ಶನಿವಾರ ಬೆಳಗ್ಗೆ 11.45ಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಈ ಬಾರಿ 24 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ನೂತನ ಸರ್ಕಾರ ಮೊದಲ ಬಾರಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದು, ಬರೋಬ್ಬರಿ 24 ಶಾಸಕರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳುವ ಮೂಲಕ ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ಕ್ಯಾಬಿನೆಟ್ ರಚನೆ ಮಾಡುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದಲ್ಲಿ 34 ಶಾಸಕರನ್ನು ಮಂತ್ರಿಗಳನ್ನಾಗಿ ಮಾಡಲು ಕಾನೂನಿನಲ್ಲಿ ಅವಕಾಶವಿದ್ದು, ಯಾವುದೇ ಸರ್ಕಾರ ಬಂದರೂ ಒಂದೆರಡು ಸ್ಥಾನಗಳನ್ನು ಖಾಲಿ ಇಟ್ಟುಕೊಂಡು ಅಸಮಾಧಾನಿತರನ್ನು ಸಮಾಧಾನ ಮಾಡುವುದು ನಡೆದುಕೊಂಡು ಬಂದಿದ್ದ ವಾಡಿಕೆ. ಆದರೆ ಈ ಬಾರಿ ಸರಳ ಬಹುಮತಕ್ಕೆ ಬೇಕಿದ್ದ 113 ಸ್ಥಾನಗಳನ್ನು ಮೀರಿ 135 ಸ್ಥಾನಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದ್ದು, ಯಾವ ಅಸಮಾಧಾನಕ್ಕೂ ಸೊಪ್ಪು ಹಾಕದೆ ಸಂಪೂರ್ಣ ಕ್ಯಾಬಿನೆಟ್ ರಚನೆ ಮಾಡಲಾಗ್ತಿದೆ.
ಸಿದ್ದರಾಮಯ್ಯ ಸಂಪುಟದ ಮಂತ್ರಿಗಳು ಇವರು..


ನೂತನ ಸಚಿವರಾಗಿ ಹೆಚ್.ಕೆ ಪಾಟೀಲ್, ಕೃಷ್ಣಬೈರೇಗೌಡ, ಎನ್ ಚಲುವರಾಯಸ್ವಾಮಿ, ಕೆ. ವೆಂಕಟೇಶ್, ಹೆಚ್.ಸಿ ಮಹದೇವಪ್ಪ, ಈಶ್ವರ ಖಂಡ್ರೆ, ಕೆ.ಎನ್ ರಾಜಣ್ಣ, ದಿನೇಶ್ ಗುಂಡೂರಾವ್, ಶರಣ ಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್, ತಿಮ್ಮಾಪುರ್ ಆರ್.ಬಿ, ಎಸ್.ಎಸ್ ಮಲ್ಲಿಕಾರ್ಜುನ್, ಶಿವರಾಜ ತಂಗಡಗಿ, ಡಾ. ಶರಣಪ್ರಕಾಶ್ ಪಾಟೀಲ್, ಮಂಕಾಲ್ ವೈದ್ಯ, ಲಕ್ಷ್ಮೀ ಹೆಬ್ಬಾಳ್ಕರ್, ರಹೀಂ ಖಾನ್, ಡಿ ಸುಧಾಕರ್, ಸಂತೋಷ್ ಲಾಡ್, ಎನ್.ಎಸ್ ಬೋಸೇರಾಜು, ಬೈರತಿ ಸುರೇಶ್, ಮಧು ಬಂಗಾರಪ್ಪ, ಡಾ. ಎಂ.ಸಿ ಸುಧಾಕರ್, ಬಿ ನಾಗೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಜಾತಿವಾರು ಸಿದ್ದರಾಮಯ್ಯ ಪಕ್ಕಾ ಲೆಕ್ಕ..
ಕರ್ನಾಟಕದಲ್ಲಿ ಕಾಂಗ್ರೆಸ್ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸಲು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು ಲಿಂಗಾಯತರು ಹಾಗು ಒಕ್ಕಲಿಗ ಸಮುದಾಯ ಎಂದರೆ ಸುಳ್ಳಲ್ಲ. ಇದೀಗ ಈ ಎರಡೂ ಸಮುದಾಯಕ್ಕೂ ಕಾಂಗ್ರೆಸ್ ಪಕ್ಷ ಪ್ರಾತಿನಿಧ್ಯ ನೀಡುವ ಮೂಲಕ ಜಾತಿಗಳಲ್ಲಿ ಭಿನ್ನತೆ ಮೂಡದಂತೆ ಎಚ್ಚರ ವಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಕುರುಬ ಸಮುದಾಯಕ್ಕೆ 2 ಸ್ಥಾನ, ಒಕ್ಕಲಿಗರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸೇರಿ 6 ಶಾಸಕರಿಗೆ ಸಚಿವ ಸ್ಥಾನ, ಲಿಂಗಾಯತ ಸಮುದಾಯದ 8 ಶಾಸಕರಿಗೆ ಸಚಿವ ಸ್ಥಾನ. ಎಸ್‌ಸಿ (ಬಲ) ವರ್ಗಕ್ಕೆ 3, ಎಸ್‌ಸಿ (ಎಡ) ವರ್ಗಕ್ಕೆ 2, ವಾಲ್ಮೀಕಿ ಸಮುದಾಯಕ್ಕೆ 3, ಜೈನ ಧರ್ಮಕ್ಕೆ 1, ಬ್ರಾಹ್ಮಣ ಸಮುದಾಯಕ್ಕೆ 1, ಎಸ್‌ಸಿ (ಬೋವಿ) 1, ಮೊಗವೀರ ಸಮುದಾಯಕ್ಕೆ 1, ಮರಾಠ ಸಮುದಾಯಕ್ಕೆ 1, ಕ್ಷತ್ರಿಯ 1, ಈಡಿಗ 1, ಮುಸ್ಲಿಂ ಧರ್ಮಕ್ಕೆ 2, ಕ್ರಿಶ್ಚಿಯನ್ ಧರ್ಮಕ್ಕೆ 1 ಸಚಿವ ಸ್ಥಾನ ಕೊಟ್ಟಂತಾಗಿದೆ.
ಸಚಿವ ಸ್ಥಾನ ಮಿಸ್ ಆಗಿದ್ದು ಯಾರಿಗೆ..?


ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದ ಸಾಕಷ್ಟು ಜನರಿಗೆ ನಿರಾಸೆ ಎದುರಾಗಿದೆ. ಹಿರಿಯ ನಾಯಕ ಆರ್.ವಿ ದೇಶಪಾಂಡೆ, ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಬಿಜೆಪಿಯಿಂದ ವಲಸೆ ಬಂದಿದ್ದ ಲಕ್ಷ್ಮಣ ಸವದಿ, ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ರುದ್ರಪ್ಪ ಲಮಾಣಿ, ಎನ್.ಎ ಹ್ಯಾರಿಸ್, ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್, ಸಿದ್ದರಾಮಯ್ಯ ಆಪ್ತ ಬಣದಲ್ಲಿದ್ದ ಬಸವರಾಜ ರಾಯರೆಡ್ಡಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಇನ್ನು ಮಳವಳಿ ಶಾಸಕ ಪಿ.ಎಂ ನರೇಂದ್ರಸ್ವಾಮಿ, ಜೆಡಿಎಸ್‌ನಿಂದ ವಲಸೆ ಬಂದಿದ್ದ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಜೇವರ್ಗಿ ಅಜಯ್ ಸಿಂಗ್, ಇ.ತುಕರಾಂ, ತನ್ವೀರ್ ಸೇಠ್, ಟಿ. ಬಿ.ಜಯಚಂದ್ರಗೂ ಸಚಿವ ಸ್ಥಾನ ಮಿಸ್ ಆಗಿದೆ.
ಕೃಷ್ಣಮಣಿ