕ್ಷಣಿಕ ವಾತಾವರಣವೂ ಸಹ ವೈಚಾರಿಕತೆಯನ್ನು ಪೋಷಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಮಕ್ಕಳನ್ನು ಭವಿಷ್ಯದ ಪ್ರಜೆಗಳನ್ನಾಗಿ ರೂಪಿಸುವ ಶಾಲಾ ಕಾಲೇಜುಗಳು ಹೊರಗಿನ ಸಮಾಜವನ್ನು ಪ್ರಭಾವಿಸುವ ಅಸ್ಮಿತೆಗಳನ್ನು ಪೋಷಿಸುವ ಸ್ಥಾವರಗಳಾಗಿ ಕಾರ್ಯನಿರ್ವಹಿಸಕೂಡದು. ಭಾರತೀಯ ಸಮಾಜವನ್ನು ಸದಾ ಕಾಡುತ್ತಲೇ ಇರುವ ಜಾತಿ-ಮತ-ಧರ್ಮ-ಪಂಥ ಹಾಗೂ ಭಾಷಾ ಅಸ್ಮಿತೆಗಳು ವಿದ್ಯಾರ್ಜನೆಯ ಆವರಣಗಳಲ್ಲಿ ಪಸರಿಸದಂತೆ ಜಾಗ್ರತೆ ವಹಿಸುವುದು ಸರ್ಕಾರದ ಹಾಗೂ ವಿಶಾಲ ಸಮಾಜದ ಆದ್ಯ ಕರ್ತವ್ಯವೂ ಆಗಿರುತ್ತದೆ. ಕಲಿಕಾ ಮಾದರಿ, ಬೋಧನಾ ವಿಧಾನಗಳೊಂದಿಗೆ ಆಲೋಚನಾ ವಾಹಿನಿಗಳಲ್ಲೂ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಪೋಷಿಸುವುದು ಶಿಕ್ಷಣ ನೀತಿಯ ಆದ್ಯತೆಯಾಗಬೇಕಿದೆ.

ಮುಚ್ಚಲ್ಪಟ್ಟಿರುವ ಸರ್ಕಾರಿ ಶಾಲೆಗಳು, ವಿಲೀನಕ್ಕೊಳಗಾಗುತ್ತಿರುವ ಗ್ರಾಮೀಣ ಶಾಲೆಗಳಿಗೆ ಮರುಜೀವ ಕೊಡುವುದೇ ಅಲ್ಲದೆ ರಾಜ್ಯದ ಗ್ರಾಮೀಣ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದಲೇ ಶಾಲಾ ಸೌಲಭ್ಯಗಳು ಸುಲಭವಾಗಿ ನಿಲುಕುವಂತೆ ಮಾಡುವುದು ಶಿಕ್ಷಣ ನೀತಿಯ ಪ್ರಥಮ ಆದ್ಯತೆಯಾಗಬೇಕು. ಇಂದಿಗೂ ರಾಜ್ಯದಲ್ಲಿ ಶಿಕ್ಷಣ ವಂಚಿತ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಆದಿವಾಸಿ ಸಮುದಾಯಗಳು ಅತಿಹೆಚ್ಚು ವಂಚಿತವಾಗುತ್ತಿವೆ. ಶಿಕ್ಷಣ ನೀತಿ ಎನ್ನುವುದು ಕಲಿಕೆ ಮತ್ತು ಬೋಧನೆಯಿಂದಾಚೆಗೆ ಈ ಅಂಶಗಳನ್ನೂ ಪರಿಗಣಿಸಬೇಕಾಗುತ್ತದೆ. ತೀವ್ರಗತಿಯಲ್ಲಿ ಖಾಸಗೀಕರಣಕ್ಕೊಳಗಾಗುತ್ತಿರುವ ಶಾಲಾ ಶಿಕ್ಷಣಕ್ಕೆ ಕಡಿವಾಣ ಹಾಕಿ, ಪ್ರಾಥಮಿಕ ಶಾಲೆಯ ಮಕ್ಕಳನ್ನೂ ಮಾರುಕಟ್ಟೆಯ ಬೌದ್ಧಿಕ ಸರಕುಗಳನ್ನಾಗಿ ಮಾಡುವ ಕಾರ್ಪೋರೇಟ್ ಶಕ್ತಿಗಳ ಹಿಡಿತದಿಂದ ಮುಕ್ತಗೊಳಿಸುವುದು ಸರ್ಕಾರದ ಹೊಸ ಶಿಕ್ಷಣ ನೀತಿಯ ಆದ್ಯತೆಯಾಗಬೇಕಿದೆ.
ಶಾಲಾ ಮಕ್ಕಳಲ್ಲಿ ವೈಚಾರಿಕತೆಯನ್ನು ಬೆಳೆಸುವುದು ಎಂದರೆ ಪ್ರಪ್ರಥಮವಾಗಿ ಶಾಲೆ ಎಂಬ ಸ್ಥಾವರದಲ್ಲಿ ನಿತ್ಯ ಬೆರೆತು, ಕಲಿತು, ಆಟಪಾಠಗಳಲ್ಲಿ ತೊಡಗಿ ವಿದ್ಯೆ ಕಲಿಯುವ ಮಕ್ಕಳ ನಡುವೆ ಇರುವ ಸಾಮಾಜಿಕ ಅಂತರ ಹಾಗೂ ಸಾಂಸ್ಕೃತಿಕ ಕಂದರಗಳನ್ನು ಇಲ್ಲವಾಗಿಸುವುದು. ಭಾರತದ ಬಹುಸಾಂಸ್ಕೃತಿಕ ಚರಿತ್ರೆಗೆ ಪೂರಕವಾಗಿ, ಸಂವಿಧಾನವು ಆಶಿಸುವ ಬಹುತ್ವದ ಮಾದರಿಯನ್ನು ಶಾಲೆಗಳಲ್ಲಿ ಅಳವಡಿಸಬೇಕಾದರೆ ಕೇವಲ ಸಂವಿಧಾನ ಪೀಠಿಕೆಯ ನಿತ್ಯ ಪಠಣ ಸಾಕಾಗುವುದಿಲ್ಲ. ಇದರೊಟ್ಟಿಗೆ ಭಾವನಾತ್ಮಕ ನೆಲೆಯಲ್ಲಿ ಮಕ್ಕಳ ನಡುವೆ ಇರಬಹುದಾದ ಸಾಂಸ್ಕೃತಿಕ ವ್ಯತ್ಯಾಸಗಳು ಹಾಗೂ ಸಾಮಾಜಿಕ ಅಸೂಕ್ಷ್ಮತೆಗಳನ್ನು ಹೋಗಲಾಡಿಸುವುದು ಮುಖ್ಯವಾಗುತ್ತದೆ. ಪಾರಂಪರಿಕ ನಂಬಿಕೆ ವಿಶ್ವಾಸಗಳಿಂದಲೇ ಸೃಷ್ಟಿಯಾಗುವ ಸಾಮಾಜಿಕ ಅರಿವು ಲಿಂಗ- ಸೂಕ್ಷ್ಮತೆಗೆ, ಜಾತಿ ಸೂಕ್ಷ್ಮತೆಗೆ ತೊಡಕಾಗಿ ಪರಿಣಮಿಸುವುದನ್ನು ಗಂಭೀರವಾಗಿ ಗಮನಿಸಬೇಕಿದೆ.
ಕಲಿಕೆ-ಬೋಧನೆ ಮತ್ತು ಪರಿಸರ
ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ವೈಚಾರಿಕತೆಯ ಬೀಜಗಳನ್ನು ಬಿತ್ತುವ ಪ್ರಕ್ರಿಯೆಗೆ ಶಾಲೆಗಳಲ್ಲಿನ ಬೋಧನಾ ವಿಧಾನ ಮತ್ತು ಕಲಿಕಾ ಮಾದರಿಗಳು ಪೂರಕವಾಗಿರಬೇಕಾಗುತ್ತದೆ. ವಿಜ್ಞಾನ ಜಗತ್ತು ತನ್ನ ಮೇರು ಶಿಖರವನ್ನು ತಲುಪಿರುವ ಹೊತ್ತಿನಲ್ಲಿ ನಮ್ಮ ಶಾಲೆಯ ಅಂಗಳದಲ್ಲೇ ಪ್ರಾಚೀನ ಮೌಢ್ಯಾಚರಣೆ ಮತ್ತು ಅಂಧ ಅನುಸರಣೆಯ ಮಾದರಿಗಳನ್ನು ಅನುಸರಿಸುವ ಮೂಲಕ ಮಕ್ಕಳನ್ನು ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದಿಂದ ವಂಚಿತರನ್ನಾಗಿ ಮಾಡುವ ಅಪಾಯ ನಮ್ಮೆದುರಿನಲ್ಲಿದೆ. ಹಾಗಾಗಿ ಹೊಸ ಶಿಕ್ಷಣ ನೀತಿಯ ತಳಪಾಯವೇ ವೈಚಾರಿಕ ಮನೋಭಾವ ಮತ್ತು ವೈಜ್ಞಾನಿಕ ಚಿಂತನೆ ಆಗಬೇಕಿದೆ. ವಿಜ್ಞಾನ ಮತ್ತು ವೈಜ್ಞಾನಿಕ ಜ್ಞಾನದ ನೆಲೆಗಳನ್ನು ಶಾಲಾ ಹಂತದಲ್ಲಿಯೇ ಮಕ್ಕಳಿಗೆ ತಲುಪಿಸುವುದರೊಂದಿಗೇ, ಅವರ ನಿತ್ಯ ಬದುಕಿನ ಅನುಸರಣೆಯಲ್ಲಿ ಅಂಧವಿಶ್ವಾಸ, ಮೂಢನಂಬಿಕೆ ಮತ್ತು ಮೌಢ್ಯಾಚರಣೆಗಳು ಇಲ್ಲದಂತಹ ಬೋಧನಾ ಸಾಮಗ್ರಿಗಳನ್ನು ಅಳವಡಿಸುವುದು ಬಹಳ ಮುಖ್ಯವಾಗುತ್ತದೆ.

ಈ ನಿಟ್ಟಿನಲ್ಲಿ ಸರ್ಕಾರ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಈ ಸಮಿತಿಯ ಆಯ್ಕೆಯಲ್ಲೂ ಸಹ ಕಾಂಗ್ರೆಸ್ ಸರ್ಕಾರ ತನ್ನ ರಾಜಕೀಯ-ತಾತ್ವಿಕ ನಿಲುಮೆಗಳನ್ನು ಬದಿಗಿಟ್ಟು ವಿಶಾಲ ತಳಹದಿಯ ಸಮಿತಿಯೊಂದನ್ನು ರಚಿಸಬೇಕಿದೆ. ಮನೋವಿಜ್ಞಾನಿಗಳು, ಸಮಾಜಶಾಸ್ತ್ರಜ್ಞರು, ಮಕ್ಕಳ ತಜ್ಞರು, ಶಿಕ್ಷಣ ತಜ್ಞರು, ಸಮಾಜ ವಿಜ್ಞಾನಿಗಳು, ಮಹಿಳಾ ಚಿಂತಕರು ಹಾಗೂ ವೈಚಾರಿಕ ಚಿಂತಕರನ್ನೊಳಗೊಂಡ ವಿಶಾಲ ಸಮಿತಿಯನ್ನು ಸರ್ಕಾರ ರಚಿಸಬೇಕಿದೆ. ಭಾರತದ ಸಂವಿಧಾನ ಹಾಗೂ ಅದರ ಪ್ರಜಾಪ್ರಭುತ್ವದ ಆಶಯಗಳು, ಬಹುತ್ವದ ಆದ್ಯತೆಗಳು ಮತ್ತು ಬಹುಸಾಂಸ್ಕೃತಿಕ ನೆಲೆಗಳನ್ನು ಕಾಪಾಡುವ ಬದ್ಧತೆಯುಳ್ಳ ತಜ್ಞರನ್ನು ಸಮಿತಿಯಲ್ಲಿ ಒಳಗೊಳ್ಳಬೇಕಿದೆ. ಹಾಗೆಯೇ ಲಿಂಗಸೂಕ್ಷ್ಮತೆಯನ್ನು ಬೆಳೆಸಲು ಪೂರಕವಾದ ಪಠ್ಯಕ್ರಮದ ಸಿದ್ಧತೆಯೂ ಆಗಬೇಕಿದೆ.
ಲಿಂಗ ದೌರ್ಜನ್ಯ , ಜಾತಿ ಶೋಷಣೆ ಮತ್ತು ಪಿತೃಪ್ರಧಾನ ಧೋರಣೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸ್ತ್ರೀ ಸಂವೇದನೆ ಮತ್ತು ಮನುಜ ಸೂಕ್ಷ್ಮತೆಯನ್ನು ಸೃಜಿಸುವಂತಹ ಪಠ್ಯಕ್ರಮವನ್ನು ವಿವಿಧ ಹಂತಗಳಲ್ಲಿ ರೂಪಿಸುವುದೇ ಅಲ್ಲದೆ ಭೌತಿಕವಾಗಿ ಶಾಲಾ ಕಾಲೇಜುಗಳ ಆವರಣಗಳಲ್ಲಿ ಅಂತಹ ವಾತಾವರಣ-ಪರಿಸರವನ್ನು ಸೃಷ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶಿಕ್ಷಣ ನೀತಿಯನ್ನು ರೂಪಿಸಬೇಕಿದೆ. ಹಾಗಾದರೆ ಮಾತ್ರ ನಮ್ಮ ಸಂವಿಧಾನ ಕರ್ತೃಗಳ ಸಮ ಸಮಾಜದ ಕನಸನ್ನು ನನಸು ಮಾಡಲು ಸಾಧ್ಯ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ವಿಶಾಲ ನೆಲೆಯಲ್ಲಿ ಯೋಚಿಸುವುದೇ ? ಕಾದು ನೋಡಬೇಕಿದೆ.
-೦-೦-೦-

