ಬೆಂಗಳೂರಿನ ಗೋವಿಂದರಾಜನಗರಲ್ಲಿ ಹಾಲಿ ಶಾಸಕ ವಿ ಸೋಮಣ್ಣಗೆ ವರುಣಾ ಹಾಗು ಚಾಮರಾಜನಗರಲ್ಲಿ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಹಾಲಿ ಕ್ಷೇತ್ರವನ್ನು ಮಗ ಅರುಣ್ ಸೋಮಣ್ಣಗೆ ಕೊಡಬೇಕು ಅನ್ನೋ ಮನವಿ ಮಾಡಲಾಗಿದೆ. ಆದರೆ ಬೇರೆಯವರಿಗೆ ಕೊಟ್ಟರೆ ಸೋಮಣ್ಣ ಸೈಲೆಂಟ್ ಆದರೆ ಸೋಲು ಕಟ್ಟಿಟ್ಟ ಬುತ್ತಿ. ಇನ್ನು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಹಾಲಿ ಶಾಸಕ ಜಗದೀಶ್ ಶೆಟ್ಟರ್ ಮನವೊಲಿಸಲು ಬಿಜೆಪಿ ಹೈಕಮಾಂಡ್ ಭಾರೀ ಕಸರತ್ತು ಮಾಡಿದ್ದು, ಹೈಕಮಾಂಡ್ಗೆ ಸಡ್ಡು ಹೊಡೆದು ಬಂದಿದ್ದಾರೆ ಎನ್ನಲಾಗ್ತಿದೆ. ಒಂದು ವೇಳೆ ಟಿಕೆಟ್ ಮಿಸ್ ಆದರೆ ಬಂಡಾಯ ಹೇಳದಿದ್ದರೂ ತಟಸ್ಥ ನಿಲುವು ಕಾಂಗ್ರೆಸ್ಗೆ ಸಹಕಾರಿ ಆಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಹಾಲಿ ಶಾಸಕ ಅರವಿಂದ ಲಿಂಬಾವಳಿ ಹಿಡಿತ ಹೊಂದಿದ್ದಾರೆ. ಆದರೆ ಹೊಸಬರನ್ನು ಆಯ್ಕೆ ಮಾಡುವ ಲೆಕ್ಕಾಚಾರದಲ್ಲಿ ಬಿಜೆಪಿ ಹೈಕಮಾಂಡ್ ಇದೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಮೊದಲ ಹಾಗು 2ನೇ ಪಟ್ಟಿಯಲ್ಲೂ ಟಿಕೆಟ್ ಘೋಷಣೆ ಆಗಿಲ್ಲ.

ಮೋದಿ ಬೆನ್ನು ತಟ್ಟಿದ್ರು.. ಆದರೂ ಟಿಕೆಟ್ ಡೌಟ್..!
ಇತ್ತೀಚಿಗಷ್ಟೇ ಚುನಾವಣೆ ಘೋಷಣೆಗೂ ಮುನ್ನ ಮೈಸೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್ ಅವರ ಬೆನ್ನು ತಟ್ಟಿ ಕುಶಲೋಪರಿ ವಿಚಾರ ಮಾಡಿದ್ದರು. ಆದರೆ ಇದೀಗ ಎಸ್.ಎ ರಾಮದಾಸ್ಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದೆ. ಇದೇ ಕಾರಣಕ್ಕೆ ಈಗಾಗಲೇ ಮೈಸೂರಿನಲ್ಲಿ ಪ್ರತಿಭಟನೆಯೂ ನಡೆದಿದೆ. ಇನ್ನು ಶಿವಮೊಗ್ಗ ನಗರ ಕ್ಷೇತ್ರದ ಹಾಲಿ ಶಾಸಕ ಈಶ್ವರಪ್ಪಗೆ ಟಿಕೆಟ್ ಕೊಡಲ್ಲ ಅನ್ನೋ ಸುಳಿವಿನ ಬೆನ್ನಲ್ಲೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿ ಮಗನಿಗೆ ಟಿಕೆಟ್ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಮಗ ಕಾಂತೇಶ್ ಈಶ್ವರಪ್ಪಗೆ ಟಿಕೆಟ್ ಸಿಗದಿದ್ದರೆ ಬಂಡಾಯದ ಬಾವುಟ ಹಾರಿಸಲು ಸಿದ್ಧತೆಗಳು ನಡೆದಿವೆ ಎನ್ನಲಾಗಿದ್ದು, ಬೆಳಗ್ಗೆಯಷ್ಟೇ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕಾಂತೇಶ್ ಅಪ್ಪನ ಮನದ ಇಂಗಿತವನ್ನು ತಿಳಿಸಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ.

ಹೊಸ ಮುಖಕ್ಕೆ ಅವಕಾಶ, ಪೈಪೋಟಿ ಶಮನಕ್ಕೂ ಸಾಹಸ..!
ಬೆಂಗಳೂರಿನ ಹೆಬ್ಬಾಳ ಕ್ಷೇತ್ರದಲ್ಲಿ ಮಾಜಿ ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗು ವೈ. ನಾರಾಯಣಸ್ವಾಮಿ ನಡುವೆ ಜಟಾಪಟಿ ಜೋರಾಗಿದ್ದು ಯಾರಿಗೇ ಟಿಕೆಟ್ ಕೊಟ್ಟರೂ ಬಂಡಾಯ ಒಳ ಏಟು ಸಾಮಾನ್ಯ. ಇನ್ನು ನಾಗಠಾಣ ಕ್ಷೇತ್ರದಿಂದ ಪುತ್ರ ಗೋಪಾಲ ಕಾರಜೋಳಗೆ ಟಿಕೆಟ್ ಕೇಳಿದ್ದಾರೆ ಸಚಿವ ಗೋವಿಂದ ಕಾರಜೋಳ.. ಕೊಡ್ತಾರಾ ಇಲ್ವಾ ಅನ್ನೋದು ಇನ್ನೂ ತೂಗುಯ್ಯಾಲೆಯಲ್ಲಿದೆ. ಕಲಬುರಗಿಯ ಸೇಡಂನಲ್ಲಿ ರಾಜಕುಮಾರ್ ತೆಲ್ಕೂರುಗೆ ಟಿಕೆಟ್ ಕೊಡಬೇಕಾ ಅಥವಾ ಹೊಸಮುಖ ಆಯ್ಕೆ ಸೂಕ್ತನಾ ಅನ್ನೋ ಬಗ್ಗೆ ಬಿಜೆಪಿ ಹೈಕಮಾಂಡ್ ಇನ್ನೂ ಚರ್ಚೆ ನಡೆಸುತ್ತಲೇ ಇದೆ. ಇನ್ನು ರಾಯಚೂರಿನ ಮಾನ್ವಿ ಕ್ಷೇತ್ರದಲ್ಲಿ ಸುಜಾತ ಪಾಟೀಲ, ಕೊಪ್ಪಳದಲ್ಲಿ ಕರಡಿ ಸಂಗಣ್ಣ, ರೋಣದಲ್ಲಿ ಹಾಲಿ ಶಾಸಕ ಕಳಕಪ್ಪ ಬಂಡಿ, ಹಗರಿಬೊಮ್ಮನಹಳ್ಳಿಯಲ್ಲಿ ಲಕ್ಷ್ಮಿ ನಾರಾಯಣ್ ಸೇರಿದಂತೆ ಹತ್ತಾರು ಜನರು ಟಿಕೆಟ್ಗಾಗಿ ಪೈಪೋಟಿ ನಡೆಸುತ್ತಲೇ ಇದ್ದಾರೆ. ಆದರೆ ಇಂದು ರಾತ್ರಿ ಅಥವಾ ನಾಳೆ ಟಿಕೆಟ್ ಘೋಷಣೆ ಆಗುವ ಸಾಧ್ಯತೆ ಇದೆ.
ಸಂಧಾನ ಅಖಾಡದಲ್ಲಿ ಮಾಜಿ ಸಿಎಂ ಯಡಿಯೂರಪ್ಪ..

ಈಗಾಗಲೇ ಟಿಕೆಟ್ ಸಿಗದೆ ಇರುವ ನಾಯಕರು ಅಂತಿಮವಾಗಿ ಯಡಿಯೂರಪ್ಪ ಮನೆಗೆ ಬಾಗಿಲು ತಟ್ಟುತ್ತಿದ್ದಾರೆ. ಟಿಕೆಟ್ ಸಿಗದಿದ್ದವರನ್ನು ಸಮಾಧಾನ ಮಾಡಲು ಯಡಿಯೂರಪ್ಪ ಕಸರತ್ತು ಮಾಡುತ್ತಿದ್ದಾರೆ. ಸಮಾಧಾನ ಬಗೆಹರಿಯದಿದ್ದವರು ಬಂಡಾಯವಾಗಿ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಮೂಡಿಗೆರೆಯಲ್ಲಿ ಎಂಪಿ ಕುಮಾರಸ್ವಾಮಿ, ಯಾದಗಿರಿಯಲ್ಲಿ ಗುರುಪಾಟೀಲ್ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಜೆಡಿಎಸ್ ರಾಜಕೀಯ ನೆಲೆ ಕಲ್ಪಿಸುವ ಕೆಲಸ ಮಾಡುತ್ತಿದೆ. ಆದರೆ ಈ ಬಿಜೆಪಿ ಪಕ್ಷದಿಂದ ಬಂದು ಆಯ್ಕೆಯಾಗುವ ನಾಯಕರು ಮತ್ತೆ ಚುನಾವಣೆ ಮುಗಿದ ಬಳಿಕ ಭಾರತೀಯ ಜನತಾ ಪಾರ್ಟಿಗೆ ಓಡುವ ಚಾಳಿ ಬೆಳೆಸಿಕೊಂಡಿದ್ದಾರೆ ಎನ್ನುವುದು ಜೆಡಿಎಸ್ ನಾಯಕ ಕುಮಾರಸ್ವಾಮಿಗೂ ತಲೆಬೇನೆ ತರಿಸಿದೆ. ಆದರೂ ಗೆದ್ದಷ್ಟು ಕ್ಷೇತ್ರದಲ್ಲಿ ಲಾಭದ ಲೆಕ್ಕಾಚಾರದಲ್ಲಿರುವ ಮಾಜಿ ಸಿಎಂ ಕುಮಾರಸ್ವಾಮಿ ಕೇಸರಿ ಕಲಿಗಳ ಬಂಡಾಯಕ್ಕೆ ಬಲೆ ಬೀಸಿದ್ದಾರೆ ಎನ್ನಬಹುದು.
ಕೃಷ್ಣಮಣಿ