ಮೈಸೂರು ಕೆ.ಆರ್. ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಉಪನ್ಯಾಸ
ಭಾಷೆ ಎನ್ನುವುದು ಮೂಲತಃ ಒಂದು ಸಂವಹನ ಮಾಧ್ಯಮ ಅಥವಾ ಸಾಧನ. ಮೌಖಿಕವಾಗಿ, ಆಂಗಿಕವಾಗಿ ಮತ್ತು ಮೌನವಾಗಿಯೂ ಮನುಷ್ಯ ಮನುಷ್ಯರ ನಡುವೆ ಸಂವಹನದ ಸಾಧ್ಯತೆಗಳಿರುವಾಗಲೂ ಆಧುನಿಕ ಮಾನವ ಭಾಷೆ ಎನ್ನುವ ಒಂದು ಸಾಧನವನ್ನು ಬೆಳೆಸಿಕೊಂಡುಬಂದಿದ್ದಾನೆ. ಮಾನವನ ಅಭ್ಯುದಯದ ಹಾದಿಯಲ್ಲಿ ಭಾಷೆ ಎನ್ನುವುದು ಒಂದು ಪ್ರಧಾನ ಸಂವಹನ ಸಾಧನವಾಗಿರುವಷ್ಟೇ ವಿಭಿನ್ನ ನಾಗರಿಕತೆಗಳ ಸಮನ್ವಯಕ್ಕೂ , ಸಮ್ಮಿಲನಕ್ಕೂ, ಸಂಘರ್ಷಕ್ಕೂ ಕಾರಣವಾಗುತ್ತಾ ಬಂದಿರುವುದನ್ನು ನೋಡಿದ್ದೇವೆ. ಹಾಗೆಯೇ ಭೌಗೋಳಿಕ ರಾಷ್ಟ್ರಗಳ ಪರಿಕಲ್ಪನೆ ಅಧುನಿಕ ನಾಗರಿಕತೆಯನ್ನು ಆವರಿಸಿಕೊಂಡಂತೆಲ್ಲಾ ಜನಾಂಗಗಳು ಮತ್ತು ಜನಾಂಗೀಯ ಭಾಷೆಗಳೂ ತಮ್ಮದೇ ಆದ ಅಸ್ತಿತ್ವವನ್ನು ಗಳಿಸಿಕೊಂಡಿದ್ದು, ಕ್ರಮೇಣ ಅವು ಪ್ರಭುತ್ವದ ಭಾಷೆಯಾಗಿಯೂ ರೂಪುಗೊಂಡಿವೆ. ಭಾರತದಂತಹ ಒಕ್ಕೂಟ ದೇಶಗಳಲ್ಲಿ ಸಾಂಸ್ಕೃತಿಕ ವೈವಿಧ್ಯತೆಯಂತೆಯೇ ಭಾಷಾ ವೈವಿಧ್ಯತೆಯೂ ತನ್ನದೇ ಪ್ರಾಮುಖ್ಯತೆ ವಹಿಸುವುದರಿಂದ, ಇಲ್ಲಿ ಭಾಷೆ ಎನ್ನುವುದು ಕೇವಲ ಸಂವಹನ ಸಾಧನವಾಗಿ ಉಳಿದಿಲ್ಲ. ಬದಲಾಗಿ ಪ್ರಾದೇಶಿಕ , ಭೌಗೋಳಿಕ, ಸಾಂಸ್ಕೃತಿಕ ಹಾಗೂ ಚಾರಿತ್ರಿಕ ನೆಲೆಗಳಲ್ಲಿ ಭಾಷೆ ಜನಜೀವನದ ಮೇಲೆ ತನ್ನ ಪ್ರಭಾವ ಬೀರುತ್ತದೆ. ಭಾಷೆ-ಪ್ರಾದೇಶಿಕ ಭೌಗೋಳಿಕ ಅಸ್ಮಿತೆ-ಸಾಂಸ್ಕೃತಿಕ ಅಸ್ತಿತ್ವ ಮತ್ತು ಸಾಮಾನ್ಯ ಜನರ ಬದುಕು ಇವೆಲ್ಲವನ್ನೂ ಭಾಷೆ ತನ್ನ ಆವರಣದೊಳಗೆ ಬಂಧಿಸುವುದು ವರ್ತಮಾನದ ಸಂದರ್ಭದಲ್ಲಿ ನಾವು ಕಾಣುವ ವಿದ್ಯಮಾನ.
ಈ ಚಾರಿತ್ರಿಕ ಹಿನ್ನೆಲೆಯಲ್ಲಿ ಭಾಷೆ, ಭಾಷೆಯ ಅಸ್ತಿತ್ವ ಮತ್ತು ಬೆಳವಣಿಗೆಯನ್ನು ಕುರಿತು ಆಲೋಚಿಸುವಾಗ ನಮಗೆ ಹಲವು ಜಟಿಲ ಪ್ರಶ್ನೆಗಳು ಎದುರಾಗುತ್ತವೆ. ಭಾಷೆಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬೇಕಾದ ಶಿಕ್ಷಣ ಮಾಧ್ಯಮ, ಸಾಹಿತ್ಯಾಧ್ಯಯನ, ಉನ್ನತ ಅಧ್ಯಯನ, ಸಂಶೋಧನೆ, ಆಡಳಿತ ಭಾಷೆ ಹಾಗೂ ಸಾರ್ವಜನಿಕ ವಲಯದಲ್ಲಿ ಭಾಷೆಯ ಬಳಕೆಯ ಬಗ್ಗೆ ಕೈಗೊಳ್ಳಬೇಕಾದ ಹಲವು ಕ್ರಮಗಳು ನಮ್ಮೆದುರು ತೆರೆದುಕೊಳ್ಳುತ್ತವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಆಡಳಿತಾರೂಢ ಸರ್ಕಾರಗಳ ಅಸಡ್ಡೆ ಮತ್ತು ನಿರ್ಲಕ್ಷ್ಯದಿಂದ ಶಿಕ್ಷಣ ಮಾಧ್ಯಮ ಮತ್ತು ಆಡಳಿತ ಭಾಷೆಯ ಸಂದರ್ಭದಲ್ಲಿ ಕನ್ನಡ ಸಾಕಷ್ಟು ಹಿಂದುಳಿದಿದೆ. ಇತ್ತೀಚೆಗೆ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ ಕನ್ನಡ ಭಾಷಾ ಸಮ್ರ ಅಭಿವೃದ್ಧಿ ವಿಧೇಯಕ ಎಷ್ಟರ ಮಟ್ಟಿಗೆ ಸಮಗ್ರವಾಗಿದೆ ಎನ್ನುವುದು ಇನ್ನೂ ಚರ್ಚೆಯಾಗಬೇಕಿದೆ. ರಾಜ್ಯದಲ್ಲಿರುವ ಮತ್ತು ಹೊರನಾಡಿನಲ್ಲಿರುವ ಕನ್ನಡಿಗರ ಹಿತಾಸಕ್ತಿಯ ದೃಷ್ಟಿಯಿಂದ ಈ ವಿಧೇಯಕ ಹೇಗೆ ನೆರವಾಗುತ್ತದೆ ಎನ್ನುವುದು ನಿಷ್ಕರ್ಷೆಗೊಳಗಾಗಬೇಕಿದೆ. ಶಿಕ್ಷಣದಲ್ಲಿ ಭಾಷಾ ಕಲಿಕೆ, ಆಡಳಿತ ವ್ಯವಸ್ಥೆಯಲ್ಲಿ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕಚೇರಿಗಳಲ್ಲೂ ಸಹ, ಭಾಷೆಯ ಬಳಕೆ, ಕನ್ನಡೇತರರ ಕನ್ನಡ ಕಲಿಕೆ ಹಾಗೂ ಸಾರ್ವಜನಿಕ ವಲಯದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕನ್ನಡದ ಬಳಕೆ ಇವುಗಳು ಈ ವಿಧೇಯಕದಲ್ಲಿ ಪ್ರತ್ಯೇಕವಾಗಿ ಪ್ರಾಶಸ್ತ್ಯ ಪಡೆಯಬೇಕಿತ್ತು ಎನಿಸುತ್ತದೆ. ಆಡಳಿತಾತ್ಮಕ ಕಾರಣಗಳಿಗಾಗಿ ಇಂಗ್ಲಿಷ್ ಬಳಸುವುದು ಅನಿವಾರ್‌ಯವಾದರೆ, ವೈಜ್ಞಾನಿಕ-ತಾಂತ್ರಿಕ ವಿಷಯಗಳಲ್ಲಿ ಇಂಗ್ಲಿಷ್ ಬಳಸಬಹುದು ಎಂದು ವಿಧೇಯಕದಲ್ಲಿ ಹೇಳಿರುವುದು ಸಾಕಷ್ಟು ಅಸಮಧಾನವನ್ನೂ ಮೂಡಿಸಿದೆ.
ಆದರೆ ಪ್ರಸ್ತುತ ಸಂದರ್ಭದಲ್ಲಿ ವಿಧೇಯಕದ ಈ ಅಂಶವೇ ಪ್ರಧಾನವಾಗಿ ಚರ್ಚೆಗೊಳಗಾಗಬೇಕಿದೆ. ಹೊಸ ಶಿಕ್ಷಣ ನೀತಿಯನ್ನು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸಿರುವ ರಾಜ್ಯ ಸರ್ಕಾರ, ಮುಂದಿನ ಶೈಕ್ಷಣಿಕ ವರ್ಷದಲ್ಲೇ ತಾಂತ್ರಿಕ-ವೈದ್ಯಕೀಯ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಒದಗಿಸಲು ನಿರ್ಧರಿಸಿದೆ. ಇಲ್ಲಿ ನಾವು ಹೊಸ ಶಿಕ್ಷಣ ನೀತಿಯ ಮೂಲ ಉದ್ದೇಶ ಮತ್ತು ಗುರಿಯನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹೊಸ ಶಿಕ್ಷಣ ನೀತಿಯ ಬಗ್ಗೆ ಮಾತನಾಡುತ್ತಾ ಶಿಕ್ಷಣ ಮೂಲತಃ ಉದ್ಯಮ ಮುಖಿಯಾಗಿರಬೇಕು (Industry Oriented) ಎಂದು ಹೇಳಿದ್ದಾರೆ. ಪ್ರಗತಿ ಹೊಂದುತ್ತಿರುವ ಭಾರತದ ಔದ್ಯಮಿಕ ಬೆಳವಣಿಗೆಗೆ ಪೂರಕವಾದ ಕೌಶಲವನ್ನು , ಯುವ ಸಮೂಹದಲ್ಲಿ, ಹೆಚ್ಚಿಸುವ ನಿಟ್ಟಿನಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ಹೊಸ ಶಿಕ್ಷಣ ನೀತಿಯ ಮೂಲಕ ಜಾರಿಗೊಳಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇಲ್ಲಿ ಪ್ರಗತಿ-ಅಭಿವೃದ್ಧಿ ಮತ್ತು ಅದರ ಸುತ್ತಲಿನ ಆರ್ಥಿಕ ಸಂಕಥನಗಳ ಗೋಜಿಗೆ ಹೋಗದೆ, ಈ ಔದ್ಯಮಿಕ ನೀತಿ ಮತ್ತು ಇದಕ್ಕೆ ಪೂರಕವಾದ ಶಿಕ್ಷಣ ನೀತಿಯನ್ನು ಗಮನಿಸಿದಾಗ, ಕನ್ನಡ ಭಾಷಾ ಬೆಳವಣಿಗೆ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಪ್ರಶ್ನೆಗೂ ಉತ್ತರ ಕಂಡುಕೊಳ್ಳಲು ಸಾಧ್ಯ.

ಭಾಷಾ ಬೆಳವಣಿಗೆಯನ್ನು ಎರಡು ನೆಲೆಗಳಲ್ಲಿ ಕಾಣಬಹುದು. ಮೊದಲನೆಯದು ಬೌದ್ಧಿಕ ನೆಲೆಯಲ್ಲಿ ಭಾಷೆಯನ್ನು ಕುರಿತ ಸಾಹಿತ್ಯಕ ಸಂಶೋಧನೆ, ಸಾಹಿತ್ಯ ರಚನೆ, ಸಾಂಸ್ಕೃತಿಕ ವ್ಯಾಪ್ತಿ ಮತ್ತು ಹರವು ಹಾಗೂ ಶೈಕ್ಷಣಿಕ ನೆಲೆಯಲ್ಲಿ ಭಾಷೆಯ ಚರಿತ್ರೆಯನ್ನು ಶೋಧಿಸುವ, ಭವಿಷ್ಯವನ್ನು ರೂಪಿಸುವ ಅಧ್ಯಯನ-ಸಂಶೋಧನಾ ಕೇಂದ್ರಿತ ಪ್ರಯತ್ನಗಳು. ಮೈಸೂರಿನಲ್ಲೇ ಇರುವ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರ, ಕನ್ನಡ ಭಾಷಾ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಾಂಸ್ಥಿಕ ನೆಲೆಗಳು ಇಲ್ಲಿ ಮುಖ್ಯವಾಗುತ್ತವೆ. ಈ ಸಂಸ್ಥೆಗಳ ನೆರವಿನೊಂದಿಗೇ ಭಾಷಾ ಬೆಳವಣಿಗೆಯ ಮತ್ತೊಂದು ನೆಲೆಯನ್ನು ವಿಸ್ತರಿಸುವುದು ಅತ್ಯವಶ್ಯ. ಇಲ್ಲಿ ಭಾಷೆ ಅನ್ನದ ಭಾಷೆಯಾಗುತ್ತದೆ, ಬದುಕಿನ ಭಾಷೆಯಾಗುತ್ತದೆ, ಬದುಕು ಕಟ್ಟಿಕೊಳ್ಳುವ ಭಾಷೆಯಾಗುತ್ತದೆ. ಈ ಅನ್ನ ಮತ್ತು ಬದುಕಿನ ಸಂಕೀರ್ಣತೆಗಳು ತೀವ್ರವಾಗಿ ಬಾಧಿಸುವುದು ತಳಮಟ್ಟದ ಜನಸಮುದಾಯಗಳನ್ನು, ದುಡಿಯುವ ವರ್ಗಗಳನ್ನು ಮತ್ತು ಜೀವನೋಪಾಯವನ್ನು ಅರಸಿ ವಲಸೆ ಹೋಗುವ ಶ್ರಮಜೀವಿಗಳನ್ನು. ಹಾಗೆಯೇ ತಮ್ಮ ಬದುಕು ಕಟ್ಟಿಕೊಳ್ಳಲು ಜೀವನೋಪಾಯದ ಮಾರ್ಗಗಳನ್ನು ಹುಡುಕಿಕೊಂಡು ಹೋಗುವ ಕೆಳಮಧ್ಯಮ ಹಾಗೂ ಮಧ್ಯಮ ವರ್ಗಗಳನ್ನು. ಇಲ್ಲಿ ನಾವು ಹೊಸ ಶಿಕ್ಷಣ ನೀತಿ ಮತ್ತು ಭಾಷಾ ಬೆಳವಣಿಗೆಯನ್ನು ಮುಖಾಮುಖಿಯಾಗಿಸಬೇಕಾಗುತ್ತದೆ.
ಭಾರತವನ್ನು ನಾಲ್ಕನೆಯ ಔದ್ಯೋಗಿಕ ಕ್ರಾಂತಿಗೆ ಸಜ್ಜುಗೊಳಿಸುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ-2020ನ್ನು ಜಾರಿಗೊಳಿಸಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ದೃಢೀಕರಿಸಿದ್ದಾರೆ. ಕೇಂದ್ರ ಸರ್ಕಾರ ರೂಪಿಸುತ್ತಿರುವ ಆಡಳಿತ ನೀತಿಗಳೂ, ಪಠ್ಯಕ್ರಮಗಳು ಮತ್ತು ಒಂದರಿಂದ ಪದವಿವರೆಗಿನ ವ್ಯಾಸಂಗದ ಮಾದರಿಯೂ ಇದನ್ನೇ ಸೂಚಿಸುತ್ತದೆ. ಕರ್ನಾಟಕ ಸರ್ಕಾರ ಈ ನೀತಿಯನ್ನು ಈಗಾಗಲೇ ಜಾರಿಗೊಳಿಸಿದೆ. ಭಾರತವನ್ನು ಜ್ಞಾನಾಧಾರಿತ ಸಮಾಜವಾಗಿ ರೂಪಿಸುವುದು ಈ ನೀತಿಯ ಉದ್ದೇಶವಾಗಿದೆ. ಇಲ್ಲಿ ಜ್ಞಾನ ಎಂದರೆ ಸಂಶೋಧನೆ-ಅಧ್ಯಯನ ಕೇಂದ್ರಿತ ಜ್ಞಾನ ಅಲ್ಲ. ಔದ್ಯೋಗಿಕ ಕ್ರಾಂತಿಗೆ ಅತ್ಯವಶ್ಯವಾದ ತಾಂತ್ರಿಕ ಜ್ಞಾನ ಎಂದೇ ಅರ್ಥ. ಇದನ್ನೇ ನಾವು ಕೌಶಲ ಎಂದೂ ಕರೆಯಬಹುದು. ಹೊಸ ಶಿಕ್ಷಣ ನೀತಿಯ ಅನುಸಾರ ವಿದ್ಯಾರ್ಥಿಗಳಿಗೆ ಆರನೆ ತರಗತಿಯಿಂದಲೇ ಕೌಶಲಾಭಿವೃದ್ಧಿಯ ಬಗ್ಗೆ ಒತ್ತು ನೀಡಲಾಗುತ್ತದೆ. ಪದವಿ ತರಗತಿಗಳಲ್ಲೂ ನಾಲ್ಕು ವರ್ಷವೂ ಓದಲೇ ಬೇಕೆಂಬ ಕಡ್ಡಾಯ ಇರುವುದಿಲ್ಲ.
ಕೌಶಲ ಅಪೇಕ್ಷಿಸುವ ಉದ್ದಿಮೆಗಳಿಗೆ ಈ ಪದವಿ ಸರಣಿಯಲ್ಲಿ ಕೌಶಲ ಗಳಿಸುವ ಯುವ ಸಮೂಹ ಉತ್ತಮ ಶ್ರಮ ಸರಕುಗಳೂ ಆಗುತ್ತಾರೆ, ಬಂಡವಾಳವೂ ಆಗುತ್ತಾರೆ. ತಯಾರಿಕೆಯ ಕ್ಷೇತ್ರದಲ್ಲಿ ಪರಿಪೂರ್ಣ ಇಂಜಿನಿಯರಿಂಗ್ ಜ್ಞಾನ ಪಡೆದ ಪದವೀಧರರ ಬದಲು, ಯಾಂತ್ರಿಕ ವಲಯದ ಒಂದು ನಿರ್ದಿಷ್ಟ ಕೌಶಲ ಗಳಿಸಿದ ಡಿಪ್ಲೊಮೋ ಪದವೀಧರ ಸಾಕಾಗುತ್ತಾನೆ. ಮೊದಲ ವರ್ಷದ ಪದವಿ ಪೂರೈಸಿ ಪ್ರಮಾಣಪತ್ರ ಪಡೆದವರೂ ಕೌಶಲದ ಆಧಾರದ ಮೇಲೆ ಉದ್ಯೋಗ ಮಾರುಕಟ್ಟೆಯಲ್ಲಿ ಅವಕಾಶ ಗಳಿಸುತ್ತಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಕನ್ನಡದ ಪಾರಿಭಾಷಿಕ ಶಬ್ದಗಳ ಕೊರತೆ ಢಾಳಾಗಿ ಕಾಣುತ್ತಿದೆ. ಕನ್ನಡದ್ದೇ ಆದ ಪದಗಳನ್ನು, ಶಬ್ದಗಳನ್ನು ಹುಟ್ಟುಹಾಕುವಲ್ಲಿ ನಾವು ಹೆಚ್ಚು ಮುಂದುವರೆದಿಲ್ಲ. ಮೇಲೆ ಉಲ್ಲೇಖಿಸಿದ ಸಾಂಸ್ಥಿಕ ನೆಲೆಗಳ ವೈಫಲ್ಯವನ್ನು ಇಲ್ಲಿ ಗುರುತಿಸಲು ಸಾಧ್ಯ.

ಹಾಗೆಂದ ಮಾತ್ರಕ್ಕೆ ಕನ್ನಡದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಶಾಸ್ತ್ರದ ಅನುವಾದವನ್ನು ಪ್ರಯತ್ನಿಸಿಯೇ ಇಲ್ಲ ಎಂದು ಹೇಳಲಾಗದು. ಕಳೆದ ಶತಮಾನದ ಆದಿಯಿಂದಲೂ ಈ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ಈ ಅನುವಾದದ ಕ್ರಿಯೆಯಲ್ಲಿ ಮೂರು ಹಂತಗಳನ್ನು ಗುರುತಿಸಬಹುದು. 1900 ರಿಂದ 1930ರವರೆಗೆ ವಿಜ್ಞಾನ ಬರಹಗಳು ಒಂದು ಬಗೆಯದು. ಮುಂದೆ 1965ರವರೆಗೆ ಪಠ್ಯಪುಸ್ತಕಗಳ ರಚನೆಯ ಪ್ರಕ್ರಿಯೆಯಲ್ಲಿ ಹೊಸ ಬಗೆಯ ಕನ್ನಡದ್ದೇ ಆದ (ಸಂಸ್ಕೃತ ಭೂಯಿಷ್ಟ ಎಂದೂ ಹೇಳಬಹುದು) ಪದಗಳನ್ನು ಬಳಕೆಗೆ ತರಲಾಯಿತು. ಜಲಜನಕ, ಸಾರಜನಕ, ಇಂಗಾಲ ಡಯಾಕ್ಸೈಡ್ ಮುಂತಾದ ಪದಗಳು ಪಠ್ಯಕ್ರಮಗಳಲ್ಲೂ ಬಳಕೆಯಾಗತೊಡಗಿದವು. ಇದು ಇನ್ನೂ ವಿಸ್ತರಣೆಗೊಂಡು ಆರಕ್ಷಕ, ನಿರೀಕ್ಷಕ, ಅಭಿಯಂತರು, ಸಿಂಪಿಗ ಇತ್ಯಾದಿ ಪದಗಳೂ ಬಳಕೆಗೆ ಬಂದವು.
ಆದರೆ ಮೂರನೆ ಔದ್ಯೋಗಿಕ ಕ್ರಾಂತಿ ಎದುರಾದಾಗ ಕನ್ನಡ ಪಾರಿಭಾಷಿಕ ಪದಸೃಷ್ಟಿ ಬಹುತೇಕ ಸೋತಿತು. ಈ ಸನ್ನಿವೇಶದಲ್ಲಿ ಉಳಿದ ಸೋದರ ಭಾಷೆಗಳು ಯಾವ ಮಾರ್ಗ ಅನುಸರಿಸಿದವು ಎನ್ನುವುದನ್ನೂ ಗಮನಿಸುವುದು ಅವಶ್ಯ. ತೆಲುಗು, ತಮಿಳು, ಮಲಯಾಳ ಭಾಷೆಗಳು ಇಂಗ್ಲಿಷ್ ಪದಗಳನ್ನೇ ಧಾರಾಳವಾಗಿ ಬಳಸಿಕೊಂಡವು. ಹೊಸ ಪದಗಳನ್ನು ಟಂಕಿಸುವ ಗೋಜಿಗೆ ಹೋಗಿಲ್ಲ. ಗಣಕಯಂತ್ರಕ್ಕೆ ಪೂರಕವಾದ ಅಥವಾ ಕಂಪ್ಯೂಟರ್ ಬಳಕೆಯಲ್ಲಿ ಎದುರಾಗುವ ಹೊಸ ಪದಗಳನ್ನು ಕನ್ನಡದಲ್ಲಿ ಟಂಕಿಸಲು ಮುಂದಾಗಲಿಲ್ಲ. ಸಿ.ಡಿ, ಡಿ.ವಿ.ಡಿ, ಹಾರ್ಡ್ ವೇರ್, ಸಾಫ್ಟ್ ವೇರ್, ಮದರ್ ಬೋರ್ಡ್, ಮೌಸ್, ಸಿ.ಪಿ.ಯು (Central Processing Uniţ) ಹೀಗೆ ಕಂಪ್ಯೂಟರ್ ಜಗತ್ತಿನ ಇಂಗ್ಲಿಷ್ ಪದಗಳನ್ನೇ ಬಳಸಿಕೊಂಡವು. ಕನ್ನಡದಲ್ಲೂ ನಾವು ಇದನ್ನೇ ಮಾಡಿದ್ದೇವೆ. ಇದು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎನ್ನುವುದೂ ಗಮನಿಸಬೇಕಾದ ಸಂಗತಿ. ಇದೇ ಸಂದರ್ಭದಲ್ಲಿ ನಾವು ಭಾರತೀಯ ಭಾಷೆಗಳು ಎದುರಿಸುತ್ತಿರುವ ಹಲವು ರೀತಿಯ ಸಂಕಷ್ಟಗಳನ್ನೂ ಗುರುತಿಸಬಹುದು. ಅತ್ಯಂತ ಪ್ರಾಚೀನ ಮತ್ತು ಶ್ರೀಮಂತ ಭಾಷೆ ಎಂದೇ ಹೇಳಲ್ಪಡುವ ಸಂಸ್ಕೃತದಲ್ಲೂ ಸಹ, ಕಳೆದ ಒಂದು ಸಾವಿರ ವರ್ಷಗಳಿಂದ ವಿಜ್ಞಾನ ಜಗತ್ತಿನಲ್ಲಿ ಆಗಿರುವ ಅವಿಷ್ಕಾರಗಳು ಮತ್ತು ವಸ್ತುಗಳಿಗೆ ತನ್ನದೇ ಆದ ಪದವನ್ನು ಸಂಸ್ಕೃತದಲ್ಲಿ ರೂಪಿಸಲಾಗಿಲ್ಲ. ಉದಾಹರಣೆಗೆ ಫಿರಂಗಿ, ಬಂದೂಕು, ಇತ್ಯಾದಿ. ಸಾಮಾನ್ಯ ಬಳಕೆಗೆ ನಿಲುಕದ ಯಾವುದೇ ಭಾಷೆ ಹೀಗೆ ಜಡಗಟ್ಟುತ್ತದೆ . ಜನಸಾಮಾನ್ಯರ ನಿತ್ಯಬದುಕಿನ ಭಾಷೆಯಾಗುವುದಿಲ್ಲ.
ಇನ್ನುಳಿದಂತೆ ನೋಡಿದರೂ ಯಾವುದೇ ಭಾರತೀಯ ಭಾಷೆಗಳಲ್ಲಿ ಹೊಸತು ಎನ್ನುವುದು ಹೊರಬರುತ್ತಿಲ್ಲ. ಜನಸಾಮಾನ್ಯರ ನಿತ್ಯ ಬದುಕಿನಲ್ಲಿ ಉಂಟಾಗುತ್ತಿರುವ ಪಲ್ಲಟಗಳಿಗೆ ಸ್ಪಂದಿಸುವಂತಹ ಸಾಹಿತ್ಯಕ ಪ್ರತಿಕ್ರಿಯೆಗಳು ಭಾಷೆಯ ನೆಲೆಯಲ್ಲಿ ಸೃಷ್ಟಿಯಾಗುತ್ತಿಲ್ಲ. ಕನ್ನಡದಲ್ಲೇ ಮೊಬೈಲ್ ಬಗ್ಗೆ ಮಕ್ಕಳ ಅಥವಾ ದೊಡ್ಡವರ ಒಂದು ಪದ್ಯವಾಗಲೀ, ವಾಟ್ಸಾಪ್ ನಮ್ಮ ಮುಂದೆ ತೆರೆದಿಡುತ್ತಿರುವ ಸಂವಹನ ಸಾಧ್ಯತೆಗಳ ಬಗ್ಗೆ ಸಾಹಿತ್ಯಕ ಪ್ರತಿಕ್ರಿಯೆಯನ್ನು ನಾವು ಕಾಣಲಾಗುತ್ತಿಲ್ಲ. ತಂತ್ರಜ್ಞಾನದ ಪ್ರಗತಿ ಅಡೆತಡೆಯಿಲ್ಲದೆ ಆಗುತ್ತಿದೆ. ಗೂಗಲ್ ಸರ್ಚ್‌ನ ಹಂತದಿಂದ ಈಗ ಚಾಟ್‌ಜಿಪಿಟಿವರೆಗೆ ವಿಸ್ತರಿಸಿದೆ. ವಿಷಯ ಸಂಗ್ರಹ ಮಾಡಿ ಬರೆಯಬೇಕಿದ್ದ ಯುವ ಪೀಳಿಗೆಗೆ ಈಗ ಚಾಟ್‌ಜಿಪಿಟಿ ಸಿದ್ಧ ವರದಿಯನ್ನು, ಲೇಖನವನ್ನು, ಕಾವ್ಯವನ್ನೂ ಸಹ ನೀಡಿಬಿಡುತ್ತದೆ. ಕೃತಕ ಬುದ್ಧಿಮತ್ತೆ ನಮ್ಮ ಜ್ಞಾನ ವಿಸ್ತರಣೆಯ ಮಾರ್ಗಗಳಲ್ಲಿ ತನ್ನದೇ ಆದ ಹಂಪ್‌ಗಳನ್ನು ನಿರ್ಮಿಸುತ್ತಿದೆ. ಇದಕ್ಕೆ ಪೂರಕವಾಗಿ ಭಾರತದ ಆರ್ಥಿಕ ನೀತಿಯೂ, ಈ ನೀತಿಯ ಅನುಸಾರ
ಶಿಕ್ಷಣ ನೀತಿಯನ್ನೂ ನಾವು ಒಪ್ಪಿಕೊಂಡಿದ್ದೇವೆ.
ಕೃತಕ ಬುದ್ಧಿಮತ್ತೆಯನ್ನೇ ಆಧರಿಸಿ ಮುನ್ನಡೆಯುವ ಭಾರತದ ಅರ್ಥವ್ಯವಸ್ಥೆಯಲ್ಲಿ ಉದ್ಯೋಗಾವಕಾಶಗಳೂ ಸಾಫ್ಟ್ ವೇರ್ ಮತ್ತು ತಂತ್ರಜ್ಞಾನಾಧಾರಿತ ಔದ್ಯಮಿಕ ವಲಯಗಳಲ್ಲೇ ಸೃಷ್ಟಿಯಾಗುತ್ತದೆ. ಈ ಔದ್ಯಮಿಕ ಜಗತ್ತಿಗೆ ಬೇಕಾದ ಸರಕುಗಳನ್ನು ನಮ್ಮ ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ತಯಾರಿಸುತ್ತವೆ. ಆರನೆ ತರಗತಿಯಿಂದಲೇ ಕೋಡಿಂಗ್ ತಂತ್ರಜ್ಞಾನಕ್ಕೆ ತೆರೆದುಕೊಳ್ಳುವ ವಿದ್ಯಾರ್ಥಿಗೆ ಹತ್ತು ಹನ್ನೊಂದನೆ ತರಗತಿ ತಲುಪುವ ವೇಳೆಗೆ ನಿರಂತರ ಬದಲಾವಣೆಯಾಗುತ್ತಿರುವ, ನಿರಂತರ ಸುಧಾರಣೆಯಾಗುತ್ತಿರುವ ವಿದ್ಯುನ್ಮಾನ ವಲಯ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅಗತ್ಯವಾದ ಜ್ಞಾನಶಿಸ್ತನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಇಲ್ಲಿ ಕನ್ನಡ ಭಾಷೆಯ ಮುಂದಿನ ಸವಾಲುಗಳು ಜಟಿಲವಾಗುತ್ತಾ ಹೋಗುತ್ತವೆ. ಇಂದಿಗೂ ನಮ್ಮ ನಡುವೆ ಡಿಜಿಟಲೀಕರಣ, ಕಾರ್ಪೋರೇಟೀಕರಣ ಮುಂತಾದ ʼ ಈಕರಣ ʼಗಳನ್ನು ಸೇರಿಸುತ್ತಾ ಆಂಗ್ಲ ಪದಗಳನ್ನೇ ಬಳಸುವುದು ಅನಿವಾರ್ಯವಾಗಿದೆ. ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೊಳಿಸುವುದರೊಂದಿಗೇ ನಾವು ಆಂಗ್ಲ ಭಾಷೆಯನ್ನು ಪ್ರೌಢಿಮೆ ಪಡೆಯದೆ ಹೋದರೆ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಶೀಘ್ರ ಬದಲಾಗುತ್ತಿರುವ ತಂತ್ರಜ್ಞಾನ ವಲಯದಲ್ಲಿ ಸ್ಪರ್ಧಾತ್ಮಕವಾಗಿ ಬದುಕುವುದು ಅಸಾಧ್ಯವಾಗುತ್ತದೆ.
ಮುಂದಿನ ದಾರಿ ಏನು ? ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಹಿಂದಿರುಗಿ ನೋಡಬಹುದು. ಕಳೆದ ಶತಮಾನದ ಆರಂಭದಲ್ಲಿ ಉಂಟಾದ ಹಲವು ರೀತಿಯ ಭಾಷಿಕ, ಸಾಹಿತ್ಯಕ ಪಲ್ಲಟಗಳನ್ನು ಗಮನಿಸೋಣ. ಸಾಹಿತ್ಯದಲ್ಲೇ ಛಂದೋಬದ್ಧವಾದ ಪದ್ಯಗಳನ್ನೂ, ಪ್ರಾಸಬದ್ಧತೆಯನ್ನೂ ನಾವು ಕೈಬಿಡಬೇಕಾಯಿತು. ಭಾರತೀಯ ಸಾಹಿತ್ಯದ ಮೂಲ ಧಾತು ಎನ್ನಲಾಗುತ್ತಿದ್ದ ಆತ್ಮಸಾಕ್ಷಾತ್ಕಾರ, ಮೋಕ್ಷ ಸಾಧನೆ, ದುಷ್ಟ ಶಿಕ್ಷಣ-ಶಿಷ್ಟ ರಕ್ಷಣೆ, ಅಸತ್ಯದ ಮೇಲೆ ಸತ್ಯದ ಜಯ ಇವೇ ಮುಂತಾದ ಗುರಿ ಹೊಂದಿದ್ದ ಸಾಹಿತ್ಯದಿಂದ ವಿಮುಖವಾಗಿ ಇಂಗ್ಲಿಷ್ ಗೀತಗಳತ್ತ ಹೊರಳಿದೆವು. ಈಗ ಇದೇ ಪುನರಾವರ್ತನೆಯಾಗಬೇಕಿದೆ. ಬಹಳ ಮುಖ್ಯವಾಗಿ ಇಂಗ್ಲಿಷ್ ಭಾಷೆಯನ್ನು ನಮ್ಮದಾಗಿಸಿಕೊಳ್ಳಬೇಕು. ತಂತ್ರಜ್ಞಾನ ಮತ್ತು ಡಿಜಿಟಲ್ ಔದ್ಯಮಿಕ ವಲಯದಲ್ಲಿ ಬಳಸಲಾಗುವ ಎಲ್ಲ ಪದಗಳಿಗೂ ಪಾರಿಭಾಷಿಕ ಪದಗಳನ್ನು ಶೋಧಿಸುವ ಕ್ರಿಯೆಗೆ ಹಲವು ದಶಕಗಳ ಪರಿಶ್ರಮ ಅಗತ್ಯ. ಈಗಾಗಲೇ ಇದು ಆಗಬೇಕಿತ್ತು ಆಗಿಲ್ಲ. ಅದರ ಬದಲು ಆಂಗ್ಲ ಪದಗಳನ್ನೇ ಬಳಸುವ ಮೂಲಕ ಅವುಗಳನ್ನು ಕನ್ನಡ ಪದಗಳಾಗಿಯೇ ಮಾಡಬಹುದು. ಈಗಾಗಲೇ ನಾವು ಮಾರ್ಕೆಟ್, ಕಾಂಪೌಂಡ್, ಟಿಕೆಟ್,ಪ್ಯಾಂಟ್, ಷರ್ಟ್ ಹೀಗೆ ಇಂಗ್ಲಿಷ್ ಪದಗಳನ್ನು ಬಳಸುತ್ತಾ ಬಂದಿದ್ದೇವೆ. ಹೊಸ ಶಿಕ್ಷಣ ನೀತಿಯ ಪಠ್ಯಕ್ರಮಗಳಲ್ಲಿ ಇದೇ ಕ್ರಮವನ್ನು ಅನುಸರಿಸುವುದು ಒಳಿತು.
ಇದರಿಂದ ಕನ್ನಡ ಭಾಷಿಕ ಬೆಳವಣಿಗೆ ಕುಂಠಿತವಾಗುತ್ತದೆ ಎಂಬ ಆತಂಕ ಬೇಕಿಲ್ಲ. ಭಾಷೆಯ ಬೆಳವಣಿಗೆಗೆ, ವಿಸ್ತರಣೆಗೆ ಮತ್ತು ಹೊಸ ತಂತ್ರಜ್ಞಾನ ಜಗತ್ತಿಗೆ ತೆರೆದುಕೊಳ್ಳಲು ಬೇಕಾದ ಭೂಮಿಕೆಯನ್ನು ಸಿದ್ಧಪಡಿಸಲು ಕನ್ನಡದ ವಿದ್ವತ್ ವಲಯ, ಬೌದ್ಧಿಕ ವಲಯ, ಸಾಹಿತ್ಯಪರಿಷತ್ತು-ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂತಾದ ಸಾಂಸ್ಥಿಕ ಭೂಮಿಕೆಗಳಲ್ಲಿ, ಇದಕ್ಕೆ ಪರಿಹಾರ ಮಾರ್ಗಗಳನ್ನು ಶೋಧಿಸುವ ಕ್ರಿಯೆಗೆ ಮತ್ತಷ್ಟು ಒತ್ತು ನೀಡಬೇಕು. ಆದರೆ ಇದು ದೂರ ಭವಿಷ್ಯದ ಪ್ರಶ್ನೆ. ನಾಳೆಗೆ ಇದು ಉತ್ತರವಾಗಲಾರದು. ಇಂಗ್ಲಿಷ್ ಜ್ಞಾನ ಇವತ್ತಿನ ತಂತ್ರಜ್ಞಾನ ಜಗತ್ತಿಗೆ ಅನಿವಾರ್ಯ ಎನ್ನುವುದನ್ನು ಮನಗಂಡು, ಇಂಗ್ಲಿಷ್ ಭಾಷೆಯನ್ನು ನಮ್ಮದಾಗಿಸಿಕೊಂಡು, ಶಾಲಾ ಪಠ್ಯಕ್ರಮಗಳಲ್ಲೂ ಸಹ ತಾಂತ್ರಿಕವಾಗಿ ಇಂಗ್ಲಿಷ್ ಪದಗಳನ್ನೇ ಬಳಸುವ ಮೂಲಕ ಕನ್ನಡ ತಳಮಟ್ಟದ ಸಮುದಾಯಗಳಿಗೂ ತಲುಪುವಂತೆ ಮಾಡುವ ಅವಶ್ಯಕತೆ ಮತ್ತು ಸವಾಲು ನಮ್ಮ ಮುಂದಿದೆ. ಬಹುಸಂಖ್ಯೆಯ ಜನರಿಗೆ, ತಳಸಮುದಾಯಗಳಿಗೆ, ಗ್ರಾಮೀಣ ಜನಸಂಖ್ಯೆಗೆ ಉಚ್ಛರಿಸಲೂ ಸಾಧ್ಯವಾಗದ ಸಂಸ್ಕೃತ ಭೂಯಿಷ್ಟ ಪದಗಳನ್ನು ಟಂಕಿಸುವ ಬದಲು ಇಂಗ್ಲಿಷ್ ಭಾಷೆಯಲ್ಲಿನ ಚಾಲ್ತಿಯಲ್ಲಿರುವ ಪದಗಳನ್ನೇ ನಮ್ಮದಾಗಿಸಿಕೊಳ್ಳುವ ಮೂಲಕ ಕನ್ನಡ ಭಾಷಾ ಬೆಳವಣಿಗೆಗೆ ಹೊಸ ಆಯಾಮವನ್ನು ನೀಡಲು ಸಾಧ್ಯ.
ಗ್ರಾಂಥಿಕ ಭಾಷೆ ಎಷ್ಟೇ ಪ್ರೌಢಿಮೆಯಿಂದ ಕೂಡಿದ್ದರೂ ನಿತ್ಯ ಬದುಕಿನ ವ್ಯವಹಾರದಲ್ಲಿ ಅದು ಜನಸಾಮಾನ್ಯರ ಜೀವನೋಪಾಯದ ಸುಗಮ ಮಾರ್ಗವನ್ನು ಕಲ್ಪಿಸುವುದಿಲ್ಲ. ಡಿಜಿಟಲ್ ಯುಗ ಸೃಷ್ಟಿಸುತ್ತಿರುವ ತಂತ್ರಜ್ಞಾನಾಧಾರಿತ ಮಾರುಕಟ್ಟೆ ಮತ್ತು ಸಮಾಜದಲ್ಲಿ ನಮಗೆ ಸಂತೆಯ ಭಾಷೆ ಬೇಕಿದೆ. ವರ್ತಮಾನದ ಬದುಕಿಗೆ ಅವಶ್ಯವಾದ ಭಾ಼ಷೆಯನ್ನು ಶಿಕ್ಷಣದಲ್ಲಿ ಒದಗಿಸದೆ ಹೋದರೆ ತಮ್ಮ ಬದುಕು ರೂಪಿಸಿಕೊಳ್ಳಲು ಇದೇ ವರ್ತಮಾನದ ಸಮಾಜ ಮತ್ತು ಆರ್ಥಿಕತೆಯನ್ನು ಅವಲಂಬಿಸುವ ಯುವ ಪೀಳಿಗೆ ಅವಕಾಶವಂಚಿತವಾಗುತ್ತದೆ. ಇಂಗ್ಲಿಷ್ ಶಿಕ್ಷಣ ಪಡೆಯುವ ಮೇಲ್ವರ್ಗವು ಎಲ್ಲ ಅವಕಾಶಗಳನ್ನೂ ಕಬಳಿಸುತ್ತದೆ. ತಳವರ್ಗಗಳು ಭಾಷಾ ಅರಿವಿನ ಕೊರತೆಯಿಂದಲೇ ಹಿಂದುಳಿಯುತ್ತವೆ. ನಮ್ಮ ಸಮಾಜದಲ್ಲಿ ಶೇ 80ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಈ ತಳವರ್ಗಗಳಿಗೆ ಬದುಕು ರೂಪಿಸಿಕೊಳ್ಳಲು ಮಾರುಕಟ್ಟೆ ಭಾಷೆ ಮತ್ತು ತಂತ್ರಜ್ಞಾನದ ಭಾಷೆ ಎರಡೂ ಅತ್ಯವಶ್ಯವಾಗುತ್ತದೆ. ಶೈಕ್ಷಣಿಕ ಪಠ್ಯಗಳಲ್ಲಿ ಇದನ್ನು ಒದಗಿಸದೆ ಇದ್ದರೆ ಬಹುಶಃ ಬಹುಸಂಖ್ಯಾತ ಜನತೆ ಅವಕಾಶವಂಚಿತರಾಗುತ್ತಾರೆ. ಈ ಕಾರಣಕ್ಕಾಗಿ ನಾವು ಇಂಗ್ಲಿಷ್ ಭಾಷೆಯನ್ನು ನಮ್ಮದಾಗಿಸಿಕೊಳ್ಳುವ ಮುಖಾಂತರವೇ ಕನ್ನಡ ಭಾಷಾ ಬೆಳವಣಿಗೆಯ ವಿಭಿನ್ನ ಆಯಾಮವನ್ನು ಕಂಡುಕೊಳ್ಳಬೇಕಿದೆ.
ಶಾಲಾ ಕಲಿಕೆಯ ಹಂತದಲ್ಲಿ ಕನ್ನಡ ಮಾಧ್ಯಮದ ಅಳವಡಿಕೆ ಕನ್ನಡ ಭಾಷೆಯ ಅಭಿವೃದ್ಧಿಗೆ ಅತ್ಯಗತ್ಯ, ಪ್ರಾಥಮಿಕ ಹಂತದಲ್ಲಾದರೂ ಕನ್ನಡ ಮಾಧ್ಯಮ ಕಡ್ಡಾಯವಾಗುವುದು ಅಪೇಕ್ಷಿತ. ಆದರೆ ಇದರೊಟ್ಟಿಗೆ ಇಂಗ್ಲಿಷ್ ಭಾಷೆಯನ್ನೂ ಜೊತೆಜೊತೆಯಲ್ಲೇ ಕಲಿಸುವುದರಿಂದ ಕನ್ನಡಕ್ಕೇನೂ ಅಪಾಯವಾಗುವುದಿಲ್ಲ. ಇಂಗ್ಲಿಷ್ ಭಾಷೆಯನ್ನು ನಮ್ಮದಾಗಿಸಿಕೊಳ್ಳುವುದೆಂದರೆ, ಕನ್ನಡ ಭಾಷೆಯ ಬೆಳವಣಿಗೆಯು ವರ್ತಮಾನದ ಮತ್ತು ಭವಿಷ್ಯದ ಜನಸಾಮಾನ್ಯರ ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆಗೆ ಪೂರಕವಾಗಿರುವಂತೆ, ಭಾಷೆಯನ್ನು ಕಲಿಸುವುದು ಎಂದೇ ಅರ್ಥ.
ನಮ್ಮ ಮುಂದಿನ ಸವಾಲುಗಳಿಗೆ ಉತ್ತರ ಶೋಧಿಸಬೇಕೇ ಹೊರತು, ಕಲ್ಪಿತ ಅಥವಾ ಪರಿಭಾವಿತ ಪ್ರಶ್ನೆಗಳಿಗಲ್ಲ.






