ಹರಿಯಾಣದ ನುಹ್-ಮೇವಾತ್ನಲ್ಲಿ ನಡೆದ ಗಲಭೆಗಳ ಪೂರ್ವಾಪರಗಳನ್ನು ಗಮನಿಸಬೇಕಿದೆ
ಹರಿಯಾಣದ ನುಹ್-ಮೇವಾತ್ ಪ್ರಾಂತ್ಯದಲ್ಲಿ ಹಾಗೂ ಸಮೀಪದ ಡಿಜಿಟಲ್ ಆರ್ಥಿಕತೆಯ ಹೆಡ್ ಕ್ವಾರ್ಟರ್ಸ್ ಗುರುಗ್ರಾಮದಲ್ಲಿ ನಡೆದ ಕೋಮು ಗಲಭೆಗಳು ಸದ್ಯಕ್ಕೆ ತಹಬಂದಿಗೆ ಬಂದಿದ್ದರೂ ಈ ಗಲಭೆಗಳ ಹಿಂದೆ ಅಡಗಿರುವ ಕೋಮು ದ್ವೇಷ ಹಾಗೂ ಮತೀಯವಾದದ ಮೂಲ ಸೆಲೆಗಳು ಎಂದಿಗೂ ಬತ್ತಲಾರದಷ್ಟು ಆಳವಾಗಿ ಬೇರೂರಿವೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಹಿಂದೂ-ಮುಸ್ಲಿಂ ಕೋಮು ಸಂಘರ್ಷಗಳಿಗೆ ಸುದೀರ್ಘ ಇತಿಹಾಸವೇ ಇದೆ. ಇತ್ತೀಚಿನ ಹರಿಯಾಣ ಘಟನೆಗಳು ಈ ದುರಂತ ಚರಿತ್ರೆಯ ಇತ್ತೀಚಿನ ಆವೃತ್ತಿಯಂತೆಯೇ ಕಾಣುತ್ತದೆ. ಮೇವಾತ್ ಪ್ರಾಂತ್ಯದಲ್ಲಿರುವ ನುಹ್ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದರೂ, ಪ್ರಸ್ತುತ ಘಟನೆಗಳಿಗೆ ಅದೊಂದೇ ಕಾರಣ ಎನ್ನಲಾಗುವುದಿಲ್ಲ. ಅತಿಯಾಗಿ ಧೃವೀಕರಣಕ್ಕೊಳಗಾಗಿರುವ ಒಂದು ಸಮಾಜದಲ್ಲಿ ಅಸ್ಮಿತೆಗಳ ನಡುವಿನ ಸಂಘರ್ಷ ತಾರಕಕ್ಕೆ ತಲುಪಿದಾಗ ಇಂತಹ ಗಲಭೆಗಳು ಬೇರೆಯೇ ಅರ್ಥವನ್ನು ಪಡೆದುಕೊಳ್ಳುತ್ತವೆ. ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್ ರಾಜ್ಯ ಸರ್ಕಾರದ ಬುಲ್ಡೋಜರ್ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಿ ನೀಡಿರುವುದೇ ಅಲ್ಲದೆ ಇದು ಜನಾಂಗೀಯ ದ್ವೇಷದ ಕ್ರಮವೇ ಎಂದು ಪ್ರಶ್ನಿಸಿರುವುದು ಚಿಂತನಾರ್ಹ ವಿಷಯವಾಗಿದೆ.
ಗುರುಗ್ರಾಮದ ಸಮೀಪದಲ್ಲಿರುವ ಭಾರತದ ಅತಿ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವ ನುಹ್ ರಾಜಧಾನಿ ದೆಹಲಿಗೆ ಸಮೀಪದಲ್ಲಿದ್ದರೂ ಈವರೆಗೂ ರೈಲು ಮಾರ್ಗವನ್ನು ಹೊಂದುವ ಸೌಭಾಗ್ಯ ಪಡೆದಿಲ್ಲ. ಇಡೀ ಜಿಲ್ಲೆಯಲ್ಲಿ ಒಂದೇ ಒಂದು ವಿಶ್ವವಿದ್ಯಾಲಯವೂ ಇಲ್ಲ. ಶೇ 80ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಈ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳೂ ದುಸ್ಥಿತಿಯಲ್ಲಿದ್ದು, ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯಗಳೂ ಸಹ ಕಳಪೆಯಾಗಿವೆ. ಜಿಲ್ಲೆಯ ಬಹುಸಂಖ್ಯೆಯ ಜನರು ಕೃಷಿಯನ್ನೇ ಅವಲಂಬಿಸಿ ಬದುಕು ಸವೆಸುತ್ತಾರೆ. ಮತ್ತೊಂದೆಡೆ ಸಾಕ್ಷರತೆ-ಶೈಕ್ಷಣಿಕ ಗುಣಮಟ್ಟದಲ್ಲಿ ತೀರಾ ಹಿಂದುಳಿದಿರುವ ಈ ಜಿಲ್ಲೆ ವಾಹನಗಳ ಕಳುವಿಗೆ ಕುಖ್ಯಾತಿ ಪಡೆದಿದ್ದು, ಸೈಬರ್ ಕ್ರೈಂ ಜಿಲ್ಲೆ ಎಂದೇ ಗುರುತಿಸಲ್ಪಡುತ್ತದೆ. ಸಾಮಾನ್ಯ ಜನತೆಯ ಶೈಕ್ಷಣಿಕ ಬೆಳವಣಿಗೆಗೂ, ಉದ್ಯೋಗಾವಕಾಶಗಳ ಕೊರತೆಗೂ, ಸಾಧಾರಣ ಅಪರಾಧಗಳ ಹೆಚ್ಚಳಕ್ಕೂ ಇರುವ ಸೂಕ್ಷ್ಮ ಸಂಬಂಧಗಳನ್ನು ನುಹ್ ಜಿಲ್ಲೆಯಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಈ ಕೊರತೆಗಳನ್ನು ನಿವಾರಿಸಬೇಕೆಂದರೆ ಪ್ರದೇಶದ ಅಭಿವೃದ್ಧಿಯ ಬಗ್ಗೆ ಸರ್ಕಾರಗಳು ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಆದರೆ ಭಾರತದಲ್ಲಿ ಇಂತಹ ಪ್ರದೇಶಗಳು ಹೇರಳವಾಗಿದ್ದು, ಎಲ್ಲಿಯೂ ಸಹ ಸರ್ಕಾರಗಳು ಸಕಾರಾತ್ಮಕ ಕ್ರಮಗಳನ್ನು ಕೈಗೊಂಡ ನಿದರ್ಶನಗಳು ಕಾಣುವುದಿಲ್ಲ.
ಕೋಮು ಸಂಘರ್ಷದ ನೆಲೆಗಳು
ಸ್ವತಂತ್ರ ಭಾರತದಲ್ಲಿ ನಡೆದಿರುವ ಕೋಮು ಗಲಭೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಸಮಾನ ಎಳೆಯನ್ನೂ ಗುರುತಿಸಬಹುದು. ಧಾರ್ಮಿಕ ಉತ್ಸವಗಳ ಸಂದರ್ಭದಲ್ಲಿ ನಡೆಯುವ ಮೆರವಣಿಗೆಗಳಲ್ಲಿ ಭಕ್ತಿ ಭಾವಗಳೊಂದಿಗೆ ಪಾಲ್ಗೊಳ್ಳುವ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಈ ಸನ್ನಿವೇಶದಲ್ಲೇ ತಮ್ಮ ಮತೀಯ ಅಸ್ಮಿತೆಗಳನ್ನು ಮತ್ತಷ್ಟು ಗಟ್ಟಿಗೊಳಿಸಿ, ಕೋಮು ಧೃವೀಕರಣದ ಹಾದಿಗಳನ್ನು ಹುಡುಕುವ ಕೋಮುವಾದಿ-ಮತಾಂಧ ಸಂಘಟನೆಗಳೂ ಹೆಚ್ಚು ಸಕ್ರಿಯವಾಗಿರುತ್ತವೆ. ಹಾಗಾಗಿ ಈ ಮೆರವಣಿಗೆಗಳಲ್ಲಿ ಧರ್ಮ ಅಥವಾ ಧಾರ್ಮಿಕ ಶ್ರದ್ಧಾನಂಬಿಕೆಗಳಿಗಿಂತಲೂ ಹೆಚ್ಚಾಗಿ ಭಾವೋದ್ರೇಕ-ಭಾವಾವೇಷಗಳೇ ಪ್ರಧಾನವಾಗಿ ಕಾಣುತ್ತವೆ. ಅನ್ಯ ಧರ್ಮದ ಪೂಜಾಸ್ಥಳಗಳು ಇಂತಹ ಮೆರವಣಿಗೆಗಳಲ್ಲಿ ಗಲಭೆಯ ಕೇಂದ್ರ ಬಿಂದುಗಳಾಗಿಬಿಡುತ್ತವೆ. ಧಾರ್ಮಿಕ ಉತ್ಸವ-ಮೆರವಣಿಗೆಯ ಮೇಲೆ ಕಲ್ಲೆಸೆಯುವ ಅಥವಾ ಮತ್ತಾವುದೋ ರೀತಿಯಲ್ಲಿ ಭಂಗಗೊಳಿಸುವ ಮತೀಯ ಮನಸ್ಸುಗಳಿಗೆ ಪ್ರತಿಯಾಗಿ ಮಾರಕಾಸ್ತ್ರಗಳಿಂದ ಪ್ರತಿದಾಳಿಗೆ ಸಿದ್ಧವಾಗಿರುವ ಮನಸುಗಳನ್ನೂ ಪೂರ್ವಭಾವಿಯಾಗಿ ತಯಾರಿಸಲಾಗಿರುತ್ತದೆ. ನುಹ್ ಗಲಭೆಗಳೂ ಇದೇ ಮಾದರಿಯನ್ನು ಅನುಸರಿಸಿವೆ.
ಈ ಬೌದ್ಧಿಕ ಕಾರ್ಖಾನೆಗಳೇ ಪ್ರತಿಯೊಂದು ಕೋಮು ಸಂಘರ್ಷದ ಫಲಾನುಭವಿ ಕೇಂದ್ರಗಳೂ ಆಗಿರುತ್ತವೆ. ಆಡಳಿತ ವ್ಯವಸ್ಥೆಗೆ ಇಂತಹ ಸನ್ನಿವೇಶಗಳಲ್ಲಿ ಎದುರಾಗಬಹುದಾದ ಸೂಕ್ಷ್ಮ-ಅತಿಸೂಕ್ಷ್ಮ ಜಾಗಗಳು ತಿಳಿದೇ ಇರುತ್ತವೆ. ಆದರೂ ಆಡಳಿತಾರೂಢ ಪಕ್ಷಗಳ ರಾಜಕೀಯ ಒತ್ತಡಗಳು ಕೆಲವೊಮ್ಮೆ ಮುನ್ನೆಚ್ಚರಿಕೆಯ ಕ್ರಮಗಳಿಗೆ ಅಡ್ಡಿಯಾಗಿ ಪರಿಣಮಿಸುತ್ತವೆ. ಹರಿಯಾಣದ ಗಲಭೆಯಲ್ಲಿ ಇದನ್ನು ಸ್ಪಷ್ಟವಾಗಿ ಗಮನಿಸಬಹುದಾಗಿತ್ತು. ನುಹ್ ಜಿಲ್ಲೆ ಕೋಮು ಸೌಹಾರ್ದತೆಗೆ ಹೆಸರಾಗಿರುವ ಒಂದು ಪ್ರದೇಶವಾಗಿತ್ತು ಎನ್ನುವುದನ್ನು ಅಲ್ಲಿನ ನಾಗರಿಕರೂ ಸಹ ಒಪ್ಪುತ್ತಾರೆ. ಶಿವಭಕ್ತರು ಪ್ರತಿವರ್ಷ ನಡೆಸುವ ಕನ್ವರ್ ಯಾತ್ರೆಗೆ ಮುಸಲ್ಮಾನರೇ ಪೆಂಡಾಲ್ಗಳನ್ನು ನಿರ್ಮಿಸುವುದು ಇಲ್ಲಿ ಅನೂಚಾನವಾಗಿ ನಡೆದುಬಂದ ಪರಂಪರೆಯಾಗಿದೆ ಎನ್ನಲಾಗುತ್ತದೆ. ದಸರಾ ಮೆರವಣಿಗೆಗಳಲ್ಲೂ ಮುಸ್ಲಿಂ ಬಾಂಧವರು ಭಾಗವಹಿಸುವುದು ಇಲ್ಲಿನ ವಾಡಿಕೆಯಾಗಿದೆ ಎಂದು ಸ್ಥಳೀಯ ಮುಸ್ಲಿಂ ವ್ಯಾಪಾರಿಗಳೂ ಹೇಳುತ್ತಾರೆ. ಆದರೂ ಈ ಬಾರಿಯ ಕನ್ವರ್ ಯಾತ್ರೆಯಲ್ಲಿ ಸಂಭವಿಸಿದ ಘಟನೆಗಳು ಇಡೀ ರಾಜ್ಯದ ಸೌಹಾರ್ದ ವಾತಾವರಣವನ್ನು ಹಾಳುಗೆಡಹಿದೆ.
ನುಹ್ ಜಿಲ್ಲೆಯಲ್ಲಿ ಹೊತ್ತಿದ ಕೋಮು ಸಂಘರ್ಷದ ಕಿಡಿ ಕೆಲವೇ ಗಂಟೆಗಳಲ್ಲಿ ನೆರೆಯ ಗುರುಗ್ರಾಮ್, ಪಲ್ವಾಲ್, ಫರೀದಾಬಾದ್ ಮತ್ತು ರೇವಾರಿ ಜಿಲ್ಲೆಗಳಿಗೂ ಹರಡಿದ ಪರಿಣಾಮ 6 ಜನರು ಮೃತಪಟ್ಟು 88 ಜನರು ಗಾಯಗೊಂಡಿದ್ದಾರೆ. ಹಲವಾರು ಅಂಗಡಿ ಮುಗ್ಗಟ್ಟುಗಳು, ಮಳಿಗೆಗಳು, ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ. ನುಹ್ನಿಂದ ಪಕ್ಕದ ಗುರುಗ್ರಾಂಗೆ ಸೇರಿ ಸೋಹ್ನಾಗೆ ಹರಡಿದ ಗಲಭೆಗಳಲ್ಲಿ ಐದು ಕಾರುಗಳು, ಒಂದು ಆಟೋರಿಕ್ಷಾ, ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಮನೆಗಳು, ಸ್ಕ್ರ್ಯಾಪ್ ಮಳಿಗೆಗಳು ನಾಶವಾಗಿವೆ. ನುಹ್ ಜಿಲ್ಲೆಯ ನಲ್ಹಾರ್ ಗ್ರಾಮದಲ್ಲಿರುವ ಶಿವಲಿಂಗಕ್ಕೆ ಜಲಾಭಿಷೇಕ ಮಾಡುವುದು ಪರಂಪರಾನುಗತವಾಗಿ ನಡೆದುಬಂದಿದ್ದು ಅಲ್ಲಿಂದ 50 ಕಿಮೀ ದೂರದಲ್ಲಿರುವ ಸಿಂಗಾರ್ ಜಿಲ್ಲೆಯ ರಾಧಾಕೃಷ್ಣ ದೇವಾಲಯದವರೆಗೆ ಧಾರ್ಮಿಕ ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. ಸ್ಥಳೀಯವಾಗಿದ್ದ ಈ ಆಚರಣೆ ಇತ್ತೀಚಿನ ದಿನಗಳಲ್ಲಿ ವಿಶ್ವಹಿಂದೂ ಪರಿಷತ್ ಆಯೋಜಿಸುವ ಒಂದು ಬೃಹತ್ ಕಾರ್ಯಕ್ರಮವಾಗಿ ರೂಪುಗೊಂಡಿದ್ದು ನೆರೆಯ ಉತ್ತರಪ್ರದೇಶ, ರಾಜಸ್ಥಾನದಿಂದಲೂ ಭಕ್ತಾದಿಗಳು ಭಾಗವಹಿಸುತ್ತಾರೆ.
ಈ ಧಾರ್ಮಿಕ ಮೆರವಣಿಗೆಯ ಮೇಲೆ ಹಠಾತ್ತನೆ ನಡೆದ ದಾಳಿಯ ಪರಿಣಾಮವಾಗಿ ಭಾವೋದ್ರೇಕದ ಸನ್ನಿವೇಶ ಉಂಟಾಗಿದ್ದು, ಕೆಲವೇ ಗಂಟೆಗಳ ಅವಧಿಯಲ್ಲಿ ನಾಲ್ಕೂ ದಿಕ್ಕುಗಳಿಂದ ಮೆರವಣಿಗೆಯ ಮೇಲೆ ಕಲ್ಲುತೂರಾಟ ನಡೆದಿತ್ತು ಎಂದು ಕಾರ್ಯಕ್ರಮದ ಆಯೋಜಕರು ಆರೋಪಿಸುತ್ತಾರೆ. ದೇವಸ್ಥಾನದ ಆವರಣದಲ್ಲಿ ಬಚ್ಚಿಟ್ಟುಕೊಂಡ ಸಾವಿರಾರು ಭಕ್ತಾದಿಗಳು ಕೆಲವು ಗಂಟೆಗಳ ನಂತರವಷ್ಟೇ ಹೊರಬರಲು ಸಾಧ್ಯವಾಯಿತು ಎಂದೂ ಹೇಳಲಾಗುತ್ತದೆ. ಮತ್ತೊಂದೆಡೆ ಮೆರವಣಿಗೆ ಮುಂದುವರೆದ ನಂತರವೂ ಗಲಭೆಗಳು ಮುಂದುವರೆದಿದ್ದು ವಾತಾವರಣವನ್ನು ಕಲುಷಿತಗೊಳಿಸಿದೆ. ಕನ್ವರ್ ಯಾತ್ರೆ ಮತ್ತು ಜಲಾಭಿಷೇಕ ಯಾತ್ರೆಗಳು ವಾರ್ಷಿಕ ಉತ್ಸವಗಳಾಗಿದ್ದು ಯಾವುದೇ ಕಾಲಘಟ್ಟದಲ್ಲೂ ಈ ಆಚರಣೆಗಳಿಗೆ ವಿರೋಧ ಕಂಡುಬಂದಿಲ್ಲ. ಅಥವಾ ಈ ಉತ್ಸವಗಳನ್ನು ಭಂಗಗೊಳಿಸುವ ಪ್ರಯತ್ನಗಳು ಸಹ ನಡೆದಿಲ್ಲ ಎಂದು ಸ್ಥಳೀಯ ನಿವಾಸಿಗಳು ದೃಢೀಕರಿಸುತ್ತಾರೆ. ಈ ಬಾರಿ ನಡೆದ ಗಲಭೆಗಳಲ್ಲೂ ಸ್ಥಳೀಯರ ಪಾತ್ರ ನಗಣ್ಯವಾಗಿದ್ದು, ಹೊರ ರಾಜ್ಯಗಳಿಂದ, ಜಿಲ್ಲೆಗಳಿಂದ ಕೆಲವು ಕಿಡಿಗೇಡಿಗಳು ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿದ್ದಾರೆ ಎಂದೂ ಸ್ಥಳೀಯರು ಹೇಳುತ್ತಾರೆ.
ಆಡಳಿತ ವ್ಯವಸ್ಥೆಯ ವೈಫಲ್ಯ
ಈ ಬಾರಿ ಜಲಾಭಿಷೇಕ ಯಾತ್ರೆಗೆ ಅನುಮತಿ ನೀಡುವ ಮುನ್ನ ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಿತ್ತು ಎನ್ನುವುದು ಇಲ್ಲಿನ ಸಾರ್ವಜನಿಕರ ಅಭಿಪ್ರಾಯವೂ ಆಗಿದೆ. ಏಕೆಂದರೆ ಫೆಬ್ರವರಿಯಲ್ಲಿ ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ನಡೆದ ಗೋರಕ್ಷಕ ಪಡೆಗಳ ದಾಳಿಯಲ್ಲಿ ಇಬ್ಬರು ಮುಸ್ಲಿಂ ಯುವಕರ ಹತ್ಯೆಯಾದ ನಂತರ ಇಲ್ಲಿ ಬಿಗಿಯಾದ ವಾತಾವರಣ ಸೃಷ್ಟಿಯಾಗಿದೆ. ಅಷ್ಟೇ ಅಲ್ಲದೆ ಮುಸ್ಲಿಂ ಸಮುದಾಯಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಲು ಅವಕಾಶ ನಿರಾಕರಿಸುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ಹೇರಲಾಗಿದ್ದು , ಈ ನಿಯಮವೂ ಜಾರಿಯಾಗಿದೆ. ನುಹ್ ಮತ್ತು ಗುರುಗ್ರಾಮ ಜಿಲ್ಲೆಗಳಲ್ಲಿ ಮುಸ್ಲಿಮರು ನಮಾಜ್ ಮಾಡುತ್ತಿದ್ದ ಜಾಗಗಳ ಸಂಖ್ಯೆ 116 ರಿಂದ 6ಕ್ಕೆ ಇಳಿದಿದೆ. ಈ ಬೆಳವಣಿಗೆಗೆ ಮುಸ್ಲಿಂ ಧಾರ್ಮಿಕ ಮುಖಂಡರಿಂದ ಯಾವುದೇ ಪ್ರತಿರೋಧವೂ ವ್ಯಕ್ತವಾಗದಿರುವುದು ಅಚ್ಚರಿದಾಯಕ/ಸ್ವಾಗತಾರ್ಹ ಬೆಳವಣಿಗೆ. ಆದರೆ ಅತ್ಯಂತ ಹಿಂದುಳಿದ ಜಿಲ್ಲೆಯಾದ ನುಹ್ನಲ್ಲಿ ಮುಸ್ಲಿಂ ಸಮುದಾಯವು ಆರ್ಥಿಕವಾಗಿಯೂ ಹಿಂದುಳಿದಿರುವುದರಿಂದ ಹೆಚ್ಚಿನ ಮಸೀದಿಗಳನ್ನು ನಿರ್ಮಿಸಲೂ ಸಾಧ್ಯವಾಗಿಲ್ಲ ಎನ್ನುವುದು ವಾಸ್ತವ.
2018ರಿಂದಲೇ ಆರಂಭವಾದ ಹಿಂದೂ ಸಂಘಟನೆಗಳ ಈ ಅಭಿಯಾನ ಇತರ ಕ್ಷೇತ್ರಗಳಿಗೂ ವಿಸ್ತರಿಸುತ್ತಿದ್ದು, ಬಹುತೇಕ ಮುಸ್ಲಿಂ ವ್ಯಾಪಾರಿಗಳೇ ನಡೆಸುವ ಮಾಂಸದಂಗಡಿಗಳ ಮೇಲೆ ಸಹ ನಿರ್ಬಂಧಗಳನ್ನು ಹೇರಲಾಗಿದೆ. ನವರಾತ್ರಿ ಉತ್ಸವದ ವೇಳೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಮಾಂಸದಂಗಡಿ ತೆರೆಯಲು ಅವಕಾಶವನ್ನು ನಿರ್ಬಂಧಿಸಲಾಗಿದ್ದು ಕಳೆದ ಐದು ವರ್ಷಗಳಿಂದಲೂ ಇದು ಜಾರಿಯಲ್ಲಿದೆ. ಪ್ರತಿ ಮಂಗಳವಾರ ಮಾಂಸ ವ್ಯಾಪಾರವನ್ನು ನಿಷೇಧಿಸಲಾಗಿದೆ. ಈ ಬೆಳವಣಿಗೆಗಳ ನಡುವೆಯೂ ನುಹ್ ಜಿಲ್ಲೆಯಲ್ಲಿ ಮತ್ತು ನೆರೆಯ ಜಿಲ್ಲೆಗಳಲ್ಲಿ ಶಾಂತಿಯುತ ವಾತಾವರಣವಿದ್ದು, ಕೋಮು ಸಂಘರ್ಷಕ್ಕೆ ಎಡೆಮಾಡಿಕೊಡುವ ಯಾವುದೇ ಅಹಿತಕರ ಘಟನೆಗಳು ಸಂಭವಿಸಿರಲಿಲ್ಲ. ಹಾಗಾಗಿ ಈ ಬಾರಿ ಸಂಭವಿಸಿರುವ ಘಟನೆಗಳ ಹಿಂದೆ ಮತೀಯ ಶಕ್ತಿಗಳ ವ್ಯವಸ್ಥಿತ ಹುನ್ನಾರ ಇರುವುದೂ ಸ್ಪಷ್ಟವಾಗಿ ಗೋಚರಿಸುತ್ತದೆ. ಮತ್ತೊಂದೆಡೆ ಶೇ 80ರಷ್ಟು ಮುಸ್ಲಿಂ ಜನಸಂಖ್ಯೆ ಇರುವ ಜಿಲ್ಲೆಯೊಂದರಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತಿತರ ಸಂಘಟನೆಗಳು ಹಿಂದೂ ಅಸ್ಮಿತೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿರುವಾಗ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಹೆಚ್ಚಿನ ಜಾಗ್ರತೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಹರಿಯಾಣದ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆಯ ವೈಫಲ್ಯ ಎದ್ದುಕಾಣುವಂತಿದ್ದು, ಬುಲ್ಡೋಜರ್ ನ್ಯಾಯದ ಬಗ್ಗೆ ಹೈಕೋರ್ಟ್ ವ್ಯಕ್ತಪಡಿಸಿರುವ ಆತಂಕವೂ ಇದನ್ನೇ ಸೂಚಿಸುತ್ತದೆ.
ನುಹ್ನಂತಹ ಹಿಂದುಳಿದ ಜಿಲ್ಲೆಗಳಲ್ಲಿ ಬಹುಸಂಖ್ಯೆಯ ಜನರು ತಮ್ಮ ಜೀವನೋಪಾಯಕ್ಕಾಗಿ ಸಣ್ಣ ಪುಟ್ಟ ಉದ್ಯೋಗ-ವ್ಯಾಪಾರವನ್ನೇ ಅವಲಂಬಿಸುವುದರಿಂದ ಅಂತಹ ಜನತೆಯ ನಡುವೆ ಸಹಜವಾಗಿಯೇ ಸೌಹಾರ್ದ ವಾತಾವರಣ ಸೃಷ್ಟಿಯಾಗಿರುತ್ತದೆ. ತಮ್ಮ ಬದುಕು ಸವೆಸುವುದೇ ದುಸ್ತರವಾಗಿರುವ ಯಾವುದೇ ಜನಸಮುದಾಯವು ಜೀವನೋಪಾಯದ ಮಾರ್ಗಗಳನ್ನು ಹಾಳುಮಾಡುವಂತಹ ವಿಭಜಕ ಆಲೋಚನೆಗಳಿಗೆ ಸುಲಭವಾಗಿ ತುತ್ತಾಗುವುದಿಲ್ಲ. ಆದರೆ ಇದರ ಮತ್ತೊಂದು ಬದಿಯಲ್ಲಿ ಆಳವಾಗಿ ಬೇರೂರಿರುವ ಮತದ್ವೇಷ, ಕೋಮು ಭಾವನೆಗಳು ಹಾಗೂ ಮತಾಂಧತೆಯ ಸೆಲೆಗಳು ಶಿಕ್ಷಣ ವಂಚಿತ, ಉದ್ಯೋಗ ವಂಚಿತ ಸಾಮಾನ್ಯ ಜನತೆಯಲ್ಲಿ ಪರಕೀಯತೆಯ ಭಾವನೆಗಳನ್ನೂ ಸೃಷ್ಟಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಶ್ರಮಿಕ ಸಮುದಾಯವೇ ಇರುವ ಒಂದು ಹಿಂದುಳಿದ ಜಿಲ್ಲೆ ಕೋಮು ಸಂಘರ್ಷದ ಭೂಮಿಕೆಯಾಗಿ ಪರಿಣಮಿಸುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಹೆಚ್ಚಾಗಿ ಗುರುತಿಸಬಹುದಾದ ವಿದ್ಯಮಾನವೂ ಆಗಿದೆ.
ಸಾಮಾಜಿಕ ಜವಾಬ್ದಾರಿ
ಈ ವಿಭಜಕ ರಾಜಕಾರಣದ ವಿರುದ್ಧ ಹೋರಾಡುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ. ನುಹ್ ಮತ್ತು ಗುರುಗ್ರಾಮದಲ್ಲಿ ನಡೆದ ಘಟನೆಗಳು ಈ ಜವಾಬ್ದಾರಿಯನ್ನು ಹೊರಬೇಕಾದ ವಿಶಾಲ ಸಮಾಜಕ್ಕೆ ಮುನ್ಸೂಚನೆಯನ್ನೂ ನೀಡಿದೆ. ಈಗಾಗಲೇ ಹರಿಯಾಣದ ರೈತ ಸಂಘಟನೆಗಳು ಹರಿಯಾಣದ ಮತ್ತು ನುಹ್-ಗುರುಗ್ರಾಮ್ ಜಿಲ್ಲೆಯ ಸೌಹಾರ್ದಯುತ ವಾತಾವರಣವನ್ನು ಕಾಪಾಡಲು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿರುವುದು ಸ್ವಾಗತಾರ್ಹ. ಇತ್ತೀಚೆಗೆ ನಡೆದ ಖಾಪ್ ಪಂಚಾಯತ್ ಮತ್ತು ರೈತ ಸಂಘಟನೆಗಳ ಸಭೆಯಲ್ಲಿ 2000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದು ದಾಳಿಗೊಳಗಾಗಿರುವ ಮುಸ್ಲಿಂ ಸಮುದಾಯಕ್ಕೆ ರಕ್ಷಣೆ ಒದಗಿಸುವುದಾಗಿ ಘೋಷಿಸಲಾಗಿದೆ. ಹಿಂದೂ, ಮುಸ್ಲಿಂ ಹಾಗೂ ಸಿಖ್ ಸಮುದಾಯದ ರೈತರನ್ನೊಳಗೊಂಡ ಖಾಪ್ ಪಂಚಾಯತ್ಗಳ ಈ ನಿರ್ಧಾರವು, ತಮ್ಮ ಗ್ರಾಮಗಳೊಳಗೆ ಮುಸ್ಲಿಂ ಸಮುದಾಯಕ್ಕೆ ಪ್ರವೇಶವನ್ನು ನಿರ್ಬಂಧಿಸುವ ಕೆಲವು ಪಂಚಾಯತ್ ತೀರ್ಮಾನಗಳಿಗೆ ಪ್ರತಿಕ್ರಿಯೆಯಾಗಿ ಹೊರಹೊಮ್ಮಿದೆ.
ನುಹ್-ಗುರುಗ್ರಾಮ ಘಟನೆಗಳ ಹಿಂದೆ ಅಡಗಿರುವ ಕೋಮು ದ್ವೇಷ, ಮತದ್ವೇಷ ಮತ್ತು ಮತಾಂಧತೆಯ ಭಾವನೆಗಳನ್ನು ಹೋಗಲಾಡಿಸುವ ಮೂಲಕ ಒಂದು ಸೌಹಾರ್ದಯುತ ಸಮಾಜದತ್ತ ಮುನ್ನಡೆಯುವುದು ಹರಿಯಾಣದ ಜನತೆಯ ಆದ್ಯತೆಯಾಗಬೇಕಿದೆ. ಯಾವುದೋ ಕೋಮು ಸಂಘರ್ಷಗಳಲ್ಲಿ ಅಂತಿಮವಾಗಿ ಬಲಿಯಾಗುವುದು ಕೆಳಸ್ತರದ ದುಡಿಯುವ ವರ್ಗಗಳ ಜೀವಗಳು ಮತ್ತು ಆಸ್ತಿಪಾಸ್ತಿಗಳು ಎನ್ನುವುದನ್ನು ಈ ಗಲಭೆಗಳು ಮತ್ತೊಮ್ಮೆ ಎತ್ತಿ ತೋರಿಸಿವೆ. ದೇಶದ ಅತ್ಯಂತ ಹಿಂದುಳಿದ ಜಿಲ್ಲೆಯಾಗಿರುವ ನುಹ್ ಮತ್ತು ಅತ್ಯಂತ ಶ್ರೀಮಂತ ಜಿಲ್ಲೆಗಳಲ್ಲಿ ಮೂರನೆಯ ಸ್ಥಾನದಲ್ಲಿರುವ ಗುರುಗ್ರಾಮ ಈ ಸಮನ್ವಯ ಮತ್ತು ಸೌಹಾರ್ದತೆಯ ಭಾವನೆಗಳ ಪ್ರಸ್ತಭೂಮಿಯಾಗಬೇಕೇ ಹೊರತು, ಕೋಮು ಸಂಘರ್ಷಗಳ ರಣಭೂಮಿಯಾಗಕೂಡದು. ಇದು ಅಮೃತ ಕಾಲದತ್ತ ಸಾಗುತ್ತಿರುವ ಭಾರತಕ್ಕೆ ಪ್ರಜ್ಞಾವಂತ ಸಮಾಜವೊಂದು ನೀಡಬಹುದಾದ ಒಂದು ಸಂದೇಶ. ರೈತ ಸಂಘಟನೆಗಳು ಈ ನಿಟ್ಟಿನಲ್ಲಿ ಸ್ತುತ್ಯಾರ್ಹ ಹೆಜ್ಜೆ ಇಟ್ಟಿವೆ. ಸ್ಥಳೀಯ ನಾಗರಿಕ ಸಮಾಜವೂ ಈ ಹೆಜ್ಜೆಗೆ ಹೆಜ್ಜೆಯಾಗಿ ದನಿಗೂಡಿಸಬೇಕಿದೆ.
ಈ ಲೇಖನದಲ್ಲಿ ಸ್ಥಳೀಯ ಸ್ತಿತಿಗತಿಗಳ ಬಗ್ಗೆ ಮಾಹಿತಿಯನ್ನು ದ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿದ್ದ In the shadow of the millennium city – Ashok kumar 10 th Aug 2023 ಹಾಗೂ Num-mewat –Old template ̧ new battleground – Sukumar Muralidharan –ಅವರ ಲೇಖನಗಳಿಂದ ಪಡೆದುಕೊಳ್ಳಲಾಗಿದೆ.