ನಾ ದಿವಾಕರ
ಬೆಂಗಳೂರು:ಮಾ.20; ಭಾರತ ವಿಶ್ವ ಮಾರುಕಟ್ಟೆ ಆರ್ಥಿಕತೆಗೆ ತೆರೆದುಕೊಂಡು ಮೂರು ದಶಕಗಳೇ ಕಳೆದಿವೆ. ಔದ್ಯೋಗಿಕ ಕ್ರಾಂತಿಯ ನಾಲ್ಕನೆಯ ಹಂತದಲ್ಲಿರುವ ಭಾರತದ ಮುಕ್ತ ಮಾರುಕಟ್ಟೆ ಆರ್ಥಿಕತೆಯು ಸಹಜವಾಗಿಯೇ ಡಿಜಿಟಲ್ ಯುಗದ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳುತ್ತಾ, ನವ ಉದಾರವಾದ ಪೋಷಿಸುವ ಹಣಕಾಸು ಬಂಡವಾಳ ಮತ್ತು ಕಾರ್ಪೋರೇಟ್ ಮಾರುಕಟ್ಟೆಯನ್ನು ರಕ್ಷಿಸುವ ನಿಟ್ಟಿನಲ್ಲಿ ತನ್ನ ಹೊಸ ನೀತಿಗಳನ್ನು ಜಾರಿಗೊಳಿಸುತ್ತಿದೆ. ಈ ಅಭಿವೃದ್ಧಿಯ ಮಾದರಿಗೂ, ಭಾರತ ಮೊದಲ ನಾಲ್ಕು ದಶಕಗಳಲ್ಲಿ ಅನುಸರಿಸಿದ ಮಾದರಿಗೂ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕೆಂದರೆ ನಾವು ತಳಮಟ್ಟದ ಸಾಮಾಜಿಕ ಸ್ಥಿತ್ಯಂತರಗಳತ್ತ ಗಮನಹರಿಸಬೇಕಾಗುತ್ತದೆ. ಏಕೆಂದರೆ ನವ ಉದಾರವಾದದ ಆರ್ಥಿಕ ಚಹರೆ ಮೇಲ್ನೋಟಕ್ಕೆ ಸುಂದರವಾಗಿ ಕಾಣುತ್ತದೆ. ಬಡತನ ಅಥವಾ ಹಸಿವು ಎನ್ನುವ ವಾಸ್ತವಿಕ ವಿದ್ಯಮಾನಗಳನ್ನು ತೌಲನಿಕವಾಗಿ ನೋಡುವ ಮೂಲಕ, ದೇಶದ ಅಭಿವೃದ್ಧಿಯ ಮಾನದಂಡಗಳನ್ನು ನಿರ್ಧರಿಸಲಾಗುತ್ತದೆ. ಹಾಗಾಗಿ ಹಸಿವಿನ ಪ್ರಮಾಣ ಏರಿಕೆಯಾಗುತ್ತಿದ್ದರೂ, ವಿಶಾಲ ಸಮಾಜದಲ್ಲಿ ಕಂಡುಬರುವ ಆಧುನಿಕತೆ ಮತ್ತು ವೈಭೋಗದ ಚಿತ್ರಣಗಳು ಅವೆಲ್ಲವನ್ನೂ ಮರೆಮಾಚಿಬಿಡುತ್ತವೆ.
ಕೊಂಚ ಮಟ್ಟಿಗೆ ಎಡ ಪಕ್ಷಗಳನ್ನು ಹೊರತುಪಡಿಸಿ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೂ ಸಮ್ಮತಿಸಿ ಅನುಸರಿಸುತ್ತಿರುವ ನವ ಉದಾರವಾದಿ ಆರ್ಥಿಕ ನೀತಿಗಳು ಪ್ರಧಾನವಾಗಿ ನಗರೀಕರಣ ಮತ್ತು ಈ ನಗರೀಕರಣಕ್ಕೊಳಗಾದ ಮೇಲ್ ಸ್ತರದ ಮಧ್ಯಮ ವರ್ಗದ ಹಿತವಲಯಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ರೂಪುಗೊಳ್ಳುತ್ತವೆ. ಅಭಿವೃದ್ಧಿಯನ್ನು ಅಳೆಯುವ ಮಾನದಂಡಗಳೂ ಸಹ ಐಷಾರಾಮಿ ಕಾರುಗಳು, ಗಗನ ಚುಂಬಿ ಕಟ್ಟಡಗಳು, ಅತ್ಯಾಧುನಿಕ ರಸ್ತೆಗಳು, ಅತಿವೇಗದ ರೈಲುಗಳು ಮತ್ತು ಅಲ್ಪಸಂಖ್ಯೆಯ ಹಿತವಲಯದ ಜನರು ಬಳಸುವ ಮೊಬೈಲ್, ಲ್ಯಾಪ್‌ಟಾಪ್, ಹವಾನಿಯಂತ್ರಣ ಯಂತ್ರಗಳು, ಮತ್ತಿತರ ಆಧುನಿಕ ಉಪಕರಣಗಳ ಸುತ್ತಲೂ ರೂಪುಗೊಳ್ಳುತ್ತವೆ. ಹಾಗಾಗಿಯೇ ಭಾರತದ ಅಭಿವೃದ್ಧಿಯನ್ನು ವಿದೇಶಿ ಗಣ್ಯರಿಗೆ ಪ್ರದರ್ಶಿಸುವ ಎಲ್ಲ ಸಂದರ್ಭಗಳಲ್ಲೂ ಮೆಟ್ರೋ ನಗರಗಳಲ್ಲಿನ ಕೊಳೆಗೇರಿಗಳನ್ನು ಕಾಣದಂತೆ ಮಾಡಲು ತಾತ್ಕಾಲಿಕ ಗೋಡೆಗಳನ್ನು ನಿರ್ಮಿಸಲಾಗುತ್ತದೆ. ಹಸಿವು ಮತ್ತು ಬಡತನ ನಮ್ಮ ನಡುವೆ ಇದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ, ಇದರ ಪ್ರಮಾಣವನ್ನು ಪರಿಗಣಿಸದೆಯೇ, ಮೇಲ್ವರ್ಗದ ಐಷಾರಾಮಿ ಬದುಕಿನ ಚಿತ್ರಣವನ್ನು ಮುನ್ನೆಲೆಗೆ ತರುವ ಮೂಲಕ , ದೇಶದ ಅಭಿವೃದ್ಧಿ ಮತ್ತು ಪ್ರಗತಿಯನ್ನು ಅಳೆಯಲಾಗುತ್ತದೆ.
ಜಾಗತೀಕರಣ ಮತ್ತು ಬಂಡವಾಳ
ಭಾರತ ಈ ಮಾರುಕಟ್ಟೆ ಆರ್ಥಿಕತೆಯನ್ನು ಅಪ್ಪಿಕೊಂಡ ನಂತರದ ಬೆಳವಣಿಗೆಗಳನ್ನು ಗಮನಿಸುವಾಗ ನಮಗೆ ಢಾಳಾಗಿ ಕಾಣುವುದು ಅತಿವೇಗದ ನಗರೀಕರಣ, ಪ್ರತಿಯೊಂದು ನಗರಗಳಲ್ಲೂ ಗಗನಚುಂಬಿ ಕಟ್ಟಡಗಳನ್ನೇ ಅವಲಂಬಿಸುವ ಮೇಲ್ಮುಖಿ ಬೆಳವಣಿಗೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಉಪಕರಣಗಳ ಬಳಕೆ, ಹೆಚ್ಚುತ್ತಿರುವ ನಗರ ಜನಸಂಖ್ಯೆಗೆ ಹಿತಕರ ವಾತಾವರಣ ಸೃಷ್ಟಿಸುವ ನವಿರಾದ ರಸ್ತೆಗಳು, ಮೇಲ್ಸೇತುವೆಗಳು, ಮೆಟ್ರೋ ರೈಲು ಮತ್ತಿತರ ಸಾರಿಗೆ ಸೌಲಭ್ಯಗಳು. ಪ್ರತಿಯೊಂದು ನಗರದ ವಿಸ್ತರಣೆಯಲ್ಲೂ ಹಲವು ಗ್ರಾಮಗಳು ತಮ್ಮ ಮೂಲ ಅಸ್ತಿತ್ವವನ್ನು ಕಳೆದುಕೊಂಡು, ನಗರದೊಳಗೆ ವಿಲೀನವಾಗುವ ಮೂಲಕ, ಅಲ್ಲಿನ ʼಮೂಲ ನಿವಾಸಿಗಳನ್ನುʼ ಮತ್ತಷ್ಟು ಅಂಚಿಗೆ ತಳ್ಳುವುದನ್ನು ಗಮನಿಸಬಹುದು. ಹೆದ್ದಾರಿಗಳಿಗೆ, ವರ್ತುಲ ರಸ್ತೆಗಳಿಗೆ ಮತ್ತು ಮೇಲ್ಸೇತುವೆ-ಮೆಟ್ರೋಗಳಿಗೆ ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಗ್ರಾಮೀಣ ಜನತೆ ಮತ್ತು ನಗರದ ಹೊರವಲಯಗಳ ಜನತೆ ಕ್ರಮೇಣವಾಗಿ ಸ್ವಂತ ದುಡಿಮೆಯ ನೆಲೆಯನ್ನು ಕಳೆದುಕೊಂಡು, ತಮ್ಮ ಮೂಲ ವಾಸಸ್ಥಳದಲ್ಲೇ ಪರಕೀಯರಾಗಿ ಬದುಕಬೇಕಾಗುತ್ತದೆ. ಹೀಗೆ ಪರಕೀಯತೆ ಅನುಭವಿಸುವವರಿಗೆ ಅರಣ್ಯಗಳಿಂದ ಒಕ್ಕಲೆಬ್ಬಿಸಲ್ಪಡುವ ಆದಿವಾಸಿಗಳ ಬವಣೆ ಅರ್ಥವಾಗದಿರುವುದೂ ವಿಪರ್ಯಾಸವೇ. ನಗರೀಕರಣಕ್ಕೊಳಗಾದ ಹಳ್ಳಿಗಳ ಮೂಲಕ ಹಾದು ಹೋಗುವ ಅಗಲದ ರಸ್ತೆಗಳು ಅಥವಾ ಹೆದ್ದಾರಿಗಳು, ಗ್ರಾಮೀಣ ಬದುಕನ್ನು ಸಾರ್ವಜನಿಕರಿಂದ ಮರೆಮಾಚುತ್ತವೆ. ಮೈಸೂರು, ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ ಯಾವುದೇ ನವ ನಗರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅಲ್ಲಿ ತಮ್ಮ ನೆಲೆಯಿಂದಲೇ ಪ್ರತ್ಯೇಕಿಸಲ್ಪಟ್ಟ ಒಂದು ಗ್ರಾಮೀಣ ಬದುಕು ಕಾಣುವುದು ಖಚಿತ.
ಅಮೃತ ಕಾಲದತ್ತ ದಾಪುಗಾಲು ಹಾಕುತ್ತಿರುವ ನವ ಭಾರತ ಕ್ರಮಿಸುತ್ತಿರುವ ಆರ್ಥಿಕ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅರ್ಥವ್ಯವಸ್ಥೆಯೊಳಗಿನ ಬಂಡವಾಳ ಹೂಡಿಕೆ ಮತ್ತು ಬಂಡವಾಳಿಗರ ಲಕ್ಷಣಗಳೂ ಸ್ಪಷ್ಟವಾಗುತ್ತವೆ. ಕೈಗಾರಿಕಾ ಬಂಡವಾಳದ ಪಾರಮ್ಯ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ, ಭಾರತದ ಬಂಡವಾಳಿಗರು ಮೂಲ ಬಂಡವಾಳದ ಉತ್ಪಾದಕರಲ್ಲದಿದ್ದರೂ, ವಿದೇಶಿ ಬಂಡವಾಳ ಮತ್ತು ಔದ್ಯಮಿಕ ನೆಲೆಗಳನ್ನಾಧರಿಸಿ ಭಾರತದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವಂತಹ ಔದ್ಯಮಿಕ ಪ್ರಗತಿಗೆ ಕಾರಣರಾಗಿದ್ದರು. ಸ್ವಾತಂತ್ರ್ಯೋತ್ತರ ಭಾರತದ ಮೊದಲ ಮೂರು ನಾಲ್ಕು ದಶಕಗಳ ಆರ್ಥಿಕ ನೀತಿಗಳು ಮೇಲ್ನೋಟಕ್ಕೆ ʼ ಸಮಾಜವಾದಿ ʼ ಎನಿಸಿದರೂ, ಕಲ್ಯಾಣ ಪ್ರಭುತ್ವದ ಆರ್ಥಿಕ ನೀತಿಗಳನ್ನು ಬದಿಗಿಟ್ಟು ನೋಡಿದಾಗ, ಸರ್ಕಾರಗಳು ಅನುಸರಿಸಿದ ಮಿಶ್ರ ಆರ್ಥಿಕ ನೀತಿಗಳ ಕೇಂದ್ರ ಬಿಂದು ಬಂಡವಾಳಶಾಹಿಯೇ ಆಗಿತ್ತು. ದೇಸಿ ಬಂಡವಾಳಿಗರನ್ನು ಮತ್ತು ಇವರೊಂದಿಗೆ ಕೂಡು ಉದ್ಯಮಗಳನ್ನು ಸ್ಥಾಪಿಸುತ್ತಿದ್ದ ವಿದೇಶಿ ಬಂಡವಾಳಿಗರಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಒತ್ತಾಸೆಯಾಗಿ ನಿಲ್ಲುತ್ತಿದ್ದವು. ಭಾರತದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಆದ್ಯತಾ ವಲಯದ ಸಾಲದ ಪ್ರಮಾಣವನ್ನು ಸೂಕ್ಷ್ಮವಾಗಿ ಗಮನಿಸಿದರೂ, ಬಂಡವಾಳಿಗರ ಕೂಟಗಳ ಪ್ರಾಧಾನ್ಯತೆಯನ್ನು ಗುರುತಿಸಲು ಸಾಧ್ಯ.
1991ರಲ್ಲಿ ಭಾರತ ಮುಕ್ತ ಮಾರುಕಟ್ಟೆಯ ಜಾಗತೀಕರಣ ನೀತಿಗೆ ತೆರೆದುಕೊಂಡ ನಂತರ ಇಡೀ ಆರ್ಥಿಕತೆಯ ಬುನಾದಿ ಉತ್ಪಾದನಾ ವಲಯದಿಂದ ಸೇವಾ ವಲಯಕ್ಕೆ ಮನ್ವಂತರ ಹೊಂದಿತ್ತು. ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಅತ್ಯುತ್ಕರ್ಷದ ಕಾಲಘಟ್ಟ ಎನ್ನಬಹುದಾದ 1990-2010ರ ಅವಧಿಯಲ್ಲಿ ಭಾರತ ಸೇವಾ ವಲಯದ ಔದ್ಯಮಿಕ ಬೆಳವಣಿಗೆಯಲ್ಲಿ ವಿಶ್ವಮಾನ್ಯತೆ ಪಡೆದಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಆರ್ಥಿಕ ಮುನ್ನಡೆಯನ್ನು ನಿರಾಕರಣೆಯ ದೃಷ್ಟಿಯಿಂದ ನೋಡುವುದಕ್ಕಿಂತಲೂ, ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯ ಆಕ್ರಮಣಕಾರಿ ಬೆಳವಣಿಗೆ ಮತ್ತು ಬದಲಾದ ಭಾರತದ ಔದ್ಯಮಿಕ ವಲಯದ ಮುನ್ನಡೆಯ ದೃಷ್ಟಿಯಿಂದ ನೋಡುವುದು ಉಚಿತ. ಉತ್ಪಾದನಾ ವಲಯಕ್ಕಿಂತಲೂ ಹೆಚ್ಚಾಗಿ ಸೇವಾ ವಲಯವನ್ನು ವಿಸ್ತರಿಸುವ ಮೂಲಕ, ಉತ್ಪಾದಕೀಯ ಶಕ್ತಿಗಳನ್ನು ಬಲಹೀನಗೊಳಿಸುವ ಒಂದು ಜಾಗತಿಕ ಪ್ರಕ್ರಿಯೆಗೆ ಭಾರತ ಪ್ರಯೋಗಶಾಲೆಯಾಗಿದ್ದನ್ನು ನರಸಿಂಹರಾವ್, ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಸರ್ಕಾರಗಳ ಆಡಳಿತಾವಧಿಯಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಔದ್ಯೋಗಿಕ/ಕೈಗಾರಿಕಾ ಬಂಡವಾಳವನ್ನು ಪಲ್ಲಟಗೊಳಿಸಿದ ಹಣಕಾಸು ಬಂಡವಾಳ ಭಾರತದ ಉತ್ಪಾದನೆಯ ನೆಲೆಗಳನ್ನು ಆಕ್ರಮಿಸುವ ಮೂಲಕ, ಉತ್ಪಾದನಾ ಸಾಧನಗಳೆಲ್ಲವೂ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಆಧಿಪತ್ಯಕ್ಕೊಳಪಟ್ಟವು.
ಹಾಗಾಗಿಯೇ ಜಾಗತೀಕರಣದ ಮೊದಲ ಐದು ವರ್ಷಗಳ ನಂತರದಲ್ಲಿ, ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ, ಭಾರತ ಅನುಸರಿಸುತ್ತಿದ್ದ ಅರೆ-ಸಮಾಜವಾದಿ ಕಲ್ಯಾಣ ಪ್ರಭುತ್ವದ ನೀತಿಗಳು ಭಾರತದ ಔದ್ಯಮಿಕ ಜಗತ್ತಿಗೆ, ಬಂಡವಾಳ ಹೂಡಿಕೆದಾರರಿಗೆ ಮತ್ತು ಆಡಳಿತಾರೂಢ ಪಕ್ಷಗಳಿಗೆ ಅಪಥ್ಯವಾಗತೊಡಗಿದವು. ಇಂದು ನಾವು ಕಾಣುತ್ತಿರುವ ರಾಷ್ಟ್ರೀಕೃತ ಬ್ಯಾಂಕುಗಳ/ಹಣಕಾಸು ಸಂಸ್ಥೆಗಳ ವಿಲೀನ/ಖಾಸಗೀಕರಣ, ವಿಮಾ ಕ್ಷೇತ್ರದ ಖಾಸಗೀಕರಣ, ಸಾರ್ವಜನಿಕ ಉದ್ದಿಮೆಗಳ ನಗದೀಕರಣ/ಖಾಸಗೀಕರಣ ಮತ್ತು ಈ ಎಲ್ಲ ವಲಯಗಳನ್ನು ಶ್ರಮಿಕರಹಿತಗೊಳಿಸುವ (Labour free) ಪ್ರಯತ್ನಗಳು, ಇವೆಲ್ಲ ನೀತಿಗಳಿಗೂ ಅಡಿಪಾಯ ಹಾಕಿದ್ದು 1998-2004ರ ವಾಜಪೇಯಿ ಸರ್ಕಾರದ ಅವಧಿಯಲ್ಲಿ. ಇದೇ ನೀತಿಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಲೇ, ಹಳೆಯ ಜನಕಲ್ಯಾಣ ಆಧಾರಿತ ಕಲ್ಯಾಣ ಪ್ರಭುತ್ವದ ನೀತಿಗಳನ್ನೂ ಅನುಸರಿಸಲು ಯತ್ನಿಸಿದ ಮನಮೋಹನ್ ಸಿಂಗ್ ಸರ್ಕಾರ ಸಹಜವಾಗಿಯೇ ಮಾರುಕಟ್ಟೆ ಶಕ್ತಿಗಳ ಪಾಲಿಗೆ ಅಪಥ್ಯವಾಗತೊಡಗಿತ್ತು.
ನವ ಉದಾರವಾದ-ಡಿಜಿಟಲ್ ಆರ್ಥಿಕತೆ
ಉದ್ಯೋಗ, ಆಹಾರ, ಶಿಕ್ಷಣ, ಮಾಹಿತಿ ಮತ್ತು ಅರಣ್ಯ ಉತ್ಪನ್ನಗಳ ಹಕ್ಕುಗಳನ್ನು ತಳಮಟ್ಟದ ಜನತೆಗೆ ನೀಡುವ ಆಡಳಿತ ನೀತಿಗಳ ಮೂಲಕ ಮನಮೋಹನ್ ಸಿಂಗ್ ಸರ್ಕಾರ ಜಾರಿಗೊಳಿಸಿದ ಹಲವು ಜನಪರ ಎನ್ನಬಹುದಾದ ನೀತಿಗಳು, ಭಾರತದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಜಾಗತಿಕ ಹಣಕಾಸು ಬಂಡವಾಳಶಾಹಿಯ ವಿರುದ್ಧ ಮೂಡಬಹುದಾಗಿದ್ದ ಸಾಮಾನ್ಯ ಜನತೆಯ ವಿರೋಧ ವಿರೋಧಗಳನ್ನು ತಡೆಗಟ್ಟುವ ನೀತಿಗಳಷ್ಟೇ ಆಗಿದ್ದವು. ಭಾರತದ ಉತ್ಪಾದನಾ ನೆಲೆಗಳನ್ನು ದುರ್ಬಲಗೊಳಿಸುತ್ತಲೇ, ಬೃಹತ್ ಸಂಖ್ಯೆಯ ಉತ್ಪಾದಕೀಯ ಶಕ್ತಿಗಳನ್ನು, ಅಂದರೆ ದುಡಿಯುವ ವರ್ಗಗಳನ್ನು, ಮಾರುಕಟ್ಟೆ ಶಕ್ತಿಗಳ ವಶಕ್ಕೆ ಒಪ್ಪಿಸುವ ನೀತಿಯನ್ನು ಯುಪಿಎ ಸರ್ಕಾರವೂ ಕೈಬಿಟ್ಟಿರಲಿಲ್ಲ. ಆದರೆ ಕೃಷಿ, ಗ್ರಾಮೀಣ ಗುಡಿ ಕೈಗಾರಿಕೆ, ಕರಕುಶಲ ವಲಯ ಮತ್ತು ಅರಣ್ಯ ಉತ್ಪನ್ನಗಳ ಉತ್ಪಾದನಾ ನೆಲೆಗಳನ್ನು ದುರ್ಬಲಗೊಳಿಸುವ ಆರ್ಥಿಕ ನೀತಿಗಳನ್ನು ಯುಪಿಎ ಸರ್ಕಾರದ ಪ್ರತಿಯೊಂದು ಬಜೆಟ್‌ನಲ್ಲೂ ಕಾಣಬಹುದಾಗಿತ್ತು. ಶಿಕ್ಷಣ ಮತ್ತು ಆರೋಗ್ಯ ವಲಯದ ಖಾಸಗೀಕರಣ ಹಾಗೂ ವಾಣಿಜ್ಯೀಕರಣಕ್ಕೂ ಸಹ ಯುಪಿಎ ಸರ್ಕಾರದ ನೀತಿಗಳು ಪೂರಕವಾಗಿಯೇ ಇದ್ದವು.
ಇದೇ ಆರ್ಥಿಕ ಪ್ರಕ್ರಿಯೆಯಲ್ಲಿ ವಾಣಿಜ್ಯೀಕರಣ ಮತ್ತು ಖಾಸಗೀಕರಣದ ಪ್ರಕ್ರಿಯೆಗಳು ಕಾರ್ಪೋರೇಟೀಕರಣದತ್ತ ಸಾಗಿರುವುದನ್ನು 2014ರ ನಂತರದ ಅವಧಿಯಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಕಾರ್ಪೋರೇಟ್ ಮಾರುಕಟ್ಟೆ ಮತ್ತು ಈ ವಲಯದ ಜಾಗತಿಕ ಹಣಕಾಸು ಬಂಡವಾಳವು ಸೇವಾ ವಲಯವನ್ನೂ ದಾಟಿ, ದೇಶದ ಸಾಮಾನ್ಯ ಜನತೆಯನ್ನು ತಲುಪುವಂತಹ ಮೂಲ ಸೌಕರ್ಯಗಳ ಅಭಿವೃದ್ಧಿಯೆಡೆಗೆ ಸಾಗುವುದು ನಾಲ್ಕನೆ ಔದ್ಯೋಗಿಕ ಕ್ರಾಂತಿಯ ಅಥವಾ ಡಿಜಿಟಲ್ ಕ್ರಾಂತಿಯ ಮೂಲಕ ಸಾಧ್ಯವಾಯಿತು. ಹಾಗಾಗಿಯೇ ಭಾರತದ ಅರ್ಥವ್ಯವಸ್ಥೆಯಲ್ಲೂ ಕಾರ್ಪೋರೇಟ್ ಬಂಡವಾಳ ಹೂಡಿಕೆಗಳು ಉತ್ಪಾದನೆ ಮತ್ತು ಸೇವಾ ವಲಯವನ್ನೂ ದಾಟಿ, ಡಿಜಿಟಲ್ ತಂತ್ರಜ್ಞಾನದ ವಿಸ್ತರಣೆ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಯಡೆಗೆ ಮುಖಮಾಡಿದ್ದವು. ನಾಲ್ಕನೆಯ ಔದ್ಯೋಗಿಕ ಕ್ರಾಂತಿಯಲ್ಲಿ ಸರ್ಕಾರ ಅಥವಾ ಪ್ರಭುತ್ವ ಉತ್ಪಾದನೆಯ ನೆಲೆಗಳಿಂದ ಮಾತ್ರವೇ ಅಲ್ಲದೆ, ಶಿಕ್ಷಣ, ಆರೋಗ್ಯ, ರಕ್ಷಣಾವಲಯ ಮತ್ತಿತರ ನಾಗರಿಕ ಸೌಲಭ್ಯಗಳಿಂದಲೂ ದೂರ ಸರಿಯುತ್ತಿರುವುದನ್ನು ಕಳೆದ ಎರಡು ದಶಕಗಳಲ್ಲಿ ಕಾಣುತ್ತಿದ್ದೇವೆ.
ಇಂದಿಗೂ ಶೇ 65ರಷ್ಟು ಜನಸಂಖ್ಯೆ ಕೃಷಿಯನ್ನು, ಶೇ 80ರಷ್ಟು ಜನಸಂಖ್ಯೆ ಗ್ರಾಮೀಣ ವಲಯವನ್ನು ಅವಲಂಬಿಸಿರುವ ಭಾರತದಲ್ಲಿ ತಳಮಟ್ಟದ ಜನಸಮುದಾಯಗಳಿಗೆ ಅತ್ಯವಶ್ಯವಾದ ಮೂಲಭೂತ ಪ್ರಾಥಮಿಕ ಶಿಕ್ಷಣ, ಬದುಕು ರೂಪಿಸುವ ಶಾಶ್ವತ ಉದ್ಯೋಗ, ಕನಿಷ್ಠ ಆರೋಗ್ಯ ಕಾಳಜಿ ಮತ್ತು ನಾಗರಿಕ ಸವಲತ್ತು ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿಯನ್ನು ಡಿಜಿಟಲ್ ಯುಗದಲ್ಲಿ ಕಾರ್ಪೋರೇಟ್ ಮಾರುಕಟ್ಟೆಗೆ ಒಪ್ಪಿಸಲಾಗುತ್ತಿದೆ. ಹಾಗಾಗಿಯೇ ಶಿಕ್ಷಣ ಮತ್ತು ಆರೋಗ್ಯದಂತಹ ಮೂಲ ಸೌಕರ್ಯಗಳೂ ಸಹ ವಾಣಿಜ್ಯೀಕರಣದ ಹಂತದ ವಿಸ್ತರಣೆಯಾಗಿ ಕಾರ್ಪೋರೇಟೀಕರಣವಾಗುತ್ತಿವೆ. ಪ್ರಾಥಮಿಕ ಶಿಕ್ಷಣದಿಂದ ಅತ್ಯುನ್ನತ ಬೌದ್ಧಿಕ ವಲಯದವರೆಗೆ, ಪ್ರಾಥಮಿಕ ಸಮುದಾಯ ಆರೋಗ್ಯದಿಂದ ಅತ್ಯಾಧುನಿಕ ವೈದ್ಯಕೀಯ ಸೌಕರ್ಯಗಳವರೆಗೆ ಕಾರ್ಪೋರೇಟ್ ಬಂಡವಾಳ ತನ್ನ ಬಾಹುಗಳನ್ನು ವಿಸ್ತರಿಸುತ್ತಿದೆ. ಈ ಪ್ರಕ್ರಿಯೆಯಲ್ಲೇ ನಾಗರಿಕರು ಸರ್ಕಾರಗಳಿಂದ ಅಪೇಕ್ಷಿಸುವ ಮೂಲ ಸೌಕರ್ಯಗಳು, ಅಂದರೆ ರಸ್ತೆ, ಚರಂಡಿ, ಉದ್ಯಾನ, ಹೆದ್ದಾರಿ, ಕಾಲುವೆ, ನೀರಾವರಿ, ರಸ್ತೆ-ರೈಲು-ವಿಮಾನ ಸಾರಿಗೆ ಮತ್ತಿತರ ಜನಸಾಮಾನ್ಯರ ನಿತ್ಯಬದುಕಿನ ಎಲ್ಲ ಅವಶ್ಯಕತೆಗಳೂ ಸಹ ಕಾರ್ಪೋರೇಟ್ ಬಂಡವಾಳಿಗರಿಂದ ನಿರ್ವಹಿಸಲ್ಪಡುತ್ತಿವೆ.
ಭಾರತದಲ್ಲಿ ಔದ್ಯೋಗಿಕ ಕ್ರಾಂತಿಯ ವಿವಿಧ ಹಂತಗಳನ್ನು ಗಮನಿಸಿದಾಗ, ಔದ್ಯೋಗಿಕ ಕ್ರಾಂತಿಯ ಟಾಟಾ-ಬಿರ್ಲಾ, ಮೂರನೆಯ ಹಂತದ ಸೇವಾ ವಲಯದ ಕ್ರಾಂತಿಯ ಇನ್ಫೋಸಿಸ್ ಇತ್ಯಾದಿ, ಮತ್ತು ನಾಲ್ಕನೆಯ ಹಂತವಾದ ಪ್ರಸಕ್ತ ಡಿಜಿಟಲ್ ಕ್ರಾಂತಿಯ ಅದಾನಿ-ಅಂಬಾನಿ ಮತ್ತಿತರ ಬಂಡವಾಳಿಗರ ಮಾರುಕಟ್ಟೆ ಆಧಿಪತ್ಯವನ್ನೂ ಗಮನಿಸಲು ಸಾಧ್ಯ. ಡಿಜಿಟಲ್ ಕ್ರಾಂತಿಯಲ್ಲಿ ಬಂಡವಾಳಹೂಡಿಕೆ ಹೆಚ್ಚಿನ ಪ್ರಮಾಣದಲ್ಲಿ ಅನುತ್ಪಾದಕೀಯ ವಲಯದಲ್ಲೇ ಕಂಡುಬರುತ್ತಿರುವುದನ್ನೂ ಈ ಸಂದರ್ಭದಲ್ಲಿ ಗಮನಿಸಬೇಕಿದೆ. ಹಾಗಾಗಿಯೇ ಗೌತಮ್ ಅದಾನಿ ಸಾಮ್ರಾಜ್ಯದ ಆಸ್ತಿ ಕೆಲವೇ ವರ್ಷಗಳಲ್ಲಿ ಶೇ 800ರಷ್ಟು ವೃದ್ಧಿಯನ್ನು ಕಂಡಿದೆ. ಈ ಬಂಡವಾಳ ಕೂಟಗಳನ್ನು ರಕ್ಷಿಸುವ ಮೂಲಕ ಅರ್ಥವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಸರ್ಕಾರಗಳು ಸದಾ ಸಿದ್ಧವಾಗಿರುತ್ತವೆ. ಇದನ್ನೇ ಆರ್ಥಿಕ ಪರಿಭಾಷೆಯಲ್ಲಿ ಆಪ್ತ ಬಂಡವಾಳಶಾಹಿ (Croney Capitalism) ಎನ್ನಲಾಗುತ್ತದೆ. ಸಾರ್ವಜನಿಕ ಉದ್ದಿಮೆಗಳಷ್ಟೇ ಅಲ್ಲದೆ, ಉತ್ಪಾದನಾ ವಲಯಗಳು, ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಕಾಳಜಿಯ ಎಲ್ಲ ವಲಯಗಳೂ ಕಾರ್ಪೋರೇಟ್ ಮಾರುಕಟ್ಟೆಯ ಆಧಿಪತ್ಯಕ್ಕೆ ಒಳಪಡುತ್ತವೆ. ಈ ಮಾರುಕಟ್ಟೆ ಶಕ್ತಿಗಳೇ ಭವಿಷ್ಯ ಭಾರತದ ಆರ್ಥಿಕ ನೀತಿಗಳನ್ನೂ ಪ್ರಭಾವಿಸುತ್ತವೆ ಎನ್ನುವುದು ದಿಟ.
ಹಾಗಾಗಿಯೇ ಪ್ರಾದೇಶಿಕ ಪಕ್ಷಗಳನ್ನೂ ಸೇರಿದಂತೆ, ಭಾರತದ ಯಾವುದೇ ಬಂಡವಾಳಿಗ ರಾಜಕೀಯ ಪಕ್ಷಗಳು, ಈ ಮಾರುಕಟ್ಟೆ ಆರ್ಥಿಕತೆಯ ವಿರುದ್ಧ ಸೊಲ್ಲೆತ್ತುವುದಿಲ್ಲ. ಕಾರ್ಪೋರೇಟ್ ಮಾರುಕಟ್ಟೆಯ ಆಧಿಪತ್ಯದಲ್ಲೇ ಕಲ್ಯಾಣ ಪ್ರಭುತ್ವದ ಜನಕಲ್ಯಾಣ ನೀತಿಗಳನ್ನು ಅನುಸರಿಸುವ ಮೂಲಕ, ಚುನಾವಣಾ ರಾಜಕಾರಣದ ಫಲಾನುಭವಿಗಳಾಗಲು ಎಲ್ಲ ರಾಜಕೀಯ ಪಕ್ಷಗಳು ಹೆಣಗಾಡುತ್ತವೆ. ರಾಜಕೀಯ ಪಕ್ಷಗಳೂ ಸಹ ಇದೇ ಕಾರ್ಪೋರೇಟ್ ಬಂಡವಾಳಿಗರ ಪೋಷಣೆಯನ್ನೇ ಅವಲಂಬಿಸುವುದರಿಂದ, ಮಾರುಕಟ್ಟೆ ಆರ್ಥಿಕ ನೀತಿಗಳು ಸೃಷ್ಟಿಸುವ ಮೇಲ್ವರ್ಗದ ಹಿತವಲಯಗಳಿಗೆ ಅಪ್ಯಾಯಮಾನವಾಗುತ್ತವೆ. ಡಿಜಿಟಲ್ ಯುಗದ ಹಣಕಾಸು ಬಂಡವಾಳ ಮತ್ತು ಔದ್ಯಮಿಕ ಬಂಡವಾಳದ ಹೂಡಿಕೆಗೆ ಲಾಭಗಳಿಕೆ ಮತ್ತು ಮಾರುಕಟ್ಟೆ ವಿಸ್ತರಣೇಯೇ ಪ್ರಧಾನ ಆದ್ಯತೆಯಾಗುವುದರಿಂದ, ಸಾಮಾನ್ಯ ಜನತೆಗೆ ಎಟುಕುವ ಎಲ್ಲ ನಾಗರಿಕ ಸೌಲಭ್ಯಗಳೂ Pay & Use ಅಂದರೆ ಹಣಪಾವತಿಸಿ ಬಳಸುವ ಮಾರುಕಟ್ಟೆ ನಿಯಮಗಳಿಗೆ ಒಳಗಾಗುತ್ತವೆ. ಹಣಪಾವತಿಸುವ ಒಂದು ಬೃಹತ್ ವರ್ಗ, ಜನಸಂಖ್ಯೆ ದೃಷ್ಟಿಯಿಂದ ಅಲ್ಪಸಂಖ್ಯಾತರಾದರೂ, ಸಾಮಾಜಿಕ ಮಾಧ್ಯಮ, ರಾಜಕಾರಣ ಮತ್ತು ಸಾರ್ವಜನಿಕ ಜೀವನದ ನೆಲೆಗಳಲ್ಲಿ ತಮ್ಮದೇ ಆದ ಪ್ರಾಬಲ್ಯ ಸಾಧಿಸಿರುವುದರಿಂದ, ಈ ನೀತಿಗಳನ್ನೇ ದೇಶದ ಅಭಿವೃದ್ಧಿಗೆ ಅನಿವಾರ್ಯ ಎಂದು ಭಾವಿಸಿ, ಸರ್ಕಾರದ ಕಾರ್ಪೋರೇಟ್ ನೀತಿಗಳಿಗೆ ಸಾರ್ವಜನಿಕ ಮನ್ನಣೆಯನ್ನು ಸೃಷ್ಟಿಸುತ್ತವೆ.
ಮೈಸೂರು ಬೆಂಗಳೂರು ದಶಪಥ ರಸ್ತೆಯಲ್ಲಿ ತಲೆಎತ್ತಿರುವ ಸುಂಕದ ಕಟ್ಟೆಗಳು ಭವಿಷ್ಯ ಭಾರತದ ಸೂಚಕಗಳಾಗಿದ್ದು, ಬಹುಶಃ ಕೆಲವೇ ವರ್ಷಗಳಲ್ಲಿ ನಾಗರಿಕ ಸೌಲಭ್ಯಗಳೆಲ್ಲವೂ ಈ ಸುಂಕದ ಕಟ್ಟೆಗಳ ಮೂಲಕವೇ ನಿರ್ವಹಿಸಲ್ಪಡುತ್ತವೆ. ದುಬಾರಿಯಾಗುತ್ತಿರುವ ವಿದ್ಯಾರ್ಜನೆಯ ಪ್ರಾಥಮಿಕ ನೆಲೆಗಳು, ಉನ್ನತ ಅಧ್ಯಯನದ ವಲಯಗಳು ಮತ್ತು ಪ್ರಾಥಮಿಕ ಆರೋಗ್ಯ ಸೇವೆಗಳು ಇದೇ ದಿಕ್ಕಿನಲ್ಲಿ ಸಾಗುತ್ತಿರುವುದನ್ನೂ ಗಮನಿಸಬೇಕಿದೆ. ನಾಲ್ಕನೆಯ ಔದ್ಯೋಗಿಕ ಕ್ರಾಂತಿ ಅಥವಾ ಡಿಜಿಟಲ್ ಯುಗದ ಮುಂದುವರೆದ ಹಂತವನ್ನು ನವ ಭಾರತ ಎದುರಿಸುತ್ತಿದೆ. ಇಲ್ಲಿ ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಕಾರ್ಮಿಕರು, ದುಡಿಯುವ ವರ್ಗಗಳು, ಗ್ರಾಮೀಣ ಬಡಜನತೆ, ಕೃಷಿ ಕಾರ್ಮಿಕರು, ಸಣ್ಣ-ಅತಿಸಣ್ಣ-ಭೂರಹಿತ ರೈತರು ಮತ್ತು ಕುಶಲಕರ್ಮಿಗಳು ಕಾರ್ಪೋರೇಟ್ ಮಾರುಕಟ್ಟೆಯ ಆಕ್ರಮಣಕ್ಕೆ ಬಲಿಯಾಗುತ್ತಲೇ ಇರುವುದನ್ನೂ ಗಮನಿಸುತ್ತಿದ್ದೇವೆ. ಈ ಬಹುಸಂಖ್ಯಾತ ಜನಸಮುದಾಯಗಳ ಜೀವನ ಮತ್ತು ಜೀವನೋಪಾಯದ ಮಾರ್ಗಗಳು ಅನಿಶ್ಚಿತತೆಯಿಂದಲೇ ಮುಂದುವರೆಯುತ್ತಿರುವುದನ್ನೂ ಗಮನಿಸುತ್ತಿದ್ದೇವೆ.
ಸಮ ಸಮಾಜವನ್ನು ಕಟ್ಟುವ ಆಶಯದೊಂದಿಗೆ ಸಂವಿಧಾನವನ್ನು ಎದೆಗವುಚಿಕೊಂಡು ಪ್ರಮಾಣೀಕರಿಸುವ ನಮ್ಮ ಆದ್ಯತೆಗಳು ಏನಾಗಿರಬೇಕು ? ಆಯ್ಕೆ ನಮ್ಮ ಮುಂದಿದೆ.
-೦-೦-೦-೦-