ಕಾಂಗ್ರೆಸ್ ಪಕ್ಷ 2018ರಲ್ಲಿ ಲಿಂಗಾಯತರ ವಿಚಾರದಿಂದಲೇ ಸೋಲುಂಡು ವಿಪಕ್ಷ ಸ್ಥಾನದಲ್ಲಿ ಕೂರಬೇಕಾಯ್ತು ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿ. ಅಂದು ಲಿಂಗಾಯತರು ಅಷ್ಟೊಂದು ಆಕ್ರೋಶ ವ್ಯಕ್ತಪಡಿಸಲು ಕಾರಣವಾಗಿದ್ದು ದಾವಣಗೆರೆಯ ಹಿರಿಯ ನಾಯಕ ಶಾಮನೂರು ಶುವಶಂಕರಪ್ಪ ಅನ್ನೋದನ್ನು ಬಿಡಿಸಿ ಹೇಳುವುದು ಬೇಕಿಲ್ಲ. ಶಾಮನೂರು ಅವರನ್ನು ಸಮಾಧಾನ ಎಂಬಿ ಪಾಟೀಲ್ ಕೂಡ ಸರ್ಕಸ್ ಮಾಡಿದ್ದರು. ಶಾಮನೂರು ಮನೆಗೆ ಭೇಟಿ ನೀಡಿ ಲಿಂಗಾಯತ ವಿಚಾರದಲ್ಲಿ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಬಾರದು ಎಂದು ಮನವಿ ಮಾಡಿಕೊಂಡಿದ್ದರು. ಇದೆಲ್ಲವೂ ಕಳೆದ 5 ವರ್ಷಗಳ ಹಿಂದೆ ನಡೆದಿದ್ದ ಘಟನೆಗಳ ಸಣ್ಣ ಚಿತ್ರಣ. ಇದೀಗ ಮತ್ತೆ ಅದೇ ಟೀಂ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿದೆ. ಅದು ಕಾಂಗ್ರೆಸ್ ಪಾಲಿಗೆ ಮತ್ತೆ ನೀರು ಕುಡಿಸುವ ಸಾಧ್ಯತೆಗಳಿವೆ ಎನ್ನುವುದು ವಿಧಾನಸೌಧದ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತು.
ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯಗೇ ಕೊಟ್ರು ಟಾಂಗ್..!
ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರದ ಸಿದ್ಧತೆ ಮಾಡಿಕೊಳ್ತಿದೆ. ಇದರ ನಡುವೆ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಹುದ್ದೆಗಾಗಿ ಮುಸುಕಿನ ಗುದ್ದಾಟ ಜೋರಾಗಿ ನಡೆಯುತ್ತಿದೆ. ಹೋದ ಕಡೆಯಲ್ಲಿ ನಾನೇ ಮುಖ್ಯಮಂತ್ರಿ ಆಗೋದು ಎಂದು ಆಪ್ತರ ಬಳಿ ಉಭಯ ನಾಯಕರು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಇದಿಗ ಕಾಂಗ್ರೆಸ್ನಲ್ಲಿ ವೀರಶೈವ ಲಿಂಗಾಯತ ಸಮುದಾಯ ಕೂಡ ಮುಖ್ಯಮಂತ್ರಿ ಹುದ್ದೆ ಕೊಡುವಂತೆ ಪಟ್ಟು ಹಿಡಿಯುವ ಸಾಧ್ಯತೆಗಳು ಕಾಣಿಸುತ್ತಿದೆ. ಈಗಾಗಲೇ ವೀರಶೈವಾ ಲಿಂಗಾಯತ ಒಂದು ಸುತ್ತಿನ ಸಭೆ ನಡೆಸಿದ್ದು, ಮತ್ತೊಂದು ಸುತ್ತಿನ ಬಳಿಕ ದೆಹಲಿಗೆ ವೀರಶೈವ ಲಿಂಗಾಯತರ ನಿಯೋಗ ಹೋಗುವುದಕ್ಕೆ ನಿರ್ಧಾರ ಮಾಡಿದ್ದಾರೆ. ಅದರಲ್ಲೂ ವಿಶೇಷ ಅಂದ್ರೆ ಕಳೆದ ಬಾರಿ ನಾಯಕತ್ವ ವಹಿಸಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ಅವರೇ ಈ ಬಾರಿಯೂ ನೇತೃತ್ವ ವಹಿಸಿಕೊಂಡಿದ್ದಾರೆ. ಜೊತೆಗಿಬ್ಬರು ಸೇರಿಕೊಂಡಿದ್ದಾರೆ.
ಸಿಎಂ ಸ್ಥಾನ ಕೊಡಲ್ಲ ಎಂದರೆ ಕಾಂಗ್ರೆಸ್ಗೆ ಸಂಕಷ್ಟ..!
ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೆ ವೀರಶೈವ-ಲಿಂಗಾಯತರ ಹೊಸ ವರಸೆ ಟೆನ್ಷನ್ ತಂದಿಟ್ಟಿದೆ. ಈಗಾಗಲೇ ಸಿಎಂ ರೇಸ್ನಲ್ಲಿ ಇರುವ ಡಿ.ಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯಗೂ ಒಂದು ರೀತಿಯಲ್ಲಿ ಠಕ್ಕರ್ ಕೊಟ್ಟಂತೆ ಆಗಿದೆ. ಇದೇ ಮೊದಲ ಬಾರಿಗೆ ಹೈಕಮಾಂಡ್ ಮುಂದೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಸಲ್ಲಿಸಲಾಗ್ತಿದೆ. ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು, ಅಧಿವೇಶನ ಮುಕ್ತಾಯ ಆಗ್ತಿದ್ದ ಹಾಗೆ ಹೈಕಮಾಂಡ್ ಬಳಿಗೆ ನಿಯೋಗ ಕೊಂಡೊಯ್ಯಲು ನಿರ್ಧಾರ ಮಾಡಿದ್ದು, ಶಾಮನೂರು ಶಿವಶಂಕರಪ್ಪ ಹಾಗು ಮಾಜಿ ಸಚಿವ ಎಂಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೂಡ ಈ ಟೀಂನಲ್ಲಿ ಇದ್ದಾರೆ ಎನ್ನುವುದು ಅಚ್ಚರಿಯ ಸಂಗತಿ. ಆದರೆ ಕಾಂಗ್ರೆಸ್ ನಾಯಕರು ಮಾಡಿರುವ ಸ್ಟ್ರಾಟಜಿ ಕಾಂಗ್ರೆಸ್ ಗೆ ಮುಳುವಾಗುತ್ತಾ ಎನ್ನುವುದು ಈಗ ನಡೆಯುತ್ತಿರುವ ಚರ್ಚೆ. ಕಾಂಗ್ರೆಸ್ ನಲ್ಲಿ ವೀರಶೈವ – ಲಿಂಗಾಯತ ನಾಯಕರು ಒಗ್ಗಟ್ಟಾಗಿದ್ದಾರೆ. ಅವರು ಇಟ್ಟಿರುವ ಬೇಡಿಕೆ ಕಾಂಗ್ರೆಸ್ ಹೈಕಮಾಂಡ್ ಅನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.
ಇಬ್ಬರ ಜಗಳದಲ್ಲಿ ಲಾಭ ಮಾಡಿಕೊಳ್ಳುತ್ತಾ ಜೆಡಿಎಸ್..?
ವೀರಶೈವ – ಲಿಂಗಾಯತರ ಸಮುದಾಯದಿಂದ ಕಾಂಗ್ರೆಸ್ ಹೈಕಮಾಂಡ್ ಗೆ ಹೊಸ ಬೇಡಿಕೆ ಸಲ್ಲಿಕೆ ಆಗ್ತಿದೆ. ಒಂದು ವೇಳೆ ಮುಖ್ಯಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಸಾರಾಸಗಟಾಗಿ ಕಾಂಗ್ರೆಸ್ ತಿಳಿಸಿದರೆ ಲಿಂಗಾಯತರು ಕಾಂಗ್ರೆಸ್ ಹಾಗು ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಳ್ಳುವುದು ಬಹುತೇಕ ಖಚಿತ. ಇನ್ನು ಈಗಾಗಲೇ ಯಡಿಯೂರಪ್ಪ ಪರವಾಗಿ ಬ್ಯಾಟ್ ಬೀಸಿರುವ ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ, ಲಿಂಗಾಯತರು ಪ್ರಾಬಲ್ಯ ಹೊಂದಿರುವ ಉತ್ತರ ಕರ್ನಾಟಕದಲ್ಲೂ ಅಬ್ಬರಿಸುತ್ತಿದ್ದು, ಕಾಂಗ್ರೆಸ್ – ಬಿಜೆಪಿ ನಡುವೆ ಜೆಡಿಎಸ್ ಲಾಭ ಮಾಡಿಕೊಂಡರು ಅಚ್ಚರಿ ಏನಿಲ್ಲ..? ಕಾರಣವನ್ನೆ ತಿಳಿಸದೆ ಸಿಎಂ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಕೆಳಕ್ಕೆ ಇಳಿಸಿದ್ದ ಬಿಜೆಪಿ ಬಗ್ಗೆ ಲಿಂಗಾಯತ ಸಮುದಾಯ ಕೊಂಚ ದೂರ ಆಗಿದೆ. ಇದೀಗ ಸಿಎಂ ಸ್ಥಾನ ಇಲ್ಲ ಎನ್ನುವ ಸಂದೇಶ ಕಾಂಗ್ರೆಸ್ ಕಡೆಯಿಂದಲೇ ಹೊರ ಬೀಳುವ ಸಾಧ್ಯತೆ ಇದೆ. ಆ ಸಮಯದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಅನ್ನೋದ್ರ ಬಗ್ಗೆ ಜನರು ನಿರ್ಧಾರ ಮಾಡಲಿದ್ದಾರೆ. ಆದರೆ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿ ಇರುವಾಗ ತಾನೇ ತಂತ್ರಗಾರಿಕೆ ಮಾಡಿಕೊಂಡು ತಾನೇ ಸಿಕ್ಕಿ ಬೀಳುತ್ತಾ ಗೊತ್ತಿಲ್ಲ.